
ಇಂದಿನ ವೇಗದ ಜೀವನದಲ್ಲಿ, ಹಗಲಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ನಿದ್ರೆ ಮಾಡುವುದು ಸಾಮಾನ್ಯ. ಆದರೆ ಅನೇಕರು ಗಂಟೆಗಟ್ಟಲೆ ಮಲಗುತ್ತಾರೆ. ಆದರೆ ಆರೋಗ್ಯ ತಜ್ಞರು ಈ ಅಭ್ಯಾಸ ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹದು ಎನ್ನುತ್ತಾರೆ. ಇದಕ್ಕೆ ಪೂರಕವೆಂಬಂತೆ ನಡೆದ ಒಂದು ಸಂಶೋಧನೆ ಹಗಲಿನಲ್ಲಿ ನಿದ್ರೆ ಮಾಡುವಂತಹ ಅಭ್ಯಾಸ ಅದರಲ್ಲಿಯೂ ದಿನಕ್ಕೆ 30 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿದ್ರೆ (Sleeping) ಮಾಡುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಾಗುತ್ತದೆ, ಈ ರೀತಿ ಅಭ್ಯಾಸದಿಂದ ಮಧುಮೇಹದ (Diabetes) ಅಪಾಯ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಹಾಗಾದರೆ ಹಗಲಿನಲ್ಲಿ ಮಲಗುವುದರಿಂದ ನಿಜವಾಗಿಯೂ ಡಯಾಬಿಟಿಸ್ ಬರುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಈ ಸಂಶೋಧನೆ ಒಟ್ಟು 40 ವಿಭಿನ್ನ ಅಧ್ಯಯನಗಳನ್ನು ಒಳಗೊಂಡಿದ್ದು, ಇದರಲ್ಲಿ ಸಾವಿರಾರು ಜನರಿಂದ ಪಡೆದ ದತ್ತಾಂಶಗಳಿವೆ. ದತ್ತಾಂಶ ಸಂಗ್ರಹಣೆಯ ಸಮಯದಲ್ಲಿ, ಭಾಗವಹಿಸುವವರು ಹಗಲಿನಲ್ಲಿ ನಿದ್ರೆ ಮಾಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಮತ್ತು ಅವರು ನಿದ್ರೆ ಮಾಡಿದರೆ, ಎಷ್ಟು ಸಮಯದವರೆಗೆ ಎಂಬುದನ್ನು ಗಮನಿಸಲಾಗಿದೆ. ನಂತರ ಈ ಮಾಹಿತಿಯನ್ನು ಅವರ ಮಧುಮೇಹ ಸ್ಥಿತಿ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದೊಂದಿಗೆ ಹೋಲಿಸಲಾಗಿದೆ. ಈ ಮೂಲಕ 30 ನಿಮಿಷಗಳಿಗಿಂತ ಹೆಚ್ಚು ಕಾಲ, ಅದರಲ್ಲಿಯೂ 1 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿದ್ರೆ ಮಾಡುವವರಲ್ಲಿ ಮಧುಮೇಹ ಬರುವ ಅಪಾಯ ಹೆಚ್ಚು ಎಂದು ಬಹಿರಂಗಪಡಿಸಿದೆ.
ಇದನ್ನೂ ಓದಿ: ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು
ಸಾಮಾನ್ಯವಾಗಿ ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ದೇಹದ ನೈಸರ್ಗಿಕ ಗಡಿಯಾರಕ್ಕೆ ಅಡ್ಡಿಯಾಗುತ್ತದೆ. ಇದು ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟು ಮಾತ್ರವಲ್ಲ, ಹಗಲಿನ ನಿದ್ರೆ ರಾತ್ರಿಯ ನಿದ್ರೆಯನ್ನು ಕೆಡಿಸುತ್ತದೆ ಇದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ದೀರ್ಘಕಾಲದವರೆಗೆ ನಿದ್ರೆ ಮಾಡುವುದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದು ಸಂಭಾವ್ಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೂಕ ಹೆಚ್ಚಾಗುವುದು ಮಧುಮೇಹಕ್ಕೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹಗಲಿನಲ್ಲಿ ನಿದ್ರೆ ಮಾಡುವುದು ತಪ್ಪಲ್ಲ, ಆದರೆ ಸಮಯದ ಬಗ್ಗೆ ಗಮನ ಕೊಡಬೇಕು. ನೀವು ನಿದ್ರೆ ಮಾಡುವುದೇ ಆದಲ್ಲಿ, ಅದನ್ನು 20 ರಿಂದ 30 ನಿಮಿಷಗಳಿಗೆ ಮಿತಿಗೊಳಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ