ಇತ್ತೀಚೆಗೆ ಬೆಳ್ಳುಳ್ಳಿ ದರ ದುಬಾರಿಯಾಗಿದ್ದು ಮಾರುಕಟ್ಟೆಯಲ್ಲಿ ಸಿಹಿತಿಂಡಿ, ಹಾಲಿನ ಹೊರತಾಗಿ, ಬೆಳ್ಳುಳ್ಳಿಯಲ್ಲಿಯೂ ಕಲಬೆರಕೆ ಕಂಡುಬಂದಿದೆ. ಸಾಮಾನ್ಯವಾಗಿ ಇದನ್ನು ಚೀನೀ ಅಥವಾ ಚೀನಾ ಬೆಳ್ಳುಳ್ಳಿ ಎಂದು ಕರೆಯಲಾಗುತ್ತದೆ. 2014 ರಲ್ಲಿಯೇ ಇದನ್ನು ನಿಷೇಧಿಸಲಾಗಿದ್ದರೂ, ಭಾರತೀಯ ಮಾರುಕಟ್ಟೆಗಳಿಗೆ ಪ್ರವೇಶಿಸುತ್ತಿದೆ. ವರದಿಗಳ ಪ್ರಕಾರ, ಬೆಳ್ಳುಳ್ಳಿ ದರ ಜಾಸ್ತಿ ಆಗಿರುವುದನ್ನು ಗಮನಿಸಿ ಕೆಲ ಬೆಳ್ಳುಳ್ಳಿ ಸಗಟು ವ್ಯಾಪಾರಸ್ಥರು ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟು ಮಾರಾಟ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕ ಎನ್ನಲಾದ ಈ ಚೀನಾದ ಬೆಳ್ಳುಳ್ಳಿಯ ಮಾರಾಟ ಶಿವಮೊಗ್ಗದ ಗಾಂಧಿಬಜಾರ್, ಉಡುಪಿಯ ಕೆಲವು ಮಾರುಕಟ್ಟೆಗಳಲ್ಲಿ ವ್ಯಾಪಾರವಾಗುತ್ತಿದೆ ಎಂದು ಹೇಳಲಾಗಿದೆ.
ಚೀನಾವು ಅತಿ ಹೆಚ್ಚು ಬೆಳ್ಳುಳ್ಳಿಯನ್ನು ಉತ್ಪಾದನೇ ಮಾಡುತ್ತದೆ ಅಲ್ಲದೆ ಅವುಗಳನ್ನು ಆಧುನಿಕ ಕೃಷಿ ತಂತ್ರಗಳನ್ನು ಬಳಸಿಕೊಂಡು ಬೆಳೆಯಲಾಗುತ್ತದೆ. ಇದರಲ್ಲಿ ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆ ಹೆಚ್ಚಾಗಿರುತ್ತದೆ. ಹಾಗಾಗಿ ಕೃಷಿ ಪದ್ಧತಿಗಳು ಚೀನಾದ ಬೆಳ್ಳುಳ್ಳಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕಾರಣದಿಂದ ಇದು 2014 ರಲ್ಲಿಯೇ ಭಾರತ ಇದರ ಆಮದನ್ನು ನಿಷೇಧಿಸಿತ್ತು. ಇದರ ಹೊರತಾಗಿಯೂ, ನೇಪಾಳ, ಮ್ಯಾನ್ಮಾರ್, ಭೂತಾನ್ ಕಳ್ಳ ಮಾರ್ಗವಾಗಿ ದೇಶ ಮತ್ತು ರಾಜ್ಯಕ್ಕೆ ಚೀನಾ ಬೆಳ್ಳುಳ್ಳಿ ಬರುತ್ತಿದೆ.
ಎರಡೂ ರೀತಿಯ ಬೆಳ್ಳುಳ್ಳಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದರೂ, ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಅತ್ಯಗತ್ಯ.
ಗಾತ್ರ ಮತ್ತು ಬಣ್ಣ: ಚೀನೀ ಬೆಳ್ಳುಳ್ಳಿ ಚಿಕ್ಕದಾಗಿರುತ್ತದೆ, ತಿಳಿ ಬಿಳಿ ಮತ್ತು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಮತ್ತೊಂದೆಡೆ, ಭಾರತೀಯ ಬೆಳ್ಳುಳ್ಳಿ ದೊಡ್ಡದಾಗಿರುತ್ತದೆ.
ಸುವಾಸನೆ ಮತ್ತು ಪರಿಮಳ: ಭಾರತೀಯ ಬೆಳ್ಳುಳ್ಳಿ ಬಲವಾದ, ಸುವಾಸನೆಯನ್ನು ಹೊಂದಿರುತ್ತದೆ. ಚೈನೀಸ್ ಬೆಳ್ಳುಳ್ಳಿ ಹೆಚ್ಚು ಸೌಮ್ಯವಾದ ಪರಿಮಳವನ್ನು ಹೊಂದಿರುತ್ತದೆ. ಹಾಗಾಗಿ ಬೆಳ್ಳುಳ್ಳಿ ಖರೀದಿಸುವಾಗ ಜಾಗರೂಕರಾಗಿರಿ.
ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ಚೀನಿ ಬೆಳ್ಳುಳ್ಳಿ, ನೀವು ಖರೀದಿಸುವ ಬೆಳ್ಳುಳ್ಳಿ ದೇಸಿಯೇ, ಚೀನಿಯೇ ಎಂದು ಗುರುತಿಸುವುದು ಹೇಗೆ?
ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿದ್ದರೂ ಕೂಡ ಚೀನಾದ ಬೆಳ್ಳುಳ್ಳಿ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಕ್ಯಾನ್ಸರ್ ಕಾರಕ ಮತ್ತು ವಿಷಕಾರಿ ಎಂದು ತಜ್ಞರು ಹೇಳುತ್ತಾರೆ. ದೀರ್ಘಕಾಲದ ವರೆಗೆ ಈ ರೀತಿಯ ಬೆಳ್ಳುಳ್ಳಿ ಬಳಸಿದ್ದೇ ಆದಲ್ಲಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಸಂಶೋಧನೆಗಳಿಂದಲೂ ದೃಢ ಪಟ್ಟಿದೆ. ಚೀನಾದ ಬೆಳ್ಳುಳ್ಳಿಯನ್ನು ಆರು ತಿಂಗಳವರೆಗೆ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಲು ಮೀಥೈಲ್ ಬ್ರೋಮೈಡ್ ಹೊಂದಿರುವ ಶಿಲೀಂಧ್ರನಾಶಕದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಚೀನೀ ಬೆಳ್ಳುಳ್ಳಿಯನ್ನು ಹಾನಿಕಾರಕ ಕ್ಲೋರಿನ್ ಬಳಸಿ ಬಿಳುಪುಗೊಳಿಸಲಾಗುತ್ತದೆ ಎನ್ನಲಾಗಿದೆ. ಹಾಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಚೀನೀ ಬೆಳ್ಳುಳ್ಳಿ ಬೆಳೆಯುವ ಸಮಯದಲ್ಲಿ ಇವುಗಳಿಗೆ ಕೀಟನಾಶಕ ಮತ್ತು ರಾಸಾಯನಿಕಗಳನ್ನು ಭಾರೀ ಪ್ರಮಾಣದಲ್ಲಿ ಬಳಸಲಾಗುತ್ತದೆ. ಈ ಸಂಯುಕ್ತಗಳು ಗ್ರಾಹಕರ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಆದರೆ ನಮ್ಮ ಭಾರತೀಯ ಬೆಳ್ಳುಳ್ಳಿ ಕಡಿಮೆ ಪ್ರಮಾಣದ ರಾಸಾಯನಿಕಗಳು ಮತ್ತು ರಸಗೊಬ್ಬರಗಳನ್ನು ಬಳಸಿಕೊಂಡು ಬೆಳೆಯಲಾಗುತ್ತದೆ. ಇದು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ