ನಮ್ಮ ಕೊರೊನಾ ಲಸಿಕೆ ಮೇಲೆ ಭರವಸೆ ಇಡಿ -ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕಿವಿಮಾತು
ಕೊವಿಡ್ ಲಸಿಕೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಲು ಹಾಗೂ ಭರವಸೆ ಮೂಡಿಸಲು ಇಂದು ಪ್ರಧಾನಿ ನರೇಂದ್ರ ಮೋದಿಯೇ ಖುದ್ದು ಅಖಾಡಕ್ಕಿಳಿದಿದ್ದರು. ಲಸಿಕೆಗಳಿಂದ ಭಾರಿ ಪ್ರಮಾಣದಲ್ಲಿ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ. ಹೀಗಾಗಿ, ಎಲ್ಲರೂ ಲಸಿಕೆಯನ್ನು ಪಡೆಯಿರಿ ಎಂದು ಆರೋಗ್ಯ ಸಿಬ್ಬಂದಿಯನ್ನು ಹುರಿದುಂಬಿಸಿದರು.
ದೆಹಲಿ: ಭಾರತದಲ್ಲಿ ನಿರೀಕ್ಷಿತ ವೇಗದಲ್ಲಿ ಕೊರೊನಾ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕರ್ಗಳು ಪಡೆಯುತ್ತಿಲ್ಲ. ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಕೊರೊನಾ ವಾರಿಯರ್ಗಳು ಲಸಿಕೆ ಪಡೆಯಲು ಹಿಂಜರಿಯೋಕೆ ನಾನಾ ಕಾರಣಗಳಿವೆ. ಹಾಗಾಗಿ, ಕೊವಿಡ್ ಲಸಿಕೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಲು ಹಾಗೂ ಭರವಸೆ ಮೂಡಿಸಲು ಇಂದು ಪ್ರಧಾನಿ ನರೇಂದ್ರ ಮೋದಿಯೇ ಖುದ್ದು ಅಖಾಡಕ್ಕಿಳಿದಿದ್ದರು. ಲಸಿಕೆಗಳಿಂದ ಭಾರಿ ಪ್ರಮಾಣದಲ್ಲಿ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ. ಹೀಗಾಗಿ, ಎಲ್ಲರೂ ಲಸಿಕೆಯನ್ನು ಪಡೆಯಿರಿ ಎಂದು ಆರೋಗ್ಯ ಸಿಬ್ಬಂದಿಯನ್ನು ಹುರಿದುಂಬಿಸಿದರು.
ಕೊರೊನಾ ಲಸಿಕೆ ಫಲಾನುಭವಿಗಳ ಜೊತೆ ಮೋದಿ ಸಂವಾದ ಭಾರತದಲ್ಲಿ ಜನವರಿ 16 ರಿಂದ ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕರ್ಗಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ನಿತ್ಯ 3 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡುವ ಗುರಿ ನಿಗದಿಯಾಗಿತ್ತು. ಆದರೆ, ಈ ನಿರೀಕ್ಷಿತ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕರ್ಗಳು ಲಸಿಕೆ ಪಡೆಯಲು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿಲ್ಲ. ಲಸಿಕೆಯ ಬಗ್ಗೆ ಇರುವ ಭಯ ಮತ್ತು ಆತಂಕದಿಂದ ಅವರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕ್ತಿದ್ದಾರೆ.
‘ಲಸಿಕೆಗಳ ಮೇಲೆ ಭರವಸೆ ಇಡಿ’ ನಿನ್ನೆ ಸಾಯಂಕಾಲದವರೆಗೂ ದೇಶದಲ್ಲಿ 10.5 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಲಸಿಕೆಯ ಬಗ್ಗೆ ಆರೋಗ್ಯ ಕಾರ್ಯಕರ್ತರಲ್ಲಿರುವ ಭಯ ಹಾಗೂ ಸಂಶಯಗಳನ್ನು ನಿವಾರಿಸಿ ಅದರ ಬಗ್ಗೆ ಭರವಸೆ, ವಿಶ್ವಾಸ ಮೂಡಿಸಲು ಇಂದು ಖುದ್ದು ಪ್ರಧಾನಿ ಮೋದಿಯೇ ಪ್ರಯತ್ನಿಸಿದ್ದಾರೆ. ಲಸಿಕೆ ಪಡೆದ ಫಲಾನುಭವಿಗಳ ಜೊತೆ ಮೋದಿ ಸಂವಾದ ನಡೆಸಿದ್ದಾರೆ. ತಾವು ಲೋಕಸಭೆಗೆ ಆಯ್ಕೆಯಾಗಿರುವ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದ ಲಸಿಕೆ ಫಲಾನುಭವಿಗಳ ಜೊತೆ ಮೋದಿ ಸಂವಾದ ನಡೆಸಿದರು. ಆರೋಗ್ಯ ಕಾರ್ಯಕರ್ತರೆಲ್ಲಾ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮೋದಿ ಮನವಿ ಮಾಡಿದರು.
ಲಸಿಕೆಗಳಿಂದ ಭಾರಿ ಪ್ರಮಾಣದಲ್ಲಿ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ. ಲಸಿಕೆಗಳ ಮೇಲೆ ಭರವಸೆ ಇಡಿ. ದೇಶದ ವಿಜ್ಞಾನಿಗಳೇ ಆಧುನಿಕ ಋಷಿಗಳು. ವಿಜ್ಞಾನಿಗಳ ಅಭಿಪ್ರಾಯದಂತೆ ಲಸಿಕೆಯನ್ನು ನೀಡಲು ಆರಂಭಿಸಿದ್ದೇವೆ. ನನ್ನ ಮೇಲೆ ಆದಷ್ಟು ಬೇಗ ಲಸಿಕೆ ನೀಡುವ ಒತ್ತಡ ಇದ್ದರೂ, ನಾವು ಆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ವಿಜ್ಞಾನಿಗಳು ಲಸಿಕೆ ಸುರಕ್ಷಿತ ಎಂದು ಹೇಳಿದ ಬಳಿಕವೇ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಾರಾಣಸಿಯ ಪ್ರತಿಯೊಬ್ಬರಿಗೂ ಈ ಸೇವಕನ ಪ್ರಣಾಮಗಳು ಎಂದು ಮಾತು ಆರಂಭಿಸಿದ ಪ್ರಧಾನಿ ಮೋದಿ, ನಗರದಲ್ಲಿ ಇದುವರೆಗೂ 20 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯಲು ಆಸ್ಪತ್ರೆ-ಆಸ್ಪತ್ರೆಗಳ ನಡುವೆಯೇ ಸ್ಪರ್ಧೆ ಶುರುವಾಗಲಿ ಎಂದರು. ಲಸಿಕೆ ಪಡೆದವರೇ, ಲಸಿಕೆ ಬಗೆಗಿನ ವದಂತಿ ಹಾಗೂ ಅಪಪ್ರಚಾರಗಳನ್ನು ಹೋಗಲಾಡಿಸಬೇಕು ಎಂದು ಕರೆ ನೀಡಿದ್ದರು.
ಇನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಸಿಕೆ ಪಡೆಯುವುದರ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಅಂದೋಲನ ನಡೆಸಲು ತೀರ್ಮಾನಿಸಿವೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಜಾಗೃತಿ ಅಂದೋಲನಕ್ಕೆ ಚಾಲನೆ ನೀಡಿದ್ದಾರೆ. ಆಯಾ ರಾಜ್ಯಗಳ ಆರೋಗ್ಯ ಸಚಿವರ ಜೊತೆ ಖ್ಯಾತ ವೈದ್ಯರು ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರಿಗೆ ಮನವಿ ಮಾಡುವ ಸಂದೇಶಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತೆ. ಬಳಿಕ ಮುಂದಿನ ದಿನಗಳಲ್ಲಿ ಖುದ್ದಾಗಿ ಪ್ರಧಾನಿ ಮೋದಿ ಹಾಗೂ ಎಲ್ಲ ರಾಜ್ಯದ ಸಿಎಂ ಮತ್ತು ನಾಯಕರು ಲಸಿಕೆ ಪಡೆಯುವ ಮೂಲಕ ಜನರಲ್ಲಿ ವ್ಯಾಕ್ಸಿನ್ ಬಗ್ಗೆ ಭರವಸೆ, ನಂಬಿಕೆ, ವಿಶ್ವಾಸ ಮೂಡಿಸಲು ಯತ್ನಿಸಲಿದ್ದಾರೆ.