Migraine Problem: ತಲೆ ನೋವಿನ ಕಿರಿಕಿರಿ ಅನುಭವಿಸುತ್ತಿದ್ದೀರಾ? ಮೈಗ್ರೇನ್ ಸಮಸ್ಯೆಗೆ ಮನೆಮದ್ದು ಇಲ್ಲಿದೆ
ತಲೆ ನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಿ. ಅದಾಗ್ಯೂ ಕೆಲವು ಮನೆಮದ್ದುಗಳಿಂದ ಮೈಗ್ರೇನ್‌ನಿಂದ ತಾತ್ಕಾಲಿಕ ಪರಿಹಾರವನ್ನು ಪಡೆಯಬಹುದು.
ತಲೆನೋವು ಪ್ರತಿಯೊಬ್ಬ ಮನುಷ್ಯನಿಗೂ ಬರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆದರೆ ಕೆಲವರಿಗೆ ಮಾತ್ರ ಇಂತಹ ತಲೆನೋವು ಹೆಚ್ಚಾಗಿ ಕಿರಿಕಿರಿ ಉಂಟುಮಾಡುವುದಲ್ಲದೆ ಜೀವನವನ್ನು ತುಂಬಾ ನೀರಸವನ್ನಾಗಿಸುತ್ತದೆ. ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಈ ಮೈಗ್ರೇನ್ ನೋವು ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಅಮೃತಾಂಜನ್ ಮತ್ತು ಜಂಡುಬಾಮ್‌ನಂತಹ ಔಷಧಿಗಳನ್ನು ಹಚ್ಚಿ ಕೆಲವರು ತಾತ್ಕಾಲಿಕ ಪರಿಹಾರವನ್ನು ಪಡೆಯುತ್ತಾರೆ. ಇದನ್ನು ಮೈಗ್ರೇನ್ ಸಮಸ್ಯೆ ಇರುವವರು ತಪ್ಪದೆ ಕಚೇರಿಗೆ ಅಥವಾ ಇನ್ನಾವುದೇ ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಮಲಗುವ ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಗಮನಿಸಬೇಕಾದ ಅಂಶವೆಂದರೆ ತಲೆನೋವು ತೀವ್ರವಾಗುತ್ತಿದ್ದರೆ ಅಥವಾ ದೀರ್ಘಾವಧಿಯಿಂದ ತಲೆ ನೋವು ಸಮಸ್ಯೆ ಇದೆ ಎಂದಾದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅವಶ್ಯಕ. ಅದಾಗ್ಯೂ ಕೆಲವು ಸಲಹೆಗಳೊಂದಿಗೆ ನೀವು ತಾತ್ಕಾಲಿಕ ಪರಿಹಾರವನ್ನು ಪಡೆಯಬಹುದು.
ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರಪಂಚದಾದ್ಯಂತ ಏಳು ಜನರಲ್ಲಿ ಒಬ್ಬರು ಮೈಗ್ರೇನ್‌ನಿಂದ ಬಳಲುತ್ತಿದ್ದಾರೆ. ಮೈಗ್ರೇನ್ ತಲೆನೋವು, ಮುಖ ಅಥವಾ ಕುತ್ತಿಗೆಯ ಮೇಲ್ಭಾಗದಲ್ಲಿ ನೋವನ್ನು ಉಂಟುಮಾಡಬಹುದು. ಆವರ್ತನ ಮತ್ತು ತೀವ್ರತೆಯಲ್ಲೂ ಬದಲಾವಣೆಗಳಿವೆ. ಮೈಗ್ರೇನ್ನ ನೋವು ಬಹಳ ಇದ್ದರೆ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇಂತಹ ಸಮಯದಲ್ಲಿ ವೈದ್ಯಕೀಯ ವೃತ್ತಿಪರರು ಶಿಫಾರಸು ಮಾಡಿದ ಚಿಕಿತ್ಸೆಯನ್ನು ಅನುಸರಿಸುವುದು ಉತ್ತಮ. ಆದರೆ ಈ ಸಮಯದಲ್ಲಿ ನಿಮ್ಮ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಮೈಗ್ರೇನ್ ಮನೆಮದ್ದುಗಳಿವೆ. ಅವುಗಳು ಈ ಕೆಳಗಿನಂತಿವೆ:
ನೀರು: ನಿರ್ಜಲೀಕರಣವು ಕೆಲವು ಜನರಲ್ಲಿ ಮೈಗ್ರೇನ್ ಅನ್ನು ಪ್ರಚೋದಿಸಬಹುದು. ಹೀಗಾಗಿ ಮೈಗ್ರೇನ್ ಸಮಸ್ಯೆ ಇರುವವರು ಸಾಕಷ್ಟ ನೀರು ಕುಡಿಯಬೇಕು.
ಮಸಾಜ್: ಒತ್ತಡ ಮತ್ತು ಮೈಗ್ರೇನ್ ನೋವನ್ನು ನಿವಾರಿಸಲು ಕುತ್ತಿಗೆ ಮತ್ತು ಭುಜದ ಸ್ನಾಯುಗಳನ್ನು ಮಸಾಜ್ ಮಾಡಬಹುದು. ಇದು ನಿಮಗೆ ಒತ್ತಡವನ್ನು ನಿವಾರಿಸಿ ವಿಶ್ರಾಂತಿಯನ್ನು ನೀಡಲಿದೆ.
ಆಹಾರಗಳು: ತಲೆನೋವು ಸಾಮಾನ್ಯವಾಗಿ ನಿಯಂತ್ರಣಕ್ಕೆ ಬರುವುದಿಲ್ಲ. ಆ ಸಮಯದಲ್ಲಿ ಸಂಸ್ಕರಿಸಿದ ಆಹಾರ ಮತ್ತು ಉಪ್ಪಿನಕಾಯಿ ಆಹಾರವನ್ನು ಸೇವಿಸಬಾರದು. ವೇಗವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಮೈಗ್ರೇನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಲ್ಯಾವೆಂಡರ್ ಎಣ್ಣೆ: ಲ್ಯಾವೆಂಡರ್ ಸಾರಭೂತ ತೈಲವನ್ನು ಉಸಿರಾಡುವುದರಿಂದ ಮೈಗ್ರೇನ್‌ನಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಬಹುದು. ಮೈಗ್ರೇನ್ ಬಂದಾಗ ತಕ್ಷಣ ಲ್ಯಾವೆಂಡರ್ ಎಣ್ಣೆಯ ವಾಸನೆಯನ್ನು ಅನುಭವಿಸಬಹುದು ಅಥವಾ ಲ್ಯಾವೆಂಡರ್ ಫ್ಲೇವರ್ ಇರುವ ರೂಮ್ ಫ್ರೆಶ್ನರ್ ಬಳಸಬಹುದು.
ಯೋಗ: ಯೋಗ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನವು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಮೈಗ್ರೇನ್ ನೋವಿಗೆ ಯೋಗವು ಪ್ರಯೋಜನಕಾರಿ ಎಂದು ಕೆಲವೊಂದು ಸಂಶೋಧನೆ ತೋರಿಸಿವೆ. ಈ ಸಣ್ಣ ಪರಿಹಾರಗಳು ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದು.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ