ವಿಷಯ 1: ರಾತ್ರಿಯ ಆಹಾರವನ್ನು ಕಡ್ಡಾಯವಾಗಿ ಸೇವಿಸಲೇಬೇಕು: ಆಯುರ್ವೇದದಲ್ಲಿ ಅಜೀರ್ಣವಿದ್ದಾಗ ಆಹಾರ ಸೇವಿಸಬಾರದು. ಏಕೆಂದರೆ, ಅದು ರೋಗವನ್ನುಂಟುಮಾಡುತ್ತದೆ ಎಂದು ಉಲ್ಲೇಖಿತವಾಗಿದೆ. ಆದರೆ ರಾತ್ರಿಯ ಆಹಾರವನ್ನು ಸೇವಿಸಲೇಬೇಕು ಎಂಬ ಕಡ್ಡಾಯ ವಾಡಿಕೆ ಇದೆ. ಏಕೆಂದರೆ, ರಾತ್ರಿಯ ನಂತರ ಮುಂದಿನ 12 ರಿಂದ 14 ತಾಸುಗಳವರೆಗೆ ಏನನ್ನೂ ಸೇವಿಸುವುದಿಲ್ಲ. ಇಷ್ಟು ದೀರ್ಘಕಾಲದಲ್ಲಿ ಎಲ್ಲಾ ಅವಯವಗಳಿಗೆ ಬೇಕಾದ ಅತ್ಯಗತ್ಯ ಪೋಷಕಾಂಶಗಳನ್ನು ಪೂರೈಸದಿದ್ದರೆ ಮಾಂಸಖಂಡಗಳು, ಮೇದ-ಮಜ್ಜೆಗಳಲ್ಲಿನ ಶಕ್ತಿಯನ್ನು ವ್ಯಯಿಸಿಕೊಂಡು ಅವಯವಗಳು ಕಾರ್ಯವನ್ನು ನಿರ್ವಹಿಸುತ್ತವೆ.
ವಿಶೇಷವಾಗಿ ಮಾನವನ ಮೆದುಳು ರಾತ್ರಿಯ ವಿಶ್ರಾಂತಿಯಿಂದಲೇ ಚುರುಕಾಗುತ್ತದೆ ಮತ್ತು ಮಜ್ಜೆಯು ಮೆದುಳಿಗೆ ಪೋಷಣೆಯನ್ನು ಮಾಡುತ್ತದೆ. ಹಾಗಾಗಿಯೇ, ರಾತ್ರಿ ನಿದ್ದೆಗೆಟ್ಟವರು, ರಾತ್ರಿಯ ಆಹಾರ ಸೇವಿಸದವರು ಮರುದಿನ ಉತ್ಸಾಹಹೀನರಾಗಿರುತ್ತಾರೆ. ಮೆದುಳಷ್ಟೇ ಅಲ್ಲದೇ ಇನ್ನೂ ಅನೇಕ ಆವಯಗಳ ಸ್ವಾಸ್ಥ್ಯಕ್ಕಾಗಿ, ಪೋಷಣೆಗಾಗಿ, ಸವಕಳಿಯನ್ನು ತಡೆಯುವುದಕ್ಕಾಗಿ ರಾತ್ರಿಯ ಆಹಾರ ಅತ್ಯಂತ ಅನಿವಾರ್ಯ. ಹಾಗಾಗಿಯೇ ನಮ್ಮ ಹಿರಿಯರು ಹೇಳುತ್ತಿದ್ದರು “ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಬಾರದೆಂದು”. ಅವರ ಆ ಜ್ಞಾನ ಸೂಕ್ಷ್ಮತೆಗೆ ಈಗಿನ ವಿಜ್ಞಾನ ಯುಗದ ನಾವು ತಲೆಬಾಗಲೇಬೇಕು.
ಆದರೆ, ರಾತ್ರಿಯ ಆಹಾರದ ವಿಷಯದಲ್ಲಿ ಎರಡನೆಯದಾದ ಈ ಕೆಳಗಿನ ಪ್ರಮುಖ ವಿಚಾರವನ್ನು ಮರೆಯದೇ ಪಾಲಿಸಬೇಕು.
ವಿಷಯ 2: ರಾತ್ರಿಯ ಆಹಾರ ಮಿತವಾಗಿರಲೇಬೇಕು:
ಮೇಲಿನ ವಿಷಯವನ್ನೋದಿ ಸಂಭ್ರಮದಿಂದ ಶಕ್ತಿಯುತ ಆಹಾರಗಳನ್ನಾಗಲೀ, ಹೊಟ್ಟೆ ತುಂಬುವ ಹಾಗೆ ತಿನ್ನುವುದಾಗಲೀ ಮಾಡಿದರೇ ಆರೋಗ್ಯದ ಬದಲು ರೋಗವು, ಆಯು ಹ್ರಾಸತೆಯು (ಅಲ್ಪಾಯು) ಉಂಟಾಗುತ್ತದೆ.
ಅಧಿಕ ಆಹಾರದಿಂದ ಹಾನಿ: ಚಟುವಟಿಕೆಯನ್ನು ಶೇಕಡಾ 90 ರಷ್ಟು ಕಡಿಮೆ ಮಾಡಿಕೊಂಡ ರಾತ್ರಿಯ ಅವಸ್ಥೆಯಲ್ಲಿ ಅಧಿಕ ಶಕ್ತಿಯ, ಅಧಿಕ ಪ್ರಮಾಣದ ಆಹಾರ ಸೇವನೆಯಿಂದ ಖರ್ಚಾಗದೇ ಉಳಿಯುವ ಆಹಾರದ ಶಕ್ತಿಯು ಸಂಚಯವಾಗುತ್ತಾ, ಸ್ಥೌಲ್ಯ ಉಂಟಾಗುತ್ತದೆ. ಕೊಬ್ಬಿನಂಶ ಹೆಚ್ಚುವಿಕೆ, ಪ್ರೊಟೀನ್ ವಿಷ ಶೇಖರಣೆ, ಮೆದುಳಿನ ಜಾಡ್ಯ, ಹೃದಯದ ರಕ್ತನಾಳಗಳು ಕಟ್ಟಿಕೊಳ್ಳುವಿಕೆ, ಕಿಡ್ನಿ ವೈಫಲ್ಯ, ಮಧುಮೇಹ, ಪಿಸಿಓಡಿ ಇನ್ನೂ ಮುಂತಾದ ಅನೇಕಾನೇಕ ರೋಗಗಳು ಉಂಟಾಗುತ್ತವೆ.
ಆದರೆ, ವಿಶೇಷವಾಗಿ ಗಮನಿಸಿ: ಮಕ್ಕಳಿಗೆ ಈ ಸಿದ್ಧಾಂತ ಅನ್ವಯಿಸುವುದಿಲ್ಲ. ಏಕೆಂದರೆ, ಅವರ ಜೀವಕೋಶಗಳು ನಿರಂತರ ಬೆಳವಣಿಗೆಯಲ್ಲಿ ಅಂದರೆ, ಅವಯವಗಳು ಹಿಗ್ಗುವಿಕೆಯಲ್ಲಿ ತೊಡಗಿರುತ್ತವೆ. ರಾತ್ರಿ ಮಕ್ಕಳು ತಿಂದ ಆಹಾರ ಅಜೀರ್ಣವಾಗಲೀ, ರೋಗಕಾರಕವಾಗಿ ಆಗಲೀ ಪರಿಣಮಿಸುವುದಿಲ್ಲ.
16 ವರ್ಷ ಮೇಲ್ಪಟ್ಟವರೆಲ್ಲರೂ ರಾತ್ರಿಯ ಆಹಾರವನ್ನು ಮಿತವಾಗಿ ಸೇವಿಸುವುದರಿಂದ ಅಂದರೆ, ಅರ್ಧ ಪ್ರಮಾಣದಲ್ಲಿ ಸೇವಿಸುವುದರಿಂದ ಅನೇಕ ಲಾಭಗಳನ್ನು ಗಳಿಸಬಹುದು. ಅವುಗಳೆಂದರೆ, ಶರೀರದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗದಿರುವುದು. ಮಧುಮೇಹ ತಡೆಯುವುದು. ಬಿ ಪಿ ಬರುವುದನ್ನು ತಡೆಗಟ್ದುಟುವುದು. ನಿರಂತರ ಉತ್ಸಾಹವನ್ನು ಹೊಂದಿರಬಹುದು. ಸುಖವಾಗಿ ಆಳವಾದ ನಿದ್ದೆಯನ್ನು ಮಾಡಬಹುದು. ಓಜೋ ವರ್ಧನೆಯಿಂದ ಶರೀರ ಕಾಂತಿಯು, ದೀರ್ಘಾಯುವು ನಮ್ಮದಾಗುತ್ತದೆ. (ಬರಹ: ವಾಟ್ಸಪ್ ಸಂದೇಶ)