ಶ್ವಾಸಕೋಶ ಕ್ಯಾನ್ಸರ್‌ಗೆ ಒಳಗಾದವರಲ್ಲಿ ಶೇ.85ರಷ್ಟು ಮಂದಿ ಕಾಯಿಲೆಯು ತೀವ್ರ ಸ್ವರೂಪ ಪಡೆದ ಬಳಿಕ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಕ್ಯಾನ್ಸರ್ನ ಲಕ್ಷಣಗಳ ಬಗ್ಗೆ ಜಾಗೃತಿ ಇಲ್ಲದಿರುವುದೇಇದಕ್ಕೆ ಮುಖ್ಯ ಕಾರಣ. ಶ್ವಾಸಕೋಶದ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಧೂಮಪಾನವೇ ಪ್ರಮುಖ ಕಾರಣ. ಇದು ಬಹುತೇಕರಲ್ಲಿ ತಡವಾಗಿ ಪತ್ತೆಯಾಗುತ್ತಿರುವುದರಿಂದ ಕೆಲವರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ.
ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳಿ, ತಪಾಸಣೆಗೆ ಒಳಪಟ್ಟಲ್ಲಿ ರೋಗ ಗುರುತಿಸಿ ಚಿಕಿತ್ಸೆ ನೀಡಬಹುದು. ನಿರ್ಲಕ್ಷ್ಯ ಮಾಡಿದಲ್ಲಿ ಜೀವಕ್ಕೆ ಅಪಾಯವಾಗುತ್ತದೆ. ಶೇ 40ರಷ್ಟು ಧೂಮಪಾನಿಗಳು ಚೀನಾ, ಭಾರತ ಮತ್ತು ಇಂಡೋನೇಷ್ಯಾದಲ್ಲಿಯೇ ಇದ್ದಾರೆ. ನಿರಂತರ ಕೆಮ್ಮು, ಎದೆನೋವು, ಕೆಮ್ಮಿದಾಗ ರಕ್ತ ಹೊರಹೊಮ್ಮುವಿಕೆ, ಉಸಿರಾಟದ ಸಮಸ್ಯೆ, ನಡೆದಾಡುವಾಗ ಸಮತೋಲನ ತಪ್ಪುವಿಕೆ ಸೇರಿದಂತೆ ವಿವಿಧ ಲಕ್ಷಣಗಳು ಶ್ವಾಸಕೋಶ ಕ್ಯಾನ್ಸರ್ ಇರುವವರಿಗೆ ಕಾಣಿಸಿಕೊಳ್ಳುತ್ತವೆ.
ಪ್ರಾಥಮಿಕ ಹಂತದಲ್ಲಾದರೆ ಶ್ವಾಸಕೋಶದ ಬಾಧಿತ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗುತ್ತದೆ. ಕೀಮೋಥೆರಪಿ, ರೇಡಿಯೇಷನ್ ಚಿಕಿತ್ಸೆ ಕೂಡ ಪ್ರಕರಣಗಳನ್ನು ಆಧರಿಸಿ ನೀಡಲಾಗುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಎಲ್ಲ ಕಾಯಿಲೆಗಳಿಗೆ ಧೂಮಪಾನ ಕಾರಣ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮಧ್ಯ ವಯಸ್ಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಮಾದರಿಯ ಕ್ಯಾನ್ಯರ್ ಎದುರಿಸುತ್ತಿದ್ದಾರೆ.
ವ್ಯಕ್ತಿಗೆ ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬ ಆಧಾರದ ಮೇಲೆ ಚಿಕಿತ್ಸೆ ನಿರ್ಧರಿಸಲಾಗುತ್ತದೆ. ಶೇ 15ರಷ್ಟು ಮಂದಿಯಲ್ಲಿ ಮಾತ್ರ ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯವಾಗುತ್ತಿದೆ. ಶ್ವಾಸಕೋಶ ಕ್ಯಾನ್ಸರ್‌ಗೆ ಒಳಗಾದವರಲ್ಲಿ ಶೇ 70ರಷ್ಟು ಮಂದಿ ಧೂಮಪಾನಿಗಳಾಗಿರುತ್ತಾರೆ.
ಶೇ 20ರಿಂದ ಶೇ 30ರಷ್ಟು ಮಂದಿ ಪರೋಕ್ಷ ಧೂಮಪಾನ, ವಾಯುಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಂದ ಈ ಮಾದರಿಯ ಕ್ಯಾನ್ಸರ್‌ಗೆ ಒಳಪಡುತ್ತಿದ್ದಾರೆ.
ಶ್ವಾಸಕೋಶ ಕ್ಯಾನ್ಸರ್ನ ಲಕ್ಷಣಗಳು
-ಆಹಾರ ನುಂಗಲು ಕಷ್ಟವಾಗುವುದು
-ಭುಜ ಹಾಗೂ ಎದೆ ನೋವು
-ಕುತ್ತಿಗೆ ಅಥವಾ ಮುಖದಲ್ಲಿ ಸ್ವೆಲ್ಲಿಂಗ್ ಕಾಣಿಸಿಕೊಳ್ಳುವುದು
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.