ನವದೆಹಲಿ: ನೀವು ಕೂಡ ರಾತ್ರಿ ಹೊತ್ತು ಲೈಟ್ ಆಫ್ ಮಾಡಿದ ಮೇಲೆ ಮೊಬೈಲ್ (Mobile Use) ನೋಡುತ್ತಾ ಮಲಗುತ್ತೀರಾ? ಹಾಗಾದರೆ, ಮಿಸ್ ಮಾಡದೆ ಈ ಸುದ್ದಿಯನ್ನು ಓದಿ. ಹೈದರಾಬಾದ್‌ನ (Hyderebad) 30 ವರ್ಷದ ಮಹಿಳೆಯೊಬ್ಬರು ಕತ್ತಲೆಯಲ್ಲಿ ದೀರ್ಘಕಾಲದವರೆಗೆ ಮೊಬೈಲ್ ಫೋನ್ ನೋಡುತ್ತಿದ್ದರು. ಇದಾದ ನಂತರ ಒಂದೂವರೆ ವರ್ಷಗಳಿಂದ ಅವರು ತೀವ್ರ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ (Smartphone Vision Syndrome) ಎಂದು ಹೆಸರು.
ಕಣ್ಣಿನ ಸಮಸ್ಯೆಗೆ ಪರಿಹಾರ ಪಡೆಯಲು ವೈದ್ಯರನ್ನು ಸಂಪರ್ಕಿಸಿದ ಆಕೆಗೆ ಆಘಾತ ಕಾದಿತ್ತು. ಆಕೆಯನ್ನು ತಪಾಸಣೆ ಮಾಡಿದ ವೈದ್ಯರು ಆಕೆಯ ರೋಗಲಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಕೆಗೆ ಈಗ ಯಾವುದೇ ವಸ್ತುಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಮಂಜು ಎಂಬ ಮಹಿಳೆ ಒಂದೂವರೆ ವರ್ಷಗಳಿಂದ ತೀವ್ರ ದೃಷ್ಟಿ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಸಮಸ್ಯೆ ಹೊಂದಿರುವವರಿಗೆ ಫ್ಲೋಟರ್‌ಗಳನ್ನು ನೋಡುವುದು, ಬೆಳಕಿನ ಹೊಳಪನ್ನು ದಿಟ್ಟಿಸುವುದು, ಡಾರ್ಕ್ ಝಿಗ್-ಜಾಗ್ ಲೈನ್‌ಗಳು ಮತ್ತು ಕೆಲವೊಮ್ಮೆ ವಸ್ತುಗಳನ್ನು ನೋಡಲು ಅಥವಾ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಅಪೊಲೊ ಆಸ್ಪತ್ರೆಗಳ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ಗಳಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಅಪ್ಪನ ಮೊಬೈಲ್ನಿಂದ ರೂ. 80,000 ವೆಚ್ಚದ ಫುಡ್ ಆರ್ಡರ್ ಮಾಡಿದ 6 ವರ್ಷದ ಮಗ
ಈ ಸಮಸ್ಯೆಯ ಬಗ್ಗೆ ವಿವರಿಸಿರುವ ವೈದ್ಯ ಡಾ. ಸುಧೀರ್ ಕುಮಾರ್ ಆಕೆಯ ಮುಂಬರುವ ಕುರುಡುತನದ ಲಕ್ಷಣಗಳನ್ನು ವಿವರಿಸಿದ್ದಾರೆ. ಮಂಜು ಎಂಬ ಮಹಿಳೆಗೆ ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ ಇರುವುದು ಪತ್ತೆಯಾಗಿದೆ. ನಾನು ಆಕೆಯ ಇತಿಹಾಸವನ್ನು ಪರಿಶೀಲಿಸಿದೆ. ತನ್ನ ಅಂಗವಿಕಲ ಮಗುವನ್ನು ನೋಡಿಕೊಳ್ಳಲು ಆಕೆ ತಾನು ಮಾಡುತ್ತಿದ್ದ ಬ್ಯೂಟಿಷಿಯನ್ ಕೆಲಸವನ್ನು ತೊರೆದ ನಂತರ ಈ ರೋಗಲಕ್ಷಣಗಳು ಪ್ರಾರಂಭವಾಗಿವೆ. ಆಕೆ ಪ್ರತಿದಿನ ಹಲವಾರು ಗಂಟೆಗಳ ಕಾಲ ತನ್ನ ಸ್ಮಾರ್ಟ್‌ಫೋನ್ ಮೂಲಕ ಬ್ರೌಸ್ ಮಾಡುವ ಹೊಸ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ರಾತ್ರಿ ಲೈಟ್ ಆಫ್ ನಂತರವೂ ಆಕೆ ಮೊಬೈಲನ್ನು ದೀರ್ಘಕಾಲದವರೆಗೆ ನೋಡುತ್ತಿದ್ದರು ಎಂದು ಅವರು ಟ್ವೀಟ್ ಮಾಡಿದ್ದಾರೆ.
A common habit resulted in severe #vision impairment in a young woman
1. 30-year old Manju had severe disabling vision symptoms for one and half years. This included seeing floaters, bright flashes of light, dark zig zag lines and at times inability to see or focus on objects.
— Dr Sudhir Kumar MD DM?? (@hyderabaddoctor) February 6, 2023
ಆಕೆಯ ರೋಗನಿರ್ಣಯವು ಈಗ ಸ್ಪಷ್ಟವಾಗಿದೆ. ಆ ಮಹಿಳೆ ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ ಅಥವಾ SVSನಿಂದ ಬಳಲುತ್ತಿದ್ದಾರೆ. ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಂತಹ ಸಾಧನಗಳ ದೀರ್ಘಾವಧಿಯ ಬಳಕೆಯಿಂದ ವಿವಿಧ ಕಣ್ಣಿನ-ಸಂಬಂಧಿತ ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಅಥವಾ ಡಿಜಿಟಲ್ ವಿಷನ್ ಸಿಂಡ್ರೋಮ್ ಎಂದು ಉಲ್ಲೇಖಿಸಲಾಗುತ್ತದೆ ಎಂದು ಡಾ. ಸುಧೀರ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Union Budget: ವಾಹನ, ಟಿವಿ, ಮೊಬೈಲ್ ಫೋನ್ ಖರೀದಿಸ್ತೀರಾ? ತುಸು ತಾಳಿ, ಕಡಿಮೆಯಾಗಲಿದೆ ದರ
ಅವರ ದೃಷ್ಟಿ ದೋಷಕ್ಕೆ ಸಂಭವನೀಯ ಕಾರಣಗಳ ಬಗ್ಗೆ ನಾನು ಅವರಿಗೆ ಸಲಹೆ ನೀಡಿದ್ದೇನೆ. ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಲು ಸೂಚಿಸಿದ್ದೇನೆ. ಆ ಮಹಿಳೆ ಇನ್ನುಮುಂದೆ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುವುದಿಲ್ಲವೆಂದೂ, ಅಗತ್ಯವಿದ್ದಾಗ ಮಾತ್ರ ಮೊಬೈಲನ್ನು ಬಳಸುವುದಾಗಿಯೂ ಭರವಸೆ ನೀಡಿದ್ದಾರೆ. ಮಂಜು ಅವರು ಒಂದು ತಿಂಗಳ ನಂತರ ಪರಿಶೀಲನೆಗೆ ಬಂದಾಗ ಅವರ ಕಣ್ಣಿನಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ ಎಂದು ಡಾ. ಸುಧೀರ್ ಕುಮಾರ್ ಹೇಳಿದ್ದಾರೆ.
ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ಹೇಗೆ?:
ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ ಅನ್ನು ಹೇಗೆ ತಡೆಯುವುದು ಎಂಬುದರ ಕುರಿತು ವೈದ್ಯರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
– ಡಿಜಿಟಲ್ ಸಾಧನಗಳ ಸ್ಕ್ರೀನ್ಗಳನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ. ಏಕೆಂದರೆ ಇದು ತೀವ್ರ ಮತ್ತು ದೃಷ್ಟಿ-ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು.
– 20-20-20 ನಿಯಮ ಎಂದೂ ಕರೆಯಲ್ಪಡುವ ಡಿಜಿಟಲ್ ಪರದೆಯನ್ನು ಬಳಸುವಾಗ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಲು ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮ ತೆಗೆದುಕೊಳ್ಳಿ.
– ನೀವು ಕೆಲಸ ಮಾಡುತ್ತಿರುವ ಕಂಪ್ಯೂಟರ್ ಅಥವಾ ಫೋನ್ ಸ್ಕ್ರೀನ್ ನೋಡುತ್ತಿರುವ ಕೊಠಡಿಯಲ್ಲಿ ಚೆನ್ನಾಗಿ ಬೆಳಕಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
– ಯಾವಾಗಲೂ ಕಣ್ಣಿನ ನಿಯಮಿತ ತಪಾಸಣೆ ಮತ್ತು ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.
– ಮೊಬೈಲ್, ಕಂಪ್ಯೂಟರ್ ನೋಡುವಾಗ ವಿಶೇಷ ಕನ್ನಡಕವನ್ನು ಧರಿಸಿ ಅಥವಾ ನಿಮ್ಮ ಸ್ಕ್ರೀನ್ನ ಬಣ್ಣದ ತಾಪಮಾನವನ್ನು ಕಡಿಮೆ ಮಾಡುವ ಮೂಲಕ ನೀಲಿ ಬೆಳಕಿನ ಬಳಕೆಯನ್ನು ಕಡಿಮೆ ಮಾಡಿ.
Published On - 11:22 am, Thu, 9 February 23