ವೈದ್ಯರನ್ನು ಕೇಳದೆ ಈ 4 ಸಪ್ಲಿಮೆಂಟ್ ಎಂದಿಗೂ ಸೇವಿಸಬೇಡಿ!
ದೇಹದ ದೈನಂದಿನ ಅಗತ್ಯಗಳನ್ನು ಪೂರೈಸಲು ಜನರು ವಿಟಮಿನ್ ಮತ್ತು ಖನಿಜಯುಕ್ತ ಸಪ್ಲಿಮೆಂಟ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಇದು ನಿಜಕ್ಕೂ ಆರೋಗ್ಯಕರವೇ? ಸಪ್ಲಿಮೆಂಟ್ಗಳ ಅಡ್ಡಪರಿಣಾಮಗಳೇನು? ಎಂಬುದರ ಬಗ್ಗೆ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ವಿಟಮಿನ್, ಕ್ಯಾಲ್ಸಿಯಂ, ಐರನ್ ಮುಂತಾದ ಸಪ್ಲಿಮೆಂಟ್ಗಳನ್ನು ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಆಹಾರದಲ್ಲಿ ನಮಗೆ ಈ ಸಪ್ಲಿಮೆಂಟ್ಗಳು ಹೆಚ್ಚು ಸಿಗದಿದ್ದಾಗ ಮಾತ್ರೆ, ಸಿರಪ್ಗಳ ರೂಪದಲ್ಲಿ ಅದನ್ನು ಸೇವಿಸಬೇಕಾಗುತ್ತದೆ. ಜಂಕ್ಫುಡ್, ಅನಾರೋಗ್ಯಕರ ಆಹಾರ, ಒತ್ತಡದ ಜೀವನಶೈಲಿಯಿಂದ ದೇಹಕ್ಕೆ ಸಪ್ಲಿಮೆಂಟ್ಗಳ ಕೊರತೆ ಹೆಚ್ಚುತ್ತಿದೆ. ಹೀಗಾಗಿ, ದೇಹದ ದೈನಂದಿನ ಅಗತ್ಯಗಳನ್ನು ಪೂರೈಸಲು ಜನರು ವಿಟಮಿನ್ ಮತ್ತು ಖನಿಜಯುಕ್ತ ಸಪ್ಲಿಮೆಂಟ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಹೆಚ್ಚಿನ ಸಪ್ಲಿಮೆಂಟ್ಗಳು ನಿಮ್ಮ ದೇಹಕ್ಕೆ ಆರೋಗ್ಯಕರವಾಗಿರುತ್ತವೆ. ಅವುಗಳಿಂದ ನಿಮಗೆ ಹಲವಾರು ರೀತಿಯಲ್ಲಿ ಪ್ರಯೋಜನ ಸಿಗುತ್ತದೆ.
ಆದರೆ, ವೈದ್ಯರಾದ ಡಾ. ಚಾರ್ಲ್ಸ್ ಟಿಕ್ಟಾಕ್ನಲ್ಲಿ ಕೆಲವು ಎಚ್ಚರಿಕೆಗಳನ್ನು ನೀಡಿದ್ದು, ನಮ್ಮ ಆರೋಗ್ಯಕ್ಕೆ ತೊಂದರೆ ಉಂಟುಮಾಡುವ 4 ಸಪ್ಲಿಮೆಂಟ್ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವುಗಳೆಂದರೆ. ವಿಟಮಿನ್ ಎ, ವಿಟಮಿನ್ ಇ, ಕಬ್ಬಿಣಾಂಶ, ಬಯೋಟಿನ್.
ಇದನ್ನೂ ಓದಿ: ಕೂದಲು ಡ್ಯಾಮೇಜ್ ಆಗದಂತೆ ತಡೆಯುವ 7 ವಿಟಮಿನ್ಗಳಿವು
ವಿಟಮಿನ್ ಎ:
ವಿಟಮಿನ್ ಎ ದೇಹಕ್ಕೆ ಅಗತ್ಯವಾದ ವಿಟಮಿನ್ ಆಗಿದೆ. ಇದು ನಿಮ್ಮ ದೃಷ್ಟಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಹೃದಯ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದರೂ ವಿಟಮಿನ್ ಎ ಸಪ್ಲಿಮೆಂಟ್ ಅನ್ನು ನಿರಂತರವಾಗಿ ಸೇವಿಸುವುದರಿಂದ ಲಿವರ್ಗೆ ಡ್ಯಾಮೇಜ್ ಮಾಡುವ ಸಾಧ್ಯತೆ ಇರುತ್ತದೆ. ವಿಟಮಿನ್ ಎಯ ಅತಿಯಾದ ಸೇವನೆಯು ವಾಂತಿ, ತಲೆ ತಿರುಗುವಿಕೆ, ದೃಷ್ಟಿ ಮಂದವಾಗುವುದು, ಮೂಳೆ ಡ್ಯಾಮೇಜ್ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.
ವಿಟಮಿನ್ ಇ:
ವಿಟಮಿನ್ ಇ ಮತ್ತು ಕ್ಯಾನ್ಸರ್ ನಡುವೆ ಸಂಬಂಧವಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಈ ವಿಟಮಿನ್ ಸೇವನೆ ಅಧಿಕವಾದರೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳು ಎತ್ತಿ ತೋರಿಸಿವೆ.
ಕಬ್ಬಿಣಾಂಶ:
ಐರನ್ ಅತ್ಯಂತ ಪ್ರಮುಖ ಖನಿಜವಾಗಿದೆ. ಇದರ ಕೊರತೆಯು ರಕ್ತಹೀನತೆ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೆ, ವೈದ್ಯರು ಐರನ್ ಸಪ್ಲಿಮೆಂಟ್ ಸೇವಿಸಲು ಹೇಳದೇ ಇದ್ದರೂ ನೀವು ಸೇವಿಸಿದರೆ ಅದು ನಿಮ್ಮ ಹೃದಯವನ್ನು ಹಾನಿಗೊಳಿಸಬಹುದು. ಕಬ್ಬಿಣದ ಸಪ್ಲಿಮೆಂಟ್ಗಳ ದೀರ್ಘಾವಧಿಯ ಬಳಕೆಯು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಇದನ್ನೂ ಓದಿ: ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗಿದೆ ಎಂಬುದರ ಲಕ್ಷಣಗಳಿವು
ಬಯೋಟಿನ್:
ಬಯೋಟಿನ್ ಕೂದಲು ಮತ್ತು ಉಗುರುಗಳಿಗೆ ಪ್ರಯೋಜನಕಾರಿ. ಆದರೆ, ಈ ಸಪ್ಲಿಮೆಂಟ್ ಬಳಕೆಯು ತಪ್ಪಾದ ಲ್ಯಾಬ್ ಪರೀಕ್ಷಾ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಇದು ಅಪಾಯಕಾರಿಯಾಗಿದೆ. ಅಂದರೆ, ನೀವು ಯಾವುದಾದರೂ ಸಮಸ್ಯೆಗೆ ಲ್ಯಾಬ್ ಟೆಸ್ಟ್ ಮಾಡಿಸಲು ಹೋದಾಗ ಅದರ ರಿಸಲ್ಟ್ ನಿಮ್ಮ ಬಯೋಟಿನ್ ಸಪ್ಲಿಮೆಂಟ್ ಸೇವನೆಯ ಪರಿಣಾಮದಿಂದ ಬದಲಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ, ಯಾವುದೇ ಸಪ್ಲಿಮೆಂಟ್ಗಳನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಏಕೆಂದರೆ ತಪ್ಪಾದ ಸಪ್ಲಿಮೆಂಟ್ ನಿಮ್ಮ ದೇಹದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಯಾವುದೇ ಸಪ್ಲಿಮೆಂಟ್ಗಳನ್ನು ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡುವುದರಿಂದ ಆರೋಗ್ಯದ ಅಪಾಯಗಳನ್ನು ತಡೆಯಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




