ಚಳಿಗಾಲ ಇನ್ನೇನು ತನ್ನ ಕೆಲಸ ಪೂರೈಸಿ ಹೊರಡಲಿದೆ. ಇಷ್ಟು ದಿನ ಚಳಿಯಲ್ಲಿ ನಡಗುತ್ತಾ, ಬೆಚ್ಚಗೆ ಹೊದ್ದು ಮಲಗುತ್ತಿದ್ದ ದೇಹಕ್ಕೆ ಸೆಖೆ ಬೆವರಿಳಿಸುವ ಕಾಲ ಸನ್ನಿಹಿತವಾಗುತ್ತಿದೆ. ಒಂದು ಕಾಲ ಮುಗಿದು ಇನ್ನೊಂದು ಆರಂಭವಾಗುವುದು ಪ್ರಕೃತಿ ಸಹಜವಾದರೂ ಆ ಸಂದರ್ಭದಲ್ಲಿ ನಮ್ಮ ದೇಹಕ್ಕೆ ಸಣ್ಣಮಟ್ಟದ ಆರೈಕೆಯನ್ನಾದರೂ ನೀಡಬೇಕು. ಆದರೆ, ಈಗಿನ ಒತ್ತಡದ ಬದುಕಲ್ಲಿ ನಾವು ನಮ್ಮ ಆರೋಗ್ಯವನ್ನೇ ಕಡೆಗಣಿಸಿ ಕಾಲದ ಹಿಂದೆ ಒಂದೇ ಉಸಿರಿನಲ್ಲಿ ಓಡುತ್ತಿರುತ್ತೇವೆ. ಕಾಲ ಬದಲಾದಾಗ ಅದಕ್ಕೆ ಒಗ್ಗಿಕೊಳ್ಳಲು ನಮ್ಮ ದೇಹಕ್ಕೆ ಅವಕಾಶವನ್ನು ಕೊಡಬೇಕು ಎನ್ನುವುದನ್ನು ಯೋಚಿಸುವುದೇ ಇಲ್ಲ.
ಅದಕ್ಕಾಗಿಯೇ ನಾವು ನಿಮಗಾಗಿ ಕೆಲವು ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ಚಳಿಗಾಲಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಆರೋಗ್ಯ ಚೆನ್ನಾಗಿದ್ದರಷ್ಟೇ ಉಳಿದ ಖುಷಿಗಳನ್ನು ಅನುಭವಿಸುವುದು ಸಾಧ್ಯ ಎಂದು ಮನದಲ್ಲಿಟ್ಟುಕೊಂಡು ಈ ಸಲಹೆಗಳನ್ನು ರೂಢಿಸಿಕೊಳ್ಳಿ.
ನಿರ್ಜಲೀಕರಣ ದೇಹಕ್ಕೆ ಅಪಾಯ..
ಬೇಸಿಗೆಯ ಬೇಗೆಯಲ್ಲಿ ದೇಹ ಒಂದೇ ಸಮನೆ ಬೆವರು ಸುರಿಸುತ್ತದೆ. ಬೆವರು ನಮ್ಮ ದೇಹದಲ್ಲಿರುವ ನೀರಿನಂಶವನ್ನು ಹೊರ ಹಾಕುವುದರಿಂದ ಆ ಸಂದರ್ಭದಲ್ಲಿ ನಿರ್ಜಲೀಕರಣದ ಅಪಾಯ ಇರುತ್ತದೆ. ಆದ್ದರಿಂದ ಹೆಚ್ಚೆಚ್ಚು ನೀರು ಕುಡಿಯುವ ಮೂಲಕ ದೇಹದ ಸಮತೋಲನತೆ ಕಾಪಾಡಿಕೊಳ್ಳಬೇಕು. ಆದರೆ, ಸೆಖೆಯಾಗುತ್ತಿದೆ ಎಂಬ ಕಾರಣಕ್ಕೆ ಅತಿ ತಂಪಾಗಿರುವ ನೀರು ಕುಡಿಯಬೇಡಿ.
ಎಳನೀರು ಕುಡಿದು ತಂಪಾಗಿರಿ..
ಸ್ವಾಭಾವಿಕವಾಗಿ ಕೈಗೆಟಕುವ ಅತ್ಯಂತ ಉತ್ತಮ ಪಾನೀಯ. ನಿಮ್ಮ ದೇಹವನ್ನು ತಂಪಾಗಿಡುವುದರ ಜೊತೆ ಜೊತೆಗೆ ಆರೋಗ್ಯವರ್ಧಕವಾಗಿಯೂ ಕೆಲಸ ಮಾಡಬಲ್ಲದು. ಕೃತಕ ಪಾನೀಯಗಳ ಮೊರೆ ಹೋಗುವುದಕ್ಕಿಂತ ಎಳನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಹಣ್ಣು, ತರಕಾರಿ ತಿಂದು ಹಾಯಾಗಿರಿ..
ಅತಿ ಹೆಚ್ಚು ಕರಿದ ಪದಾರ್ಥ ಅಥವಾ ಜಂಕ್ ಫುಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಬೇಸಿಗೆಯಲ್ಲಿ ಅವುಗಳಿಂದ ಇನ್ನೂ ತುಸು ದೂರ ಉಳಿದರೆ ಒಳ್ಳೆಯದು. ಅವುಗಳ ಬದಲು ಹಣ್ಣು, ತರಕಾರಿ, ಸೊಪ್ಪು ಸೇವಿಸಲು ಆರಂಭಿಸಿ. ಕಲ್ಲಂಗಡಿ, ಸೌತೆಕಾಯಿ, ಪುದೀನಾ, ಹಸಿರು ತರಕಾರಿ, ನಿಂಬೆಹಣ್ಣಿನ ಪಾನಕ.. ಇವೆಲ್ಲವೂ ನಿಮಗೆ ಶಕ್ತಿಯನ್ನೂ ನೀಡುತ್ತವೆ ಮತ್ತು ಬೇಸಿಗೆಯ ಕಷ್ಟಗಳನ್ನೂ ದೂರ ಮಾಡುತ್ತವೆ.
ಮೊಸರು, ಮಜ್ಜಿಗೆ ಸೇವನೆ ಶುರುಮಾಡಿ..
ಮೊಸರು, ಮಜ್ಜಿಗೆ ನಮ್ಮ ದೈನಂದಿನ ಆಹಾರದಲ್ಲಿ ಸೇರಿಕೊಂಡಿದೆಯಾದರೂ ನಾವು ಅದಕ್ಕೆ ವಿಶೇಷ ಮಹತ್ವ ನೀಡುವುದು ಕಡಿಮೆ. ಆದರೆ, ಈ ರುಚಿಕರ ಆಹಾರ ಬೇಸಿಗೆ ಸಂದರ್ಭದಲ್ಲಿ ನಮಗರಿವಿಲ್ಲದಂತೆಯೇ ನಮ್ಮನ್ನು ಕಾಪಾಡುತ್ತವೆ. ಆದ್ದರಿಂದ ಮೊಸರು, ಮಜ್ಜಿಗೆ ಪದಾರ್ಥಗಳನ್ನು ಜಾಸ್ತಿ ಸೇವಿಸಿ. ಮೊಸರಿನಿಂದ ವಿವಿಧ ಬಗೆಯ ಅಡುಗೆ (ಪದಾರ್ಥ) ಮಾಡಬಹುದು ಅವುಗಳನ್ನು ನಿಮ್ಮ ಊಟದ ಭಾಗವಾಗಿಸಿಕೊಳ್ಳಿ. ಅಂತೆಯೇ ಮಜ್ಜಿಗೆ, ಲಸ್ಸಿಯನ್ನು ಆಗಾಗ ಕುಡಿಯುತ್ತಿರಿ.
Published On - 8:16 pm, Thu, 21 January 21