ದೇಹದಲ್ಲಿರುವ ಮಚ್ಚೆಗಳಲ್ಲಿ ಈ ಬದಲಾವಣೆ ಆದ್ರೆ ನಿರ್ಲಕ್ಷ್ಯ ಮಾಡಬೇಡಿ
ಚರ್ಮದ ಮೇಲೆ ಸಣ್ಣ ಚುಕ್ಕೆಯಂತೆ ಕಾಣುವ ಸಣ್ಣ ಮಚ್ಚೆ ಕೆಲವೊಮ್ಮೆ ದೇಹಕ್ಕೆ ಹಾನಿ ಮಾಡಬಹುದು. ಹೌದು, ಮಚ್ಚೆ ಎಂದು ನಿರ್ಲಕ್ಸ್ಯ ಮಾಡುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಸಾಮಾನ್ಯವಾಗಿ ಮಚ್ಚೆಗಳು ಕೆಲವರಿಗೆ ಹುಟ್ಟಿನಿಂದಲೇ ಇರುತ್ತವೆ, ಇನ್ನು ಕೆಲವರಿಗೆ ಅವು ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುತ್ತದೆ ಅಥವಾ ಅದೇ ಗಾತ್ರದಲ್ಲಿ ಬೆಳವಣಿಗೆಯಾಗುತ್ತದೆ. ಆದರೆ ಎಲ್ಲಾ ಮಚ್ಚೆಗಳು ಸಾಮಾನ್ಯವಲ್ಲ. ದೇಹದ ಮೇಲಿನ ಮಚ್ಚೆಯ ಬಣ್ಣ ಬದಲಾದರೆ ಅಥವಾ ಗಾತ್ರದಲ್ಲಿ ಹೆಚ್ಚಾದರೆ, ಅದು ಅಪಾಯದ ಸಂಕೇತವಾಗಿರಬಹುದು.

ದೇಹದ ಮೇಲೆ ಹುಟ್ಟುಮಚ್ಚೆಗಳು (Moles) ಇರುವುದು ಸಾಮಾನ್ಯ. ಕೆಲವರಿಗೆ ಅವು ಸೌಂದರ್ಯದ ಪ್ರತಿಕವಾಗಿರಬಹುದು, ಇನ್ನು ಕೆಲವರಿಗೆ ಅಸಹ್ಯ ಎನಿಸಿರಬಹುದು. ಆದರೆ ಹೊಸ ಮಚ್ಚೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಅಥವಾ ಹುಟ್ಟಿನಿಂದ ಬಂದ ಮಚ್ಛೆಗಳು ಗಾತ್ರದಲ್ಲಿ ದೊಡ್ಡದಾದಾಗ ಭಯವಾಗುತ್ತದೆ. ಇದು ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದೇ ಎಂದು ಆಶ್ಚರ್ಯವಾಗುತ್ತದೆ. ಆದರೆ ಮಚ್ಚೆಗಳು ಬೆಳೆಯುವುದಕ್ಕೆ ಕಾರಣವೇನು, ಯಾವ ಸಮಯದಲ್ಲಿ ವೈದ್ಯರ ಸಂಪರ್ಕ ಮಾಡಬೇಕು ಎಂದು ಎಂದಾದರೂ ಯೋಚಿಸಿದ್ದೀರಾ… ಕೆಲವೊಮ್ಮೆ ಚಿಕ್ಕ ಮಚ್ಚೆಗಳಿಂದ ಏನಾಗುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತೇವೆ. ಇಂತಹ ಅಸಡ್ಡೆಯೇ ಮುಂದೊಂದು ದಿನ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.
ಮಚ್ಚೆ ಎಂದರೇನು?
ನಮ್ಮ ಚರ್ಮದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯ ಇರುವುದರಿಂದ ಮಚ್ಚೆಗಳು ರೂಪುಗೊಳ್ಳುತ್ತವೆ. ಚರ್ಮದ ಮೇಲಿನ ಮೆಲನೋಸೈಟ್ಗಳು ಎಂಬ ಜೀವಕೋಶಗಳು ಒಂದೇ ಸ್ಥಳದಲ್ಲಿ ಒಟ್ಟುಗೂಡಿದಾಗ ಮತ್ತು ಅತಿಯಾದ ವರ್ಣದ್ರವ್ಯವನ್ನು ಉತ್ಪಾದಿಸಿದಾಗ, ಅದು ಸಣ್ಣ ಚುಕ್ಕೆಯಂತೆ ಕಾಣುತ್ತದೆ. ಇವು ಕಪ್ಪು, ಕಂದು, ತಿಳಿ ಗುಲಾಬಿ ಅಥವಾ ನೀಲಿ ಬಣ್ಣದ್ದಾಗಿರಬಹುದು.
ದೇಹದಲ್ಲಿ ಮಚ್ಚೆಗಳು ಹೆಚ್ಚಾಗಲು ಕಾರಣವೇನು?
- ಒಬ್ಬ ವ್ಯಕ್ತಿಯ ದೇಹದ ಮೇಲೆ ಸರಾಸರಿ 10 ರಿಂದ 40 ಮಚ್ಚೆಗಳು ಇರುವುದು ಸಾಮಾನ್ಯ. ಅದಕ್ಕಿಂತ ಜಾಸ್ತಿ ಇದ್ದಲ್ಲಿ ನಿರ್ಲಕ್ಸ್ಯ ಮಾಡಬಾರದು.
- ಕುಟುಂಬದ ಸದಸ್ಯರಲ್ಲಿ ಹೆಚ್ಚಿನ ಮಚ್ಚೆಗಳಿದ್ದರೆ, ಅದು ಮುಂದಿನ ಪೀಳಿಗೆಗೆ ಹರಡುವ ಸಾಧ್ಯತೆ ಇರುತ್ತದೆ.
- ಪ್ರೌಢಾವಸ್ಥೆ ಅಥವಾ ಗರ್ಭಾವಸ್ಥೆಯಲ್ಲಿ ಸಂಭವಿಸುವ ಹಾರ್ಮೋನುಗಳಲ್ಲಿನ ಬದಲಾವಣೆಗಳು ಹೊಸ ಮಚ್ಚೆಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು.
- ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಮೆಲನಿನ್ ಉತ್ಪಾದನೆಯನ್ನು ವೇಗಗೊಳಿಸುತ್ತವೆ. ಅದಕ್ಕಾಗಿಯೇ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ದೇಹದ ಭಾಗಗಳಲ್ಲಿ ಮಚ್ಚೆಗಳು ಹೆಚ್ಚಾಗಿ ಕಂಡುಬರುತ್ತವೆ.
- ವಯಸ್ಸು ಹೆಚ್ಚಾದಂತೆ, ಚರ್ಮದಲ್ಲಿ ಆಗುವಂತಹ ಬದಲಾವಣೆಗಳು ಮಚ್ಚೆಗಳ ಹೆಚ್ಚಳಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವವರಿಗೆ ಯಶಸ್ಸು ಖಂಡಿತಾ!
ಮಚ್ಚೆಗಳು ಅಪಾಯಕಾರಿಯಾಗುವುದು ಯಾವಾಗ?
- ಹೆಚ್ಚಿನ ಮಚ್ಚೆಗಳು ನಿರುಪದ್ರವಿಗಳು. ಆದರೆ ಮಚ್ಚೆ ಇದ್ದಕ್ಕಿದ್ದಂತೆ ಗಾತ್ರದಲ್ಲಿ ಹೆಚ್ಚಾದರೆ ವೈದ್ಯರ ಸಂಪರ್ಕ ಮಾಡಬೇಕು.
- ಒಂದು ಮಚ್ಚೆಯಲ್ಲಿ ಎರಡು ಅಥವಾ ಮೂರು ಬಣ್ಣಗಳು ಕಾಣಿಸಿಕೊಂಡರೆ ಅಥವಾ ಅದು ಗಾಢ ಬಣ್ಣಕ್ಕೆ ತಿರುಗಿದರೆ.
- ಮಚ್ಚೆಯ ಸ್ಥಳದಲ್ಲಿ ನಿರಂತರ ತುರಿಕೆ ಅಥವಾ ನೋವು ಇದ್ದರೆ.
- ಮಚ್ಚೆ ಯಾವುದೇ ಗಾಯವಿಲ್ಲದೆ ರಕ್ತಸ್ರಾವವಾಗಿದ್ದರೆ ಅಥವಾ ಸೋರುತ್ತಿದ್ದರೆ ನಿರ್ಲಕ್ಷ್ಯ ಮಾಡಬಾರದು.
ಅಂತಹ ಬದಲಾವಣೆಗಳು ಚರ್ಮದ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳಾಗಿರಬಹುದು. ಆದ್ದರಿಂದ, ಅವುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Mon, 12 January 26




