ಹಾದಿಯೇ ತೋರಿದ ಹಾದಿ: ಹಸನಾಪುರದ ದುಂಡಮ್ಮಜ್ಜಿಯ ಬದುಕು ಹಸನಾಗಿರುವುದು ಹೀಗೆ

Quilt Making : ಕೌದಿಯೊಳಗಿನ ಒಂದೊಂದು ಚಿತ್ತಾರಗಳಿಗೆ ಒಂದೊಂದು ಕತೆ ಇದೆ; ಬಾಸಿಂಗ, ಬಾವಿ, ಚೌಕಾಬಾರ, ಪಗಡೆ, ಬೇಲಿ ಹೀಗೆ ಒಂದೊಂದು ವಿನ್ಯಾಸವೂ ಗಂಡ-ಹೆಂಡತಿ, ಒಲವು ಸೋಲು ಗೆಲುವು, ಕುಟುಂಬ ಸಾಮರಸ್ಯವನ್ನು ಸಾಂಕೇತಿಸುತ್ತದೆ.

ಹಾದಿಯೇ ತೋರಿದ ಹಾದಿ: ಹಸನಾಪುರದ ದುಂಡಮ್ಮಜ್ಜಿಯ ಬದುಕು ಹಸನಾಗಿರುವುದು ಹೀಗೆ
ಕೌದಿ ಕಲಾವಿದೆ ದುಂಡಮ್ಮ
Follow us
ಶ್ರೀದೇವಿ ಕಳಸದ
|

Updated on: May 12, 2022 | 12:43 PM

ಹಾದಿಯೇ ತೋರಿದ ಹಾದಿ: ಎಪ್ಪತ್ತು ವಸಂತಗಳ ತನ್ನ ಬಣ್ಣಬಣ್ಣದ ನೆನಪುಗಳು, ಜೀವನಾನುಭವ, ಜೀವನಪ್ರೀತಿಯನ್ನು ಹಿಡಿದಿಟ್ಟು ಹೆಣೆದು ಹಿತವಾದ ಕೌದಿಯನ್ನಾಗಿಸುವ ದುಂಡಮ್ಮಜ್ಜಿಯ ಕೌದಿ ಕಹಾನಿ ಇದು. ಇವರು ಇನ್ನೂರಕ್ಕೂ ಹೆಚ್ಚು ಆಕರ್ಷಕ ಚಿತ್ತಾರಗಳಿಂದ ಕೂಡಿದ ಬಗೆಬಗೆಯ ಕೌದಿಗಳನ್ನು ಹೊಲೆದಿದ್ದಾರೆ. ಹಳೆಯ ಸೀರೆ, ಹರಿದ ಲಂಗಗಳು, ಹಳೆ ಬಟ್ಟೆಗಳು, ಟೈಲರ್ ಅಂಗಡಿಯಲ್ಲಿ ಮಿಕ್ಕುಳಿದು ಬಿಸಾಡುವ ಚೂರು ಬಟ್ಟೆಗಳನ್ನೆಲ್ಲಾ ತಂದು ಒಂದುಗೂಡಿಸಿ, ಒಂದೊಂದೇ ಬಣ್ಣಬಣ್ಣದ ಬಟ್ಟೆಯನ್ನು ಜೋಡಿಸುತ್ತಾರೆ. ಅದಕ್ಕೆ ಒಂದೊಂದೇ ಹೊಲಿಗೆಯನ್ನು ಹಾಕುವ ಇವರ ಉತ್ಸಾಹ, ಜೀವನ ಪ್ರೀತಿ ಈಗಿನ ಯುವಜನರಿಗೆ ಸ್ಫೂರ್ತಿಯಾಗದೆ ಇರಲಾರದು. ಅವರ ಸೋಬಾನೆ ಪದ, ಐರಾಣಿ ಪದ, ಮಂಗಳಾರತಿ ಹಾಡು ಇತ್ಯಾದಿ ಜಾನಪದ ಹಾಡುಗಳು ಒಂದು ಕ್ಷಣ ನನ್ನನ್ನೂ ಮಂತ್ರ ಮುಗ್ಧವಾಗಿಸಿದವು. ಮೂಲತಃ ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕು, ಹಸನಾಪುರ ಗ್ರಾಮದವರಾದ ದುಂಡಮ್ಮನವರನ್ನು ಮಾತಿಗೆಳೆದಾಗ ಅವರು ಬದುಕನ್ನು ಹರವಿದ್ದು ಹೀಗೆ… ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್ (Jyothi S)

ನಮ್ಮ ತಂದೆ ತಾಯಿಗೆ ಆರು ಜನರು ಮಕ್ಕಳಲ್ಲಿ ಹೆಣ್ಣುಮಗಳು ನಾನೊಬ್ಬಳೇ. ಉಳಿದ ಐವರು ಅಣ್ಣ ತಮ್ಮಂದಿರು. ಶ್ರೀಮಂತ ಕುಟುಂಬ. ಹಾಗಾಗಿ ಒಬ್ಬಳೇ ಹೆಣ್ಣುಮಗಳು ಅಂತ ಎಲ್ಲರೂ ನನ್ನನ್ನ ಪ್ರೀತಿಯಿಂದ ಸಲಹುತ್ತಿದ್ದರು. ನಾನು ಶಾಲೆಗೆ ಹೋದವಳಲ್ಲ. ಮೈನೆರೆದು ಒಂದು ವರ್ಷಕ್ಕೆ ಅಂದರೆ ಹದಿಮೂರನೇ ವಯಸ್ಸಿಗೆ ನನಗೆ ಮದುವೆ ಅಂದ್ರೆ ಏನು ಅಂತಲೇ ಗೊತ್ತಿಲ್ಲದ ವಯಸ್ಸಿಗೆ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದರು. ‌ಹದಿನಾಲ್ಕನೇ ವಯಸ್ಸಿಗೆ ಮಗುವಾಯಿತು. ನಂತರ ಎರಡು ವರ್ಷಕ್ಕೆ ಒಂದರಂತೆ ಹನ್ನೆರಡು ಮಕ್ಕಳು ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಬೆಳೆದ ನನಗೆ ಗಂಡನ ಮನೆಯಲ್ಲೂ ಯಾವುದೇ ಕೊರತೆ ಇಲ್ಲದಂತೆ ಎಲ್ಲವೂ ಚೆನ್ನಾಗಿತ್ತು. ಹಾಗಾಗಿ ನಾನು ಮನೆಯಿಂದ ಎಲ್ಲೂ ಹೊರಗೆ ಹೋಗುತ್ತಿರಲಿಲ್ಲ. ಕಷ್ಟದ ಪರಿವೆಯೇ ಇಲ್ಲದಂತೆ ಬದುಕು ಸುಗಮವಾಗಿ ಸಾಗುತ್ತಿತ್ತು. ಆಗೆಲ್ಲ ನನ್ನ ಗಂಡ ಭೀಮಣ್ಣ ಪ್ರತಿಯೊಂದು ನಾಟಕ, ಬಯಲಾಟ, ಹೀಗೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನನ್ನನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದರು.

ಇದನ್ನೂ ಓದಿ
Image
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
Image
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Image
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Image
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

ಇದ್ದಕ್ಕಿದ್ದಂತೆ ಗಂಡನಿಗೆ ಹುಷಾರು ತಪ್ಪಿತು. ಆಸ್ಪತ್ರೆಗೆ ತೋರಿಸಿದಾಗ ಕ್ಯಾನ್ಸರ್ ಎಂದು ತಿಳಿಯಿತು. ಉಳಿಸಿಕೊಳ್ಳಲು ನನ್ನ ಹತ್ತಿರ ಇದ್ದ ಬುಗುರಿಕಡ್ಡಿ, ಬೆಂಡೋಲೆ, ಕಟಾಣಿ, ಗುಂಡಿನ ಟಿಕ್ಕಿ, ಮುತ್ತಿನಸರ ಸೇರಿದಂತೆ ಎಲ್ಲ ಒಡವೆಗಳನ್ನು ಮಾರಿದೆ. ಜಮೀನನ್ನು ಹೋದಷ್ಟಕ್ಕೆ ಹೋಗಲಿ ಅಂತ ಎಷ್ಟು ಬೆಲೆ ಬರತ್ತೋ ಅಷ್ಟಕ್ಕೇ ಮಾರಿ ಆಸ್ಪತ್ರೆಗೆ ತೋರಿಸಿದೆವು. ಖಾಯಿಲೆ ವಾಸಿ ಮಾಡಿಸಲು ಹರಸಾಹಸ ಮಾಡಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಅವರು ತೀರಿಕೊಂಡರು. ನನ್ನ ಗಂಡ ತೀರಿಕೊಂಡ ನಂತರ ಒಂದು ತಿಂಗಳು ಅತ್ತು ಕೊರಗಿ ಮಕ್ಕಳ ಸಲುವಾಗಿ ಸಮಾಧಾನ ಮಾಡಿಕೊಂಡೆ. ಮಾರ್ಕೆಟ್​ಗೆ ಕೂಡ ಹೋಗದವಳು, ಮಕ್ಕಳ ಜೊತೆಗೆ ಸಂಸಾರದ ನೊಗವನ್ನು ಹೊರುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ತವರು ಮನೆಯಿಂದ ಅಮ್ಮ ಒಬ್ಬ ಅಣ್ಣ ಗೋವಿಂದಪ್ಪ, ತಮ್ಮ ಬಾಲಪ್ಪನ ಜೊತೆ ಮಾಡಿ ಒಂದು ಆಕಳನ್ನು ಕಳುಹಿಸಿದರು. ನನ್ನ ಇಬ್ಬರೂ ಅಣ್ಣ ತಮ್ಮಂದಿರು ನನ್ನ ಜೊತೆಗೆ ಬೆನ್ನೆಲುಬಾಗಿ ನಿಂತು ಕೆಲಸಕ್ಕೆ ಜೊತೆಯಾದರು. ಒಂದಿದ್ದ ಆಕಳು ಎಂಟು ಆದವು. ನಾಲ್ಕು ಎಮ್ಮೆ, ಎತ್ತು ಎಲ್ಲಾ ಹೆಚ್ಚಾದವು. ಪಣ ತೊಟ್ಟು ಕಳೆದ ಎಲ್ಲವನ್ನು ಸಂಪಾದನೆ ಮಾಡಬೇಕು, ನಮ್ಮ ಮನೆ ಮೊದಲಿನ ಸ್ಥಿತಿಗೆ ತಲುಪಬೇಕು ಎಂದು ಹಗಲು ರಾತ್ರಿ ಎನ್ನದೆ ಅಣ್ಣ ತಮ್ಮಂದಿರ ಜೊತೆಗೂಡಿ ದುಡಿದೆ.

ಹಸುವಿನ ಸಗಣಿಯಿಂದ ಬೆರಣಿ ತಟ್ಟಿ ಒಣಗಿಸಿ ಮಾರುವುದು. ಶೇಂಗಾ ಬಿತ್ತನೆ ಮಾಡುವುದು, ಹೀಗೆ ಎಲ್ಲಾ ಕೆಲಸಗಳನ್ನು ಮಾಡಿ ನನ್ನ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿ ಓದಿಸಿದ್ದೇನೆ. ಇವತ್ತು ನನ್ನ ಮಕ್ಕಳು ಶಿಕ್ಷಕರಾಗಿದ್ದಾರೆ, ವಕೀಲಿ ಕೆಲಸ ಮಾಡುತ್ತಿದ್ದಾರೆ, ಪಿಎಚ್​.ಡಿ ಕೂಡ ಮಾಡಿದ್ದಾರೆ. ಅಷ್ಟು ಕಷ್ಟದಲ್ಲಿ ಮಕ್ಕಳನ್ನು ಓದಿಸಿ ಈಗ ಈ ಸ್ಥಾನದಲ್ಲಿ ಅವರನ್ನು ನೋಡಲು ತುಂಬ ಖುಷಿಯಾಗುತ್ತದೆ.

ನಾನು ನನ್ನ ಅಜ್ಜಿ ಯಮನವ್ವನಿಂದ ಕೌದಿ ಹೊಲೆಯುವುದನ್ನು ಕಲಿತುಕೊಂಡೆ. ಹದಿಮೂರು ವರ್ಷದ ಹುಡುಗಿಯಿಂದ ಇಲ್ಲಿಯವರೆಗೂ ಕೌದಿ ನನ್ನ ಬದುಕಿನ ಒಂದು ಭಾಗವೇ ಆಗಿದೆ. ಈಗ ನಮ್ಮ ಮನೆಯಲ್ಲೇ ಮೂವತ್ತಕ್ಕೂ ಹೆಚ್ಚು ಕೌದಿಗಳಿವೆ. ಕೌದಿ ಚಿಕ್ಕದಾದರೆ ಐದು ಮೊಳ ಇರುತ್ತದೆ. ದೊಡ್ಡ ಕೌದಿಯಾದರೆ ಏಳು ಮೊಳ ಇರುತ್ತದೆ. ಒಂದು ಕೌದಿ ಹೊಲೆಯಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ. ಒಂದು ಕೌದಿಗೆ ಹಳೆಯ ಸೀರೆಗಳು, ಹರಿದು ಹೋದ ಬಟ್ಟೆಗಳು, ಟೈಲರ್ ಅಂಗಡಿಗಳಲ್ಲಿ ಸಿಗುವ ವೇಸ್ಟ್ ತುಂಡುಗಳು ಕೌದಿ ಹೊಲೆಯುವ ದಾರದ ಏಳೆಂಟು ಉಂಡೆಗಳು ಬೇಕಾಗುತ್ತದೆ. ಸುಮಾರು ಕೌದಿಗಳನ್ನು ಹೊಲೆದು ಮಾರಿದ್ದೇನೆ. ಕೆಲವರು ರೂ. 2000, ಇನ್ನೂ ಕೆಲವರು ಪಾಪ ಅಜ್ಜಿ ತಿಂಗಳಾನುಗಟ್ಟಲೆ ಕೂತು ಹೊಲೆದಿದ್ದಾರೆ ಅಂತ ರೂ. 2500 ಕೊಡುತ್ತಾರೆ. ಮತ್ತೆ ಕೆಲವೊಬ್ಬರು ಸೀರೆ ಕೊಟ್ಟು ಕೌದಿ ಹೊಲೆಸಿಕೊಳ್ಳುತ್ತಾರೆ ಹಣ ಕೊಡುವುದಿಲ್ಲ.

ಕೌದಿ ಹೊಲೆಯುವುದು ಅಷ್ಟು ಸುಲಭವಲ್ಲ. ತಾಳ್ಮೆ ಇರಬೇಕು. ಮೊದಲು ಕೌದಿ ಹೊಲೆಯುವ ಆಸಕ್ತಿ ಪ್ರೀತಿ ಇರಬೇಕು. ಇದೊಂದು ಕರಕುಶಲ ಕಲೆ. ಆಗೆಲ್ಲ ನಮ್ಮಮ್ಮ ವರ್ಷಕ್ಕೆ ನಾಲ್ಕು ಸೀರೆ ತೆಗೆದುಕೊಡುತ್ತಿದ್ದರು. ಆಗ ಅದೇ ಹೆಚ್ಚು. ಮೊದಲು ಸೀರೆಯನ್ನು ತೆಗೆದುಕೊಳ್ಳುತ್ತಿದ್ದರು. ಅದೇನಾದರೂ ಹಳೆಯದಾಗಿ ಸ್ವಲ್ಪ ಹರಿದರೆ ಅದನ್ನು ದಿಂಡು ಅಂತ ಹಾಕುತ್ತಿದ್ದೆ. ಅಂದರೆ ಸೀರೆ ಎಲ್ಲಿ ಹರಿದಿರುತ್ತದೆಯೋ ಅಲ್ಲಿಗೆ ತುಂಡರಿಸಿ ಆ ಭಾಗವನ್ನು ತೆಗೆದು ಮತ್ತೆ ಅದನ್ನು ಜೋಡಣೆ ಮಾಡಿ ಮರುಬಳಕೆ ಮಾಡುತ್ತಿದ್ದರು. ಮತ್ತೆ ಒಂದೆರಡು ವರ್ಷ ಉಡಬಹುದಿತ್ತು. ಅದು ಇನ್ನೂ ತುಂಡು ತುಂಡಾದರೆ ಅದನ್ನು ಪೇಟಿಕೋಟ್ ತರ ಮಾಡುತ್ತಿದ್ದೆ. ಪೇಟಿಕೋಟ್ ಆಗಿ ಇನ್ನೂ ಬಟ್ಟೆ ಮಿಕ್ಕಿದರೆ, ಕೌದಿ ಹೊಲೆಯಲು ಬಳಸುತ್ತಿದ್ದೆ. ಒಂದು ಕೌದಿ ಸುಮಾರು ಹತ್ತರಿಂದ ಹನ್ನೆರಡು ವರ್ಷ ಬಾಳಿಕೆ ಬರುತ್ತದೆ. ಕೌದಿಯೂ ಹರಿದು ಹೋದರೆ… ಹರಿದಿರುವ ಕೌದಿಯನ್ನು ನೆಲ ಒರೆಸುವ ಬಟ್ಟೆಯಾಗಿ ಉಪಯೋಗಿಸುತ್ತಿದ್ದೆವು. ನಂತರ ಮನೆ ಒರೆಸಿ ಒರೆಸಿ ಹಾಳಾಗಿ ಹೋದಂತೆ ಅದನ್ನು ಮತ್ತೆ ಸೀಮೆ ಎಣ್ಣೆಯ ಬುಡ್ಡಿ ದೀಪಗಳಿಗೆ ದಾರವಾಗಿ ಬಳಸುತ್ತಿದ್ದೆವು. ಹೀಗೆ ಒಂದು ಬಟ್ಟೆಯನ್ನು ಮೊದಲಿನಿಂದ ಕೊನೆಯವರೆಗೆ ಉರಿದು ಹಾಳಾಗುವವರೆಗೂ ಯಾವ ಸಣ್ಣ ಭಾಗವನ್ನೂ ಹಾಳು ಮಾಡದಂತೆ ಉಪಯೋಗಿಸುತ್ತಿದ್ದೆವು. ಈಗ ಸೀರೆ ಆರು ಮಣ ಇರುತ್ತದೆ. ಆಗೆಲ್ಲ ಒಂಭತ್ತು ಮೀಟರ್ ಇರುತ್ತಿತ್ತು.

Traditional Quilt Making Haadiye Torida Haadi column by Jyothi S

ಚೂರಿನೊಳಗಿನ ಚಿತ್ರ

ಕೌದಿಯೊಳಗಿನ ಒಂದೊಂದು ಚಿತ್ತಾರಗಳು ಒಂದೊಂದು ಕತೆಯನ್ನು ನೆನಪಿಸುತ್ತವೆ. ಉದಾಹರಣೆ – ಗಂಡ ಹೆಂಡತಿ ಜಗಳ ಆಡಿ ಮುನಿಸಿಕೊಂಡಿದ್ದರೆ, ಬಾಸಿಂಗ (ಧಾರೆ ಎರೆಯುವಾಗ ಹಣೆಗೆ ಕಟ್ಟಿಕೊಳ್ಳುವ ಚಿತ್ರ)ವನ್ನು ಕೌದಿಯಲ್ಲಿ ನೋಡಿದ್ರೆ ಆ ದಿನಗಳು ನೆನಪಾಗಬೇಕು. ಏಕೆಂದರೆ, ಕೌದಿ ಹೊದ್ದುಕೊಂಡಾಗ ಅದನ್ನು ನೋಡುತ್ತಾರೆ. ನೋಡಿದ ತಕ್ಷಣ ಎಷ್ಟೇ ಕೋಪ ಇದ್ದರೂ ಒಂದು ಕ್ಷಣ ಮದುವೆಯ ದಿನಗಳ ನೆನಪು ತರಿಸಿ ಗಂಡ – ಹೆಂಡಿರನ್ನು ಒಂದುಗೂಡಿಸುತ್ತದೆ. ಮತ್ತೆ ಕೌದಿಯಲ್ಲಿ ಬಾವಿ, ಚೌಕಬಾರ, ಪಗಡೆ ಹೀಗೆಲ್ಲಾ ಚಿತ್ರಗಳನ್ನು ಹಾಕುತ್ತೇನೆ. ಬಾವಿ ಹಾಕುವ ಉದ್ದೇಶವೆಂದರೆ… ದೇವಸ್ಥಾನಗಳಿಗೆ ಹೋದರೆ ಬಾವಿ ಕಟ್ಟೆ ಹತ್ತಿರ ಕುಳಿತುಕೊಂಡು ನೀರು ಎಷ್ಟು ಪ್ರಶಾಂತವಾಗಿ, ತಿಳಿಯಾಗಿ, ಶುಭ್ರವಾಗಿ ಇರುತ್ತದೆಯೋ ಹಾಗೆ ನಮ್ಮ ಮನಸ್ಸು ಇರಲಿ ಎನ್ನುವ ಭಾವನೆ ಒಂದು ಕಡೆಯಾದರೆ, ಮನುಷ್ಯ ಬಾವಿಯಲ್ಲಿರುವ ಕಪ್ಪೆಯಾಗಬಾರದು. ನಾವು ಗಂಡನನ್ನು ಕೂಡ ಸುಲಭಕ್ಕೆ ಗೆಲ್ಲಬಹುದು. ಸಂಸಾರದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಅತ್ತೆ, ಮಾವ, ನಾದಿನಿ, ಮೈದುನ ಇತ್ಯಾದಿ ಎಲ್ಲರ ಜೊತೆ ಜೊತೆಗೆ ಹೇಗೆ ಸಂಸಾರದ ಬಂಡಿಯನ್ನು ತೂಗಿಸಬೇಕು. ಇನ್ನು ಚೌಕ-ಬಾರ ಆಡುವಾಗ ಸೋತರೆ ನಿರಾಸೆ ಹೊಂದುತ್ತೇವೆ. ಆದರೆ ಮತ್ತೆ ಆಡುವಾಗ ಹೇಗೆ ಗೆಲ್ಲುವುದು? ನಾನೆಲ್ಲಿ ಸೋತಿದ್ದೇನೆ? ಸೋಲಿಗೆ ಕಾರಣ ಏನು? ಯಾವ ಕಾಯಿಯನ್ನು ಹೇಗೆ ಬಿಟ್ಟರೆ ಆಟವನ್ನು ಗೆಲ್ಲಬಹುದು ಅಂತ ಯೋಚಿಸಿ ಬದುಕುವುದನ್ನು ತಿಳಿಸುತ್ತದೆ. ಕೌದಿಯ ಸುತ್ತ ಬೇಲಿ ಅಂತ ಹಾಕುತ್ತಾರೆ ಇದರೊಳಗೆ. ನಾಲ್ಕು ಕಡೆಯಲ್ಲಿ ಬಟ್ಟೆ ಹಾಕಿರುತ್ತೇನೆ. ಯಾರಾದರೂ ಬರಬೇಕಾದರೆ ಒಪ್ಪಿಗೆ ತೆಗೆದುಕೊಂಡು ಬರಬೇಕು. ಅದು ಕೌದಿಯ ಮಧ್ಯದ ಕೇಂದ್ರ ಬಿಂದುವಿನಲ್ಲಿ ಸೇರಿಕೊಳ್ಳುತ್ತದೆ. ಒಂದು ಮನೆಯಲ್ಲಿ ನಾಲ್ಕು ಜನರು ಅಕ್ಕ ತಂಗಿ, ಅಣ್ಣ ತಮ್ಮಂದಿರು ಎಲ್ಲಾ ಇರುತ್ತೇವೆ. ಎಲ್ಲರೂ ಒಂದೊಂದು ದಿಕ್ಕಿನಿಂದ ಹೋಗುತ್ತೇವೆ. ಹೋಗಿ ಏನೇ ಆಗಿದ್ದರೂ ಕೊನೆಗೆ ಎಲ್ಲರೂ ಅಲ್ಲಿಗೇ ಸೇರಬೇಕು ಎನ್ನುವ ಅರ್ಥ. ಇಲ್ಲಿಂದಲೇ ಹುಟ್ಟಿರುತ್ತೇವೆ ಕೊನೆಗೆ ಇಲ್ಲಿಗೇ ಬಂದು ಸೇರಬೇಕು ಎನ್ನುವ ಭಾವ ಎಂದು ಅವರು ಹಾಕುವ ಚಿತ್ತಾರಗಳ ಬಗ್ಗೆ ವಿವರಿಸಿದರು. ಅಬ್ಬಾ ಇದು ಎಂತಹ ಪರಿಕಲ್ಪನೆ.

ಬೆಳಗ್ಗೆ ನಾಲ್ಕಕ್ಕೆ ಎದ್ದು ಮನೆಗೆಲಸ ಅಡುಗೆ ಮಾಡಿ ಎಂಟು ಗಂಟೆಯಷ್ಟೊತ್ತಿಗೆ ಎಲ್ಲಾ ಕೆಲಸ ಮುಗಿಸಿ ಕೂತರೆ ನಾನು ನನ್ನ ಕೌದಿ. ಈಗೆಲ್ಲ ನಾನು ಕೌದಿ ಹೊಲೆಯುವಾಗ ಒಂದೇ ಕಡೆ ನೋಡಿ ನೋಡಿ ಕಣ್ಣು ಹಾಳಾಗುತ್ತದೆ, ಹೊಲಿಗೆ ಹತ್ತಿರ ಹತ್ತಿರಕ್ಕೆ ಹಾಕಿ ದಾರ ಎಳೆಯುವಾಗ ಬೆರಳೆಲ್ಲ ಒಳಗೆ ಹೋಗಿದೆ, ತುಂಬ ಹೊತ್ತು ಕೂರಲು ಶಕ್ತಿ ಬೇಕು. ಸಾಕು ಇಷ್ಟು ಮಾಡಿದ್ದೀಯ ಬಿಡು ಎನ್ನುತ್ತಾರೆ ಮಕ್ಕಳು. ನನಗೆ ಬಿಪಿ, ಮಧುಮೇಹ, ಬೆನ್ನುನೋವು ಏನೂ ಇಲ್ಲ. ನಾನು ಇರುವ ತನಕ ಕೌದಿ ಹೊಲೆಯುತ್ತೇನೆ. ಸುಮ್ಮನೆ ಕೂತು ಏನು ಮಾಡಬೇಕು ಎನ್ನುವ ದುಂಡಮ್ಮ ಅವರ ಮಾತು ಅವರಿಗಿರುವ ಕೌದಿ ಕಲೆಯ ಪ್ರೀತಿಯನ್ನು ತೋರಿಸುತ್ತದೆ.

ಅಮ್ಮ ಹೊಲೆದ ಕೌದಿಯಲ್ಲಿ ಆಪ್ತ ಭಾವ. ಅಮ್ಮ ಸದಾ ಜೊತೆಗಿದ್ದಾಳೆ ಎನ್ನುವ ಭಾವ ನನ್ನನ್ನು ಸದಾ ಕಾಡುತ್ತದೆ. ಕೌದಿ ಹೊದ್ದುಕೊಂಡರೆ ನಾವು ಚಿಕ್ಕವರಿದ್ದಾಗ ಅಮ್ಮ ಹೇಳುತ್ತಿದ್ದ ಕತೆಗಳು ನಮ್ಮ ಬಾಲ್ಯದ ನೆನಪುಗಳನ್ನು ಮತ್ತೆ ಮರುಕಳಿಸುತ್ತದೆ. ಕೌದಿ ಬೇಸಿಗೆಯಲ್ಲಿ ತಣ್ಣನೆಯ, ಶೀತದಲ್ಲಿ ಬೆಚ್ಚನೆಯ ಹಿತವನ್ನು ಕೊಡುತ್ತದೆ ಎನ್ನುತ್ತಾರೆ ಅವರ ಮಗಳು ಶಕುಂತಲಾ ದೇವರಾಜ್. ಆಧುನಿಕ ಜಗತ್ತಿನ ಅಬ್ಬರದಲ್ಲಿ ನಾವೆಲ್ಲ ಮಾರು ಹೋಗಿದ್ದೇವೆ. ಅದ್ಭುತವಾದ ಕೌದಿ ಕಲೆ ಮರೆಯಾಗದಿರಲಿ. ದುಂಡಮ್ಮಜ್ಜಿಯ ಉತ್ಸಾಹ, ಅಚ್ಚುಕಟ್ಟುತನ, ಮುಗ್ಧ ಪ್ರೀತಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ. ಕೌದಿಯೊಂದಿಗೆ ಅಮ್ಮ ಯಾವಾಗಲೂ ಜೊತೆಯಿರಲಿ.

ಪ್ರತಿಕ್ರಿಯೆಗಾಗಿ : tv9kannadadigital@tv9.com 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ