Women Health: ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತಲೆನೋವು ಬರಲು ಕಾರಣವೇನು?
Migraine: ತಲೆನೋವು ಪ್ರತಿಯೊಬ್ಬರನ್ನೂ ಆಗಾಗ ಕಾಡುವ ಆರೋಗ್ಯ ಸಮಸ್ಯೆ. ಆದರೆ, ಬಹುತೇಕ ಜನರು ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವು ಜನರು ತಲೆನೋವಿಗೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ, ತಲೆನೋವು ಅತಿಯಾದರೆ ಅದು ಹಲವು ರೀತಿಯ ಇತರೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಮೈಗ್ರೇನ್ ಸಮಸ್ಯೆಗೆ ಕಾರಣವೇನು?
ಅತಿಯಾದ ತಲೆನೋವನ್ನು ಮೈಗ್ರೇನ್ (Migraine) ಎಂದು ಹೇಳಲಾಗುತ್ತದೆ. ಇದು ಕೆಲವೊಮ್ಮೆ ತಲೆಯ ಒಂದು ಭಾಗದಲ್ಲಿ ಗೋಚರವಾದರೆ ಇನ್ನು ಕೆಲವೊಮ್ಮೆ ಇಡೀ ತಲೆಯನ್ನೇ ಆವರಿಸಿಕೊಳ್ಳುತ್ತದೆ. ಅಧ್ಯಯನವೊಂದರ ಪ್ರಕಾರ, ಪುರುಷರಿಗಿಂತಲೂ ಮಹಿಳೆಯರಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಮೈಗ್ರೇನ್ 3 ಪಟ್ಟು ಹೆಚ್ಚಾಗಿ ಕಂಡುಬರುತ್ತದೆ ಎಂಬುದರ ಬಗ್ಗೆ ತಜ್ಞರು ತಿಳಿಸಿದ್ದು, ಇದಕ್ಕೆ ಹಾರ್ಮೋನುಗಳ ಬದಲಾವಣೆಗಳು ಕಾರಣ ಎಂದು ಹೇಳಿದ್ದಾರೆ.
ಮೈಗ್ರೇನ್ ಒಂದು ರೀತಿಯ ತೀವ್ರವಾದ ತಲೆನೋವು ಆಗಿದ್ದು ಅದು ಸಾಮಾನ್ಯವಾಗಿ ಒಂದು ಬದಿಯಲ್ಲಿ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ತಲೆಯ ಹಿಂಭಾಗದಲ್ಲಿ ಹೆಚ್ಚು ನೋವನ್ನು ಉಂಟುಮಾಡುತ್ತದೆ. ತಲೆ ಸಿಡಿದೇ ಹೋಗುತ್ತದೆ ಎಂಬ ರೀತಿಯ ಭಾವನೆಯನ್ನು ಉಂಟುಮಾಡುತ್ತದೆ. ಇದು ವಾಕರಿಕೆ ಅಥವಾ ವಾಂತಿಯನ್ನು ಕೂಡ ಉಂಟುಮಾಡಬಹುದು. ಧ್ವನಿ ಮತ್ತು ಶಬ್ದಕ್ಕೆ ಕಿರಿಕಿರಿಯುಂಟುಮಾಡಬಹುದು. ಇದರಿಂದ ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ.
ಇದನ್ನೂ ಓದಿ: ತಲೆನೋವು ತಡೆಯೋಕೆ ಆಗುತ್ತಿಲ್ಲವೇ?; ಈ ಪಾನೀಯಗಳನ್ನು ಸೇವಿಸಿ
ಮೈಗ್ರೇನ್ ಏಕಾಗ್ರತೆಯ ತೊಂದರೆಯನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ದೀರ್ಘಕಾಲದ ತಲೆನೋವಾಗಿದ್ದು, 4 ಗಂಟೆಗಳಿಗಿಂತ ಹೆಚ್ಚು ಕಾಲ, ಕೆಲವೊಮ್ಮೆ 72 ಗಂಟೆಗಳವರೆಗೂ ಇರುತ್ತದೆ. “ಮೈಗ್ರೇನ್ ತುಂಬಾ ಸಾಮಾನ್ಯವಾದ ತಲೆನೋವು. ಜನಸಂಖ್ಯೆಯ ಸುಮಾರು ಶೇ. 15ರಷ್ಟು ಜನರ ಮೇಲೆ ಈ ಮೈಗ್ರೇನ್ ಪರಿಣಾಮ ಬೀರುತ್ತದೆ. ಮೈಗ್ರೇನ್ ಹೊಂದಿರುವ ಜನರು ತಮ್ಮ ಕುಟುಂಬದಲ್ಲಿ ಮೈಗ್ರೇನ್ ಹೊಂದಿರುವವರ ಇತಿಹಾಸವನ್ನು ಹೊಂದಿರುತ್ತಾರೆ. ವಂಶವಾಹಿನಿಯಾಗಿಯೂ ಈ ಮೈಗ್ರೇನ್ ಬರುವ ಸಾಧ್ಯತೆ ಇರುತ್ತದೆ. ಮೈಗ್ರೇನ್ ಮಹಿಳೆಯರ ಮುಟ್ಟಿನ ಅವಧಿಯಲ್ಲಿ ತೀವ್ರವಾಗಿ ತೊಂದರೆ ಕೊಡುತ್ತದೆ.
ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯ ನರವಿಜ್ಞಾನ ವಿಭಾಗದ ಪ್ರಧಾನ ನಿರ್ದೇಶಕ ಡಾ. ಪ್ರವೀಣ್ ಗುಪ್ತಾ ಮಹಿಳೆ ಮತ್ತು ಪುರುಷರ ಅನುಪಾತವು ಒಂದಕ್ಕೆ ಮೂರು ಪಟ್ಟು ಹೆಚ್ಚು. ಅಂದರೆ, ಪುರುಷರಿಗಿಂತ ಮಹಿಳೆಯರಲ್ಲಿ ಮೈಗ್ರೇನ್ ಸಮಸ್ಯೆ 3 ಪಟ್ಟು ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಾನಸಿಕ ಒತ್ತಡದಿಂದ ಮೈಗ್ರೇನ್ ಬರುತ್ತಾ?
ಪುರುಷರಿಗಿಂತ ಮಹಿಳೆಯರು ಏಕೆ ಹೆಚ್ಚು ಮೈಗ್ರೇನ್‌ನಿಂದ ಬಳಲುತ್ತಾರೆ?:
ಮಹಿಳೆಯರ ದೇಹದ ಹಾರ್ಮೋನುಗಳ ಬದಲಾವಣೆಯಿಂದಾಗಿ ಮಹಿಳೆಯರಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚು. ಈಸ್ಟ್ರೊಜೆನ್ ಎಂದು ಕರೆಯಲ್ಪಡುವ ಸ್ತ್ರೀ ಲೈಂಗಿಕ ಹಾರ್ಮೋನುಗಳು ಮೈಗ್ರೇನ್‌ಗೆ ಮುಖ್ಯ ಕಾರಣವಾಗಿದೆ. ಹಾರ್ಮೋನ್ ಮಾತ್ರೆಗಳನ್ನು ಸೇವಿಸುವ ಅಥವಾ ಹಾರ್ಮೋನುಗಳ ಗರ್ಭನಿರೋಧಕಗಳನ್ನು ಬಳಸುವ ಮಹಿಳೆಯರಲ್ಲಿ ಮೈಗ್ರೇನ್ ಅಪಾಯ ಹೆಚ್ಚು. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2019ರ ಪ್ರಕಾರ, ವಿಶ್ವಾದ್ಯಂತ ಮೈಗ್ರೇನ್ 18-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿರುತ್ತದೆ. ಇದು ಲೈಂಗಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಮೈಗ್ರೇನ್‌ಗೆ ಸಂಬಂಧಿಸಿದ ಆತಂಕ ಮತ್ತು ಖಿನ್ನತೆಯನ್ನು ಹೊಂದಿರುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ