Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Isaac Bashevis Singer‘s Story-Gimpel The Fool : ಎಚ್ಚರಾದಾಗ ಅವಳ ತುಟಿಗಳ ಸ್ಪರ್ಷ ಮತ್ತು ಕಂಬನಿಯ ಉಪ್ಪುರುಚಿ ನನ್ನಲ್ಲಿ ಹಾಗೆಯೇ ಹಸಿಯಾಗಿರುತ್ತದೆ. ಜಗತ್ತೆನ್ನುವುದು ಸಂಪೂರ್ಣ ಕಾಲ್ಪನಿಕವೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅದು ನಿಜಜಗತ್ತಿನಿಂದಲೇ ಹೊಮ್ಮಿದ ಆವೃತ್ತಿ.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಎಲ್ಲ ಗುರುಗಳೂ ಒಮ್ಮತಕ್ಕೆ ಬರುವಷ್ಟರಲ್ಲಿ ಒಂಬತ್ತು ತಿಂಗಳೇ ಕಳೆದು ಹೋದವು. ಪತ್ರಗಳು ಅತ್ತಿಂದಿತ್ತ ಓಡಾಡಿದವು. ಈ ವಿಷಯ ಇಷ್ಟೊಂದು ಜಟಿಲವಿರಬಹುದೆಂದು ನನಗೆ ಗೊತ್ತಿರಲಿಲ್ಲ. ಏತನ್ಮಧ್ಯೆ ಎಲ್ಕಾ ಇನ್ನೂ ಒಂದು ಹೆಣ್ಣು ಕೂಸನ್ನು ಹೆತ್ತಳು. ಮಂದಿರಕ್ಕೆ ಹೋಗಿ ಈ ಶನಿವಾರದ ಪ್ರಾರ್ಥನೆಯನ್ನು ಅವಳಿಗಾಗಿ ಸಲ್ಲಿಸಿದೆ. ನಾಮಕರಣಕ್ಕೆ ನನ್ನನ್ನು ಕರೆದರು. ಕೂಸಿಗೆ ನನ್ನ ಅತ್ತೆಯ ಹೆಸರಿಟ್ಟೆ. ಅತ್ತೆಯ ಆತ್ಮಕ್ಕೆ ಶಾಂತಿಯಿರಲಿ. ಬೇಕರಿಗೆ ಬರುವ ಊರಿನ ಲಫಂಗರು, ಬಾಯಿಹರುಕರೆಲ್ಲ ನನ್ನನ್ನು ಸುಮ್ಮನೇ ಬಿಡಲಿಲ್ಲ. ನನ್ನ ಸಂಕಷ್ಟ ಮತ್ತು ನೋವಿನಿಂದ ರಕ್ಕಸಗಣ ಪುನಶ್ಚೇತನಗೊಂಡಿತ್ತು. ಏನೇ ಇರಲಿ, ಕಲಿತದ್ದನ್ನಷ್ಟೇ ನಾನು ಯಾವತ್ತೂ ನಂಬಬೇಕೆಂದು ನಿರ್ಧರಿಸಿದೆ. ಅಪನಂಬಿಕೆಯಲ್ಲಿ ಒಳ್ಳೆಯದೇನಿದೆ? ಈವತ್ತು ನಿಮ್ಮ ಹೆಂಡತಿಯನ್ನು ನಂಬುವುದಿಲ್ಲ; ನಾಳೆ ದೇವರನ್ನೇ ನಂಬದೇ ಹೋಗುತ್ತೀರಿ.
ಕಥೆ : ಮಳ್ಳ ಗಿಂಪೆಲ್ | ಇಂಗ್ಲಿಷ್ : ಐಸಾಕ್ ಬಾಶೆವಿಸ್ ಸಿಂಗರ್ | ಕನ್ನಡಕ್ಕೆ : ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗ | ಸೌಜನ್ಯ : ‘ದೇಶಕಾಲ’ ಸಾಹಿತ್ಯ ಪತ್ರಿಕೆ
(ಭಾಗ 3)
ಅವಳ ಮನೆಯ ಪಕ್ಕದಲ್ಲಿರುವ ಒಬ್ಬ ತರುಣ ಬೇಕರಿಯಲ್ಲಿ ಕೆಲಸಕ್ಕಿದ್ದ. ಅವನ ಜೊತೆ ಪ್ರತಿದಿನ ಜೋಳ, ಗೋಧಿಯ ಬ್ರೆಡ್ಡು, ಬಿಸ್ಕತ್ತು, ಕೇಕು, ಸುರುಳಿರೊಟ್ಟಿಗಳನ್ನು ಅಥವಾ ಕೆಲವೊಮ್ಮೆ ಅವಕಾಶ ಸಿಕ್ಕಾಗ ಕಡುಬು, ಜೇನು ಕೇಕಿನ ಹೋಳು ಅಥವಾ ಯಾರದೋ ಮದುವೆಯ ಮಿಠಾಯಿಗಳನ್ನು ಕಳಿಸಿಕೊಡುತ್ತಿದ್ದೆ. ಈ ತರುಣ ಒಳ್ಳೆಯವನು. ಎಷ್ಟೋ ಸಲ ಇದಕ್ಕೆಲ್ಲ ತಾನೇ ಇನ್ನೊಂದಿಷ್ಟು ಸೇರಿಸಿ ಕೊಡುತ್ತಿದ್ದ. ಮೊದಲೆಲ್ಲ ಮೂಗು ಹಿಂಡಿ, ಪಕ್ಕೆತಿವಿದು ನನ್ನನ್ನು ಗೋಳುಹೊಯ್ದುಕೊಳ್ಳುತ್ತಿದ್ದ ಈ ತರುಣ ನನ್ನ ಮನೆಗೆ ಹೋಗಲಾರಂಭಿಸಿದ ಮೇಲೆ ನನ್ನ ಜೊತೆ ಸ್ನೇಹ ಸಹಾನುಭೂತಿಯಿಂದ ವರ್ತಿಸತೊಡಗಿದ. ‘ಗಿಂಪೆಲ್, ನಿನಗೆ ಒಳ್ಳೆಯ ಹೆಂಡತಿ ಮತ್ತು ಇಬ್ಬರು ಚೆಂದ ಮಕ್ಕಳಿದ್ದಾರೆ. ನೀನೇ ಅವರಿಗೆ ಲಾಯಕ್ಕಲ್ಲ.’ ಅಂದ.
‘ಆದರೆ ಜನ ಅವಳ ಬಗ್ಗೆ ಆಡಿಕೊಳ್ಳುವುದನ್ನು ನೋಡಿದರೆ…’ ಅಂದೆ. ‘ಅವರೆಲ್ಲ ಉದ್ದ ನಾಲಿಗೆಯವರು. ಬಡಬಡಿಸದೇ ಇನ್ನೇನು ಮಾಡಿಯಾರು? ಕಳೆದ ಚಳಿಗಾಲದ ಥಂಡಿಯನ್ನು ಕಡೆಗಣಿಸಿದಂತೆ ಇದನ್ನೂ ಕಡೆಗಣಿಸು’. ಎಂದ. ಒಂದು ದಿನ ಗುರುಗಳು ನನ್ನನ್ನು ಕರೆಸಿ ಹೇಳಿದರು. ‘ಗಿಂಪೆಲ್, ನೀನು ನಿನ್ನ ಹೆಂಡತಿಯನ್ನು ತಪ್ಪು ತಿಳಕೊಂಡಿದ್ದೆ ಎಂಬುದು ನಿನಗೆ ಖಚಿತವೇ?’ ‘ಖಂಡಿತ’ ಅಂದೆ. ‘ಅದ್ಹೇಗೆ? ನೀನೇ ಸ್ವತಃ ನೋಡಿದ್ದೆಯಲ್ಲ?’ ‘ಅದೊಂದು ನೆರಳಿದ್ದಿರಬಹುದು’ ‘ಯಾತರ ನೆರಳು?’ ‘ಯಾವುದೋ ಒಂದು ತೊಲೆಯ ನೆರಳು, ಬಹುಶಃ’ ‘ಹಾಗಾದರೆ ನೀನಿನ್ನು ಮನೆಗೆ ಹೋಗಬಹುದು. ನೀನು ಯಾನೋವರ್‌ನ ಗುರುಗಳಿಗೆ ಕೃತಜ್ಞನಾಗಿರಬೇಕು. ನಿನ್ನ ಪರವಾದ ಯಾವುದೋ ಧರ್ಮಸೂಕ್ಷ್ಮ ಅವರಿಗೊಂದು ಗ್ರಂಥದಲ್ಲಿ ಸಿಕ್ಕಿತು.’ ಗುರುಗಳ ಕೈಹಿಡಿದು ಚುಂಬಿಸಿದೆ.
ನನಗೆ ತಕ್ಷಣ ಮನೆಗೆ ಓಡಬೇಕೆನ್ನಿಸಿತು. ಹೆಂಡತಿ ಮತ್ತು ಮಗುವನ್ನು ಇಷ್ಟು ದಿನ ಬಿಟ್ಟಿರುವುದು ಸಣ್ಣ ಸಂಗತಿಯಲ್ಲ. ನಂತರ ಅನ್ನಿಸಿತು – ಮೊದಲು ಕೆಲಸಕ್ಕೆ ಹೋಗಿ ನಂತರ ಸಂಜೆ ಮನೆಗೆ ಹೋಗುವುದೇ ಒಳ್ಳೆಯದು. ನನ್ನ ಎದೆಯಲ್ಲಿ ಹಬ್ಬದ ಉಲ್ಲಾಸವಿದ್ದರೂ ನಾನು ಯಾರಿಗೂ ಏನನ್ನೂ ಹೇಳಲು ಹೋಗಲಿಲ್ಲ. ಎಂದಿನಂತೆ ಹೆಂಗಸರೆಲ್ಲ ನನ್ನನ್ನು ಕಿಚಾಯಿಸುತ್ತಲೇ ಇದ್ದಾಗ ನಾನು ಮನಸ್ಸಲ್ಲೇ ಹೇಳುತ್ತಿದ್ದೆ: ನಡೆಯಲಿ ನಿಮ್ಮ ಸಡಿಲು ಬಾಯಿ. ನೀರಿನ ಮೇಲೆ ತೇಲುವ ಎಣ್ಣೆಯಂತೆ ಸತ್ಯ ಹೊರಬಿದ್ದಿದೆ. ಧರ್ಮಗ್ರಂಥಗಳೇ ಸರಿಯೆಂದ ಮೇಲೆ ಅದು ಸರಿಯೇ!
ರಾತ್ರಿ, ಉಬ್ಬಲು ಬಿಟ್ಟ ಕಲಸಿದ ಹಿಟ್ಟಿಗೆ ಮುಚ್ಚಳ ಹಾಕಿ, ನನ್ನ ಪಾಲಿನ ಬ್ರೆಡ್ಡನ್ನೂ ಸಣ್ಣ ಹಿಟ್ಟಿನ ಚೀಲವನ್ನೂ ಹಿಡಿದುಕೊಂಡು ಮನೆಯತ್ತ ಹೊರಟೆ. ಆಕಾಶದಲ್ಲಿ ಚಂದ್ರ ಪೂರ್ಣವಾಗಿದ್ದ. ತಾರೆಗಳು ಬಿಟ್ಟು ಬಿಟ್ಟು ಮಿನುಗುತ್ತಿದ್ದವು. ಆತ್ಮಕ್ಕೇನೋ ನಡುಕ. ನಾನು ದಾಪುಗಾಲು ಹಾಕುತ್ತಿದ್ದಂತೆ ನನಗಿಂತ ಮುಂದೆ ಮುಂದೆ ನನಗಿಂತ ಉದ್ದ ನೆರಳು. ಚೆಲ್ಲಿದ ಚಳಿಗಾಲದ ತಾಜಾ ಹಿಮ. ಹಾಡುವ ಹಂಬಲವಾಯಿತು. ಈ ಅಪರಾತ್ರಿಯಲ್ಲಿ ನೆರೆಹೊರೆಯವರನ್ನು ಎಬ್ಬಿಸುವುದೇಕೆಂದು ಸುಮ್ಮನಾದೆ. ಸಿಳ್ಳೆ ಹಾಕಬೇಕೆನಿಸಿತು. ಆದರೆ ಸಿಳ್ಳೆಗಳು ಭೂತಗಳನ್ನು ಹೊರತರುವುದು ನೆನಪಾಗಿ ಸುಮ್ಮನಾದೆ. ಮೌನವಾಗಿ, ಆದಷ್ಟು ಜೋರಾಗಿ ನಡೆಯತೊಡಗಿದೆ. ನಾನು ಹಾಯುವಾಗ ಕಿರಿಸ್ತಾನರ ಕೇರಿಯ ನಾಯಿಗಳು ಬೊಗಳಿದವು. ಬೊಗಳಿ ಬೊಗಳಿ, ಹಲ್ಲು ಕಿರಿದು ಬೊಗಳಿ. ನೀವು ಯಕಶ್ಚಿತ್ ನಾಯಿಗಳು. ನಾನೋ ಮನುಷ್ಯ. ಸುಂದರ ಹೆಂಡತಿಯ ಗಂಡ ಮತ್ತು ಭರವಸೆಯ ಕುಡಿಗಳ ಅಪ್ಪ.
ಮನೆಯನ್ನು ಸಮೀಪಿಸುತ್ತಿದ್ದಂತೆ ನನ್ನ ಹೃದಯ ಅಪರಾಧಿಯ ಹೃದಯದಂತೆ ಬಡಿದುಕೊಳ್ಳತೊಡಗಿತು. ನನಗೆ ಯಾವ ಭಯವೂ ಇರಲಿಲ್ಲ. ಆದರೆ ಹೃದಯ ಮಾತ್ರ ಧಕ್ ಧಕ್ ಎನ್ನುತ್ತಿತ್ತು. ಆಯಿತು, ಇನ್ನು ಹಿಂದೆ ಸರಿಯುವಂತಿಲ್ಲ. ಮೆಲ್ಲಗೆ ಚಿಲಕ ತೆಗೆದು ಒಳಗೆ ಹೋದೆ. ಎಲ್ಕಾ ನಿದ್ರೆಯಲ್ಲಿದ್ದಳು. ನಾನು ಹೊಸಕೂಸಿನ ತೊಟ್ಟಿಲತ್ತ ನೋಡಿದೆ. ಕಿಟಕಿ ಮುಚ್ಚಿದ್ದರೂ ಅದರ ಬಿರುಕಿನಿಂದ ಚಂದ್ರ ಒಳನುಗ್ಗುತ್ತಿದ್ದ. ಕೂಸಿನ ಮೊಗವನ್ನು ನೋಡಿದೆ. ಆ ಪುಟಾಣಿ ಮುದ್ದಿನ ಮುದ್ದೆಯನ್ನು ನೋಡಿದ ಕ್ಷಣದಲ್ಲೇ ಅದರ ಅಕ್ಕರೆಯಲ್ಲಿ ಬಿದ್ದೆ. ನಂತರ ಹಾಸಿಗೆಯನ್ನು ಸಮೀಪಿಸಿದೆ. ಅಲ್ಲಿ ಕಂಡದ್ದೇನು? ಎಲ್ಕಾಳ ಪಕ್ಕದಲ್ಲಿ ಬೇಕರಿಯ ತರುಣ ಮಲಗಿದ್ದ. ಚಂದ್ರ ಫಕ್ಕನೇ ಆರಿಹೋದ. ಗಾಢ ಕತ್ತಲು. ಕಂಪಿಸುತ್ತ ನಿಂತೆ. ನನ್ನ ಹಲ್ಲು ಅದುರಿದವು. ಕೈಯಿಂದ ಬ್ರೆಡ್ ಜಾರಿಬಿತ್ತು. ನನ್ನ ಹೆಂಡತಿ ಎಚ್ಚೆತ್ತು, ‘ಯಾರದು? ಆಂ’ ಎಂದಳು.
‘ನಾನು’ ಎಂದು ತೊದಲಿದೆ. ‘ಗಿಂಪೆಲ್? ನೀನು ಇಲ್ಲಿ? ಇದು ನಿಷಿದ್ಧವಲ್ಲವೇ?’ ‘ಗುರುಗಳು ಹೇಳಿದರು’ ಎಂದು ನಾನು ಜ್ವರಬಂದವನಂತೆ ನಡುಗಿದೆ. ‘ಇಲ್ಲಿ ಕೇಳು ಗಿಂಪೆಲ್, ಹೊರಗೆ ಕೊಟ್ಟಿಗೆಗೆ ಹೋಗಿ ಮೇಕೆಗೆ ಹೇಗಿದೆ ನೋಡು. ಅದಕ್ಕೆ ಹುಷಾರಿರಲಿಲ್ಲ.’ ಎಂದು ಉಸುರಿದಳು. ನಮ್ಮ ಬಳಿಯೊಂದು ಮೇಕೆಯಿದ್ದದನ್ನು ಹೇಳಲು ಮರೆತಿದ್ದೆ. ಅದಕ್ಕೆ ಹುಷಾರಿಲ್ಲವೆಂದು ತಿಳಿದದ್ದೇ ಅಂಗಳಕ್ಕೆ ಹೋದೆ. ಈ ಮುದಿ ಮೇಕೆ ಒಂದು ಒಳ್ಳೆಯ ಜೀವ. ಅದರ ಬಗ್ಗೆ ನನಗೆ ಮಾನವೀಯ ಭಾವನೆಗಳೇ ಇದ್ದವು.
ಅನುಮಾನಿಸುತ್ತಲೇ ನಾನು ಕೊಟ್ಟಿಗೆಗೆ ಹೋಗಿ ಬಾಗಿಲು ತೆರೆದೆ. ಅಲ್ಲಿ ಮೇಕೆ ನಾಲ್ಕೂ ಕಾಲುಗಳ ಮೇಲೆ ನಿಂತಿತ್ತು. ಅದರ ಮೈಯೆಲ್ಲಾ ಸವರಿ, ಕೊಂಬು ಹಿಡಿದು ಬರಸೆಳೆದು ಕೆಚ್ಚಲನ್ನು ಪರೀಕ್ಷಿಸಿದೆ. ಕಾಯಿಲೆಯೇನೂ ಕಾಣಲಿಲ್ಲ. ಬಹುಶಃ ತೊಗಟೆಯನ್ನು ಜಾಸ್ತಿ ತಿಂದಿರಬೇಕು. ‘ಶುಭರಾತ್ರಿ ಮುದ್ದು ಮೇಕೆ. ಹುಷಾರಾಗಿರು’ ಎಂದೆ. ನನ್ನ ಕಾಳಜಿಗೆ ಧನ್ಯವಾದ ಹೇಳುವಂತೆ ಆ ಪುಟ್ಟ ಪ್ರಾಣಿ ‘ಮ್ಯಾ’ ಅಂದಿತು. ಮರಳಿ ಮನೆಯೊಳಗೆ ಹೋದೆ. ತರುಣ ಮಾಯವಾಗಿದ್ದ
‘ಆ ಪೋರನೆಲ್ಲಿ?’ ಅಂದೆ. ‘ಯಾವ ಪೋರ?’ ಎಂದಳು, ನನ್ನ ಹೆಂಡತಿ. ‘ಅಂದರೆ? ಆ ಹುಡುಗ. ನಿನ್ನ ಜೊತೆ ಮಲಗಿದ್ದನಲ್ಲ ಅವನೇ.’ ‘ನಾನು ಇಂದು ಮತ್ತು ನಿನ್ನೆ ಕಂಡ ಕನಸುಗಳೆಲ್ಲ ನಿಜವಾಗಲಿ. ಮತ್ತು ನಿನ್ನ ಮೈಮನಗಳನ್ನು ನಾಶಮಾಡಲಿ. ಯಾವುದೋ ದುಷ್ಟ ದೆವ್ವ ನಿನ್ನೊಳಗೆ ಕೂತು ನಿನ್ನ ದೃಷ್ಟಿಯನ್ನು ಮಂಕುಗೊಳಿಸಿದೆ.’ ಎಂದವಳೇ ಕೂಗಿದಳು. ‘ನೀನೊಬ್ಬ ದ್ವೇಷಸಾಧಕ ಪ್ರಾಣಿ… ದರಿದ್ರ ಮುಂಡೇಗಂಡ… ನಾಲಾಯಕ್ ಕೊಳಕು ಮನುಷ್ಯ… ಈಗಿಂದೀಗ ಹೊರಟುಹೋಗು… ಇಲ್ಲವಾದರೆ ಕೂಗಿ ಇಡೀ ಊರನ್ನೇ ಹಾಸಿಗೆಯಿಂದ ಎಬ್ಬಿಸಿಬಿಡುತ್ತೇನೆ…’
ನಾನು ಹೊರಡಬೇಕೆನ್ನುವಷ್ಟರಲ್ಲಿ ಒಲೆಯ ಹಿಂದಿನಿಂದ ಅವಳ ತಮ್ಮ ಪ್ರತ್ಯಕ್ಷನಾಗಿ ನನ್ನ ತಲೆಯ ಹಿಂಭಾಗಕ್ಕೆ ಹೊಡೆದ. ನನ್ನ ಕತ್ತನ್ನೇ ಮುರಿದ ಅನಿಸಿತು. ಹಠಾತ್ತನೇ ನನ್ನಲ್ಲೇ ಏನೋ ಸರಿಯಿಲ್ಲ ಅನಿಸಿಹೋಯಿತು. ಹೇಳಿದೆ: ‘ಹುಯಿಲೆಬ್ಬಿಸಬೇಡ. ನಾನು ದೆವ್ವಭೂತಗಳನ್ನು ಕೆರಳಿಸುವ ದುಷ್ಟನೆಂದು ಜನ ಆಡಿಕೊಳ್ಳುವುದೊಂದು ಬಾಕಿಯಿದೆ.’ ಅವಳ ಮಾತಿನ ಅರ್ಥವೂ ಅದೇ ಆಗಿತ್ತೆನ್ನಿ. `ಇದೂ ಆಗಿಹೋದರೆ, ನಾನು ಮಾಡುವ ಬ್ರೆಡ್ಡನ್ನು ಇನ್ನು ಮುಂದೆ ಯಾರೂ ಮುಟ್ಟುವುದಿಲ್ಲ.’ ಅಂದೆ. ಅಂತೂ ಹೇಗೋ ಅವಳನ್ನು ಶಾಂತಗೊಳಿಸಿದೆ.
‘ಸರಿ, ಸಾಕಿನ್ನು. ಬಿದ್ದು ಸಾಯಿ.’
ಮರುದಿನ ಬೆಳಿಗ್ಗೆ ಬೇಕರಿಯಲ್ಲಿ ಆ ತರುಣನನ್ನು ಬದಿಗೆ ಕರೆದು ‘ನೋಡು ತಮ್ಮಾ’ ಇತ್ಯಾದಿ ಇತ್ಯಾದಿ ಹೇಳಿ ‘ಇದಕ್ಕೇನಂತೀ?’ ಎಂದೆ. ಅವನೋ ನಾನು ಆಕಾಶದಿಂದ ಬಿದ್ದವನೋ ಎಂಬಂತೆ ಮಿಕಿಮಿಕಿ ನೋಡುತ್ತ ‘ದೇವರಾಣೆ… ನೀನು ಯಾವುದಾದರೂ ನಾಟೀ ವೈದ್ಯರ ಬಳಿ ಹೋಗುವುದು ಒಳ್ಳೆಯದು. ಬಹುಶಃ ನಿನ್ನದೊಂದು ಸ್ಕ್ರೂ ಸಡಿಲಾಗಿದೆ. ಹೆದರಬೇಡ, ಇದನ್ನು ನಾನು ಯಾರಿಗೂ ಹೇಳುವುದಿಲ್ಲ.’ ಎಂದ.
ಒಂದು ದೊಡ್ಡ ಕತೆಯನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನನ್ನ ಹೆಂಡತಿಯೊಂದಿಗೆ ನಾನು ಇಪ್ಪತ್ತು ವರ್ಷ ಬಾಳಿದೆ. ಅವಳು ನನಗೆ ಆರು ಮಕ್ಕಳನ್ನು, ನಾಲ್ಕು ಹೆಣ್ಣು ಎರಡು ಗಂಡು, ಹೆತ್ತು ಕೊಟ್ಟಳು. ಏನೇನೆಲ್ಲ ಆಗಿಹೋದರೂ, ಅದಾವುದನ್ನೂ ನಾನು ನೋಡಲಿಲ್ಲ, ಕೇಳಲಿಲ್ಲ. ನಂಬಿಕೆಯನ್ನಷ್ಟೇ ನೆಚ್ಚಿಕೊಂಡೆ. ಇತ್ತೀಚೆಗೆ ಗುರುಗಳು ಹೇಳಿದರು: ‘ನಂಬಿಕೆ, ಅದರಷ್ಟಕ್ಕೇ ಅದು ಲಾಭದಾಯಕ. ಒಳ್ಳೆಯ ಮನುಷ್ಯ ನಂಬಿಕೆಯಿಂದಲೇ ಬದುಕುತ್ತಾನೆ ಎಂದಿದೆ.’
ಒಮ್ಮೆಲೇ ನನ್ನ ಹೆಂಡತಿ ಕಾಯಿಲೆ ಬಿದ್ದಳು. ಅವಳ ಎದೆಯ ಮೇಲಿನ ಸಣ್ಣ ಬಾವಿನ ನೆಪದಿಂದಲೇ ಅದು ಶುರುವಾಯಿತು. ಅವಳ ಹಣೆಯಲ್ಲಿ ಹೆಚ್ಚಿನ ಆಯುಷ್ಯವಿದ್ದಂತಿರಲಿಲ್ಲ. ಅವಳ ಮೇಲೆ ತುಂಬಾ ಖರ್ಚು ಮಾಡಿದೆ. ಹೇಳಲು ಮರೆತೆ: ಈ ಹೊತ್ತಿಗಾಗಲೇ ಊರಲ್ಲಿ ನನ್ನದೇ ಆದ ಒಂದು ಬೇಕರಿಯನ್ನಿಟ್ಟುಕೊಂಡು ಒಂದು ಬಗೆಯಲ್ಲಿ ಶ್ರೀಮಂತನೆನಿಸಿಕೊಂಡಿದ್ದೆ. ಅಕ್ಕಪಕ್ಕದಿಂದ ದಿನಕ್ಕೊಬ್ಬ ವೈದ್ಯರನ್ನು, ಮಾಟದವರನ್ನು ಕರೆಸಲಾಗುತ್ತಿತ್ತು. ಅವರು ಜಿಗಣೆಗಳನ್ನು ಬಳಸಿ, ನಂತರ ಬಾವನ್ನು ಕೀಳಲು ನಿರ್ಧರಿಸಿದರು. ಲುಬ್ಲಿನ್‌ನಿಂದಲೂ ಒಬ್ಬ ವೈದ್ಯರನ್ನು ಕರೆದಿದ್ದರು. ಆದರೆ ಅಷ್ಟರೊಳಗೆ ತಡವಾಗಿತ್ತು. ಅಸುನೀಗುವ ಮುನ್ನ ಅವಳು ನನ್ನನ್ನು ತನ್ನ ಹಾಸಿಗೆಯ ಬಳಿ ಕರೆದು ‘ನನ್ನನ್ನು ಕ್ಷಮಿಸು ಗಿಂಪೆಲ್’ ಅಂದಳು.
‘ಕ್ಷಮಿಸುವಂಥದ್ದೇನಿದೆ? ನೀನು ನಿಷ್ಠಾವಂತೆ, ಒಳ್ಳೆಯ ಹೆಂಡತಿ’
‘ಓಹ್ ಗಿಂಪೆಲ್, ಇಷ್ಟು ವರ್ಷ ಅಸಹ್ಯ ರೀತಿಯಲ್ಲಿ ನಿನಗೆ ಮೋಸಮಾಡಿದೆ. ಕರ್ತನ ಬಳಿಗೆ ಈಗ ನಿರ್ಮಲವಾಗಿ ಹೋಗಬಯಸುವೆ. ಹಾಗಾಗಿ ಈ ಮಕ್ಕಳಾರೂ ನಿನ್ನವಲ್ಲ ಎಂದು ನಿನಗೆ ನಾನು ಹೇಳಲೇಬೇಕು.’ ಎಂದಳು. ನನ್ನ ತಲೆಯಮೇಲೆ ಯಾರಾದರೂ ಸೌದೆಯ ಸೀಳಿನಿಂದ ಹೊಡೆದಿದ್ದರೂ ಇಷ್ಟು ಆಘಾತವಾಗುತ್ತಿರಲಿಲ್ಲ.
‘ಅವು ಯಾರ ಮಕ್ಕಳು?’
‘ನನಗೆ ಗೊತ್ತಿಲ್ಲ. ಎಷ್ಟೊಂದು ಜನರಿದ್ದರು. ಆದರೆ ಅವು ನಿನ್ನವಂತೂ ಅಲ್ಲ.’ ಅಂದಳು. ಹೀಗೆ ಹೇಳುತ್ತಿದ್ದಾಗಲೇ ಅವಳ ತಲೆ ಪಕ್ಕಕ್ಕೆ ವಾಲಿತು. ಕಣ್ಣುಗಳು ಗಾಜಿನಂತಾದವು. ಎಲ್ಕಾ ಮುಗಿದುಹೋದಳು. ಅವಳ ಬಿಳಿಚಿದ ತುಟಿಯ ಮೇಲೊಂದು ಮುಗುಳುನಗು ಉಳಿದಿತ್ತು.
ಸಾಯುತ್ತಿರುವಾಗಲೇ ಆಕೆ ‘ನಾನು ಗಿಂಪೆಲ್‌ನನ್ನು ವಂಚಿಸಿದೆ. ನನ್ನ ಕಿಂಚಿತ್ ಬದುಕಿನ ಅರ್ಥವೇ ಅದು’ ಎಂದು ಹೇಳುತ್ತಿರುವಂತೆ ನನಗೆ ಭಾಸವಾಯಿತು.
*
ಸೂತಕದ ಅವಧಿ ಕಳೆದ ನಂತರದ ಒಂದು ರಾತ್ರಿ ಹಿಟ್ಟಿನ ಚೀಲಗಳ ಮೇಲೆ ನಾನು ಕನಸು ಕಾಣುತ್ತ ಮಲಗಿದಾಗ ದುಷ್ಟದೈವವೊಂದು ಬಂದು ‘ಗಿಂಪೆಲ್ ಯಾಕೆ ಮಲಗಿದ್ದೀ?’ ಎಂದು ಕೇಳಿತು. ‘ಮತ್ತೇನು ಮಾಡಲಿ? ಮಿಠಾಯಿ ತಿನ್ನಲೇ?’ ಎಂದೆ. ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ. ಈಗ ನಿನ್ನ ಸರದಿ. ನೀನೀಗ ಲೋಕವನ್ನು ವಂಚಿಸು’ ‘ನಾನು ಹೇಗೆ ಇಡೀ ಲೋಕವನ್ನು ವಂಚಿಸಬಲ್ಲೆ?’ ಎಂದು ಕೇಳಿದೆ. ‘ನೀನು ದಿನವಿಡೀ ಒಂದು ಬಾಲ್ದಿಯಲ್ಲಿ ಉಚ್ಚೆ ಹೊಯ್ದು ರಾತ್ರಿಯಲ್ಲಿ ಅದನ್ನು ಹಿಟ್ಟಿಗೆ ಹಾಕಿಬಿಡು. ಈ ಫ್ರಾಂಪೊಲ್ ಊರಿನ ಸಜ್ಜನರೆಲ್ಲ ಆ ಹೊಲಸನ್ನು ತಿನ್ನಲಿ’ ಎಂದು ಉತ್ತರಿಸಿದ. ‘ಪರಲೋಕದಲ್ಲಿ ನಾನು ಏನೆಂದು ಹೇಳಲಿ?’ ಅಂದೆ. ‘ಪರಲೋಕವೆಂಬುದೇ ಇಲ್ಲ. ಅವರೆಲ್ಲ ನಿನಗೆ ಬೊಗಳೆ ಬಿಟ್ಟಿದ್ದಾರೆ ಮತ್ತು ಮಾತಿನಲ್ಲಿ ಮರುಳು ಮಾಡಿ ನಿನ್ನ ಹೊಟ್ಟೆಯಲ್ಲೊಂದು ಬೆಕ್ಕು ಅಡಗಿದೆಯೆಂದು ನಂಬಿಸಿದ್ದಾರೆ. ಶುದ್ಧ ಮೂರ್ಖತನ.’ ‘ಹಾಗಾದರೆ ದೇವರಿಲ್ಲವೇ?’ ‘ದೇವರೂ ಇಲ್ಲ’ ಎಂದವನು ಉತ್ತರಿಸಿದ. ‘ಹಾಗಾದರೆ ಇರುವುದೇನು?’ ‘ಒಂದು ಮಹಾ ರಾಡಿ.’
ನನ್ನ ಕಣ್ಣೆದುರು ನಿಂತವನಿಗೆ ಹೋತದ ಗಡ್ಡ, ಕೊಂಬು, ಕೋರೆಹಲ್ಲು ಮತ್ತು ಬಾಲವಿತ್ತು. ಅಂಥ ಮಾತುಗಳನ್ನು ಕೇಳಿ ಅವನನ್ನು ಬಾಲದಿಂದಲೇ ಹಿಡಿದೆಳೆಯಬೇಕೆನ್ನಿಸಿತು. ಆದರೆ ಅಷ್ಟರಲ್ಲೆ ನಾನು ಹಿಟ್ಟಿನ ಚೀಲಗಳ ಮೇಲಿನಿಂದ ಉರುಳಿ ಬಿದ್ದೆ. ಸದ್ಯ ಪಕ್ಕೆಲುವು ಮುರಿಯಲಿಲ್ಲ. ನಂತರ ನನಗೆ ಉಚ್ಚೆ ಬಂದಂತಾಯಿತು. ಹಾದು ಹೋಗುವಾಗ ಉಬ್ಬಿ ನಿಂತ ಹಿಟ್ಟು ‘ಹೂಂ ಮಾಡು’ ಎಂದಂತಾಯಿತು. ಇನ್ನೇನು, ಕರೆಗೆ ಓಗೊಟ್ಟೆ.
ಮುಂಜಾನೆ ತರುಣ ಬಂದ. ಬ್ರೆಡ್‌ನ್ನು ನಾದಿ, ಬಡೇಸೋಂಪು ಸಿಂಪಡಿಸಿ ಭಟ್ಟಿಯಲ್ಲಿ ಇಟ್ಟೆವು. ತರುಣ ಹೋದ ನಂತರ ನಾನೊಬ್ಬನೇ ಭಟ್ಟಿಯ ಪಕ್ಕದ ಪುಟ್ಟ ಕುಣಿಯಲ್ಲಿ, ಚಿಂದಿಯ ರಾಶಿಯ ಮೇಲೆ ಕೂತೆ. ಇದು, ಗಿಂಪೆಲ್ ಇದು! ನೀನೀಗ ಅವರು ಮಾಡಿದ ಎಲ್ಲಾ ಅವಮಾನಕ್ಕೆ ಸರಿಯಾಗಿ ಸೇಡು ತೀರಿಸಿಕೊಂಡೆ. ಹೊರಗೆ ಮಂಜು ಹೊಳೆಯುತ್ತಿತ್ತು. ಭಟ್ಟಿಯ ಬದಿ ಬೆಚ್ಚಗಿತ್ತು. ಜ್ವಾಲೆಗೆ ಮುಖ ಕಾವೇರಿತು. ತಲೆ ಮುಂದಕ್ಕೆ ವಾಲಿ ನಾನು ತೂಕಡಿಸಿದೆ.
ಮುಸುಕು ಧರಿಸಿ ಕನಸಿನಲ್ಲಿ ಬಂದ ಎಲ್ಕಾ ‘ಇದೇನು ಮಾಡಿದೆ ಗಿಂಪೆಲ್?’ ಎಂದು ಕೇಳಿದಳು. ‘ಎಲ್ಲಾ ನಿನ್ನದೇ ತಪ್ಪು’ ಎಂದವನೇ ಅಳತೊಡಗಿದೆ. ‘ಮೂರ್ಖ, ನಾನು ಸುಳ್ಳೆಂದ ಮಾತ್ರಕ್ಕೆ ಎಲ್ಲವೂ ಸುಳ್ಳೇ? ಸ್ವತಃ ನನ್ನನ್ನು ಬಿಟ್ಟು ಇನ್ನು ಯಾರನ್ನೂ ನಾನು ವಂಚಿಸಲಿಲ್ಲ. ಈಗ ಅದರ ಫಲವನ್ನು ಅನುಭವಿಸುತ್ತಿದ್ದೇನೆ ಗಿಂಪೆಲ್, ಇಲ್ಲಿ ಯಾವುದಕ್ಕೂ ಮಾಫಿಯಿಲ್ಲ.’ ಅವಳ ಮುಖವನ್ನೇ ನೋಡಿದೆ. ಕಪ್ಪಿಟ್ಟಿತ್ತು. ಬೆಚ್ಚಿ ಎಚ್ಚರಾದೆ. ಹಾಗೇ ಮೂಕನಾಗಿ ಕೂತೇ ಉಳಿದೆ. ಸರ್ವಸ್ವವೂ ಒಂದು ತೋಲದಲ್ಲಿದೆಯೆಂಬ ಭಾಸವಾಯಿತು. ಈಗಿಡುವ ಒಂದು ತಪ್ಪು ಹೆಜ್ಜೆಯಿಂದ ಅನಂತಜೀವನವನ್ನೇ ಕಳೆದುಕೊಂಡೇನು. ಸದ್ಯ ದೇವರು ನನ್ನ ಕೈಹಿಡಿದ. ಉದ್ದ ಹಾರೆಯಿಂದ ಆ ಎಲ್ಲಾ ಬ್ರೆಡ್ಡನ್ನು ಹೊರತೆಗೆದು ಅಂಗಳಕ್ಕೊಯ್ದೆ. ಮತ್ತು ಮಂಜುಗಟ್ಟಿದ ನೆಲದಲ್ಲಿ ಕುಣಿ ತೋಡತೊಡಗಿದೆ.
ಇದನ್ನು ಮಾಡುತ್ತಿರುವಾಗ, ಹಿಂತಿರುಗಿದ ತರುಣ ‘ಇದೇನು ಮಾಡುತ್ತಿದ್ದೀ ಮಹರಾಯ?’ ಎಂದು ಕೇಳುತ್ತ ಹೆಣದಂತೆ ಬಿಳಿಚಿಕೊಂಡ.
‘ನಾನೇನು ಮಾಡುತ್ತಿದ್ದೇನೆಂದು ನನಗೆ ಗೊತ್ತು’ ಎಂದು ಅವನ ಕಣ್ಣೆದುರಿಗೇ ಎಲ್ಲವನ್ನೂ ಹೂಳಿಬಿಟ್ಟೆ. ನಂತರ ಮನೆಗೆ ಹೋಗಿ, ನನ್ನ ಉಳಿತಾಯದ ಗಂಟನ್ನು ಅವಿತಿಟ್ಟ ಜಾಗದಿಂದ ಹೊರತೆಗೆದು ಮಕ್ಕಳಲ್ಲಿ ಹಂಚಿದೆ. ‘ರಾತ್ರಿ ನಿಮ್ಮ ಅಮ್ಮನನ್ನು ನೋಡಿದೆ. ಕಪ್ಪಗಾಗಿದ್ದಾಳೆ. ಪಾಪ’ ಅಂದೆ.
ಅವರಿಗೆ ಎಷ್ಟು ಆಘಾತವಾಯಿತೆಂದರೆ ಒಂದೇ ಒಂದು ಮಾತೂ ಅವರ ಬಾಯಿಂದ ಹೊರಡಲಿಲ್ಲ. ‘ಚೆನ್ನಾಗಿರಿ… ಈ ಗಿಂಪೆಲ್ ಅಂತೊಬ್ಬನಿದ್ದ ಅನ್ನುವದನ್ನೇ ಮರೆತುಬಿಡಿ.’ ಎಂದೆ. ನನ್ನ ಗಿಡ್ಡ ಕೋಟು ತೊಟ್ಟುಕೊಂಡು ಬೂಟು ಧರಿಸಿದೆ. ಒಂದು ಕೈಯಲ್ಲಿ ಪ್ರಾರ್ಥನೆಯ ಶಾಲಿನ ಚೀಲವನ್ನು ಎತ್ತಿಕೊಂಡು, ಇನ್ನೊಂದರಲ್ಲಿ ನನ್ನ ಗಂಟುಮೂಟೆ ಹಿಡಿದುಕೊಂಡು ಹೊರಟು ನಿಂತವನು ಪವಿತ್ರ ಪುಸ್ತಕವನ್ನು ಚುಂಬಿಸಿದೆ. ನನ್ನನ್ನು ರಸ್ತೆಯಲ್ಲಿ ನೋಡಿದ ಜನ ಅಚ್ಚರಿಗೊಂಡರು.
‘ಎಲ್ಲಿಗೆ ಹೋಗುತ್ತಿರುವೆ?’ ಎಂದು ಕೇಳಿದರು. ‘ಜಗದೊಳಗೆ’ ಎಂದುತ್ತರಿಸಿದೆ. ಹೀಗೆ ನಾನು ಫ್ರಾಂಪೋಲ್‌ನಿಂದ ನಿರ್ಗಮಿಸಿದೆ.
ನಾನು ಎಲ್ಲೆಲ್ಲೋ ಅಲೆದಾಡಿದೆ. ಒಳ್ಳೆಯ ಮಂದಿ ನನ್ನನ್ನು ನಿರ್ಲಕ್ಷಿಸಲಿಲ್ಲ. ತುಂಬ ವರ್ಷಗಳ ನಂತರ ನಾನು ಮುದುಕನಾಗಿ ನರೆಗಟ್ಟಿದೆ. ಉದ್ದಕ್ಕೂ ನಾನಾ ನಮೂನೆಯ ಸುಳ್ಳುಗಳನ್ನೂ ಕಟ್ಟುಕಥೆಗಳನ್ನೂ ಕೇಳಿದೆ. ಹೆಚ್ಚು ಹೆಚ್ಚು ಬದುಕಿದಷ್ಟೂ, ನಿಜಕ್ಕೂ ಸುಳ್ಳು ಎಂಬುದೇ ಇಲ್ಲ ಎನ್ನುವುದನ್ನೇ ಹೆಚ್ಚು ಹೆಚ್ಚು ತಿಳಿದುಕೊಂಡೆ. ವಾಸ್ತವದಲ್ಲಿ ಆಗದುದು ರಾತ್ರಿ ಕನಸಿನಲ್ಲಾಗುತ್ತದೆ. ಒಬ್ಬನಿಗೆ ಆಗದಿದ್ದರೆ ಇನ್ನೊಬ್ಬನಿಗಾಗುತ್ತದೆ. ಇಂದಾಗದಿದ್ದರೆ ನಾಳೆ. ಅಥವಾ ಮುಂದಿನ ವರ್ಷ. ಅಲ್ಲದಿದ್ದರೆ ಶತಮಾನದ ನಂತರ. ಅದರಿಂದ ಫರಕೇನಾಯಿತು? ಎಷ್ಟೋ ಬಾರಿ ಕತೆಗಳನ್ನು ಕೇಳಿದ ನಂತರ ‘ಹೀಗಾಗುವುದು ಅಸಂಭವ’ ಎಂದು ನಾನಂದದ್ದು ಇದೆ. ಆದರೆ ಅದಾದ ವರ್ಷದೊಳಗೆ ಆ ಸಂಗತಿ ಇನ್ನೆಲ್ಲೋ ಜರುಗಿದ್ದು ಕಿವಿಗೆ ಬೀಳುತ್ತಿತ್ತು.
ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುತ್ತ, ಅಪರಿಚಿತ ಮೇಜುಗಳಲ್ಲಿ ತಿನ್ನುತ್ತ ನಾನು ಎಂದಿಗೂ ಘಟಿಸಲಾಗದಂಥ ಅಸಂಭಾವ್ಯ ಸಂಗತಿಗಳ ಕತೆಗಳನ್ನು ಹೊಸೆಯತೊಡಗುತ್ತೇನೆ – ರಾಕ್ಷಸರು, ಮಾಂತ್ರಿಕರು, ಗಾಳಿಯಂತ್ರಗಳು ಇತ್ಯಾದಿ. ‘ಅಜ್ಜಾ ನಮಗೊಂದು ಕತೆ ಹೇಳು’ ಎನ್ನುತ್ತ ಮಕ್ಕಳು ನನ್ನ ಬೆನ್ನು ಹತ್ತುತ್ತಾರೆ. ಕೆಲವೊಮ್ಮೆ ಇಂಥ ಕತೆಯೇ ಬೇಕು ಅನ್ನುತ್ತಾರೆ. ಅವರನ್ನು ಖುಷಿಪಡಿಸಲು ಪ್ರಯತ್ನಿಸುತ್ತೇನೆ. ಒಬ್ಬ ಗುಂಡಗಿನ ಪೋರ ಒಮ್ಮೆ ಹೇಳಿದ : ‘ಅಜ್ಜಾ ಈ ಕತೆ ನೀನು ಮೊದಲು ಹೇಳಿದ್ದೇ’. ಪುಟ್ಟ ಪೋಕರಿ ಸರಿಯಾಗಿಯೇ ಹೇಳಿದ್ದ. ಕನಸುಗಳದ್ದೂ ಅದೇ ಪಾಡು. ಫ್ರಾಂಪೋಲ್‌ನ್ನು ಬಿಟ್ಟು ಎಷ್ಟೋ ವರ್ಷಗಳಾಗಿದ್ದರೂ ಈಗಲೂ ಕಣ್ಣು ಮುಚ್ಚಿದರೆ ಸಾಕು, ನಾನು ಮತ್ತೆ ಅಲ್ಲಿರುತ್ತೇನೆ. ಮತ್ತು ಯಾರನ್ನು ಕಾಣುತ್ತೇನಂತೀರಿ? ಎಲ್ಕಾ! ನಾನು ಮೊದಲ ಬಾರಿ ನೋಡಿದಂತೆ ನೀರಿನ ತೊಟ್ಟಿಯ ಬಳಿ ನಿಂತಿದ್ದಾಳೆ. ಆದರೆ ವಿಚಿತ್ರ ವಿಲಕ್ಷಣ ಮಾತುಗಳನ್ನು ನನ್ನೊಂದಿಗೆ ಆಡುತ್ತಿದ್ದಾಳೆ. ಎಚ್ಚರಾದಾಗ ಎಲ್ಲ ಮರೆತಿರುತ್ತದೆ. ಆದರೆ ಕನಸಿರುವ ತನಕವೂ ನನಗೇನೋ ಸಾಂತ್ವನ. ನನ್ನೆಲ್ಲ ಸಂದೇಹಗಳಿಗೂ ಅವಳು ಉತ್ತರಿಸುತ್ತಾಳೆ. ಎಲ್ಲವೂ ಸರಿ ಎನ್ನುವುದೇ ಅದರ ಅಂತಿಮ ಭಾವ. ‘ನಿನ್ನ ಜೊತೆ ನನ್ನನ್ನು ಇರಗೊಡು’ ಎಂದು ಅಳುತ್ತಾ ಮೊರೆಯಿಡುತ್ತೇನೆ. ನನ್ನನ್ನು ಸಮಾಧಾನಪಡಿಸುತ್ತ, ತಾಳು ಎನ್ನುತ್ತಾಳೆ. ಕಾಲ ದೂರವಿಲ್ಲ. ಕೆಲವೊಮ್ಮೆ ನನ್ನನ್ನು ನೇವರಿಸಿ ಮುದ್ದಿಸುತ್ತ ನನ್ನ ಮೊಗದ ಮೇಲೆಯೇ ಅಳುತ್ತಾಳೆ.
ಎಚ್ಚರಾದಾಗ ಅವಳ ತುಟಿಗಳ ಸ್ಪರ್ಷ ಮತ್ತು ಕಂಬನಿಯ ಉಪ್ಪುರುಚಿ ನನ್ನಲ್ಲಿ ಹಾಗೆಯೇ ಹಸಿಯಾಗಿರುತ್ತದೆ. ಜಗತ್ತೆನ್ನುವುದು ಸಂಪೂರ್ಣ ಕಾಲ್ಪನಿಕವೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅದು ನಿಜಜಗತ್ತಿನಿಂದಲೇ ಹೊಮ್ಮಿದ ಆವೃತ್ತಿ. ನಾನೀಗ ಮಲಗಿರುವ ಹೊಟೇಲಿನ ಬಾಗಿಲ ಬಳಿ ಸತ್ತವರನ್ನು ಹೊತ್ತೊಯ್ಯಲು ಬಳಸುವ ಒಂದು ಹಲಗೆಯಿದೆ. ಗೋರಿತೋಡುವ ಯಹೂದಿಯ ಹಾರೆಯೂ ಸಿದ್ಧವಾಗಿದೆ. ಗೋರಿ ಕಾಯುತ್ತಿದೆ; ಮಣ್ಣುಹುಳುಗಳು ಹಸಿದಿದ್ದಾವೆ; ಶವದ ಹೊದಿಕೆಯಂತೂ ನನ್ನ ಜೋಳಿಗೆಯಲ್ಲೇ ಸಿದ್ಧವಾಗಿದೆ. ನನ್ನ ಒಣಹುಲ್ಲಿನ ಹಾಸಿಗೆಯನ್ನು ಪಡೆಯಲು ಇನ್ನಾವುದೋ ನಿದ್ದೆಖೋರ ಕಾಯುತ್ತಿದ್ದಾನೆ. ಕಾಲ ಬಂದಾಗ ಖುಷಿಯಿಂದಲೇ ಹೋಗುತ್ತೇನೆ. ಬರುವುದೇನೇ ಇದ್ದರೂ, ಅದು ರಗಳೆಗಳಿಲ್ಲದ ಅಪಹಾಸ್ಯಗಳಿಲ್ಲದ ಕಣ್ಕಟ್ಟುಗಳಿಲ್ಲದ ನಿಜವಾಗಿರುತ್ತದೆ. ಅಲ್ಲಿ, ದೇವರಾಣೆ, ಗಿಂಪೆಲ್‌ನನ್ನು ಕೂಡ ಬೇಸ್ತು ಬೀಳಿಸುವಂತಿಲ್ಲ.
(ಮುಗಿಯಿತು)
ಈ ಕಥೆಯ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 12:58 pm, Fri, 13 May 22