Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’
ಹಲಗುವೇಷ ಕಲಾವಿದರಾದ ಯಲ್ಲಪ್ಪ, ಚಂದಪ್ಪ, ದೊಡ್ಡ ವೀರೇಶ, ಶಂಕರ, ರಮೇಶ

Hagalu Vesha : ಇವರ ಜಾಡು ಹಿಡಿದು ಹೊರಟಾಗ ಬೆಂಗಳೂರಿನ ಸಿಂಗಸಂದ್ರದ ಇಂದಿರಾ ಪಾರ್ಕ್​ನ ಬಳಿ ಹದಿಮೂರು ಕುಟುಂಬಗಳು ವಾಸವಾಗಿದ್ದ ಟೆಂಟ್​ ಸಿಕ್ಕವು. ಬುಡಗ ಜಂಗಮ, ಸುಡಗಾಡು ಸಿದ್ಧರ ಸಮುದಾಯಕ್ಕೆ ಸೇರಿದ ಇವರು ಮೂಲತಃ ರಾಯಚೂರು ಜಿಲ್ಲೆಯ ಹಸಮನಕಲ್ ಗ್ರಾಮದವರು.

ಶ್ರೀದೇವಿ ಕಳಸದ | Shridevi Kalasad

|

Apr 14, 2022 | 11:38 AM

ಹಾದಿಯೇ ತೋರಿದ ಹಾದಿ | Haadiye Torida Haadi :  ಬೆಂಗಳೂರಿನ ಸದಾಶಿವನಗರದ ಸಿಗ್ನಲ್ಲಿನಲ್ಲಿ ಆಕರ್ಷಕವಾಗಿ ಗಮನಸೆಳೆದದ್ದು ಆಂಜನೇಯನ ವೇಷದಲ್ಲಿ ಸುಡುಬಿಸಿಲಿನಲ್ಲೂ ಬರಿಗಾಲಿನಲ್ಲಿ ನಡೆದುಹೋಗುತ್ತಿದ್ದ ಶಂಕರ್. ಅಳಿವಿನಂಚಿನಲ್ಲಿರುವ ಈ ಹಗಲುವೇಷ ಕಲಾವಿದರು ಅಪರೂಪಕ್ಕೆ ನೋಡಲು ಸಿಕ್ಕಿದ್ದು ತುಂಬ ಖುಷಿ ಅನ್ನಿಸಿತು. ಇದಕ್ಕೂ ಮುಂಚೆ ಚಿಕ್ಕವರಿದ್ದಾಗ ಇವರನ್ನು ನೋಡುತ್ತಿದ್ದೆವು. ನಮ್ಮ ಸಂಸ್ಕೃತಿ, ನಮ್ಮ ನಾಡಿನ ಪುರಾಣ ಕಾಲದ ಕಥೆಗಳನ್ನು ತಮ್ಮದೇ ವೇಷ ಭೂಷಣಗಳ ವೈಶಿಷ್ಟ್ಯ ಮತ್ತು ಅಭಿನಯದಿಂದ ಇವರು ಪಾತ್ರಗಳಿಗೆ ಜೀವ ತುಂಬುವ ಬಂದಿದ್ದಾರೆ. ಇವರ ಜಾಡು ಹಿಡಿದು ಹೊರಟಾಗ ಬೆಂಗಳೂರಿನ ಸಿಂಗಸಂದ್ರ, ಇಂದಿರಾ ಪಾರ್ಕ್​ನ ಸಮೀಪದಲ್ಲಿ ಟೆಂಟ್ ಹಾಕಿಕೊಂಡು ಸುಮಾರು ಹದಿಮೂರು ಕುಟುಂಬಗಳು ವಾಸವಿದ್ದವು. ಬುಡಗ ಜಂಗಮ, ಸುಡಗಾಡು ಸಿದ್ಧರ ಸಮುದಾಯಕ್ಕೆ ಸೇರಿದ ಇವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಸಮನಕಲ್ ಗ್ರಾಮದವರು. ಅಲ್ಲಿದ್ದ ಹಿರಿಯ ಜನಪದ ಕಲಾವಿದರಾದ ಯಲ್ಲಪ್ಪ. ಕೆ. ಅವರು ನನ್ನೊಂದಿಗೆ ಮಾತಿಗಿಳಿದಾಗ… ಜ್ಯೋತಿ. ಎಸ್, ಸಿಟೆಝೆನ್ ಜರ್ನಲಿಸ್ಟ್​, (Jyothi S)

(ಹಾದಿ 14)

ನಮ್ಮ ತಾತ, ಮುತ್ತಾತನ ಕಾಲದಿಂದಲೂ ಬಳುವಳಿಯಾಗಿ ಬಂದಿರುವ ಕಲೆ ಈ ಹಗಲುವೇಷ. ಬಣ್ಣ ಹಚ್ಚಿ, ವೇಷ ಭೂಷಣಗಳನ್ನು ಹಾಕಿಕೊಂಡು ಹಳ್ಳಿಗಳಲ್ಲಿ ಮನೆಯಿಂದ ಮನೆಗೆ ಊರಿಂದ ಊರಿಗೆ ಅಲೆಯುತ್ತ ಆಂಜನೇಯ, ರಾಮ-ಲಕ್ಷ್ಮಣ, ಸೀತೆ, ರಾವಣ, ಶೂರ್ಪನಖಿ, ಘಟೋದ್ಗಜ, ಭಸ್ಮಾಸುರ, ಮೋಹಿನಿ, ರಾಜನ ಪಾತ್ರ, ಮೇನಕೆ ಇತ್ಯಾದಿ ಪೌರಾಣಿಕ ಪಾತ್ರಗಳನ್ನು ಅಭಿನಯಿಸುತ್ತೇವೆ. ನಮ್ಮ ತಂಡದ ಸದಸ್ಯರಾದ ವೀರಣ್ಣ, ಶಂಕರ್, ಕಾಶಿ ಲಿಂಗಪ್ಪ, ರಮೇಶ್, ಪ್ರಭಾಕರ್, ಚನ್ನಬಸಪ್ಪ ಇನ್ನೂ ಹಲವರು ಹಾರ್ಮೋನಿಯಂ, ತಬಲದೊಂದಿಗೆ ಹಾಡುಗಳನ್ನು ಹಾಡುತ್ತ ಮೆರವಣಿಗೆ ಹೋಗುತ್ತೇವೆ. ಹೊಟ್ಟೆಪಾಡಿಗಾಗಿ ಬೆಂಗಳೂರಿನ ಸಿಂಗಸಂದ್ರದಲ್ಲಿ ಸುಮಾರು ಆರೇಳು ವರ್ಷಗಳಿಂದ ಟೆಂಟ್ ಹಾಕಿಕೊಂಡು ವಾಸವಿದ್ದೇವೆ. ಸಣ್ಣ ಮಕ್ಕಳು ಮಕ್ಕಳು ಶಾಲೆಗೆ ಹೋಗುತ್ತಾರೆ.

ಹಗಲುವೇಷ ಹಾಕಿಕೊಂಡು ಅಭಿನಯಿಸುತ್ತ ಅಂಗಡಿಯಿಂದ ಅಂಗಡಿಗೆ ಹೋಗುತ್ತೇವೆ. ಕೆಲವರು ಹತ್ತಿಪ್ಪತ್ತು ರೂಪಾಯಿ ಕೊಟ್ಟು ಕಳುಹಿಸುತ್ತಾರೆ. ಕೆಲವರು ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಾರೆ. ಹೀಗೆ ಶಂಕರಮಠ, ನಂದಿನಿ ಲೇಔಟ್, ಚನ್ನಸಂದ್ರ, ಕೆಂಗೇರಿ, ಚನ್ನಪಟ್ಟಣ, ರಾಮನಗರ, ಮಾಗಡಿ ಇತ್ಯಾದಿ ಕಡೆಗಳಲ್ಲೆಲ್ಲ ಹೋಗಿ ನಾಟಕವನ್ನೂ ಮಾಡಿದ್ದೇವೆ. ನಮ್ಮಲ್ಲಿ ಎರಡು ತಂಡಗಳಿವೆ. ಒಂದು ಗಂಡುಮಕ್ಕಳದ್ದು. ಮತ್ತೊಂದು ಹೆಣ್ಣುಮಕ್ಕಳದ್ದು. ನಾವು ಹಗಲುವೇಷ ಹಾಕಿ ಅಭಿನಯ, ಹಾಡು, ನಾಟಕ, ಭಜನೆ ಮಾಡಿದ್ರೆ, ಹೆಣ್ಣುಮಕ್ಕಳಾದ ಶಿವಮ್ಮ, ಹನುಮಂತಮ್ಮ, ಹಿರೇಹನುಮಂತಮ್ಮ, ಬಸಮ್ಮ, ರೇಣುಕಮ್ಮ ಮುಂತಾದವರು ಡುಮುಕಿ, ತಂಬೂರಿ ಹಿಡಿದು ಬುರ್ರ ಕಥೆಗಳನ್ನು ಹೇಳುತ್ತಾರೆ. ಜಾನಪದ ಕಥೆಗಳಾದ ಬಾಲನಾಗಮ್ಮ, ಸವದತ್ತಿ ಯಲ್ಲಮ್ಮ, ರೇಣುಕಮ್ಮನ ಕಥೆಗಳನ್ನು ಹೇಳುತ್ತಾರೆ.

ಇದನ್ನೂ ಓದಿ : Siddi Community: ಹಾದಿಯೇ ತೋರಿದ ಹಾದಿ; ಈ ಅಡವಿಜ್ಞಾನಿಯನ್ನು ಸರ್ಕಾರ ಯಾಕೆ ಗಮನಿಸುತ್ತಿಲ್ಲ?

ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಮೇಕ್ಅಪ್ ಮಾಡಿಕೊಂಡು ಆರು ಗಂಟೆ ಹೊತ್ತಿಗೆ ನಮ್ಮ ವೃತ್ತಿಗೆ ನಾವು ಹೊರಡಬೇಕು. ಮೇಕ್ಅಪ್ ಗಾಗಿ ಕೆಂಪು, ಬಿಳಿ, ನೀಲಿ ಬಣ್ಣಗಳನ್ನು ಬಳಸುತ್ತೇವೆ. ಅದನ್ನು ಜಿಂಕ್ ಪೌಡರ್ ಎನ್ನುತ್ತಾರೆ. ಒಂದು ಗ್ರಾಂಗೆ ಹತ್ತು ರೂಪಾಯಿ. ನಾವು ಎಷ್ಟು ತೊಲೆ ಬೇಕು ಅಷ್ಟು ಹಣ ಕೊಟ್ಟು ತರುತ್ತೇವೆ. ನಮಗೆ ನಾವೇ ಮೇಕ್ಅಪ್ ಮಾಡಿಕೊಳ್ಳುತ್ತೇವೆ. ಬಣ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಅದರ ಮೇಲೆ ಪೌಡರ್ ಹಾಕಿಕೊಳ್ಳುತ್ತೇವೆ. ಪಾತ್ರಗಳಿಗೆ ನಾಟಕಕ್ಕೆ ಬೇಕಾಗುವ ಸಾಮಗ್ರಿಗಳನ್ನು ರಟ್ಟು, ತಗಡು ಬಳಸಿ ತಯಾರಿ ಮಾಡುತ್ತೇವೆ. ಕಿರೀಟ, ಮಣಿಕಟ್ಟು, ಗದೆ, ಕತ್ತಿ, ಬಿಲ್ಲು – ಬಾಣ, ಮಣಿಸರ, ಹಾರ, ಎಲ್ಲವನ್ನು ನಾವೇ ಸಿದ್ಧಪಡಿಸುತ್ತೇವೆ. ಬಟ್ಟೆಯೊಂದನ್ನು ಮಾತ್ರ ಟೈಲರ್ ಗೆ ಕೊಟ್ಟು ಹೊಲೆಸುತ್ತೇವೆ.

ಮಳೆಗಾಲ, ಬೇಸಿಗೆಕಾಲ, ಯಾವುದೇ ಕಾಲದಲ್ಲೂ ನಾವು ವೇಷ ಹಾಕಿದರೆ ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಮಾಂಸಾಹಾರ ಸೇವನೆ ಮಾಡುವುದಿಲ್ಲ. ರಾಮನಪದ, ಪುರಂದರದಾಸರ ಪದ, ಬಸವೇಶ್ವರ ಪದ, ಭಜನೆಗಳನ್ನು ಹಾಡುತ್ತೇವೆ. ನಾವು ಕಳವು ಮಾಡುವುದಿಲ್ಲ, ಹಣಕ್ಕಾಗಿ ಪೀಡಿಸುವುದಿಲ್ಲ. ಜನ ಏನಾದರೂ ಕೊಟ್ಟರೆ ತೆಗೆದುಕೊಂಡು ಮುಂದೆ ಹೋಗುತ್ತೇವೆ. ಕೊಟ್ಟರೂ ನಮ್ಮವರೇ ಕೊಡದಿದ್ದರೂ ನಮ್ಮವರೇ. ನಾವು ಭಿಕ್ಷೆಗಾಗಿ ಈ ಕಾಯಕ ಮಾಡುವುದಿಲ್ಲ. ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಈ ವೃತ್ತಿಯನ್ನು ವಂಶಪಾರಂಪರ್ಯವಾಗಿ ಮಾಡುತ್ತ ಬಂದಿದ್ದೇವೆ. ಮೈಸೂರು ದಸರಾದಲ್ಲಿಯೂ ಕೂಡ ಕಾರ್ಯಕ್ರಮವನ್ನು ಕೊಟ್ಟಿದ್ದೇವೆ. ಕೊರೋನದಿಂದ ಕಳೆದ ಎರಡು ವರ್ಷಗಳಿಂದ ಹೋಗಲು ಸಾಧ್ಯವಾಗಲಿಲ್ಲ. ವಾರ ಎಲ್ಲ ಬಿಸಿಲು, ಮಳೆ, ಗಾಳಿ ಎನ್ನದೆ ಸುತ್ತಾಡುತ್ತೇವೆ. ನಮ್ಮ ತಾತ, ಮುತ್ತಾತನ ಕಾಲದಿಂದಲೂ ಒಂದು ನೆಲೆ ಕಾಣದೆ ಕಷ್ಟದಲ್ಲೇ ಬಂದಿದ್ದೇವೆ. ನಮ್ಮಲ್ಲಿ ಸಾಕಷ್ಟು ಜನರು ಅನಕ್ಷರಸ್ಥರೇ ಇರುವುದರಿಂದ ಬೇರೆ ಯಾರೂ ಕೆಲಸ ಕೊಡುವುದಿಲ್ಲ. ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಇತ್ತೀಚೆಗೆ ಕೆಲವರು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಆಗೆಲ್ಲ ಇಷ್ಟೊಂದು ಟಿವಿ, ಸಿನೆಮಾಗಳು ಯಾವುದು ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ಜನರು ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ಜನರು ನಾಟಕಗಳನ್ನು ನೋಡುತ್ತಿದ್ದರು. ಆಗೆಲ್ಲ ನಾಟಕ ಮುಗಿದಮೇಲೆ ಮನೆ ಮನೆಗೆ ಹೋದಾಗ ನಮ್ಮ ಕಲೆಯನ್ನು ಮೆಚ್ಚಿ ಪ್ರೀತಿಯಿಂದ ಬಟ್ಟೆ , ಜೋಳ, ಅಕ್ಕಿ, ಹಸು, ಎಮ್ಮೆ, ಮೇಕೆಗಳನ್ನು ಕೊಡುತ್ತಿದ್ದರು. ಹಿಂದಿನ ಕಾಲದಲ್ಲಿ ಕೆಲವರು ಹೊಲ, ಜಮೀನುಗಳನ್ನು, ಬೆಳ್ಳಿ ಸೀರೆಗಳನ್ನು ದಾನವಾಗಿ ಕೊಟ್ಟದ್ದು ಇದೆ. ಫೋನ್, ಟಿವಿ, ಸಿನೆಮಾ, ಥಿಯೇಟರ್ ಅಂತೆಲ್ಲ ಬಂದಮೇಲೆ ಜನ ನಮ್ಮನ್ನು ನೋಡಿ ಅಯ್ಯೋ ಇವರಾ… ಬರುತ್ತಾರೆ ಹೋಗುತ್ತಾರೆ ಅಂತ ನಮ್ಮ ಕಡೆ ಲಕ್ಷ್ಯ ಕೊಡುವುದಿಲ್ಲ. ಬೆಂಗಳೂರಿನಲ್ಲಂತೂ ಮನೆಗಳ ಹತ್ತಿರ ಹೋದರೆ ಅವರೇ ಓನರ್ ಆಗಿದ್ದರೂ ಓನರ್ ಇಲ್ಲ ಮುಂದೆ ಹೋಗಿ ಅನ್ನುತ್ತಾರೆ.

Haadiye Torida Haadi CItizen Journalist Jyothi S interviewed Hagalu Vesha Artists

ಬುರ್ರ ಕಥಾಮೇಳದ ಬಸಮ್ಮ, ಹನುಮಂತಮ್ಮ, ರೇಣುಕಮ್ಮ, ಯಲ್ಲಮ್ಮ, ಹನುಮಮ್ಮ.

ಇದನ್ನೂ ಓದಿ : Teacher: ಹಾದಿಯೇ ತೋರಿದ ಹಾದಿ; ಆರು ಮಕ್ಕಳ ಶಿಕ್ಷಣಕ್ಕಾಗಿ ದಿನವೂ 120 ಕಿ.ಮೀ ಪ್ರಯಾಣಿಸುವ ಶಿಕ್ಷಕ

ನಾನು ಚಿಕ್ಕವನಿರುವಾಗ ತಂದೆಗೆ ಹುಚ್ಚುನಾಯಿ ಕಡಿದಿತ್ತು ಔಷಧಿ ಕೊಡಿಸಿದರೂ ಗುಣಮುಖವಾಗದೆ ತೀರಿಕೊಂಡರು. ನಂತರ ಅಮ್ಮ ಪಾತ್ರೆ, ಪಗಡೆ, ಬಟ್ಟೆ ವ್ಯಾಪಾರ ಮಾಡಿ ನಮ್ಮನ್ನು ಸಾಕಿದಳು. ನಾನು ನನ್ನ ಎಂಟನೇ ವಯಸ್ಸಿನಿಂದ ವೇಷ ಹಾಕುತ್ತ ಬಂದಿದ್ದೇನೆ. ನಮ್ಮ ಚಿಕ್ಕಪ್ಪಂದಿರು, ಸಂಬಂಧಿಕರಿಂದ ಅಭಿನಯ ಕಲಿತು ಮೊದ ಮೊದಲು ಹೆಣ್ಣು ಪಾತ್ರಗಳನ್ನು ಮಾಡುತ್ತಿದ್ದೆ. ಎಲ್ಲಾ ಪಾತ್ರದ ಪ್ರತಿಯೊಂದು ಸನ್ನಿವೇಶಗಳನ್ನು ಸಂಭಾಷಣೆಯನ್ನು ಕಲಿತು ಆಂಜನೇಯ, ರಾಮ-ಲಕ್ಷ್ಮಣ, ಈಶ್ವರನ ಪಾತ್ರಗಳನ್ನು ಮಾಡುತ್ತಿದ್ದೆ. ನಂತರ ಎಲ್ಲಾ ಪಾತ್ರಗಳನ್ನು ನಿರಾಯಾಸದಿಂದ ಮಾಡುತ್ತೇನೆ. ಮೊದಲು ತೊಗಲುಗೊಂಬೆ, ರಾಜ ರಾಣಿ ಅಂತ ಆಡಿಸುತ್ತಿದ್ದೆವು. ಕಾಲ ಕ್ರಮೇಣ ನಾವೇ ವೇಷ ಹಾಕಿ ಬಣ್ಣ ಹಚ್ಚಿಕೊಂಡು ನಾಟಕಗಳನ್ನು ಮಾಡಲು ಪ್ರಾರಂಭಿಸಿದೆವು.

ನಮ್ಮ ಹಗಲುವೇಷ ಕಲಾವಿದರು ಗದಗ, ಬಳ್ಳಾರಿ, ಹುಬ್ಬಳ್ಳಿ, ರಾಣೆಬೆನ್ನೂರು, ಕೂಡ್ಲಿಗೆ, ಹರಪ್ಪನಹಳ್ಳಿ, ಹಗರಿಬೊಮ್ಮನಹಳ್ಳಿ, ಶಿವಮೊಗ್ಗ, ಭದ್ರಾವತಿ ಎಲ್ಲಾ ಕಡೆ ಇದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯಿಂದ ನಡೆಯುವ ಕಾರ್ಯಕ್ರಮಗಳ ವತಿಯಿಂದ ಕರ್ನಾಟಕದ ಪ್ರತೀ ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಿಂಗಳಿಗೆ ನಾಲ್ಕೈದು ಕಾರ್ಯಕ್ರಮಗಳನ್ನು ಕೊಟ್ಟರೂ ನಾವು ಅಲೆಮಾರಿಗಳಂತೆ ಬೀದಿಬೀದಿ ಸುತ್ತುವುದು ತಪ್ಪುತ್ತದೆ. ನಮ್ಮ ಹೊಟ್ಟೆಪಾಡು ನಡೆಯುತ್ತದೆ. ಅದಲ್ಲದೇ ನಾವು ನಮ್ಮ ದೇಶದ ಸ್ಥಿತಿಗತಿಗಳನ್ನು ನಮ್ಮ ಕಲೆಯ ಮುಖೇನ ಜನರಿಗೆ ತೋರಿಸುತ್ತೇವೆ. ನಮ್ಮ ಕಲೆಯ ಮುಖೇನ ಕೊರೊನಾ ಜಾಗೃತಿಯನ್ನೂ ಮೂಡಿಸಿದ್ದೇವೆ ಎನ್ನುವುದು ಹಗಲುವೇಷ ಕಲಾವಿದರ ಒಟ್ಟು ಅಭಿಪ್ರಾಯ.

ಶತಮಾನಗಳಿಂದಲೂ ಇದೇ ವೃತ್ತಿಯಲ್ಲಿ ಮುಂದುವರೆದು ಊರಿಂದ ಊರಿಗೆ ಅಲೆಯುತ್ತ ಸಾಗುವ ಈ ಅಲೆಮಾರಿ ಸಮುದಾಯದ ಕಲಾವಿದರಿನ್ನೂ ಟೆಂಟಿನಲ್ಲೇ ಎಷ್ಟು ದಿನ ವಾಸಿಸಬೇಕು?

ಹಗಲುವೇಷ, ನಾಟಕ, ಭಜನೆ, ಬುರ್ರ ಕಥೆಗಳು ಇತ್ಯಾದಿ ಯಾವುದೇ ಕಾರ್ಯಕ್ರಮಗಳಿಗಾಗಿ ಇವರನ್ನು ಸಂಪರ್ಕಿಸಿ, ಪ್ರೋತ್ಸಾಹಿಸಿ. 9110260213/9110470212

ಪ್ರತಿಕ್ರಿಯೆಗಾಗಿ :  tv9kannadadigital@gmail.com

ಕಳೆದ ಹಾದಿ : Uttara Kannada: ಹಾದಿಯೇ ತೋರಿದ ಹಾದಿ: ಹೆರಿಗೆ ಮಾಡಿಸಿದಾಗ 15 ರೂಪಾಯಿ ಕೊಡಲೂ ಹಿಂದೇಟು ಹಾಕುವವರಿದ್ದಾರೆ

ಮುಂದಿನ ಹಾದಿ : 21.4.2022

Follow us on

Related Stories

Most Read Stories

Click on your DTH Provider to Add TV9 Kannada