ಪ್ರೌಢಾವಸ್ಥೆ ತಲುಪಿದ ಪ್ರತಿ ಹುಡುಗಿಯೂ ಋತುಚಕ್ರ ಅನುಭವಿಸಲೇ ಬೇಕು. ಆದರೆ ಕೆಲವೊಮ್ಮೆ ನಿಮ್ಮ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಇದ್ದೋ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ನಿಮ್ಮ ಮುಟ್ಟಿನ ದಿನವನ್ನು ಮುಂದೂಡಬೇಕಾಗುತ್ತದೆ. ಆದ್ದರಿಂದ, ಮಹಿಳೆಯರು ತಮ್ಮ ಋತುಚಕ್ರವನ್ನು ವಿಳಂಬಗೊಳಿಸಲು ಸಹಾಯ ಮಾಡುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮೊದಲಿಗೆ, ಆ ಮಾತ್ರೆಗಳು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುವವರೆಗೆ ನೀವು ಆ ಮಾತ್ರೆಗಳ ಬಗ್ಗೆ ಹೆಚ್ಚು ಯೋಚಿಸದಿರಬಹುದು. ಆದರೆ ಅದರ ಬಗ್ಗೆ ನಿಖರವಾಗಿ ತಿಳಿದಿರಬೇಕು. ಮುಟ್ಟಿನ ಮಾತ್ರೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ.
ಇತ್ತೀಚೆಗೆ, ಸ್ತ್ರೀರೋಗ ತಜ್ಞೆ ಮತ್ತು ಪ್ರಸೂತಿ ತಜ್ಞೆ ಡಾ. ಅಂಜಲಿ ಕುಮಾರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುಟ್ಟಿನ ಮಾತ್ರೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅದು ನಿಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಹಾರ್ಮೋನುಗಳು ಋತುಚಕ್ರದ ಪ್ರೇರಕ ಶಕ್ತಿಯಾಗಿದೆ, ಮತ್ತು ಅದನ್ನು ವಿಳಂಬಗೊಳಿಸಲು ಮುಟ್ಟಿನ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಸಾಮಾನ್ಯ ಚಕ್ರವನ್ನು ಅಡ್ಡಿಪಡಿಸುತ್ತದೆ. ನಿಮ್ಮ ದೇಹದಲ್ಲಿನ ನೈಸರ್ಗಿಕ ಹಾರ್ಮೋನುಗಳನ್ನು ಬದಲಾಯಿಸಿ ಸಂಶ್ಲೇಷಿತ ಹಾರ್ಮೋನುಗಳನ್ನು ಉತ್ಪಾದಿಸಲು ಈ ಮಾತ್ರೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಡಾ. ಕುಮಾರ್ ವಿವರಿಸುತ್ತಾರೆ. ಈ ಸಂಶ್ಲೇಷಿತ ಹಾರ್ಮೋನುಗಳು ನಿಮ್ಮ ಋತುಚಕ್ರವನ್ನು ನಿಯಂತ್ರಿಸುವ ನೈಸರ್ಗಿಕ ಹಾರ್ಮೋನುಗಳನ್ನು ಅನುಕರಿಸುತ್ತವೆ.
ಋತುಚಕ್ರವನ್ನು ನಿರ್ವಹಿಸುವ ಕೆಲಸದಲ್ಲಿ ಮುಖ್ಯ ಹಾರ್ಮೋನುಗಳು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್. ಈ ಹಾರ್ಮೋನುಗಳು ಮುಟ್ಟಿನ ಪ್ರಕ್ರಿಯೆಯಲ್ಲಿ ಅವಿಭಾಜ್ಯ ಪಾತ್ರವಹಿಸುತ್ತವೆ. ಇದು ನಿಮ್ಮ ಗರ್ಭಾಶಯದ ಒಳಪದರವನ್ನು ಹೊರಹಾಕಿದಾಗ ಸಂಭವಿಸುತ್ತದೆ. “ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳು ಈ ಹಾರ್ಮೋನುಗಳ ಸಂಶ್ಲೇಷಿತ ಆವೃತ್ತಿಗಳನ್ನು ಹೊಂದಿರುತ್ತವೆ. ಅವು ಪ್ರೊಜೆಸ್ಟಿನ್ ಮಾತ್ರೆಗಳಾಗಿರಬಹುದು ಅಥವಾ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿನ್ ಎರಡನ್ನೂ ಒಳಗೊಂಡಿರುವ ಸಂಯೋಜಿತ ಮಾತ್ರೆಗಳಾಗಿರಬಹುದು” ಎಂದು ವೈದ್ಯರು ಹೇಳಿದ್ದಾರೆ.
ಈ ಮಾತ್ರೆಗಳು ನೈಸರ್ಗಿಕ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ, ಇದು ನಿಮ್ಮ ಋತುಚಕ್ರವನ್ನು ವಿಳಂಬಗೊಳಿಸುತ್ತದೆ. ನೀವು ಅವುಗಳನ್ನು ಬಳಸುವುದನ್ನು ನಿಲ್ಲಿಸಿದ ನಂತರ ಈ ಮಾತ್ರೆಗಳ ಪರಿಣಾಮಗಳು ಕಡಿಮೆಯಾಗುತ್ತವೆ. “ಒಮ್ಮೆ ನೀವು ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ ನಿಮ್ಮ ದೇಹದ ನೈಸರ್ಗಿಕ ಹಾರ್ಮೋನುಗಳ ಸಮತೋಲನವು ಪುನರಾರಂಭಗೊಳ್ಳುತ್ತದೆ” ಎಂದು ತಜ್ಞರು ಹೇಳುತ್ತಾರೆ.
ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳು ಸರಿಯಾಗಿ ಕೆಲಸ ಮಾಡಲು, ನಿಮ್ಮ ಋತುಚಕ್ರಕ್ಕೆ ಸುಮಾರು ಮೂರು ದಿನಗಳ ಮೊದಲು ನೀವು ಅವುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು. ಅಲ್ಲದೆ, ಅವು ಗರ್ಭನಿರೋಧಕ ಮಾತ್ರೆಗಳಲ್ಲ ಆದ್ದರಿಂದ ಅವು ಗರ್ಭಧಾರಣೆಯನ್ನು ತಡೆಯಲು ಸಹಾಯ ಮಾಡುವುದಿಲ್ಲ. ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ನೀವು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು, ವಿಶೇಷವಾಗಿ ನಿಮ್ಮ ಋತುಚಕ್ರದ ಮೇಲೆ ಪರಿಣಾಮ ಬೀರುವ ಮಾತ್ರೆಗಳ ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರ ಬಳಿ ವಿಚಾರಿಸಿ.
ಇದನ್ನೂ ಓದಿ: ಬಾಣಂತಿ ಸನ್ನಿ ಎಂದರೇನು?; ಹೆರಿಗೆ ಬಳಿಕವೂ ಬೇಕು ಪ್ರೀತಿ, ಕಾಳಜಿ
ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮಗಳು ಇವೆಯೇ?
ಮಿತವಾಗಿ ತೆಗೆದುಕೊಂಡಲ್ಲಿ ಯಾವುದೇ ಅಪಾಯವಿಲ್ಲ, ಆದರೆ ಅತಿಯಾಗಿ ತೆಗೆದುಕೊಂಡರೆ, ಅದು ಕೆಲವು ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಯಾವುದೇ ಔಷಧಿಗಳ ನಿರಂತರ ಬಳಕೆಯು ಭೀಕರ ಪರಿಣಾಮಗಳನ್ನು ಉಂಟುಮಾಡಬಹುದು, ವಿಶೇಷವಾಗಿ ನೀವು ವೈದ್ಯರನ್ನು ಸಂಪರ್ಕಿಸದೆ ತೆಗೆದುಕೊಂಡರೆ, ಅಲ್ಲದೆ ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳು ಹಾನಿಕಾರಕವಲ್ಲವಾದರೂ, ಕೆಲವು ಮಹಿಳೆಯರು ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗಬಹುದು.
ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳ ಕೆಲವು ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಮೊಡವೆ ಮತ್ತು ಮುಟ್ಟಿನ ಸಮಯದಲ್ಲಿ ಚರ್ಮದ ವರ್ಣದ್ರವ್ಯ ಬದಲಾವಣೆ ಸೇರಿವೆ. ಜೊತೆಗೆ ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವ ಮಹಿಳೆಯರು ಮನಸ್ಥಿತಿಯಲ್ಲಿ ಬದಲಾವಣೆಗಳು, ಲೈಂಗಿಕ ಬಯಕೆಯ ನಷ್ಟ, ಸ್ತನ ನೋವು, ಅನಿಯಮಿತ ರಕ್ತಸ್ರಾವ ಅಥವಾ ಚರ್ಮದಲ್ಲಿ ಕಲೆಗಳನ್ನು ಅನುಭವಿಸಬಹುದು ಎಂದು ಅಧ್ಯಯನಗಳು ತೋರಿಸಿವೆ. ತೊಡಕುಗಳನ್ನು ತಪ್ಪಿಸಲು ಋತುಚಕ್ರವನ್ನು ವಿಳಂಬಗೊಳಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:14 pm, Sat, 2 September 23