
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ದೇಶದ 2ನೇ ಅತೀ ದೊಡ್ಡದಾದ, ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ) (MHRC) ಅನ್ನು ಆರಂಭಿಸಿದೆ. ಇದನ್ನು ಎ. 30ರಂದು ಆಂಧ್ರಪ್ರದೇಶದ ರಾಜ್ಯಪಾಲ ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಉದ್ಘಾಟಿಸಲಿದ್ದಾರೆ. ಈ ಕೇಂದ್ರ ಜುಲೈನಿಂದ ಸೇವೆ ಪ್ರಾರಂಭಿಸಲಿದೆ ಎಂದು ಮಾಹೆ ವಿವಿ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದ್ದಾರೆ.
ಮಾಹೆಯ ಆಡಳಿತ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯನ್ನು ಒದಗಿಸುವುದರ ಜೊತೆ ಜೊತೆಗೆ ಸಮಾಜಕ್ಕೆ ನೆರವಾಗುವ ಮತ್ತು ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಹೆ ಮಾಡುತ್ತಿದೆ. ಕ್ಯಾನ್ಸರ್ ಅಥವಾ ಕ್ಯಾನ್ಸರೇತರ ರೋಗಕ್ಕೆ ತುತ್ತಾಗಿ ದೀರ್ಘಕಾಲದಿಂದ ನೋವು ಅನುಭವಿಸುತ್ತಿರುವವರಿಗೆ ಜೀವನದ ಅಂತಿಮ ಹಂತದಲ್ಲಿ ಉತ್ತಮ ಆರೈಕೆ ಜತೆಗೆ ನೋವು ಉಪಶಮನಕ್ಕೆ ಮಾಹೆ ಎಂಎಚ್‌ಆರ್‌ಸಿ ಆರಂಭಿಸುತ್ತಿದೆ ಎಂದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ), ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಪ್ಯಾಲಿಯೇಟಿವ್ ಕೇರ್ ಸೇರಿದಂತೆ ವಿವಿಧ ಎನ್ ಜಿ ಓ ಗಳ ಸಹಯೋಗದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ತರಬೇತಿ ಪಡೆದ ವೈದ್ಯರು, ನರ್ಸ್, ಮನಶಾಸ್ತ್ರಜ್ಞರು, ಸಮಾಜಿಕ ಕಾರ್ಯಕರ್ತರನ್ನು ಈ ಕೇಂದ್ರ ಒಳಗೊಂಡಿರಲಿದೆ. ಜೊತೆಗೆ 105 ಹಾಸಿಗೆ ವ್ಯವಸ್ಥೆ ಇರುವ ಆರೈಕೆ ಮತ್ತು ಉಪಶಮನ ಕೇಂದ್ರ ಇದಾಗಿದ್ದು, ಆರಂಭದಲ್ಲಿ 35 ಹಾಸಿಗೆ ಸೇವೆಗೆ ಲಭ್ಯ ಇರಲಿದೆ. ಅನಂತರ ಹಂತ ಹಂತವಾಗಿ ಎಲ್ಲ ಬೆಡ್ ಸೇವೆಗೆ ಲಭ್ಯವಿರಲಿದೆ.
ಮಾಹೆಯ ಉಪಕುಲಪತಿ ಲೆ| ಜ| ಡಾ. ಎಂ.ಡಿ.ವೆಂಕಟೇಶ್ ಮಾತನಾಡಿ, ಹಾವಂಜೆ ಪರಿಸರದಲ್ಲಿ ಎಂಎಚ್‌ಆರ್‌ಸಿ ನಿರ್ಮಾಣಗೊಂಡಿರುವುದು ಜನರಿಗೆ ನೆರವು ನೀಡುವುದಕ್ಕಾಗಿದೆ. ಈ ರೀತಿಯ ಆರೋಗ್ಯ ಸೇವೆ ನೀಡುವುದು ನಮ್ಮ ಧ್ಯೇಯ. ಅದಕ್ಕಾಗಿಯೇ ಸುಮಾರು 65 ಕೋ. ರೂ. ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುತ್ತಿದ್ದೇವೆ. ಆರೈಕೆ ಪಡೆಯುವವರಿಗೆ ಪೂರ್ಣ ಸೇವೆ ಉಚಿತವಾಗಿದೆ. ಆದರೆ ಕಸ್ತೂರ್ಬಾ ಆಸ್ಪತ್ರೆಯ ಪಾಲಿಟೇಟಿವ್ ಕೇರ್ ವಿಭಾಗದಲ್ಲಿ ರೋಗಿಯನ್ನು ಪರಿಶೀಲಿಸಿ ಅಲ್ಲಿಂದ ಶಿಫಾರಸು ಪಡೆದ ಅನಂತರದಲ್ಲಿ ಆರೈಕೆ ಕೇಂದ್ರ ದಾಖಲಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ, ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
ಮಾಹೆಯ ಸಹ ಕುಲಪತಿ ಡಾ| ಶರತ್ ಕೆ. ರಾವ್ , ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ಔಷಧ ಮತ್ತು ಸಪೋರ್ಟಿವ್ ಕೇರ್ ವಿಭಾಗದ ಮುಖ್ಯಸ್ಥ ಡಾ. ನವೀನ್ ಸಾಲಿನ್ಸ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಸಹ ಕುಲಪತಿ ಡಾ. ನಾರಾಯಣ ಸಭಾಹಿತ್, ಸಿಒಒ ಡಾ. ರವಿರಾಜ್ ಎನ್.ಎಸ್., ಕುಲಸಚಿವ ಡಾ. ಗಿರಿಧರ್ ಪಿ. ಕಿಣಿ, ಎಂಎಚ್‌ಆರ್‌ಸಿ ನಿರ್ದೇಶಕಿ ಡಾ. ಸೀಮಾ ರಾಜೇಶ್ ರಾವ್, ಕೆಎಂಸಿ ಡೀನ್ ಡಾ. ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಪಿಆರ್ ನಿರ್ದೇಶಕ ಭರತ್ ಕುಮಾರ್ ಉಪಸ್ಥಿತರಿದ್ದರು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ