
ಫಿಟ್ ಆಗಿ ಕಾಣುವುದಕ್ಕೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ? ಅದರಲ್ಲಿಯೂ ಇತ್ತೀಚಿಗೆ ನಮ್ಮ ಯುವ ಜನರಲ್ಲಿ ಚೆನ್ನಾಗಿ ಕಾಣಬೇಕೆಂಬ ಹಂಬಲ ಬಹಳ ಹೆಚ್ಚಾಗಿಯೇ ಇದೆ. ಅದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅಂತವರಲ್ಲಿ ಹೆಲ್ತ್ ಸಪ್ಲಿಮೆಂಟ್ ಬಳಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದರೆ ಬಹುಷಃ ಅದನ್ನು ಬಳ ಸುವವರಿಗೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಏಕೆಂದರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಕ್ಕಿಂತ ಹಾನಿಯೇ ಜಾಸ್ತಿ ಎಂಬುದರ ಅರಿವಿಲ್ಲ. ಈ ವಿಷಯ ನಿಮಗೂ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ನಿಜ. ಜಿಮ್ ಗಳಿಗೆ ಹೋಗಿ ಹೆಲ್ತ್ ಸಪ್ಲಿಮೆಂಟ್ (Supplements) ತೆಗೆದುಕೊಳ್ಳುವವರು ಕೂಡ ಎಚ್ಛೆತ್ತುಕೊಳ್ಳುವ ಸಮಯ ಬಂದಿದೆ. ಹಾಗಾದರೆ ಹೆಲ್ತ್ ಸಪ್ಲಿಮೆಂಟ್ ಹೇಗೆ ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ? ಆರೋಗ್ಯ (Health) ಕಾಪಾಡುವ ಸಪ್ಲಿಮೆಂಟ್ ವಿಷವಾದಾಗ ದೇಹಕ್ಕೆ ಏನಾಗುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಇದಕ್ಕೆ ಪೂರಕವಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ 50 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ. 15 ರಿಂದ 25 ವರ್ಷ ವಯಸ್ಸಿನವರು ಮೂಳೆ ಮತ್ತು ಬೆನ್ನುಮೂಳೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಮಕ್ಕಳ ಮೂಳೆಗಳ ಸ್ಥಿತಿ ನೋಡಿ ವೈದ್ಯರು ಸಹ ಆಶ್ಚರ್ಯಚಕಿತರಾಗಿದ್ದಾರೆ, ಏಕೆಂದರೆ ಅವರ ಬೆನ್ನುಮೂಳೆಗಳು 30 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಮೂಳೆಗಳನ್ನು ಹೋಲುತ್ತಿರುವುದು ವೈದ್ಯ ಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಸ್ತವದಲ್ಲಿ,13 ರಿಂದ 14 ವರ್ಷ ವಯಸ್ಸಿನ ಮಕ್ಕಳು ಜಿಮ್‌ಗಳಿಗೆ ಸೇರುತ್ತಾರೆ ಬಳಿಕ ಇಂಟರ್ನೆಟ್ ಪ್ರೇರಿತರಾಗಿ ಪ್ರೋಟೀನ್ ಪೌಡರ್ ಮತ್ತು ಸ್ಟೆರಾಯ್ಡ್ ನಂತಹ ಸಪ್ಲಿಮೆಂಟ್ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆರಂಭಿಕ ವಾರಗಳಲ್ಲಿ, ಅವರ ದೇಹದಲ್ಲಿ ಅನೇಕ ರೀತಿಯಲ್ಲಿ ಬದಲಾವಣೆಗಳು ಕಂಡು ಬರುತ್ತದೆ, ಆದರೆ ದೇಹ ಟೊಳ್ಳಾಗುವುದಕ್ಕೆ ಪ್ರಾರಂಭವಾಗುತ್ತದೆ. ಬಳಿಕ ಈ ರೀತಿ ಅಭ್ಯಾಸ ಮೂಳೆ ಸವೆತವಕ್ಕೆ ಕಾರಣವಾಗುತ್ತದೆ. ಡಿಸ್ಕ್ ಹಾನಿ ಕೂಡ ಸಂಭವಿಸಬಹುದು. ಕ್ರಮೇಣ ಇದು ಮಲ್ಟಿ- ಡಿಸ್ಕ್ ವೈಫಲ್ಯಕ್ಕೆ ಕಾರಣವಾಗಬಹುದು
ಎಐಎಂಸ್ ನ (AIMS) ಮೂಳೆಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ. ಭಾವುಕ್ ಗರ್ಗ್ ಅವರು ತಿಳಿಸಿರುವ ಮಾಹಿತಿ ಅನುಸಾರ, 15 ರಿಂದ 20 ವರ್ಷ ವಯಸ್ಸಿನ ಅನೇಕ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಅಷ್ಟೇ ಅಲ್ಲ, ಅವರ ದೇಹ ತುಂಬಾ ದುರ್ಬಲವಾಗುವುದರಿಂದ ದೈನಂದಿನ ಕೆಲಸಗಳನ್ನು ಅವರಾಗಿಯೇ ಮಾಡಿಕೊಳ್ಳುವುದು ಸಹ ಕಷ್ಟಕರವಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಅಗತ್ಯವಾಗಿರುತ್ತದೆ. ಸ್ಟೀರಾಯ್ಡ್‌ಗಳು ಅಥವಾ ಕೆಲವು ಹೆಸರೇ ಕೇಳಿರದಂತಹ ಸಪ್ಲಿಮೆಂಟ್ ಗಳನ್ನು ನಿರಂತರವಾಗಿ ಬಳಕೆ ಮಾಡುವುದರಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ. ಹೆಲ್ತ್ ಸಪ್ಲಿಮೆಂಟ್ ಅತಿಯಾದ ಸೇವನೆಯು ಮೂಳೆಗಳಿಗೆ ಹಾನಿ ಮಾಡುವುದಲ್ಲದೆ, ಮೂತ್ರಪಿಂಡಗಳು ಮತ್ತು ಯಕೃತ್ತಿನಂತಹ ಇತರ ಅಂಗಗಳಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ, ಇವು ಬಹು -ಅಂಗಗಳ ವೈಫಲ್ಯಕ್ಕೂ ಕಾರಣವಾಗಬಹುದು. ಇದರ ಪರಿಣಾಮ ಮೂಳೆ ದುರ್ಬಲಗೊಂಡು ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಪರಿಸ್ಥಿತಿ ಗಂಭೀರವಾದಾಗ ಕೀಲುಗಳ ಶಸ್ತ್ರಚಿಕಿತ್ಸೆ ಅಗತ್ಯವಾಗಿ ಮಾಡಬೇಕಾಗುತ್ತದೆ. ಇದರೊಂದಿಗೆ, ಬೆನ್ನು ನೋವು, ಹೆಚ್ಚಿದ ಯೂರಿಕ್ ಆಮ್ಲ, ಡಿಸ್ಕ್ ಕ್ಷೀಣತೆ ಮತ್ತು ವಿಟಮಿನ್ ಡಿ ಕೊರತೆ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವೈದ್ಯರನ್ನು ಕೇಳದೆ ಈ 4 ಸಪ್ಲಿಮೆಂಟ್ ಎಂದಿಗೂ ಸೇವಿಸಬೇಡಿ!
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ