ವಿಟಮಿನ್ ಬಿ12 ಪ್ರಯೋಜನಗಳೇನು? ಭಾರತದ 70% ಜನರಲ್ಲಿ ಇದರ ಕೊರತೆಯಾಗುವುದಕ್ಕೆ ಕಾರಣವೇನು?
ವಿಟಮಿನ್ ಬಿ 12 ದೇಹಕ್ಕೆ ಮಾತ್ರವಲ್ಲ ನಮ್ಮ ಮನಸ್ಸಿಗೆ ಶಕ್ತಿಯನ್ನು ಒದಗಿಸುವ ಪ್ರಮುಖ ಪೋಷಕಾಂಶವಾಗಿದೆ. ಮೆದುಳು, ಹೃದಯ, ಮೂಳೆಗಳು, ಕಣ್ಣುಗಳು, ಚರ್ಮ ಮತ್ತು ಕೂದಲಿನಂತಹ ವಿವಿಧ ಅಂಗಗಳ ಆರೋಗ್ಯಕ್ಕೆ ಇದು ಅತ್ಯಗತ್ಯ. ಬಿ 12 ಕೊರತೆಯು ಆಯಾಸ, ಮನಸ್ಥಿತಿ ಬದಲಾವಣೆಗಳು ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಈ ವಿಟಮಿನ್‌ನ ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಬೇಕು, ಮಾತ್ರವಲ್ಲ ಇದು ನಿಮ್ಮ ದೇಹದಲ್ಲಿ ಕೊರತೆಯಾದಾಗ ಏನಾಗುತ್ತದೆ ಎಂಬುದು ಕೂಡ ತಿಳಿದಿರಬೇಕಾಗುತ್ತದೆ.

ಇತ್ತೀಚಿಗೆ ಕೆಲಸದಲ್ಲಿನ ಒತ್ತಡ (stress) ಹೆಚ್ಚಾಗುತ್ತಿದ್ದು ಜನರ ಮಾನಸಿಕ ಶಾಂತಿ ಹದಗೆಟ್ಟಿದೆ. ಆದರೆ ಇದು ದೈಹಿಕ ಆರೋಗ್ಯದಷ್ಟೇ ಮುಖ್ಯ ಎಂಬುದು ಹಲವರಿಗೆ ತಿಳಿದಿಲ್ಲ. ಈ ಎರಡನ್ನೂ ಸಮತೋಲನಗೊಳಿಸುವಲ್ಲಿ ವಿಟಮಿನ್ ಬಿ 12 (Vitamin B12) ಮಹತ್ವದ ಪಾತ್ರ ವಹಿಸುತ್ತದೆ. ಈ ವಿಟಮಿನ್ ನಮ್ಮ ದೇಹದಲ್ಲಿ ಸಂಗ್ರಹವಾಗುವುದಿಲ್ಲ, ಬದಲಾಗಿ ಅವುಗಳನ್ನು ನಮ್ಮ ದೈನಂದಿನ ಆಹಾರದ ಮೂಲಕ ಪಡೆದುಕೊಳ್ಳಬೇಕಾಗುತ್ತದೆ. ಈ ವಿಟಮಿನ್ ಆಯಾಸವನ್ನು ಕಡಿಮೆ ಮಾಡುವಲ್ಲಿ, ಮೆದುಳಿನ ಕಾರ್ಯವನ್ನು ಸುಧಾರಿಸುವಲ್ಲಿ ಮತ್ತು ಮನಸ್ಥಿತಿಯನ್ನು ಸ್ಥಿರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಎನ್‌ಸಿಬಿಐ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸುಮಾರು 70% ಜನರು ಇದರ ಕೊರತೆಯನ್ನು ಹೊಂದಿದ್ದಾರೆ. ಹಾಗಾಗಿ ವಿಟಮಿನ್ ಬಿ 12 ನ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ಅವು ಕಡಿಮೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ವಿಟಮಿನ್ ಬಿ12 ಮೆದುಳಿನಲ್ಲಿ ನರಮಂಡಲದ ಕಾರ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಿರಿಕಿರಿ, ಒತ್ತಡ ಮತ್ತು ಖಿನ್ನತೆಯಂತಹ ಭಾವನಾತ್ಮಕ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕ ಸ್ಥಿರತೆಯನ್ನು ಸುಧಾರಿಸುತ್ತದೆ.
ಹೃದಯಕ್ಕೆ ರಕ್ಷಣೆ ನೀಡುತ್ತದೆ
ಇದು ಹೃದಯ ಕಾಯಿಲೆಗಳಿಗೆ ಕಾರಣವಾಗುವ ಹೋಮೋಸಿಸ್ಟೈನ್ ಎಂಬ ಅಪಾಯಕಾರಿ ವಸ್ತುವಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಇದು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಮೂಳೆಗಳ ಬಲಕ್ಕೆ ಸಹಕಾರಿ
ದೇಹದಲ್ಲಿರುವ ಮೂಳೆಗಳು ಆರೋಗ್ಯವಾಗಿರಲು ವಿಟಮಿನ್ ಬಿ 12 ಅವಶ್ಯಕ. ಇದು ಆಸ್ಟಿಯೊಪೊರೋಸಿಸ್ ನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ. ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯವಾಗಿಡಲು ಇದು ಬಹಳ ಮುಖ್ಯವಾದ ಪೋಷಕಾಂಶವಾಗಿದೆ.
ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಪೂರಕ
ಮಗುವಿನ ಮೆದುಳು ಮತ್ತು ನರಗಳ ಬೆಳವಣಿಗೆಗೆ ಬಿ 12 ಅತ್ಯಗತ್ಯ. ಗರ್ಭಿಣಿಯರು ತೆಗೆದುಕೊಳ್ಳುವ ಬಿ 12 ವಿಟಮಿನ್ ಗಳು ಮಗುವಿನಲ್ಲಿ ಹುಟ್ಟುತ್ತಲೇ ಬರುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಆಯಾಸ ಕೆಡಿಮೆ ಮಾಡಲು ಸಹಕಾರಿ
ಯಾವುದೇ ಕೆಲಸ ಮಾಡದಿದ್ದರೂ ಸಹ ದೇಹ ಆಯಾಸಗೊಳ್ಳುತ್ತದೆ ಮಾತ್ರವಲ್ಲ ದೇಹದಲ್ಲಿ ದಣಿದ ಭಾವನೆ ಉಂಟಾಗುವುದಕ್ಕೆ ಬಿ 12 ಕೊರತೆಯೇ ಕಾರಣವಾಗುತ್ತದೆ. ಹಾಗಾಗಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ವಿಟಮಿನ್ ಬಿ 12 ಅವಶ್ಯಕ. ಮಾತ್ರವಲ್ಲ ಇದು ದೇಹಕ್ಕೆ ಶಕ್ತಿಯನ್ನು ಕೂಡ ಒದಗಿಸುತ್ತದೆ.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ವಯಸ್ಸು ಹೆಚ್ಚಾದಂತೆ ದೃಷ್ಟಿ ದುರ್ಬಲಗೊಳ್ಳುತ್ತದೆ. ಆದರೆ ಬಿ 12 ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಎಂದರೆ ದೇಹದಲ್ಲಿ ವಿಟಮಿನ್ ಬಿ 12 ಕಡಿಮೆಯಾಗಬಾರದು.
ಇದನ್ನೂ ಓದಿ: Vitamin B12: ಶುದ್ಧ ಸಸ್ಯಾಹಾರಿ ಆಹಾರದಲ್ಲಿ ವಿಟಮಿನ್ ಬಿ12 ಪಡೆಯುವುದು ಹೇಗೆ?
ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ
ಈ ವಿಟಮಿನ್ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಸಹಕಾರಿ. ಇದರ ಪರಿಣಾಮವಾಗಿ, ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ ಮತ್ತು ತೂಕ ನಿಯಂತ್ರಣಗೊಳ್ಳುತ್ತದೆ.
ಚರ್ಮ, ಕೂದಲು, ಉಗುರುಗಳ ಆರೋಗ್ಯಕ್ಕೆ ಸಹಕಾರಿ
ಮಂದ ಚರ್ಮ, ದುರ್ಬಲ ಅಥವಾ ಉದುರುವ ಕೂದಲು ಮತ್ತು ಉಗುರುಗಳು ಕಪ್ಪಾಗುವುದು ಇವೆಲ್ಲವೂ B12 ಕೊರತೆಗೆ ಕಾರಣವೆಂದು ಹೇಳಬಹುದು. ಇದು ಹೊಸ ಕೋಶಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








