ನಾಗರ ಪಂಚಮಿ ಹಿಂದೂಗಳಿಗೆ ಬಹಳ ಪವಿತ್ರ ಹಬ್ಬ. ಈ ದಿನ ಸಾಮಾನ್ಯವಾಗಿ ನಾಗರ ಕಲ್ಲಿಗೆ ಅಭಿಷೇಕ ಮಾಡಲಾಗುತ್ತದೆ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಳಿಕ ಅಭಿಷೇಕ ಮಾಡಿದಂತಹ ಹಾಲು, ಎಳನೀರನ್ನು ದೇವರ ತೀರ್ಥವೆಂದು ಸೇವನೆ ಮಾಡಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಇದರಲ್ಲಿಯೂ ಕೂಡ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ನಾವು ನಾಗರ ಕಲ್ಲಿಗೆ ಹಾಲು ಹಾಕಿ ಪೂಜೆ ಮಾಡುವುದರಲ್ಲಿ ಏನು ಪ್ರಯೋಜನವಿದೆ ಎಂದುಕೊಳ್ಳುತ್ತೇವೆ ಆದರೆ ಈ ದೇವರ ತೀರ್ಥ ನಾನಾ ರೀತಿಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಈ ಬಗ್ಗೆ ವೆ। ಗಜಾನನ ಭಟ್ ಆರೊಳ್ಳಿ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ನಮ್ಮ ಈ ಭೂಮಂಡಲವನ್ನು ಹೊತ್ತುಕೊಂಡಿರುವ ನಾಗ ದೇವನು ಕಲಿಯುಗದಲ್ಲಿ ನಮಗೆ ಪ್ರತ್ಯಕ್ಷವಾಗಿ ಕಾಣುವ ದೇವರು. ಅಲ್ಲದೆ ನಾಗರಾಜನನ್ನು ನಿಧಿ ರಕ್ಷಣೆ ಮಾಡುವವನು ಎಂದು ಕರೆಯಲಾಗುತ್ತದೆ. ಹಾಗಾಗಿ ಅವನಿಗೆ ಮಾಡಿದಂತಹ ಪೂಜೆಯು ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ. ಹಾಗಾಗಿ ನಾಗರ ಕಲ್ಲಿಗೆ ಮಾಡಿದ ಅಭಿಷೇಕವನ್ನು ಭಕ್ತಿಯಿಂದ ಸೇವನೆ ಮಾಡುವುದರಿಂದ ಬಂದಂತಹ ಕಷ್ಟಗಳು ಪರಿಹಾರವಾಗುತ್ತದೆ. ಅಲ್ಲದೆ ನಾಗ ದೋಷ ಅಥವಾ ಕುಟುಂಬದಲ್ಲಿ ನಾಗನ ತೊಂದರೆ ಇದ್ದರೆ ನಿವಾರಣೆ ಆಗುತ್ತದೆ. ಇದೆಲ್ಲದರ ಜೊತೆಗೆ ನೀವು ನಾಗಮಂಡಲಗಳನ್ನು ಬಿಡಿಸುವಾಗ ಗಂಟುಗಳು ಅಂದರೆ ಹಾವು ಸುತ್ತಿದ ಮಾದರಿಯಲ್ಲಿ ಮಂಡಲ ಬಿಡಿಸುವುದನ್ನು ನೀವು ನೋಡಿರಬಹುದು, ಇದಕ್ಕೆ ಹಲವಾರು ಅರ್ಥಗಳಿದ್ದು, ಪುರಾಣಗಳಲ್ಲಿ ಇದನ್ನು ಸವಿವರವಾಗಿ ವಿವರಿಸಲಾಗಿದೆ. ಹಾಗಾಗಿ ಹಿಂದಿನದಿಂದಲೂ ಬಂದ ನಂಬಿಕೆಗಳ ಪ್ರಕಾರ ನಾಗ ದೇವರಿಗೆ ಮಾಡಿದ ಅಭಿಷೇಕವನ್ನು ಸೇವನೆ ಮಾಡುವುದರಿಂದ ನಮ್ಮ ಗಂಟುಗಳಲ್ಲಿ ಕಂಡು ಬರುವ ನೋವು, ನರ ಸಂಬಂಧಿತ ಕಾಯಿಲೆಗಳು ಮತ್ತು ಹೃದಯದ ಆರೋಗ್ಯ ಸಮಸ್ಯೆ ಮತ್ತು ಇನ್ನಿತರ ರೋಗಗಳಿಂದ ಮುಕ್ತಿ ನೀಡುತ್ತದೆ ಜೊತೆಗೆ ಹಣಕಾಸಿನ ಸಮಸ್ಯೆ ಇರುವವರು ನಾಗ ದೇವನಿಗೆ ವಿಶೇಷ ಪೂಜೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಈ ದೇವಸ್ಥಾನದ ಹುತ್ತದ ಮಣ್ಣು ಚರ್ಮ ರೋಗವನ್ನು ನಿವಾರಿಸುತ್ತದೆ
ಇದಕ್ಕಿಂತ ಮುಖ್ಯವಾಗಿ ಗರ್ಭ ಧರಿಸದ ಮಹಿಳೆಯರು ಅಥವಾ ಗರ್ಭಕ್ಕೆ ಸಂಬಂಧಿಸಿದ ನಾನಾ ರೀತಿಯ ಸಮಸ್ಯೆಗಳನ್ನು ಹೊಂದಿರುವವರು ನಾಗರ ಕಲ್ಲಿಗೆ ಮಾಡಿದ ಅಭಿಷೇಕವನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ದೋಷಗಳಿದ್ದರೂ ಕೂಡ ನಿವಾರಣೆಯಾಗುತ್ತದೆ. ನಾಗನಿಗೆ ಪೂಜೆ ಮಾಡಲು ಹೋಗುವಾಗ ಬಾಳೆಹಣ್ಣು, ಹಾಲು ಅಥವಾ ಎಳನೀರನ್ನು ತೆಗೆದುಕೊಂಡು ಹೋಗಿ. ಬಳಿಕ ನೈವೇದ್ಯವಾಗಿ ಅಭಿಷೇಕ ಆದ ಮೇಲೆ ಅದನ್ನು ಸೇವನೆ ಮಾಡಿ ಎಂದಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Fri, 9 August 24