
ಬಿಸಿ ಅನ್ನ (Rice) ಊಟ ಮಾಡುವಾಗ ಸಿಗುವಷ್ಟು ಖುಷಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಚಳಿಗಾಲ, ಮಳೆಗಾಲ ಯಾವುದೇ ಇರಲಿ ಬಿಸಿ ಬಿಸಿಯಾಗಿರುವ ಅನ್ನ ಇರಲೇಬೇಕು. ಆದರೆ ಬಿಸಿ ಅನ್ನ ಮಾತ್ರವಲ್ಲ, ಉಳಿದ ಅನ್ನ (Leftover Rice) ಅಥವಾ ತಣ್ಣಗಿರುವ ಅನ್ನದಿಂದಲೂ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಹೌದು. ಬೇಡ ಎಂದು ಬಿಸಾಡುವ ಅನ್ನದಲ್ಲಿಯೇ ಅಮೃತದಂತಹ ಪ್ರಯೋಜನಗಳಿವೆ. ಇತ್ತೀಚಿಗೆ ನಡೆದ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದ್ದು ಬಿಸಿ ಅನ್ನಕ್ಕಿಂತ ರಾತ್ರಿಯಲ್ಲಿ ಉಳಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭಗಳಿವೆ ಎಂಬುದು ಬಹಿರಂಗಗೊಂಡಿದೆ. ಹಾಗಾದರೆ ನಿನ್ನೆ ಉಳಿದ ಅನ್ನ ನಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಣ್ಣಗಾದ ಅನ್ನ ಅಥವಾ ನಿನ್ನೆ ರಾತ್ರಿ ಉಳಿದ ಅನ್ನದಲ್ಲಿ ಬಿಡುಗಡೆಯಾಗುವ ಪಿಷ್ಟವು ನಮ್ಮ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಬೇಯಿಸಿದ ಅನ್ನಕ್ಕೆ ಹೋಲಿಸಿದರೆ ರಾತ್ರಿ ಉಳಿದಂತಹ ಅನ್ನವನ್ನು ಸೇವನೆ ಮಾಡುವುದರಿಂದ ರಕ್ತಕ್ಕೆ ಗ್ಲೂಕೋಸ್ ನಿಧಾನವಾಗಿ ಬಿಡುಗಡೆಯಾಗುತ್ತದೆ ಮತ್ತು ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಇತ್ತೀಚೆಗೆ ಸಂಶೋಧಕರು ನಡೆಸಿದಂತಹ ಒಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಸಂಶೋಧಕರು ಆರೋಗ್ಯವಾಗಿರುವ 15 ವಯಸ್ಕರ ಮೇಲೆ ಸಮೀಕ್ಷೆ ನಡೆಸಿದ್ದು, ಅನ್ನವನ್ನು ಬೇಯಿಸಿ, ರೆಫ್ರಿಜರೇಟರ್‌ನಲ್ಲಿ 4 ° C ನಲ್ಲಿ 24 ಗಂಟೆಗಳ ಕಾಲ ಇಡಲಾಯಿತು. ಬಳಿಕ ತಿನ್ನುವ ಮೊದಲು ಮತ್ತೆ ಅದನ್ನು ಬಿಸಿ ಮಾಡಿ ಎಲ್ಲರಿಗೂ ನೀಡಲಾಯಿತು. ತಕ್ಷಣ ಬೇಯಿಸಿ ತಿನ್ನುವ ಅನ್ನಕ್ಕೆ ಹೋಲಿಸಿದರೆ, ರಾತ್ರಿ ಉಳಿದ ಅನ್ನ ಅಥವಾ ತಣ್ಣಗಾದ ಅನ್ನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂಬುದನ್ನು ಕಂಡುಕೊಂಡರು. ಆರೋಗ್ಯ ತಜ್ಞರು ಹೇಳುವಂತೆ ತಣ್ಣಗಾದ ಅನ್ನ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸುವುದಲ್ಲದೆ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದು ದೊಡ್ಡ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅದೇ ರೀತಿ, ಇದು ಇನ್ಸುಲಿನ್ ಸಂವೇದನೆಗೆ ಸಂಬಂಧಿಸಿದ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ. ಮಾತ್ರವಲ್ಲ ಇದು ಹಸಿವನ್ನು ಕಡಿಮೆ ಮಾಡುತ್ತದೆ ಜೊತೆಗೆ ಹೊಟ್ಟೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಇನ್ನು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯ ಆಹಾರವಾಗಿದೆ.
ಇದನ್ನೂ ಓದಿ: Rice Water Benefits: ಅನ್ನ ಬಸಿದ ನೀರು ಚೆಲ್ಲದಿರಿ, ಮೂತ್ರನಾಳದ ಸೋಂಕನ್ನು ನಿವಾರಿಸುವ ಶಕ್ತಿ ಇದರಲ್ಲಿದೆ
ತಣ್ಣಗಾದ ಅನ್ನದಲ್ಲಿ ಹೆಚ್ಚಿನ ಪ್ರಮಾಣದ ನಿರೋಧಕ ಪಿಷ್ಟ ಇರುವುದರಿಂದ ಇವು ನಮ್ಮ ಆರೋಗ್ಯಕ್ಕೆ ಒಳ್ಳೆಯದು, ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು, ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ಕಡಿಮೆ ಮಾಡಲು ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇನ್ನು ಮುಂದೆ ಮನೆಯಲ್ಲಿ ಅನ್ನ ಉಳಿದರೆ ಅದನ್ನು ಎಸೆಯುವ ಬದಲು ಸೇವನೆ ಮಾಡಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ