ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸಿದಾಗ ಬರುವ ಹೊಗೆಯು, ಅಸ್ತಮಾ ಮತ್ತು ಇತರ ಉಸಿರಾಟದ ಕಾಯಿಲೆಗಳಿರುವ ರೋಗಿಗಳಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಮಾಲಿನ್ಯದಿಂದಾಗಿ, ಗಾಳಿಯಲ್ಲಿರುವ ಹಾನಿಕಾರಕ ಕಣಗಳು ಮತ್ತು ಅನಿಲಗಳು ಉಸಿರಾಟದ ನಾಳವನ್ನು ಹಾನಿಗೊಳಿಸುತ್ತವೆ. ಅವು ಉಸಿರಾಟಕ್ಕೆ ತೊಂದರೆಯನ್ನು ಉಂಟುಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ರೋಗಿಗಳು ಮಾಲಿನ್ಯದಿಂದ ರಕ್ಷಣೆ ಪಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಬ್ಬಗಳಲ್ಲಿ ಪಟಾಕಿ ಹಚ್ಚುವುದು ಗಾಳಿಯಲ್ಲಿ ಮಾಲಿನ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅಸ್ತಮಾ ಅಥವಾ ಇತರ ಯಾವುದೇ ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಯಾವ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು? ಇಲ್ಲಿದೆ ಮಾಹಿತಿ.
ಪಟಾಕಿಗಳೊಂದಿಗೆ ಬರುವ ಹೊಗೆ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಈ ಹೊಗೆಯಲ್ಲಿ ಸಲ್ಫರ್ ಮತ್ತು ನೈಟ್ರೈಡ್ ಅಧಿಕವಾಗಿರುತ್ತದೆ. ಈ ರಾಸಾಯನಿಕಗಳು ಶ್ವಾಸಕೋಶಕ್ಕೆ ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಶ್ವಾಸಕೋಶದ ಸೋಂಕು ಇರುವವರು ಪಟಾಕಿಗಳನ್ನು ಸಿಡಿಸುವಾಗ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಈಗಿರುವ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಪಟಾಕಿ ಸಿಡಿಸುವ ಸಮಯದಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಸೂಕ್ತ.
ವೈದ್ಯರ ಪ್ರಕಾರ, ದುರ್ಬಲ ಶ್ವಾಸಕೋಶವಿರುವವರು ಮಾಲಿನ್ಯಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ, ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಮಾಲಿನ್ಯವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದು ರೋಗಗಳು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪಟಾಕಿಯಿಂದ ಬಿಡುಗಡೆಯಾಗುವ ಹೊಗೆ ಮತ್ತು ರಾಸಾಯನಿಕಗಳು ಅಸ್ತಮಾ ಮತ್ತು ಇತರ ಉಸಿರಾಟದ ಕಾಯಿಲೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಆದ್ದರಿಂದ, ಪಟಾಕಿಗಳು ಸಿಡಿಯುವ ಅಥವಾ ಭಾರಿ ಹೊಗೆ ಬರುವ ಸ್ಥಳಗಳಿಂದ ದೂರವಿರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಸರಳವಾಗಿ ದೀಪಾವಳಿಯನ್ನು ಆಚರಿಸಲು ಪ್ರಯತ್ನಿಸಿ. ಹಬ್ಬದ ಸಮಯದಲ್ಲಿ ಹೊರಗೆ ಹೋಗಬೇಕಾದರೆ ಮಾಸ್ಕ್ ಧರಿಸಬೇಕು. ಇದು ಹೊರಗಿನಿಂದ ಬರುವ ಧೂಳು ಮತ್ತು ಹೊಗೆಯನ್ನು ಫಿಲ್ಟರ್ ಮಾಡುತ್ತದೆ. ಇದು ಮಾಲಿನ್ಯದಿಂದ ಹಾನಿಯಾಗುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದೆಲ್ಲದರ ಜೊತೆಗೆ, ಉಸಿರಾಟದಲ್ಲಿ ಹಠಾತ್ ಸಮಸ್ಯೆ ಆಗುವಂತವರು, ಇನ್ಹೇಲರ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ: ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಮಾಡುವುದು ಏಕೆ? ಇದರ ಮಹತ್ವವೇನು?
ಸಾಕಷ್ಟು ನೀರು ಕುಡಿಯಿರಿ. ಇದು ಶ್ವಾಸನಾಳವನ್ನು ತೇವಾಂಶದಿಂದ ಇರಿಸುತ್ತದೆ. ಇದರಿಂದ ಲೋಳೆಯ ಪೊರೆ ತುಂಬಾ ದಪ್ಪವಾಗುವುದಿಲ್ಲ. ಅಲ್ಲದೆ ಇದು ಧೂಳು ಮತ್ತು ಹೊಗೆಯಿಂದಾಗಿ ಹೆಚ್ಚು ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ. ಮಾಲಿನ್ಯದಿಂದಾಗಿ ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚಾದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಆದ್ದರಿಂದ ಪಟಾಕಿ ಸಿಡಿಸುವಾಗ ಹೊರಗೆ ಹೋಗುವುದನ್ನು ತಪ್ಪಿಸಿ. ಮನೆಯ ಒಳಗೆ ಲಘು ವ್ಯಾಯಾಮ ಮಾಡಿ. ಸಾಧ್ಯವಾದಷ್ಟು ಮನೆಯೊಳಗೆ ಏರ್ ಪ್ಯೂರಿಫೈಯರ್ ಬಳಸಿ. ಸಂಜೆ ಮತ್ತು ಬೆಳಿಗ್ಗೆ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ. ಮನೆಯೊಳಗೆ ಒಳಾಂಗಣ ಸಸಿಗಳಿದ್ದರೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ