ಉಳಿದ ಸಮಯಕ್ಕಿಂತ ಗರ್ಭಾವಸ್ಥೆಯಲ್ಲಿರುವಾಗ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಗರ್ಭಿಣಿ ತನ್ನ ಆರೋಗ್ಯದ ಜತೆಗೆ ಮಗುವಿನ ಆರೋಗ್ಯದ ಕುರಿತಾಗಿಯೂ ಹೆಚ್ಚು ಕಾಳಜಿವಹಿಸಬೇಕು. ಹಾಗಿರುವಾಗ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಒತ್ತಡಕ್ಕೆ ಸಿಲುಕದೆ ಪ್ರತಿನಿತ್ಯ ಸಂತೋಷದಿಂದ ಇರುವಂತೆ ಗರ್ಭಿಣಿಯನ್ನು ನೊಡಿಕೊಳ್ಳುವುದು ಅವಶ್ಯಕವಾಗಿದೆ. ಗರ್ಭಿಣಿಗೆ ತೊಂದರೆಯಾದಷ್ಟು ಮಗುವಿಗೆ ಅಪಾಯ ಹೆಚ್ಚು. ಕೊವಿಡ್ ಸಮಯದಲ್ಲಿ ಭಯಭೀತರಾಗದೇ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸೂಕ್ಷ್ಮವಾದ ಆರೋಗ್ಯವನ್ನುಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು.
ಗರ್ಭಾವಸ್ಥೆಯಲ್ಲಿರುವ ಮಹಿಳೆ ಹೆಚ್ಚು ನೆಲಕ್ಕೆ ಬಾಗಬಾರದು (ಬಾಗಿ ನಮಸ್ಕರಿಸಬಾರದು) ಎಂದು ವೈದ್ಯರು ಸಲಹೆ ನೀಡುತ್ತಾರೆ. ಹೊಟ್ಟೆಯಲ್ಲಿರುವ ಮಗುವಿಗೆ ಚಲನೆಯುಂಟಾದಾಗ ಮಗುವಿಗೆ ಒತ್ತಡ ಉಂಟಾಗುತ್ತದೆ . ಹೀಗಿರುವಾಗ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಕೆಲವೊಂದಿಷ್ಟು ಕೆಲಸಗಳನ್ನು ತಪ್ಪಿಸಬೇಕಾಗುತ್ತದೆ. ಅವು ಯಾವುವು ಎಂಬುದನ್ನು ತಿಳಿಯಿರಿ.
ರಾಸಾಯನಿಕಗಳನ್ನು ಮುಟ್ಟಬೇಡಿ
ರಾಸಾಯನಿಕಗಳು, ವಿದ್ಯುತ್, ನೀರು ಇರುವಂತಹ ಸ್ಥಳಗಳಿಗೆ ಹೆಚ್ಚಾಗಿ ಹೋಗಬೇಡಿ. ಹೆಚ್ಚು ಭಯವಾಗುವ ಸನ್ನಿವೇಶಗಳನ್ನು ನೋಡಬೇಡಿ. ಆತಂಕವಾದಷ್ಟು ಮಾನಸಿಕ ಒತ್ತಡ ಮತ್ತು ದೈಹಿಕ ಒತ್ತಡ ಉಂಟಾಗುತ್ತದೆ. ಇದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿರುವಾಗ ನಿಮ್ಮ ಸೂಕ್ಷ್ಮ ಆರೋಗ್ಯವನ್ನು ಕಾಳಜಿಯಿಂದ ಕಾಪಾಡಿಕೊಳ್ಳಿ.
ಮಾಸ್ಕ್ ಧರಿಸುವುದನ್ನು ಎಂದಿಗೂ ಮರೆಯದಿರಿ
ಕೈಗಳಿಗೆ ಗ್ಲೌಸ್ ಮತ್ತು ಮಾಸ್ಕ್ ಧರಿಸುವುದನ್ನು ಎಂದಿಗೂ ಮರೆಯಬೇಡಿ. ಕೊವಿಡ್19 ಸಾಂಕ್ರಾಮಿಕದ ಸಮಯದಲ್ಲಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಗಮನ ನೀಡಲೇಬೇಕು. ಮನೆಯ ಅಕ್ಕ-ಪಕ್ಕದವರೊಂದಿಗೆ ಮಾತಾಡಬಹುದು ಅಥವಾ ಮನೆಯವರು ಹೊರಗೆ ಹೋಗಿ ಬಂದಿರಬಹುದು. ಈ ಸಮಯದಲ್ಲಿ ನಿಮಗೆ ಮಾಸ್ಕ್ ಅವಶ್ಯಕತೆ ಹೆಚ್ಚಾಗಿರುತ್ತದೆ. ಸಾಂಕ್ರಾಮಿಕ ರೋಗ ನಿಮಗೆ ಮತ್ತು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು. ಹಾಗಿರುವಾಗ ಮಾಸ್ಕ್ ಧರಿಸಲು ಎಂದಿಗೂ ಮರೆಯದಿರಿ.
ಹೆಚ್ಚುಹೊತ್ತು ನಿಂತೇ ಇರಬೇಡಿ
ಗರ್ಭಿಣಿಯರು ಹೆಚ್ಚು ಹೊತ್ತು ನಿಂತೇ ಇರುವುದು ಒಳ್ಳೆಯದಲ್ಲ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ ಹೆಚ್ಚು ಸಮಯ ನಿಂತಿರುವುದನ್ನು ಆದಷ್ಟು ತಪ್ಪಸಿ. ನಿಮ್ಮಗೆ ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಲು ಪ್ರತ್ನಿಸಿ. ಈ ಸಮಯದಲ್ಲಿ ನಿಮಗೆ ವಿಶ್ರಾಂತಿಯ ಅವಶ್ಯಕತೆ ಹೆಚ್ಚಾಗಿರುತ್ತದೆ.
ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ
ಗರ್ಭಿಣಿಯು ದೇಹಕ್ಕೆ ಹೆಚ್ಚು ಒತ್ತಡ ನೀಡಿದಷ್ಟು ಅದು ಮಗುವಿಗೆ ಅಪಾಯವನ್ನುಂಟು ಮಾಡುತ್ತದೆ. ಹಾಗಿರುವಾಗ ದೇಹಕ್ಕೆ ಹೆಚ್ಚು ಒತ್ತಡವನ್ನುಂಟು ಮಾಡುವ ಯಾವುದೇ ಕೆಲಸಗಳನ್ನು ಮಾಡದಿರುವುದು ಒಳ್ಳೆಯದು. ಭಾರವಾದ ವಸ್ತುಗಳನ್ನು ಎತ್ತುವುದು, ಬಾವಿಯಿಂದ ನೀರು ಸೇದುವುದು, ನೆಲಕ್ಕೆ ಬಾಗಿನಿಂತು ಬಟ್ಟೆ ಒಗೆಯುವುದು ಈ ರೀತಿಯ ಕೆಲಸಗಳನ್ನು ಗರ್ಭಾವಸ್ಥೆಯಲ್ಲಿರುವಾಗ ಮಾಡಬೇಡಿ.
ಆದಷ್ಟು ಬೆಚ್ಚಗಿರಿ
ಮಳೆಗಾಲದ ಸಮಯದಲ್ಲಿ ಮನೆಯ ಅಂಗಳದಲ್ಲಿ ನಿಲ್ಲುವುದು, ಮಳೆ ನೀರಿನಲ್ಲಿ ನೆನೆಯುವುದನ್ನು ತಪ್ಪಿಸಿ. ಜ್ವರ, ನೆಗಡಿ, ಕೆಮ್ಮಿನ ಸಮಸ್ಯೆಗಳು ಮಳೆಗಾಲದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಹಾಗಾಗಿ ಗರ್ಭಿಣಿಯರು ಜ್ವರ, ಕೆಮ್ಮಿನ ಸಮಸ್ಯೆಯಿಂದ ಆದಷ್ಟು ದೂರವಿರುವಂತೆ ನೋಡಿಕೊಳ್ಳುವುದು ಉತ್ತಮ. ಮನೆಯ ಒಳಗೇ ಇದ್ದು ಹೆಚ್ಚು ಬೆಚ್ಚಗಿರುವಂತೆ ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ
ಬೆಚ್ಚಗಿನ ನೀರನ್ನು ಸೇವಿಸಿ
ಮಾನ್ಸೂನ್ ಕಾಲವಾದ್ದರಿಂದ ನೀರು ಕಲುಷಿತಗೊಂಡಿರಬಹುದು. ನೀರು ಹೆಚ್ಚು ತಂಪಾಗಿರುತ್ತದೆ. ಆದ್ದರಿಂದ ಕಾದು ಆರಿಸಿದ ನೀರನ್ನು ಬಳಸಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೂ ಸ್ನಾನ ಮಾಡಲೂ ಸಹ ದೇಹಕ್ಕೆ ಒಗ್ಗುವ ಬೆಚ್ಚಗಿನ ಬಿಸಿ ನೀರಿನಿಂದ ಸ್ನಾನ ಮಾಡಿ.
ಇದನ್ನೂ ಓದಿ:
ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು: ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ
Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು