ಬೇಸಿಗೆ ಕಳೆದು ಚಳಿಗಾಲ ಬಂತೆಂದರೆ ಸಾಕು ಜೀವನ ವಿಧಾನ, ಬಟ್ಟೆ, ಆಹಾರ ಪದ್ಧತಿ ಮಾತ್ರವಲ್ಲ, ದೇಹದ ಚರ್ಮವು ಋತುಮಾನಕ್ಕೆ ಬದಲಾಗುತ್ತದೆ. ಆದ್ದರಿಂದ ಈ ಚಳಿಗಾಲದಲ್ಲಿ ತ್ವಚೆಯ ರಕ್ಷಣೆಯು ಅಗತ್ಯವಾಗಿದೆ. ಇಂದಿನ ಒತ್ತಡದ ಜೀವನ ಪದ್ಧತಿ, ಕೊಳಕು, ಮಾಲಿನ್ಯ ಮತ್ತು ಸೂರ್ಯನ ಕಿರಣಗಳಿಂದ ಚರ್ಮವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ತ್ವಚೆಯು ಸ್ವಲ್ಪ ಒಣಗುತ್ತದೆ ಮತ್ತು ಹೊಳಪನ್ನು ಕಳೆದುಕೊಂಡಿರುತ್ತದೆ. ತಂಪಾದ ಗಾಳಿಯು ಚರ್ಮದ ತೇವಾಂಶದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದು ಚರ್ಮದ ಮೃದುತ್ವ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಆದ್ದರಿಂದ, ಚಳಿಗಾಲದ ಸಮಯದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು? ಎಂಬ ಪ್ರಶ್ನೆಗೆ ಪರಿಹಾರ ಕ್ರಮಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ಇದನ್ನು ನೀವು ಒಮ್ಮೆ ಬಳಸಿ ನೋಡಿ, ತ್ವಚೆಯ ಆರೋಗ್ಯ ಕಾಪಾಡಿ. ಚಳಿಗಾಲದ ರಾತ್ರಿಯ ಸಮಯ ತ್ವಚೆಯ ಆರೈಕೆಗಾಗಿ ಮಾಡಬೇಕಾದ ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ.
ಹಾಲು:
ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ಬಿರುಕು ಬಿಡುವ ಸಾಧ್ಯತೆ ಇದೆ. ಆದ್ದರಿಂದ ಚರ್ಮದ ರಕ್ಷಣೆಗಾಗಿ ಹಾಲಿನ ಕೆನೆ ಅಥವಾ ಹಾಲಿನಲ್ಲಿ ಮುಖ ತೊಳೆಯಿರಿ. ಆದಷ್ಟು ನೀವು ದಿನ ಬಳಸುವ ಮೇಕ್ಅಪ್ ಅನ್ನು ಆಳವಾಗಿ ಸ್ವಚ್ಛಗೊಳಿಸುವುದು ಅಗತ್ಯ. ಎಕೆಂದರೆ ಸೌಂದರ್ಯ ವರ್ಧಕಗಳಲ್ಲಿ ಹೆಚ್ಚಿನ ರಾಸಾಯನಿಕಗಳನ್ನು ಬಳಸುವುದ್ದರಿಂದ ಇದು ನಿಮ್ಮ ತ್ವಚೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು. ಆದ್ದರಿಂದ ಪ್ರತಿದಿನ ರಾತ್ರಿ ಮಲಗುವ ಮನ್ನ ಚೆನ್ನಾಗಿ ಮುಖ ತೊಳೆದು, ಹಾಲಿನ ಕನೆಯನ್ನು ಮುಖಕ್ಕೆ ಹಚ್ಚಿ. ಈ ಹಂತಕ್ಕಾಗಿ, ನೀವು ತೆಂಗಿನ ಎಣ್ಣೆ ಅಥವಾ ಹಾಲನ್ನು ಸೇರಿಸುವ ಮೂಲಕ ಓಟ್ಸ್ ಅಥವಾ ಕಾಫಿ ಪುಡಿಯನ್ನು ಬಳಸಿಕೊಂಡು ಮುಖದ ಮೇಲೆ ಮೆತ್ತಗೆ ಸ್ಕ್ರಬ್ ಮಾಡಿ. ಇದು ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಆರೋಗ್ಯವಾಗಿಡಲು ಸಹಾಯಕವಾಗಿದೆ.
ತ್ವಚೆಗೆ ಮಸಾಜ್ ಮಾಡಿ
ಪ್ರತಿದಿನ ಚರ್ಮವನ್ನು ಮಸಾಜ್ ಮಾಡಿ. ಇದು ನಿಮ್ಮ ದೇಹದಲ್ಲಿನ ರಕ್ತ ಪರಿಚಲನೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮುಖವನ್ನು ಮಸಾಜ್ ಮಾಡಲು ತೆಂಗಿನ ಎಣ್ಣೆ, ಅರ್ಗಾನ್ ಎಣ್ಣೆ ಅಥವಾ ಗುಲಾಬಿ ಎಣ್ಣೆಯನ್ನು ಬಳಸಿ. ಎಣ್ಣೆಯ ಬದಲಾಗಿ ಅಲೋವೆರಾ ಜೆಲ್ ಕೂಡ ಬಳಸಬಹುದು. ಪ್ರತಿದಿನ 15 ನಿಮಿಷಗಳ ಕಾಲ ಎಣ್ಣೆ ಅಥವಾ ಜೆಲ್ನಿಂದ ಮಸಾಜ್ ಮಾಡಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಮಾಯಿಶ್ಚರೈಸರ್ ಅಗತ್ಯ
ಚಳಿಗಾಲದಲ್ಲಿ ಉತ್ತಮವಾದ ಮಾಯಿಶ್ಚರೈಸರ್ ಅಥವಾ ಕ್ರೀಮ್ ಬಳಸುವುದು ಬಹಳ ಮುಖ್ಯ. ಇದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಇದು ನಿಮ್ಮ ಮುಖದ ಮೇಲೆ ಮಾತ್ರವಲ್ಲದೆ ನಿಮ್ಮ ಕೈ ಮತ್ತು ಪಾದಗಳಿಗೂ ಬಳಸುವುದು ಉತ್ತಮ.
ಹೈಡ್ರೇಟಿಂಗ್ ಫೇಸ್ ಮಾಸ್ಕ್
ಚಳಿಗಾಲದಲ್ಲಿ ಹೈಡ್ರೇಟಿಂಗ್ ಫೇಸ್ ಮಾಸ್ಕ್ ನಿಮ್ಮ ಚರ್ಮಕ್ಕೆ ಕಾಂತಿಯನ್ನು ನೀಡುವುದರ ಜೊತೆಗೆ ಮುಖದಲ್ಲಿ ಸುಕ್ಕು ಮೂಡದಂತೆ ಮಾಡುತ್ತದೆ. ನೀವು ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಹೈಡ್ರೇಟಿಂಗ್ ಫೇಸ್ ಮಾಸ್ಕ್ ಬಳಸುವುದು ಉತ್ತಮ.
ಇದನ್ನು ಓದಿ: ಅತಿಯಾದ ಕೂದಲು ಉದುರುವಿಕೆ ನಿಮ್ಮನ್ನು ಕಾಡುತ್ತಿದೆಯೇ ? ಇಲ್ಲಿದೆ ಪ್ರಮುಖ ಆಹಾರ ಕ್ರಮಗಳು
ನೀವು ಮನೆಯಲ್ಲಿಯೇ ಮಾಡಬೇಕಾದರೆ ನುಣ್ಣಗೆ ಹಿಸುಕಿದ ಬಾಳೆಹಣ್ಣು, 1 ಚಮಚ ಜೇನುತುಪ್ಪ ಮತ್ತು ಮೊಸರು ಜೊತೆಗೆ ಕೆಲವು ಹನಿ ಬಾದಾಮಿ ಎಣ್ಣೆ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಮಿಶ್ರಣವು ಒಣಗುವವರೆಗೆ ಇರಿಸಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ, ಮಾಯಿಶ್ಚರೈಸರ್ ಅನ್ನು ಮುಖಕ್ಕೆ ಹಚ್ಚಿ .
(ಈ ಮೇಲಿನ ಪ್ರಮುಖ ಅಂಶಗಳನ್ನು ಚಳಿಗಾಲದಲ್ಲಿ ರೂಢಿಸಿಕೊಳ್ಳುವುದರಿಂದ ನಿಮ್ಮ ಚರ್ಮವು ಒಣಗುವುದನ್ನು ತಡೆದು ಜೊತೆಗೆ ಹೊಳೆಯುವಂತೆ ಮಾಡುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:37 am, Sat, 29 October 22