ಕೇರಳದಲ್ಲಿ ಮತ್ತೆ 2 ಶಂಕಿತ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ಅವರಿಗೆ ನಿಫಾ ವೈರಸ್ (Nipah Virus) ತಗುಲಿರುವ ಅನುಮಾನ ವ್ಯಕ್ತವಾಗಿದೆ. ಈ ನಿಫಾ ವೈರಸ್ ಒಂದು ಝೂನೋಟಿಕ್ ವೈರಸ್ ಆಗಿದ್ದು, ಇದರಿಂದ ತೀವ್ರವಾದ ಉಸಿರಾಟ ಮತ್ತು ನರವೈಜ್ಞಾನಿಕ ಕಾಯಿಲೆ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಿಫಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕಾಗಿದೆ. ಇದು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಮನುಷ್ಯರಿಗೆ ಹರಡುತ್ತದೆ.
ನಿಫಾ ವೈರಸ್ ತಗುಲಿದವರ ಪೈಕಿ ಶೇ.40 ರಿಂದ ಶೇ.75 ರಷ್ಟು ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನಿಫಾ ವೈರಸ್ಗೆ ಯಾವುದೇ ನಿರ್ದಿಷ್ಟ, ನಿಖರವಾದ ಔಷಧಿಯೂ ಇಲ್ಲ. ಹೀಗಾಗಿ ನಿಫಾ ವೈರಸ್ ಡೆಡ್ಲಿ ವೈರಸ್. ಕೊರೊನಾ ವೈರಸ್ಗಿಂತ ನಿಫಾ ವೈರಸ್ ಅತಿ ಅಪಾಯಕಾರಿ. ಕೋವಿಡ್ನಂತೆ ಸಾಂಕ್ರಾಮಿಕವಾಗಿರುವ ನಿಫಾ ವೈರಸ್ ಬಾವಲಿಗಳಿಂದ ಹುಟ್ಟಿಕೊಂಡು ಮನುಷ್ಯರಿಗೆ ಹರಡುತ್ತದೆ. ಇದು ಸಾಮಾನ್ಯವಾಗಿ ಹಂದಿ, ನಾಯಿ, ಕುದುರೆಗಳಿಗೂ ಹರಡುತ್ತದೆ. ಆದರೆ, ಮನುಷ್ಯರಿಗೆ ಹರಡಿದರೆ ಅದು ತೀರಾ ಅಪಾಯಕಾರಿಯಾಗಿರುತ್ತದೆ.
ಇದನ್ನೂ ಓದಿ: ನಿಮ್ಮ ಮೆದುಳಿನ ಆರೋಗ್ಯಕ್ಕೆ ಈ 10 ಅಭ್ಯಾಸಗಳಿಂದ ದೂರವಿರಿ
ನಿಫಾ ವೈರಸ್ ಲಕ್ಷಣಗಳು:
ನಿಫಾ ವೈರಸ್ ತಗುಲಿರುವುದರ ಸಾಮಾನ್ಯ ಲಕ್ಷಣಗಳೆಂದರೆ, ಅನಾರೋಗ್ಯ, ಜ್ವರ, ಮೈ ಕೈ ನೋವು, ಸ್ನಾಯುಗಳ ನೋವು, ತಲೆನೋವು, ಸುಸ್ತು, ವಾಂತಿ. ನಿಫಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ. ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅದೇ ರೀತಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಬಾವಲಿ, ಹಂದಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ. ಬಾವಲಿಗಳು ತಿಂದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Nipah Virus: ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ನಿಫಾ ವೈರಸ್‌ನಿಂದ ಇಬ್ಬರು ಸಾವು, ಸಹಾಯಕ್ಕೆ ಧಾವಿಸಿದ ಕೇಂದ್ರ ಆರೋಗ್ಯ ತಂಡ
ನಿಫಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿದವರಿಂದ ಭೌತಿಕ ಅಂತರ ಕಾಪಾಡಿಕೊಳ್ಳಬೇಕು. ನಿಫಾ ವೈರಸ್ ತಗುಲಿದವರನ್ನು ಭೇಟಿಯಾದ ಬಳಿಕ ಕೈಗಳನ್ನು ತಪ್ಪದೇ ತೊಳೆಯಬೇಕು. ನಿಫಾ ವೈರಸ್ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿರುವ ಪ್ರಾಣಿ, ಪಕ್ಷಿಗಳನ್ನು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಹತ್ಯೆ ಮಾಡಿ ಮಣ್ಣಿನಲ್ಲಿ ಹೂತುಹಾಕಬೇಕು.