Health: ವಯಸ್ಸೀಗ 30? ನಿಮ್ಮ ಹೃದಯವನ್ನೇ ಇಣುಕಿ ನೋಡಿಕೊಳ್ಳುವ ಸಮಯ

| Updated By: ಶ್ರೀದೇವಿ ಕಳಸದ

Updated on: Jun 30, 2022 | 10:58 AM

Heart Care : ಹೃದಯದ ಆರೋಗ್ಯ, ವ್ಯಕ್ತಿಯ ಜೀವಿತಾವಧಿ ಒಂದಕ್ಕೊಂದು ಪೂರಕ. ಆದ್ದರಿಂದ ಮೂವತ್ತರಲ್ಲಿರುವ ನೀವು ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದರತ್ತ ಗಂಭೀರವಾಗಿ ತೊಡಗಿಕೊಳ್ಳಿ.

Health: ವಯಸ್ಸೀಗ 30? ನಿಮ್ಮ ಹೃದಯವನ್ನೇ ಇಣುಕಿ ನೋಡಿಕೊಳ್ಳುವ ಸಮಯ
ಸೌಜನ್ಯ : ಅಂತರ್ಜಾಲ
Follow us on

Heart Care : ಹೃದಯವು ದೇಹಕ್ಕೆ ಜೀವ ತುಂಬುವ ಮಹತ್ವದ ಅಂಗವಷ್ಟೇ ಅಲ್ಲ, ಭಾವನೆಗಳ ಮೂಲಾಧಾರವೂ ಆಗಿರುವುದರಿಂದ ಅದು ಪ್ರೀತಿಯ ಸಂಕೇತವೂ ಹೌದು. ಹಾಗಾಗಿ ಹೃದಯವನ್ನು ಸದಾ ಜೋಪಾನವಾಗಿರಿಸಿಕೊಳ್ಳಲೇಬೇಕು. ಐವತ್ತರ ನಂತರ ಅದನ್ನು ಯೋಚಿಸಿದರಾಯ್ತು ಎಂಬ ಕಾಲದಲ್ಲಿ ನಾವಿಲ್ಲ. ಬದಲಾಗಿ ಮೂವತ್ತು ತಲುಪುತ್ತಿದ್ದಂತೆ ಥರಾವರಿ ಕಾಯಿಲೆಗಳು ಅಪ್ಪಳಿಸುವಂಥ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ. ಸಾಕಷ್ಟು ಯುವಕ-ಯುವತಿಯರು ಇದಕ್ಕೆ ಸಾಕ್ಷಿಯಾಗುತ್ತಿದ್ದಾರೆ. ದುರದೃಷ್ಟವಶಾತ್, ವಿಶ್ವ ಹೃದಯ ಒಕ್ಕೂಟದ ಪ್ರಕಾರ ಹೃದಯರಕ್ತನಾಳದ ಕಾಯಿಲೆಯೇ (CVD) ಸಾವಿಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿನ ಸಂಶೋಧನೆಗಳೂ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು ಎಂದು ಸೂಚಿಸುತ್ತಿವೆ.  ಕಾಯಿಲೆಯ ಚಿಕಿತ್ಸೆಗಿಂತ ತಡೆಗಟ್ಟುವಿಕೆಗೆ ಹೆಚ್ಚು ಪ್ರಾಮುಖ್ಯ. ಏಕೆಂದರೆ, ನಮ್ಮ ಹೃದಯದ ಆರೋಗ್ಯದ ಮೇಲೆ ಒಟ್ಟಾರೆ ಜೀವನಮಟ್ಟ ಅವಲಂಬಿತವಾಗಿರುತ್ತದೆ. ನಮ್ಮ ಹೃದಯ ನಮ್ಮದಷ್ಟೇ ಅಲ್ಲ. ಜೀವಜೀವಗಳ ತಂತುಗಳನ್ನು ಅದು ಬೆಸೆದಿದೆ. ನಾವೆಲ್ಲರೂ ಪರಸ್ಪರ ಅವಲಂಬಿತರು. ಹಾಗಾಗಿ ಹೃದಯವನ್ನು ಜೋಪಾನಿಸಿಕೊಳ್ಳಲು ಏನೇನು ಬದಲಾವಣೆ ಮಾಡಿಕೊಳ್ಳಬೇಕು?

ನಿಯಮಿತ ನಡಿಗೆ, ವ್ಯಾಯಾಮವಿರಲಿ

ನಡಿಗೆ ಸುಲಭವೂ ಮತ್ತು ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದು. ಪ್ರತಿದಿನ ವಾಕಿಂಗ್ ಹೋಗುವುದರಿಂದ ಹೃದ್ರೋಗವು ಎರಗದಂತೆ ಮತ್ತದರಿಂದ ಉಂಟಾಗುವ ಅಪಾಯದಿಂದ ಕಾಪಾಡಿಕೊಳ್ಳಬಹುದು. ಜೊತೆಗೆ,  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ಸಹಕಾರಿ. ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು, ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಫಿಟ್​ನೆಸ್​ ಮಾರ್ಗದರ್ಶಕರ ಮೇರೆಗೆ ಮನೆಯಲ್ಲಿಯೇ ಸರಳ ವ್ಯಾಯಾಮ ಮಾಡಬಹುದು ಅಥವಾ ಜಿಮ್ ಸೇರಿಕೊಳ್ಳಬಹುದು. ಬೆಳಗಿನ ವಾಕ್​ ಅಥವಾ ಸೈಕ್ಲಿಂಗ್ ಕೂಡ ಉತ್ತಮರೂಢಿ.

ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಇದನ್ನೂ ಓದಿ : Health: ‘ಒನ್ ನೇಷನ್ ಒನ್​ ಡಯಾಲಿಸಿಸ್’ ಯೋಜನೆ ಸದ್ಯದಲ್ಲೇ ಚಾಲನೆ

ತಂಬಾಕು, ಮದ್ಯಪಾನ ತ್ಯಜಿಸಿ

ಧೂಮಪಾನ ನಿಮ್ಮ ಮನಸ್ಸನ್ನು ಆ ಕ್ಷಣಕ್ಕೆ ವಿಶ್ರಾಂತಿ ಸ್ಥಿತಿಯಲ್ಲಿರಿಸಬಹುದು. ಆದರೆ ಅದು ದೀರ್ಘಕಾಲದ ಪರಿಣಾಮವನ್ನುಂಟುಮಾಡುತ್ತದೆ. ಅತಿಯಾದಲ್ಲಿ ಹೃದಯದ ಕಾಯಿಲೆಗಳು ಬಲುಬೇಗನೆ ಆವರಿಸಿಕೊಳ್ಳುತ್ತವೆ. ಹಾಗೆಯೇ ಮದ್ಯಸೇವನೆಯಿಂದಲೂ ಇದೇ ಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಆಲ್ಕೋಹಾಲ್ ಮತ್ತು ತಂಬಾಕು, ಧೂಮಪಾನವನ್ನು ತ್ಯಜಿಸುವುದು ಸೂಕ್ತ.

ನಿದ್ದೆ, ತೂಕ ನಿರ್ವಹಣೆ

ಉತ್ತಮ ನಿದ್ರೆಯೇ ಸದೃಢ ಆರೋಗ್ಯದ ಲಕ್ಷಣಗಳಲ್ಲಿ ಒಂದು. ಆದ್ದರಿಂದ ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ದೇಹದಲ್ಲಿ ಶೇಖರಣೆಯಾಗುವ ಹೆಚ್ಚುವರಿ ಕೊಬ್ಬನ್ನು ನಿಯಂತ್ರಣದಲ್ಲಿರಿಸಬೇಕೆಂದರೆ,  ತೂಕವನ್ನು ನಿರ್ವಹಿಸುವುದು ತುಂಬಾ ಮುಖ್ಯ. ತೂಕ ಹೆಚ್ಚಾಗುವುದು ಹೃದಯಕ್ಕೆ ಅಪಾಯ. ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಹೃದಯದ ನಿಯಮಿತ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿ ವಿವಿಧ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮದ ಮೇಲೆ ಗಮನವಿರಲಿ.

ಹೃದಯ ಸ್ನೇಹಿಯಾದ ಆಹಾರವಿರಲಿ

ಹೃದಯದ ಆರೋಗ್ಯವನ್ನು ಹೆಚ್ಚಿಸುವ ಆಹಾರಕ್ರಮ ನಿತ್ಯವೂ ಇರಲಿ. ಉದಾಹರಣೆಗೆ, ಕರಿದ ಮಾಂಸದ ಪದಾರ್ಥಗಳ ಸೇವನೆಯಂದ ದೂರವಿರಿ. ಇದರಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಯಾಗಿ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಪಾಲಕ್ ಹರಿವೆ, ಚಿಲಕ್ಹರಿವೆ, ಚಕ್ಕೋತ ಮುಂತಾದ ಸೊಪ್ಪುಗಳು ಒಳ್ಳೆಯದು. ತರಕಾರಿಗಳಲ್ಲಿ ಕೋಸುಗಡ್ಡೆ, ದಪ್ಪಮೆಣಸಿನಕಾಯಿ. ಹಣ್ಣುಗಳಲ್ಲಿ ಸ್ಟ್ರಾಬೆರಿ, ಬ್ಲ್ಯೂಬೆರಿ. ವಾಲ್ನಟ್ಸ್ ಮತ್ತು ಬಾದಾಮಿ. ಸೋಯಾ ಪ್ರೋಟೀನ್ ಮತ್ತು ಧಾನ್ಯಗಳು. ಇವುಗಳನ್ನು ಸೇವಿಸಿದಲ್ಲಿ ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿರುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ : Health: ಸಸ್ಯಾಧಾರಿತ ಮಾಂಸ ಏನು ಹೀಗೆಂದರೆ?

 

ಮಾನಸಿಕ ಆರೋಗ್ಯ ಕಾಳಜಿ

ಇಷ್ಟೆಲ್ಲವನ್ನು ಯೋಜಿಸಿದ ನಂತರ ಮಾನಸಿಕ ಆರೋಗ್ಯದ ಮೇಲೆ ಗಮನವಿರಲಿ. ನಿತ್ಯಸಂಗತಿಗಳಲ್ಲಿ ಯಾವುದು ನಿಮ್ಮನ್ನು ಆತಂಕ, ಒತ್ತಡಕ್ಕೆ ದೂಡುತ್ತಿದೆ ಎಂದು ಯೋಚಿಸಿ. ಖಿನ್ನತೆಗೆ ದೂಡುವಂತಿದ್ದರೆ ಮನೋತಜ್ಞರ ಸಲಹೆ ಪಡೆದುಕೊಳ್ಳಿ. ಮನಸ್ಸು ಶಾಂತವಾಗಿರಲು ಸಂತೋಷ ಬಹಳೇ ಮುಖ್ಯ. ಹಾಗಾಗಿ ನಿಮ್ಮ ಮನಸ್ಸಿಗೆ ಏನು ಬೇಕೋ ಎಂಥ ವಾತಾವರಣೆ ಬೇಕೋ ಅದನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ.