Literature: ನೆರೆನಾಡ ನುಡಿಯೊಳಗಾಡಿ: ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಅನುವಾದಿಸಿದ ಸಿಂಗರ್​ನ ‘ಮಳ್ಳ ಗಿಂಪೆಲ್’ ಕಥೆ

Isaac Bashevis Singer‘s Story-Gimpel The Fool : ‘ಸದಾ ಮೂರ್ಖನಾಗಿರುವುದು ಒಂದು ಗಂಟೆ ದುಷ್ಟನಾಗಿ ಇರುವುದಕ್ಕಿಂತ ಮೇಲು ಎಂದು ಬರೆದಿದ್ದೇ ಇದೆ. ನೀನು ಮೂರ್ಖನಲ್ಲ. ಅವರು ಮೂರ್ಖರು. ತನ್ನ ನೆರೆಯವನನ್ನು ಅವಮಾನಿಸುವವನು ಸ್ವರ್ಗವನ್ನು ಕೈಯಾರೆ ಕಳೆದುಕೊಳ್ಳುತ್ತಾನೆ’.

Literature: ನೆರೆನಾಡ ನುಡಿಯೊಳಗಾಡಿ: ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಅನುವಾದಿಸಿದ ಸಿಂಗರ್​ನ ‘ಮಳ್ಳ ಗಿಂಪೆಲ್’ ಕಥೆ
ಐಸಾಕ್ ಬಾಶೆವಿಸ್ ಸಿಂಗರ್, ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ
Follow us
ಶ್ರೀದೇವಿ ಕಳಸದ
|

Updated on:May 13, 2022 | 12:56 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಐಸಾಕ್ ಬಾಶೆವಿಸ್ ಸಿಂಗರ್ (Isaac Bashevis Singer) ಹುಟ್ಟಿದ್ದು 1903ರ ಜುಲೈ 4ರಂದು ಪೊಲ್ಯಾಂಡ್​ನಲ್ಲಿ. ಅಮೆರಿಕದ ಬರಹಗಾರರಾಗಿದ್ದ ಇವರು ಮೊದಲು ಬರೆದಿದ್ದು ಯಿದ್ದಿಶ್ ಭಾಷೆಯಲ್ಲಿ. ನಂತರ ತಮ್ಮ ಕಥೆಗಳನ್ನು ಇಂಗ್ಲಿಷ್​ಗೆ ಅನುವಾದಿಸುವುದರ ಮೂಲಕ ಹೆಚ್ಚು ಜನರನ್ನು ತಲುಪುತ್ತ ಹೋದರು. ಆದರೆ ಅನುವಾದಕ್ಕೆ ಹೆಚ್ಚು ವಾಲಿಕೊಂಡರೆ ತನ್ನೊಳಗಿನ ಮೂಲ ಲೇಖಕ ಕರಗುತ್ತಾನೆ ಎಂಬ ಸತ್ಯವೂ ಅವರಿಗೆ ಗೊತ್ತಿತ್ತು. ಅನುವಾದಿತ ಸಾಹಿತ್ಯದಿಂದಲೇ ಒಬ್ಬ ಲೇಖಕ ತನ್ನೊಳಗಿನ ಒರತೆಯನ್ನು ಹೆಚ್ಚಿಸಿಕೊಳ್ಳುತ್ತ ಹೋಗುತ್ತಾನೆ ಎಂಬ ಪ್ರಜ್ಞೆಯೂ ಅವರಿಗಿತ್ತು. ಎ ಡೇ ಪ್ಲೆಶರ್, ಎ ಕ್ರೌನ್ ಆಫ್ ಫೆದರ್ಸ್​, ಶಾರ್ಟ್​ ಫ್ರೈಡೇ, ದಿ ಮ್ಯಾನರ್, ಲಾ ಕಾಸಾ ಡಿ ಜಂಪೊಲ್, ಲವ್ ಅಂಡ್ ಎಕ್ಸೈಲ್, ಸ್ಕಮ್ ಮುಂತಾದ ಕೃತಿಗಳನ್ನು ಕೊಟ್ಟ ಇವರಿಗೆ 1978ರಲ್ಲಿ ನೊಬೆಲ್ ಪುರಸ್ಕಾರ ದೊರೆಯಿತು. ಯಿದ್ದಿಶ್ ಸಾಹಿತ್ಯ ಚಳವಳಿಯಲ್ಲಿ ಪ್ರಮುಖರೆನ್ನಿಸಿಕೊಂಡ ಇವರು 1991ರ ಜುಲೈ 24ರಂದು ನಿಧನ ಹೊಂದಿದರು.

ಕಥೆ : ಮಳ್ಳ ಗಿಂಪೆಲ್  | ಇಂಗ್ಲಿಷ್ : ಐಸಾಕ್ ಬಾಶೆವಿಸ್ ಸಿಂಗರ್ | ಕನ್ನಡಕ್ಕೆ : ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗ | ಸೌಜನ್ಯ : ‘ದೇಶಕಾಲ’ ಸಾಹಿತ್ಯ ಪತ್ರಿಕೆ 

(ಭಾಗ 1)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ನಾನು ಮಳ್ಳ ಗಿಂಪೆಲ್. ನನ್ನ ಪ್ರಕಾರ ನಾನೇನೂ ಮಳ್ಳನಲ್ಲ. ಬದಲಿಗೆ ಅದರ ತದ್ವಿರುದ್ಧ. ಆದರೆ ಈ ಜನ ನನ್ನನ್ನು ಹಾಗೆಯೇ ಕರೆಯುವುದು. ನಾನು ಶಾಲೆಯಲ್ಲಿರುವಾಗಲೇ ಅವರು ನನಗೆ ಈ ಹೆಸರು ಕೊಟ್ಟಿದ್ದು. ನನಗೆ ಒಟ್ಟೂ ಏಳು ಹೆಸರುಗಳಿದ್ದವು: ಪೆದ್ದ, ಮೂರ್ಖ, ಮುಠ್ಠಾಳ, ಕತ್ತೆ, ಎಡವಟ್ಟ, ಎವಡಾಸ ಮತ್ತು ಮಳ್ಳ. ಈ ಕೊನೆಯದು ಮಾತ್ರ ಅಂಟಿಕೊಂಡಿತು. ನನ್ನ ಮಳ್ಳತನದ ಲಕ್ಷಣವೇನು? ನಾನು ಸುಲಭವಾಗಿ ಎಲ್ಲವನ್ನೂ ನಂಬಿಬಿಡುತ್ತಿದ್ದೆ. ‘ಗಿಂಪೆಲ್, ಗುರುಗಳ ಹೆಂಡತಿ ಹೆರಿಗೆಮನೆಗೆ ಹೋಗಿದ್ದಾಳೆ’ ಎಂದು ಅವರಂದರೆ ನಾನು ನಂಬಿ ಶಾಲೆ ತಪ್ಪಿಸಿದೆ. ಅದು ಸುಳ್ಳಾಗಿತ್ತೆನ್ನಿ. ಆದರೆ ಇದು ನನಗೆ ಗೊತ್ತಾಗುವುದಾದರೂ ಹೇಗೆ? ಅವಳ ಹೊಟ್ಟೆಯೇನೂ ದೊಡ್ಡದಾಗಿರಲಿಲ್ಲ. ಅವಳ ಹೊಟ್ಟೆಯತ್ತ ನನ್ನ ಗಮನವೂ ಇರಲಿಲ್ಲ. ಇದರಲ್ಲಿ ಅಂಥ ಮೂರ್ಖತನವೇನು ಬಂತು? ಆದರೆ ಇಷ್ಟಕ್ಕೇ ಆ ಗುಂಪು ಬಿದ್ದು ಬಿದ್ದು ನಕ್ಕು, ಕೇಕೆ ಹಾಕಿ ಕುಪ್ಪಳಿಸಿ, ಕಿಚಾಯಿಸಿ, ಒಕ್ಕೊರಲಿನಿಂದ ರಾತ್ರಿಯ ಪ್ರಾರ್ಥನೆಯನ್ನು ಹಾಡಿ ಕುಣಿದು ಹೋಯಿತು. ಮತ್ತು ಹೆರಿಗೆಯ ಸಂಭ್ರಮದಲ್ಲಿ ಹಂಚುವ ಒಣದ್ರಾಕ್ಷಿಯ ನೆಪದಲ್ಲಿ ನನ್ನ ಬೊಗಸೆ ತುಂಬ ಕುರಿಯ ಹಿಕ್ಕೆ ತುರುಕಿದರು. ಹಾಗಂತ ನಾನೇನೂ ದುರ್ಬಲನಲ್ಲ. ಯಾರಿಗಾದರೂ ನಾನೊಂದು ಕಪಾಳಕ್ಕೆ ಬಿಟ್ಟರೆ ಅವನು ಸೀದಾ ಕ್ರಾಕೋವರೆಗೂ ಹೋಗಿ ಬೀಳುತ್ತಾನೆ. ಆದರೆ ನಾನು ಸ್ವಭಾವತಃ ಮಾರಾಮಾರಿಯ ಆಳಲ್ಲ. ಹೋಗಲಿ ಬಿಡು ಎಂದು ಸುಮ್ಮನಿರುತ್ತೇನೆ; ಅವರು ಅದರ ಲಾಭ ಪಡೆಯುತ್ತಾರೆ.

ನಾನು ಶಾಲೆಯಿಂದ ಮನೆಗೆ ಬರುವಾಗ ಒಂದು ನಾಯಿ ಬೊಗಳನ್ನು ಕೇಳಿದೆ. ನಾಯಿಗಳನ್ನು ಕಂಡರೆ ನನಗೇನೂ ಭಯವಿಲ್ಲ. ಆದರೂ ನಾನಾಗಿಯೇ ಅವುಗಳ ಸುದ್ದಿಗೆ ಹೋಗುವವನಲ್ಲ. ಅವುಗಳಲ್ಲೊಂದು ಹುಚ್ಚುನಾಯಿಯಾಗಿರಬಹುದು. ಮತ್ತು ಹುಚ್ಚುನಾಯಿ ಕಡಿದರೆ ಈ ಜಗತ್ತಲ್ಲಿ ನಿಮ್ಮನ್ನು ಕಾಪಾಡುವವರು ಯಾರೂ ಇಲ್ಲ. ಹಾಗಾಗಿ ನಾನು ಮೆತ್ತಗೆ ನನ್ನ ಹಾದಿ ಬದಲಾಯಿಸಿದೆ. ನಂತರ ಹಿಂತಿರುಗಿ ನೋಡಿದರೆ ಇಡೀ ಪೇಟೆಯೇ ನನ್ನ ಹಿಂದೆ ನಿಂತು ಅಟ್ಟಹಾಸಗೈಯುತ್ತಿತ್ತು. ನಾಯಿಯಲ್ಲ, ಅಲ್ಲಿದ್ದವ ವೂಲ್ಫ-ಲಿಬ್ ಎಂಬ ಕಳ್ಳ. ಅವನು ಥೇಟು ಬೀದಿನಾಯಿಯಂತೆಯೇ ಬೊಗಳಿದ್ದ. ಇದು ನನಗೆ ಹೇಗೆ ಗೊತ್ತಾಗಬೇಕು?

ಹೀಗೆ ನನ್ನನ್ನು ಬೇಸ್ತುಬೀಳಿಸುವುದು ಸುಲಭವೆಂದು ತಿಳಿದೊಡನೆ ಎಲ್ಲ ಕಿಡಿಗೇಡಿಗಳೂ ಕಾಲೆಳೆಯುವವರೂ ಒಂದು ಕೈ ನೋಡತೊಡಗಿದರು. ‘ಗಿಂಪೆಲ್, ಫ್ರಾಂಪೋಲ್‌ಗೆ ದೊರೆ ಬರುತ್ತಿದ್ದಾನಂತೆ; ಗಿಂಪೆಲ್, ಪಕ್ಕದೂರು ಟರ್ಬೀನಿನಲ್ಲಿ ಚಂದ್ರ ಬಿದ್ದುಹೋದನಂತೆ; ಗಿಂಪೆಲ್, ಪುಟ್ಟ ಹೊಡೆಲ್‌ಗೆ ಬಚ್ಚಲ ಹಿಂದೆ ನಿಧಿ ಸಿಕ್ಕಿತಂತೆ’. ಮತ್ತು ನಾನು ಪೆದ್ದುಗೊಂಬೆಯಂತೆ ಅವರನ್ನೆಲ್ಲ ನಂಬುತ್ತಿದ್ದೆ. ಮೊಟ್ಟಮೊದಲಾಗಿ ಹೇಳಬೇಕೆಂದರೆ ಪೂರ್ವಿಕರ ವಿವೇಕವಾಣಿಯ ಪ್ರಕಾರ ಎಲ್ಲವೂ ಸಾಧ್ಯವಿದೆ. ಎರಡನೇಯದಾಗಿ ಇಡಿಯ ಊರೇ ನನ್ನ ಮೇಲೆ ಎರಗಿದರೆ ನಾನು ನಂಬಲೇಬೇಕಲ್ಲ! ನಾನೇನಾದರೂ ‘ನೀನು ತಮಾಷೆ ಮಾಡುತ್ತಿದ್ದೀಯಾ’ ಎನ್ನುವ ಧೈರ್ಯ ಮಾಡಿದರೆ ತೊಂದರೆ ಕಾದಿತ್ತು. ‘ಏನೆಂದುಕೊಂಡಿದ್ದೀಯಾ? ನಾವೆಲ್ಲ ಸುಳ್ಳರೇ?’ ಎಂದು ಎಲ್ಲರೂ ರೇಗಾಡುತ್ತಿದ್ದರು. ನಾನು ಮಾಡುವುದೇನು? ಅವರನ್ನು ನಂಬಿದೆ ಮತ್ತು ಅದರಿಂದಲಾದರೂ ಅವರಿಗೆ ಸ್ವಲ್ಪ ಒಳ್ಳೆಯದಾದೀತು ಎಂದು ಆಸೆಪಟ್ಟೆ.

ನಾನೊಬ್ಬ ಅನಾಥ. ನನ್ನನ್ನು ಬೆಳೆಸಿದ ನನ್ನ ಅಜ್ಜ ಈಗಾಗಲೇ ಗೋರಿಯತ್ತ ವಾಲಿದ್ದ. ಹಾಗಾಗಿ ನನ್ನನ್ನು ಒಬ್ಬ ಬೇಕರಿಯವನಿಗೆ ಒಪ್ಪಿಸಿದರು. ಅಲ್ಲಿ ಜನ ನನಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅಲ್ಲಿಗೆ ಶ್ಯಾವಿಗೆ ಬೇಯಿಸಲು ಬಂದ ಪ್ರತಿಯೊಬ್ಬ ಹೆಂಗಸು ಅಥವಾ ಹುಡುಗಿ ನನ್ನನ್ನು ಒಂದು ಸಲವಾದರೂ ಬೇಸ್ತು ಬೀಳಿಸಿದ್ದಳು. ‘ಗಿಂಪೆಲ್ ಸ್ವರ್ಗದಲ್ಲೊಂದು ಜಾತ್ರೆಯಿದೆ; ಗಿಂಪೆಲ್, ಏಳನೇ ತಿಂಗಳಿಗೆ ಧರ್ಮಗುರು ಒಂದು ಕರುವಿಗೆ ಜನ್ಮವಿತ್ತರು; ಗಿಂಪೆಲ್, ಛಾವಣಿಯ ಮೇಲೆ ಹಾರುವ ಹಸು ತಾಮ್ರದ ಮೊಟ್ಟೆಯಿಕ್ಕಿತು’. ಬ್ರೆಡ್ ಕೊಳ್ಳಲು ಬಂದ ಪಾಠಶಾಲೆಯ ಹುಡುಗನೊಬ್ಬ ‘ಅರೆ ಗಿಂಪೆಲ್, ನೀನಿಲ್ಲಿ ಬೇಕರಿಯ ಹಾರೆಯಿಂದ ಕೆರೆಯುತ್ತ ನಿಂತಿದ್ದೀಯಲ್ಲ. ಈಗಲ್ಲಿ ಪ್ರವಾದಿ ಬಂದಿದ್ದಾನೆ. ಸತ್ತವರೆಲ್ಲ ಎದ್ದು ಬಂದಿದ್ದಾರೆ’ ಅಂದ. ‘ಏನನ್ನುತ್ತೀ? ಯಾರೂ ತುತ್ತೂರಿ ಊದುವುದು ನನಗೆ ಕೇಳಿಸಿಲ್ಲವಲ್ಲ’ ಅಂದೆ. ‘ನಿನಗೆ ಕಿವುಡೇನು?’ ಎಂದು ಕೇಳಿದ. ಎಲ್ಲರೂ ‘ನಾವು ಕೇಳಿದೆವು, ನಮಗೆ ಕೇಳಿಸಿತು’ ಎಂದು ಹುಯಿಲೆಬ್ಬಿಸಿದರು. ಆಗ ಆ ಮೋಂಬತ್ತಿಯವಳು, ರೀಟ್ಜೆ ಬಂದು, ತನ್ನ ಒರಟು ದನಿಯಲ್ಲಿ ‘ಗಿಂಪೆಲ್, ನಿನ್ನ ಅಪ್ಪ ಅಮ್ಮ ಗೋರಿಯಿಂದ ಎದ್ದು ಬಂದಿದ್ದಾರೆ. ನಿನ್ನನ್ನು ಹುಡುಕುತ್ತಿದ್ದಾರೆ’ ಅಂದಳು. ನಿಜ ಹೇಳಬೇಕೆಂದರೆ ಅಂಥದ್ದೇನೂ ಆಗಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೂ, ನೋಡೋಣ ಎಂದು,

ಅವರೆಲ್ಲ ಮಾತಾಡುತ್ತಿರುವಾಗಲೇ, ಉಣ್ಣೆಯ ಕೋಟು ತೊಟ್ಟು ಹೊರಗೆಹೋದೆ. ಏನಾದರೂ ಆಗಿರಲೂಬಹುದು. ಹೋಗಿ ನೋಡುವುದರಿಂದ ನನಗಾಗುವ ನಷ್ಟವಾದರೂ ಏನು? ಆದರೆ ಅಬ್ಬ, ನನ್ನ ಹಿಂದೆ ಅಪಹಾಸ್ಯದ ಅದೆಂಥ ನರಕವಾದ್ಯ ಮೊಳಗಿಹೋಯಿತು! ಅಂದಿನಿಂದ ಇನ್ನೇನನ್ನೂ ನಂಬಬಾರದೆಂದು ಶಪಥ ಮಾಡಿದೆ. ಅದರಿಂದಲೂ ಅಂಥ ಪ್ರಯೋಜನವಾಗಲಿಲ್ಲ. ಅವರೆಲ್ಲ ನನ್ನನ್ನು ಎಷ್ಟು ಸತಾಯಿಸಿದರೆಂದರೆ ನನಗೆ ಯಾವುದರದೂ ತಲೆಬುಡವೇ ತಿಳಿಯದಾಯಿತು.

ಸಲಹೆ ಕೇಳಲು ನಾನು ಗುರುಗಳ ಕಡೆ ಹೋದೆ. ಆತ ಹೇಳಿದ್ದಿಷ್ಟೇ: ‘ಸದಾ ಮೂರ್ಖನಾಗಿರುವುದು ಒಂದು ಗಂಟೆ ದುಷ್ಟನಾಗಿ ಇರುವುದಕ್ಕಿಂತ ಮೇಲು ಎಂದು ಬರೆದಿದ್ದೇ ಇದೆ. ನೀನು ಮೂರ್ಖನಲ್ಲ. ಅವರು ಮೂರ್ಖರು. ತನ್ನ ನೆರೆಯವನನ್ನು ಅವಮಾನಿಸುವವನು ಸ್ವರ್ಗವನ್ನು ಕೈಯಾರೆ ಕಳೆದುಕೊಳ್ಳುತ್ತಾನೆ’. ಹಾಗಂತ ಗುರುಗಳ ಮಗಳು ನನ್ನನ್ನು ಸುಮ್ಮನೇ ಬಿಡಲಿಲ್ಲ. ನಾನು ಮಂದಿರದಿಂದ ಹೊರಟೊಡನೆ ‘ನೀನು ಆ ಗೋಡೆಯನ್ನು ಚುಂಬಿಸಿದೆಯಾ?’ ಎಂದು ಕೇಳಿದಳು. ‘ಇಲ್ಲವಲ್ಲ. ಯಾಕೆ?’ ಅಂದೆ. ‘ಅದು ನಿಯಮ. ಪ್ರತಿ ಭೇಟಿಯ ನಂತರವೂ ನೀನದನ್ನು ಮಾಡಬೇಕು’ ಎಂದಳು. ಸರಿ, ನನಗಂತೂ ಅದರಲ್ಲಿ ಯಾವ ಕೆಡಕೂ ಕಾಣಿಸಲಿಲ್ಲ. ಅವಳು ಮಾತ್ರ ಗಹಗಹಿಸಿ ನಕ್ಕಳು. ಅದು ಒಳ್ಳೆಯ ಕುತಂತ್ರವಾಗಿತ್ತು. ನನ್ನ ಮೇಲೆಯೇ ಪ್ರಯೋಗಿಸಿದಳು. ಇರಲಿ.

ನಾನು ಈ ಊರನ್ನೇ ಬಿಟ್ಟು ಇನ್ನೊಂದು ಊರಿಗೆ ಹೋಗಬೇಕೆಂದುಕೊಂಡೆ. ಆದರೆ ಅದಾಗಲೇ ಎಲ್ಲರೂ ನನಗಾಗಿ ಹೆಂಡತಿಯನ್ನು ನೋಡತೊಡಗಿದ್ದರು. ನನ್ನ ಕೋಟಿನ ತುದಿ ಚುಂಗೇಳುವಷ್ಟು ಅವರೆಲ್ಲ ನನ್ನ ಬೆನ್ನು ಹತ್ತಿದರು. ಕಿವಿ ಒದ್ದೆಯಾಗುವಷ್ಟು ಅವರು ನನ್ನ ಕಿವಿ ಕಚ್ಚಿದರು. ಅವಳೇನೂ ಶುದ್ಧ ಹೆಂಗಸಲ್ಲ. ಆದರೂ ಅವಳು ಅಕ್ಷತ ಕನ್ಯೆಯೆಂದು ಬಿಂಬಿಸಿದರು. ಅವಳು ಕುಂಟುವುದನ್ನು ವೈಯಾರವೆಂದು ಕರೆದರು. ಅವಳಿಗೊಬ್ಬ ಬೇವಾರ್ಸಿ ಮಗನಿದ್ದ. ಅವನು ಅವಳ ತಮ್ಮ ಅಂದರು. ‘ನೀವು ಸುಮ್ಮನೇ ನಿಮ್ಮ ಸಮಯ ಹಾಳುಮಾಡುತ್ತಿದ್ದೀರಿ. ಆ ಸೂಳೆಯನ್ನು ನಾನು ಮದುವೆಯಾಗಲಾರೆ’ ಎಂದು ಚೀರಿಚೀರಿ ಹೇಳಿದೆ. ಅದಕ್ಕವರು ‘ಇದೆಂಥ ಮಾತು? ಹೀಗೆಲ್ಲಾ ಮಾತಾಡಲು ನಾಚಿಕೆಯಾಗುವುದಿಲ್ಲವೇ? ಅವಳ ಬಗ್ಗೆ ಹೀಗೆಲ್ಲ ಕೆಟ್ಟದಾಗಿ ಮಾತಾಡಿದ್ದಕ್ಕೆ ನಿನ್ನನ್ನು ಧರ್ಮಗುರುವಿನ ಬಳಿಗೊಯ್ದು ದಂಡ ವಿಧಿಸುತ್ತೇವೆ.’ ಎಂದು ಸಿಟ್ಟಿನಿಂದ ಕೂಗಾಡಿದರು. ನನ್ನನ್ನು ಬಲಿಪಶು ಮಾಡಲು ಹೊರಟ ಇವರಿಂದ ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ ಅನಿಸಿತು : ಸಂಸಾರದಲ್ಲಿ ಗಂಡನೇ ಸ್ವಾಮಿ ಎಂಬುದನ್ನು ಅವಳೂ ಒಪ್ಪಿಕೊಂಡರೆ ಅದು ನನಗೂ ಸಮ್ಮತ. ಇಷ್ಟಕ್ಕೂ ಬದುಕು ಅಷ್ಟೊಂದು ಸುರಳೀತವೇನೂ ಅಲ್ಲವಲ್ಲ.

ಆ ಗುಂಪು ನನ್ನ ಬೆನ್ನ ಹಿಂದೆ ಛೇಡಿಸುತ್ತ, ಗೌಜು ಹಾಕುತ್ತ ಬರುತ್ತಿದ್ದಾಗ, ನಾನು ಗಜನಿ ಭೂಮಿಯಲ್ಲಿದ್ದ ಅವಳ ಮಣ್ಣಿನ ಮನೆಗೆ ಹೋದೆ. ಅವರಿಗೋ ಕರಡಿ ಶಿಕಾರಿಯ ಆವೇಶ. ಮನೆಯ ಬಾವಿ ಸಮೀಪಿಸುತ್ತಿದ್ದಂತೆ ಅವರೆಲ್ಲ ಒಮ್ಮೆಗೇ ನಿಂತುಬಿಟ್ಟರು. ಎಲ್ಕಾಳ ಸುದ್ದಿಗೆ ಹೋಗುವುದಕ್ಕೆ ಅವರೆಲ್ಲ ಹೆದರುತ್ತಿದ್ದರು. ಅವಳ ಬಾಯಿ ಬೊಂಬಾಯಿ. ತೆರೆದರೆ ಸಾಕು ಅಲ್ಲಿಂದ ಅಲ್ಲಿಯ ತನಕ ಬಟ್ಟೆ ಒಣಹಾಕಿದಂತೆ ಕಾಣುತ್ತಿತ್ತು. ತೊಟ್ಟಿಯ ಬಳಿ ಬರಿಗಾಲಲ್ಲಿ ನಿಂತು ಬಟ್ಟೆ ಒಗೆಯುತ್ತಿದ್ದಳು. ಯಾರೋ ಕೊಟ್ಟ ಮಾಸಲು ದುಬಾರಿ ಬಟ್ಟೆಯನ್ನು ಹಾಕಿಕೊಂಡಿದ್ದಳು. ಜಡೆಗಳನ್ನು ಎತ್ತಿ ಕಟ್ಟಿದ್ದಳು. ಎಲ್ಲಾ ಸೇರಿ ಉಸಿರುಗಟ್ಟಿಸುವಂತಿತ್ತು.

ನಾನು ಯಾರೆಂಬುದು ಅವಳಿಗೆ ಗೊತ್ತಿದ್ದಂತಿತ್ತು. ನನ್ನತ್ತ ನೋಡಿ ‘ಅರೆ, ಬಂದ ಜೊಲ್ಲುಸುರುಕ! ಬಾ ಕೂತುಕೋ!’. ಏನನ್ನೂ ನಿರಾಕರಿಸದೇ ಅವಳಿಗೆ ಎಲ್ಲಾ ಹೇಳಿದೆ. ‘ನಿಜ ಹೇಳು. ನೀನು ನಿಜವಾಗಿಯೂ ಕನ್ಯೆಯೇ? ಮತ್ತು ಆ ತುಂಟ ಯೆಶಿಲ್ ನಿಜಕ್ಕೂ ನಿನ್ನ ತಮ್ಮನೇ? ನನಗೆ ಮೋಸಮಾಡಬೇಡ; ನಾನು ಮೊದಲೇ ಅನಾಥ’. ‘ನಾನೂ ಅನಾಥೆಯೇ… ನಿನ್ನನ್ನು ಕುಣಿಸುವವರ ಮೂತಿಗೆ ಬೆಂಕಿಬೀಳಲಿ. ಆದರೆ ನಾನು ಅಷ್ಟು ಸಸಾರ ಅಲ್ಲ ಎಂದು ಅವರಿಗೆ ಗೊತ್ತಿರಲಿ. ನನಗೆ ಐವತ್ತು ಗಿಲ್ಡರ್‌ಗಳ ವಧುದಕ್ಷಿಣೆ ಬೇಕು. ಅದರ ಜೊತೆ ಅವರು ಇನ್ನಷ್ಟು ವಂತಿಗೆ ಸೇರಿಸಲಿ. ಅದಾಗದಿದ್ದರೆ ನನ್ನ ಮುಕಳಿಗೆ ಮುತ್ತಿಡಲಿ’. ಅವಳ ಮಾತು ನೇರವಾಗಿತ್ತು. ‘ದಕ್ಷಿಣೆ ಕೊಡಬೇಕಾದ್ದು ವಧು, ವರನಲ್ಲ.’ ಎಂದೆ. ‘ಚೌಕಾಶಿ ಮಾಡಬೇಡ. ಒಂದೇ ಮಾತು – ಹೌದು ಅಥವಾ ಇಲ್ಲ. ಇಲ್ಲವಾದರೆ ಮುಚ್ಕೊಂಡು ಹೋಗು’ ಅಂದಳು.

ನಾನು ಯೋಚಿಸಿದೆ: ಇದು ಬೇಯಿಸಲಾಗದ ಬೇಳೆ. ಹಾಗಂತ ಈ ಊರಿನ ಜನರೂ ನನ್ನನ್ನು ಬಿಡುವವರಲ್ಲ. ಅಂತೂ ಅವರು ಎಲ್ಲವನ್ನೂ ಒಪ್ಪಿಕೊಂಡು ಮದುವೆಗೆ ಮುಂದಾದರು. ಅದೇ ವೇಳೆಗೆ ಊರಲ್ಲಿ ಭೇದಿಯ ಪಿಡುಗು ಹರಡಿತು. ಮದುವೆಯು ಮಸಣದ ಬಾಗಿಲಲ್ಲಿ, ಹೆಣಗಳನ್ನು ಮೀಯಿಸುವ ಜಾಗದ ಸಮೀಪ ನಡೆಯಿತು. ಎಲ್ಲರೂ ಕುಡಿದು ಮಸ್ತಾಗಿದ್ದರು. ಅತ್ಯಂತ ಸಾತ್ವಿಕ ಧರ್ಮಗುರುಗಳೇ ಮದುವೆಯ ಕರಾರುಪತ್ರ ಬರೆಯುತ್ತ ‘ವಧುವು ವಿಧವೆಯೋ ವಿಚ್ಛೇದಿತಳೋ?’ ಎಂದದ್ದನ್ನು ಕೇಳಿದೆ. ಅದಕ್ಕೆ ಚರ್ಚಿನ ಅಧಿಕಾರಿಯ ಹೆಂಡತಿ ‘ಎರಡೂ’ ಎಂದಳು. ಅದು ನನ್ನ ಕರಾಳ ಕ್ಷಣ. ನಾನೇನು ಮಾಡಬಹುದಿತ್ತು? ಮದುವೆಯ ಮಂಟಪದಿಂದ ಓಡಲು ಸಾಧ್ಯವಿತ್ತೇ? ಅಲ್ಲಿ ಹಾಡು, ಕುಣಿತ ನಡೆದಿತ್ತು. ಹೆಣೆದ ಬೆಳ್ಳನೆಯ ಶಾಲೊಂದನ್ನು ಅವಚಿ ಹಿಡಿದ ಅಜ್ಜಿಯೊಬ್ಬಳು ನನ್ನ ಜೊತೆ ಕುಣಿದಳು. ಪುರೋಹಿತರು ವಧುವಿನ ತಂದೆತಾಯಿಯರ ನೆನಪಲ್ಲಿ ಪ್ರಾರ್ಥನೆಗೈದರು. ಶಾಲಾಮಕ್ಕಳು ಹಬ್ಬದ ದಿನ ಕುಣಿಯುವಂತೆ ಕುಣಿದರು. ಸಮಾರಂಭದ ನಂತರ ಉಡುಗೊರೆಗಳ ರಾಶಿಯೇ ಬಂತು: ಶ್ಯಾವಿಗೆ ಮಣೆ, ಹಿಟ್ಟು ಕಲೆಸುವ ಪರಾತು, ಬಾಲ್ದಿ, ಕಸಬರಿಗೆ, ಸೌಟುಗಳು ಹೀಗೆ ಮನೆಬಳಕೆಯ ಸಾಮಾನುಗಳ ಸರಮಾಲೆಯೇ ಇತ್ತು. ಆಗ ಇಬ್ಬರು ಹುಡುಗರು ತೊಟ್ಟಿಲೊಂದನ್ನು ಹೊತ್ತು ತರುವುದನ್ನು ನೋಡಿದೆ. ‘ನಮಗೆ ಇದು ಬೇಕೇ?’ ಅಂದೆ. ‘ತೀರಾ ತಲೆಕೆಡಿಸಿಕೊಳ್ಳಬೇಡ. ಕೆಲಸಕ್ಕೆ ಬರಬಹುದು’ ಅಂದರು. ನಾನು ಮತ್ತೆ ಮೋಸಹೋಗುವುದು ಖಾತ್ರಿಯಾಯಿತು. ಹಾಗೆ ನೋಡಿದರೆ ನಾನು ಕಳೆದುಕೊಳ್ಳುವುದೇನಿದೆ? ಏನಾಗುವುದೋ ನೋಡೋಣ. ಇಡೀ ಊರಿಗೇ ತಲೆಕೆಡುವುದು ಶಕ್ಯವಿಲ್ಲ.

ಭಾಗ 2 : ಇಲ್ಲಿ ಕ್ಲಿಕ್ ಮಾಡಿ ಈ ಕಥೆಯ ಮತ್ತು ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 11:42 am, Fri, 13 May 22

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್