AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಸ್ತಾಗುತ್ತೆ ಎಂದು ಮಲ್ಟಿವಿಟಮಿನ್‌ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಆಯಾಸ ಎಲ್ಲರಲ್ಲಿಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕರು ವೈದ್ಯರನ್ನು ಸಂಪರ್ಕಿಸದೆ ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿದಿನ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಸುರಕ್ಷಿತವೇ? ಎಂದಾದರೂ ಯೋಚಿಸಿದ್ದೀರಾ? ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಕಂಡುಬರುವ ಆಯಾಸ, ನಿದ್ರಾಹೀನತೆ ಸಮಸ್ಯೆಗೆ ಮಾತ್ರೆಗಳ ಬದಲು ಸರಳ ಸಲಹೆಯ ಮೂಲಕ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.

ಸುಸ್ತಾಗುತ್ತೆ ಎಂದು ಮಲ್ಟಿವಿಟಮಿನ್‌ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
Hidden Dangers Of Multivitamins
ಪ್ರೀತಿ ಭಟ್​, ಗುಣವಂತೆ
|

Updated on: Jan 02, 2026 | 9:16 PM

Share

ಆರೋಗ್ಯದ ಹಾಳಾಗದಂತೆ ಕಾಳಜಿ ವಹಿಸುವುದು ಎಂದರೆ ಕೇವಲ ಔಷಧಿಗಳನ್ನು ತೆಗೆದುಕೊಳ್ಳುವುದು ಎಂದಲ್ಲ, ಬದಲಾಗಿ ನಮ್ಮ ದೇಹಕ್ಕೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಅದರಲ್ಲಿಯೂ ವಿಟಮಿನ್ ಮಾತ್ರೆಗಳ ಅತಿಯಾದ ಬಳಕೆ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಅಷ್ಟೇ ಅಲ್ಲ, ಆಧುನಿಕ ಜೀವನಶೈಲಿಯಲ್ಲಿ ನಿದ್ರೆ (Sleep) ಮತ್ತು ದಂತದ ಆರೋಗ್ಯದ ಬಗ್ಗೆ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ನಿದ್ರೆ ಸರಿಯಾಗಿ ಆಗದಿದ್ದರೆ ಆಯಾಸವಾಗುವುದು ಸಾಮಾನ್ಯ. ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಈ ರೀತಿ ಸಮಸ್ಯೆಯನ್ನು ಹೆಚ್ಚಾಗಿ ಕಂಡುಬರುತ್ತದೆ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸುವುದು ಬಹಳ ಒಳ್ಳೆಯದು.

ಅನೇಕರು ಆಯಾಸವನ್ನು ಕಡಿಮೆ ಮಾಡಲು ಮಲ್ಟಿವಿಟಮಿನ್ ಮಾತ್ರೆಗಳ ಸೇವನೆ ಮಾಡುತ್ತಾರೆ. ಆದರೆ ಆಯಾಸ ರೋಗವಲ್ಲ; ಇದು ಕೇವಲ ಒಂದು ಲಕ್ಷಣ ಅಷ್ಟೇ ಎಂಬುದನ್ನು ನೆನೆಪಿನಲ್ಲಿಡಿ. ನಿದ್ರೆಯ ಕೊರತೆ, ಅಸಮರ್ಪಕ ವ್ಯಾಯಾಮ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು ಆಯಾಸಕ್ಕೆ ಕಾರಣವಾಗಬಹುದು. ದೇಹದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಡಿ, ಇ ಮತ್ತು ಕೆ ಹಾನಿಕಾರಕವಾಗಬಹುದು. ಆರೋಗ್ಯವಂತ ವ್ಯಕ್ತಿಗಳು ಈ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನ ಸಿಗುವುದಿಲ್ಲ, ಜೀವಸತ್ವಗಳ ಕೊರತೆಯಿದ್ದು ವೈದ್ಯರ ಸಲಹೆಯಾನುಸಾರ ಮಾತ್ರ ವಿಟಮಿನ್‌ಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಹಗಲಿನಲ್ಲಿ ಮಲಗುವ ಅಭ್ಯಾಸ ನಿಮಗಿದ್ಯಾ? ಈ ಸಮಯಕ್ಕಿಂತ ಹೆಚ್ಚು ಮಲಗಿದ್ರೆ ಮಧುಮೇಹ ಬರಬಹುದು ಎಚ್ಚರ!

ಇನ್ನು ವಿದ್ಯಾರ್ಥಿಗಳಿಗೆ ನಿದ್ರೆ ಕಡಿಮೆಯಾಗಿ ಆಯಾಸವಾಗುತ್ತಿದ್ದರೆ ಅಂತವರು ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದು. ಪರೀಕ್ಷೆಯ ಸಮಯದಲ್ಲಿ ನಿದ್ರೆಯ ಕೊರತೆಯಾಗಿ ಆಯಾಸ ಹೆಚ್ಚಾಗುತ್ತಿದ್ದರೆ ಮಲಗುವ ಹಾಸಿಗೆಯ ಮೇಲೆ ಕುಳಿತು ಓದುವುದನ್ನು ತಪ್ಪಿಸಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಎಚ್ಚರಗೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಲಗುವ ಮೊದಲು, ಚಹಾ, ಕಾಫಿ, ಮಸಾಲೆಯುಕ್ತ ಆಹಾರಗಳು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳಿಂದ ದೂರವಿರಿ. ಜೊತೆಗೆ ಮೊಬೈಲ್ ಫೋನ್ ಬಳಸುವುದನ್ನು ಮತ್ತು ಟಿವಿ ನೋಡುವುದನ್ನು ನಿಲ್ಲಿಸಿ ಇದರಿಂದ ನಿದ್ರೆ ಸರಿಯಾಗಿ ಬರುತ್ತದೆ ಅಷ್ಟೇ ಅಲ್ಲ, ಆಯಾಸವೂ ಕಡಿಮೆಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ