Berberine : ಶ್ವಾಸಕೋಶದ ಕ್ಯಾನ್ಸರ್ ವಿಶ್ವದಲ್ಲಿ ಅತ್ಯಂತ ಸಾಮಾನ್ಯವಾದ ರೋಗ ಎಂಬುದು ಸಾಬೀತಾಗಿದೆ. 2020ರಲ್ಲಿ 2.2 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ರೋಗಕ್ಕೆ ತುತ್ತಾಗಿದ್ದು, 1.8 ಮಿಲಿಯನ್ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಮಾರಕ ರೋಗಕ್ಕೆ ಔಷಧಿ ಕಂಡುಹಿಡಿಯುವ ಪ್ರಯತ್ನಗಳು ವಿಶ್ವದೆಲ್ಲೆಡೆ ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಿಡ್ನಿಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ (UTS) ಸಂಶೋಧನಾ ತಂಡ ಇತ್ತೀಚೆಗೆ ವಿಶೇಷವಾಗಿ ಗಮನ ಸೆಳೆದಿದೆ. ಬೆರ್ಬೆರಿನ್ ಎಂಬ ಸಸ್ಯಸಂಯುಕ್ತವನ್ನು ಪ್ರಯೋಗಕ್ಕೆ ಒಳಪಡಿಸಿದ ತಂಡ, ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಇದು ಪರಿಣಾಮಕಾರಿಯಾಗಿದೆ ಎಂದಿದೆ. ಸದ್ಯ ಪ್ರಾಣಿಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗುತ್ತಿದೆ. ಈ ಸಂಶೋಧನಾ ಫಲಿತಾಂಶವನ್ನು ಫಾರ್ಮಾಸ್ಯುಟಿಕ್ಸ್ ಜರ್ನಲ್ ವರದಿ ಮಾಡಿದೆ.
ಬೆರ್ಬೆರಿನ್ ಎಂದರೇನು?
ಬೆರ್ಬೆರಿನ್ ಇದೊಂದು ಸಸ್ಯಸಂಯುಕ್ತ. ಸಾವಿರಾರು ವರ್ಷಗಳಿಂದಲೂ ಇದು ಚೀನಾದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಇದು ಚಾಲ್ತಿಯಲ್ಲಿದೆ. ಬಾರ್ಬೆರ್ರಿ, ಗೋಲ್ಡನ್ಸೀಲ್, ಒರೆಗಾನ್ ದ್ರಾಕ್ಷಿ ಮತ್ತು ಅರಿಶಿಣ ಸೇರಿದಂತೆ ವಿವಿಧ ಸಸ್ಯಗಳ ಮೂಲಕ ಈ ಸಸ್ಯಸಂಯುಕ್ತವನ್ನು ಪಡೆಯಬಹುದಾಗಿದೆ. ಟೈಪ್ 2 ಮಧುಮೇಹಿಗಳಲ್ಲಿ ಗ್ಲುಕೋಸ್ ನಿಯಂತ್ರಣದಲ್ಲಿಡಲು ಈ ಔಷಧಿ ಅತ್ಯಂತ ಸಹಾಯಕಾರಿಯಾಗಿದ್ದು, ಅಂಡಾಶಯದ ಕ್ಯಾನ್ಸರ್, ಗ್ಯಾಸ್ಟ್ರಿಕ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್‌ಗಳ ನಿವಾರಣೆಗೂ ಇದು ಪೂರಕ ಎಂಬುದನ್ನು ಸಂಶೋಧನಾ ತಂಡ ತಿಳಿಸಿದೆ.
ಇದನ್ನೂ ಓದಿ : Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ
ಮಲೇಷಿಯಾದ ಅಂತಾರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಸೌದಿ ಅರೇಬಿಯಾದ ಖಾಸಿಮ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಈ ಸಂಶೋಧನೆಯ ನೇತೃತ್ವವನ್ನು ಸಿಡ್ನಿ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ಡಾ. ಕಮಲ್ ದುವಾ ವಹಿಸಿದ್ದಾರೆ. ‘ಕ್ಯಾನ್ಸರ್ಕಾರಕ ಜೀವಕೋಶಗಳು ಬೆಳವಣಿಗೆಯನ್ನು ಈ ಔಷಧ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಸದ್ಯ ಇದರ ಫಲಾಫಲಗಳನ್ನು ದೃಢಪಡಿಸಿಕೊಳ್ಳಲು ಸದ್ಯ ಪ್ರಾಣಿಗಳ ಮೇಲೆ ಪ್ರಯೋಗಿಸುತ್ತಿದ್ದೇವೆ. ಮುಂದಿನ ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗಗಳಿಗಾಗಿ ಸಿಡ್ನಿ ಮೂಲಕ ಕಂಪೆನಿಗಳೊಂದಿಗೆ ಚರ್ಚಿಸುತ್ತಿದ್ದೇವೆ’ ಎಂದಿದ್ದಾರೆ ಡಾ. ದುವಾ.
ಇದನ್ನು ಓದಿ : Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ
ಈ ಸಂಶೋಧನಾ ತಂಡದಲ್ಲಿ ಡಾ. ಕೇಶವ್ ರಾಜ್ ಪೌಡೆಲ್, ಪ್ರೊ. ಫಿಲಿಪ್ ಎಂ. ಹಾನ್ಸ್‌ಬ್ರೊ ಮತ್ತು ಡಾ. ಬಿಕಾಶ್ ಮಾನಂದರ್ ಮುಂತಾದವರಿದ್ದಾರೆ.
ಸಾಂಪ್ರದಾಯಿಕ ವೈದ್ಯಪದ್ಧತಿಯಲ್ಲಿ ಸಾವಿರಾರು ವರ್ಷಗಳಿಂದಲೂ ಬೆರ್ಬೆರಿನ್ ಸಸ್ಯಸಂಯುಕ್ತವು ಪರಿಣಾಮಕಾರಿ ಔಷಧಿ ಎಂದು ಸಾಬೀತಾದರೂ, ಮತ್ತೀಗ ಇದು ವೈಜ್ಞಾನಿಕವಾಗಿ ದೃಢಪಡುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಪಾಶ್ಚಿಮಾತ್ಯ ದೇಶಗಳ ವೈದ್ಯಕೀಯ ಜಗತ್ತು ಇನ್ನಷ್ಟು ಪ್ರಮಾಣಿಸಿ ನೋಡಲು ಸಂಶೋಧನೆಯ ಮೊರೆ ಹೋಗುವ ಸಾಧ್ಯತೆ ಇದೆ. ಇದು ಜನಸಾಮಾನ್ಯರನ್ನು ತಲುಪಲು ಸಾಕಷ್ಟು ಸಮಯವೂ ಬೇಕಾಗಬಹುದು.