Rabies: ರೇಬೀಸ್ ತಡೆಗಟ್ಟಲು ಸಾಧ್ಯವೇ?; ಆರೋಗ್ಯ ತಜ್ಞರ ಅಚ್ಚರಿಯ ಉತ್ತರ ಇಲ್ಲಿದೆ

|

Updated on: Mar 22, 2024 | 4:32 PM

ರೇಬೀಸ್ ಅಪಾಯಕಾರಿ ವೈರಸ್ ಆಗಿದ್ದು, ಅದು ಸೋಂಕಿತ ನಾಯಿ ಅಥವಾ ಬೆಕ್ಕು ಕಚ್ಚಿದಾಗ, ಪರಚಿದಾಗ ಮನುಷ್ಯರಿಗೆ ಹರಡುತ್ತದೆ. ಇದು ಮೆದುಳಿಗೆ ಹಾನಿಯನ್ನು ಉಂಟುಮಾಡುತ್ತದೆ. ರೇಬೀಸ್ ಲಸಿಕೆಗಳು ಮತ್ತು ಇತರ ಔಷಧಿಗಳು ಈ ರೋಗಕ್ಕೆ ಚಿಕಿತ್ಸೆ ನೀಡುತ್ತವೆ. ಆದರೆ, ಚಿಕಿತ್ಸೆ ನೀಡದಿದ್ದರೆ ಇದು ಮಾರಕವಾಗಬಹುದು.

Rabies: ರೇಬೀಸ್ ತಡೆಗಟ್ಟಲು ಸಾಧ್ಯವೇ?; ಆರೋಗ್ಯ ತಜ್ಞರ ಅಚ್ಚರಿಯ ಉತ್ತರ ಇಲ್ಲಿದೆ
ರೇಬೀಸ್
Follow us on

ರೇಬೀಸ್‌ (Rabies) ಅತ್ಯಂತ ಮಾರಣಾಂತಿಕ ರೋಗವಾಗಿದೆ. ಇತ್ತೀಚೆಗೆ ಈ ರೋಗದ ಹರಡುವಿಕೆ ಕಡಿಮೆಯಾಗಿದ್ದರೂ ಈ ಕುರಿತು ನಿರ್ಲಕ್ಷ್ಯ ತೋರುವಂತಿಲ್ಲ. ರೇಬೀಸ್​ಗೆ ಒಡ್ಡಿಕೊಂಡ ವ್ಯಕ್ತಿಯು ತಕ್ಷಣದ ವೈದ್ಯಕೀಯ ಆರೈಕೆಯನ್ನು ಪಡೆದರೆ ಮಾತ್ರ ಸಮಸ್ಯೆಯನ್ನು ಗುಣಪಡಿಸಬಹುದು. ರೋಗಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ ನಂತರ ದುರದೃಷ್ಟವಶಾತ್ ಈ ರೇಬೀಸ್ ಅನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ.

ಅಪ್ರಚೋದಿತ ನಾಯಿ ಕಚ್ಚುವಿಕೆಯ ನಂತರ ತ್ವರಿತ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಈ ರೋಗವನ್ನು ತಡೆಯಬಹುದು. ಗಾಯವನ್ನು ಸ್ವಚ್ಛಗೊಳಿಸಲು ಆರೋಗ್ಯ ಕೇಂದ್ರಕ್ಕೆ ತಕ್ಷಣ ತೆರಳಬೇಕು ಮತ್ತು ರೇಬೀಸ್ ಲಸಿಕೆಯನ್ನು ಪಡೆಯಬೇಕು. ಇದರಿಂದ ಭವಿಷ್ಯದಲ್ಲಿ ರೋಗ ಹೆಚ್ಚಾಗುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ರೂಬಿ ಹಾಲ್ ಕ್ಲಿನಿಕ್‌ನ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ. ದೇವಶಿಶ್ ದೇಸಾಯಿ ಟೈಮ್ಸ್‌ ನ್ಯೂಸ್​ಗೆ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ರೇಬೀಸ್ ವಾರ್ಷಿಕವಾಗಿ ಹತ್ತಾರು ಸಾವಿರ ಸಾವುಗಳಿಗೆ ಕಾರಣವಾಗುತ್ತದೆ, ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ರೇಬೀಸ್ ಹೆಚ್ಚಾಗಿದೆ. ಅದರಲ್ಲಿ ಶೇ. 40ರಷ್ಟು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೇಬೀಸ್​ಗೆ ಬಲಿಯಾಗುತ್ತಿದ್ದಾರೆ. ನಾಯಿಗಳು ಮಾನವ ರೇಬೀಸ್ ಸಾವಿನ ಮುಖ್ಯ ಮೂಲವಾಗಿದೆ. ಇದು ಮಾನವರಿಗೆ ಹರಡುವ ರೇಬೀಸ್​ನ ಶೇ. 99ರಷ್ಟು ಪ್ರಕರಣಗಳಲ್ಲಿ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: Migraine: ಬೇಸಿಗೆಯಲ್ಲಿ ಮೈಗ್ರೇನ್ ವಿಪರೀತ ಹೆಚ್ಚಾಗಲು ಕಾರಣ ಇಲ್ಲಿದೆ

ಆ್ಯಂಟಿ ರೇಬೀಸ್ ವ್ಯಾಕ್ಸಿನೇಷನ್:

ಆ್ಯಂಟಿ ರೇಬೀಸ್ ಲಸಿಕೆಯು 4-5 ಇಂಜೆಕ್ಷನ್ ಕೋರ್ಸ್ ಅನ್ನು ಒಳಗೊಂಡಿರುತ್ತದೆ. ಕೆಲವರು ಪಶುವೈದ್ಯರು ಮತ್ತು ಪ್ರಾಣಿ ನಿರ್ವಾಹಕರಂತಹ ರೇಬೀಸ್​ ಸಂಪರ್ಕಕ್ಕೆ ಸುಲಭವಾಗಿ ಬರುವವರು ಮತ್ತು ಕಡಿತದ ಅಪಾಯವನ್ನು ಹೊಂದಿರುವವರಿಗೆ ಈ ಅಪಾಯವನ್ನು ಕಡಿಮೆ ಮಾಡಲು ರೇಬೀಸ್ ಲಸಿಕೆಯ ಪೂರ್ವ-ಎಕ್ಸ್ಪೋಸರ್ ಕೋರ್ಸ್ (3 ಡೋಸ್) ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.

ರೇಬೀಸ್ ಚಿಕಿತ್ಸೆ ಪಡೆಯಲು ಸರಿಯಾದ ಸಮಯ:

ಪ್ರಾಣಿಯಿಂದ ಕಚ್ಚಿಸಿಕೊಂಡ ತಕ್ಷಣ ರೇಬೀಸ್ ಚಿಕಿತ್ಸೆಯನ್ನು ಪಡೆಯಲು ಉತ್ತಮ ಸಮಯ. ಒಮ್ಮೆ ರೇಬೀಸ್ ರೋಗಲಕ್ಷಣಗಳು ಕಾಣಿಸಿಕೊಂಡರೆ, ರೋಗವು ಯಾವಾಗ ಬೇಕಾದರೂ ಮಾರಣಾಂತಿಕವಾಗಬಹುದು. ಆದ್ದರಿಂದ ತ್ವರಿತ ಕ್ರಮವು ಮುಖ್ಯವಾಗಿರುತ್ತದೆ. ಗಾಯವನ್ನು ಸ್ವಚ್ಛಗೊಳಿಸಲು ಮತ್ತು ರೇಬೀಸ್ ಲಸಿಕೆಯನ್ನು ನೀಡಲು ವಿಳಂಬವಿಲ್ಲದೆ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಬಹಳ ಮುಖ್ಯ.

ನಾಯಿ ಕಚ್ಚಿದಾಗ ಏನು ಮಾಡಬೇಕು?:

ಒಮ್ಮೆ ನೀವು ನಾಯಿಯಿಂದ ಕಚ್ಚಿಸಿಕೊಂಡರೆ, ತಕ್ಷಣವೇ ಸೋಪ್ ಮತ್ತು ನೀರಿನಿಂದ ಕನಿಷ್ಠ 15 ನಿಮಿಷಗಳ ಕಾಲ ಗಾಯವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಶುದ್ಧೀಕರಣದ ನಂತರ, ಚಿಕಿತ್ಸೆಗಾಗಿ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆಯುವುದು ಕಡ್ಡಾಯವಾಗಿದೆ. ರೇಬೀಸ್ ಸೋಂಕಿನ ಬೆಳವಣಿಗೆಯನ್ನು ತಡೆಗಟ್ಟಲು ರೇಬೀಸ್ ವಿರೋಧಿ ಪ್ರತಿಕಾಯಗಳ ಸಂಭವನೀಯ ಸ್ಥಳೀಯ ಒಳನುಸುಳುವಿಕೆಯೊಂದಿಗೆ ರೇಬೀಸ್ ವ್ಯಾಕ್ಸಿನೇಷನ್​ಗಳನ್ನು ಪಡೆಯುವುದನ್ನು ಮರೆಯಬಾರದು. ಇದು ರೇಬೀಸ್ ಹರಡುವಿಕೆ ಮತ್ತು ರೋಗದ ಪ್ರಗತಿಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Women Health: ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತಲೆನೋವು ಬರಲು ಕಾರಣವೇನು?

ರೇಬೀಸ್​ನ ಲಕ್ಷಣಗಳು:

ರೇಬೀಸ್ ಎಂಬುದು ಸೋಂಕಿತ ಪ್ರಾಣಿಯ ಲಾಲಾರಸದ ಮೂಲಕ, ಅದರಲ್ಲೂ ಹೆಚ್ಚಾಗಿ ಬೀದಿ ನಾಯಿ, ಬೆಕ್ಕು ಅಥವಾ ಬಾವಲಿಗಳು ಕಚ್ಚುವುದರಿಂದ ಹರಡುತ್ತದೆ. ರೇಬೀಸ್ ವೈರಸ್ ಸಸ್ತನಿಗಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ಮೆದುಳಿನಲ್ಲಿ ರೋಗವನ್ನು ಉಂಟುಮಾಡುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ. ಜನರಲ್ಲಿ ರೇಬೀಸ್‌ನ ರೋಗಲಕ್ಷಣಗಳು ಉಂಟಾದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು. ಸೋಂಕಿತ ಬೀದಿ ನಾಯಿ ಅಥವಾ ಬೆಕ್ಕು ಕಚ್ಚಿದ ನಂತರ, ರೋಗಲಕ್ಷಣಗಳನ್ನು ಉಂಟುಮಾಡುವ ಮೊದಲು ರೇಬೀಸ್ ವೈರಸ್ ಮೆದುಳಿಗೆ ಪ್ರಯಾಣಿಸಬೇಕಾಗುತ್ತದೆ. ಅದರ ಕಾಲಾವಧಿಯು ವಾರಗಳಿಂದ ತಿಂಗಳುಗಳವರೆಗೆ ಇರುತ್ತದೆ. ಇದರ ಆರಂಭಿಕ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಮತ್ತು ಸಾಮಾನ್ಯ ರೀತಿಯ ವೈರಲ್ ಸೋಂಕನ್ನು ಹೋಲುತ್ತವೆ. ಶೀಘ್ರದಲ್ಲೇ ಈ ರೋಗವು ಮೆದುಳಿಗೆ ಹರಡುತ್ತದೆ.

ರೇಬೀಸ್ ನಿಮ್ಮ ಕೇಂದ್ರ ನರಮಂಡಲಕ್ಕೆ ಬಂದಾಗ, ನೀವು ಜ್ವರ ತರಹದ ರೋಗಲಕ್ಷಣಗಳನ್ನು ಅನುಭವಿಸಬಹುದು. ಅಂತಿಮ ಹಂತದಲ್ಲಿ, ಇದು ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅವುಗಳಲ್ಲಿ ಜ್ವರ, ಸುಸ್ತು, ಕಚ್ಚಿದ ಗಾಯದ ಸುಡುವಿಕೆ, ತುರಿಕೆ, ಜುಮ್ಮೆನಿಸುವಿಕೆ, ನೋವು ಅಥವಾ ಮರಗಟ್ಟುವಿಕೆ, ಕೆಮ್ಮು, ಗಂಟಲು ಕೆರತ, ಸ್ನಾಯು ನೋವು, ವಾಕರಿಕೆ ಮತ್ತು ವಾಂತಿ, ಅತಿಸಾರ, ಆಕ್ರಮಣಶೀಲತೆ, ಚಡಪಡಿಕೆ, ಭ್ರಮೆಗಳು, ಸ್ನಾಯು ಸೆಳೆತ, ವೇಗದ ಉಸಿರಾಟ, ಅತಿಯಾದ ಜೊಲ್ಲು ಸುರಿಸುವುದು, ಮುಖದ ಪಾರ್ಶ್ವವಾಯು, ನೀರಿನ ಭಯ ಮುಖ್ಯವಾದ ಲಕ್ಷಣಗಳಾಗಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Fri, 22 March 24