ಗಿಡಮೂಲಿಕೆಗಳ ರಾಣಿ: ಪ್ರತಿದಿನ ತುಳಸಿ ನೀರು ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನ, ಇಲ್ಲಿದೆ ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 10, 2023 | 6:50 PM

ಆಯುರ್ವೇದ ಗಿಡಮೂಲಿಕೆಯಾದ ತುಳಸಿ ನಿಮ್ಮ ಮನೆಯ ಸಸ್ಯ ಮಾತ್ರವಲ್ಲ, ಬದಲಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವ ಔಷಧಿಯಾಗಿದೆ. ಪ್ರತಿದಿನ ತುಳಸಿ ನೀರನ್ನು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಜ್ಞರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಗಿಡಮೂಲಿಕೆಗಳ ರಾಣಿ: ಪ್ರತಿದಿನ ತುಳಸಿ ನೀರು ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನ, ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಅಡುಗೆ ಮನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸುವ ಮಾಂತ್ರಿಕ ಪದಾರ್ಥಗಳಿರುವ ಭಂಡಾರವೆಂದರೆ ತಪ್ಪಾಗಲಾರದು. ಇನ್ನು ವಿಷ್ಣುಗೆ ಪ್ರೀಯವಾದ ತುಳಸಿ ಕೂಡ ಆ ಭಂಡಾರಗಳಲ್ಲಿ ಒಂದಾಗಿದೆ. ಜೊತೆಗೆ ಹಿಂದೂ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನ ಪಡೆದಿರುವ ತುಳಸಿ, ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇನ್ನು ಆಯುರ್ವೇದ ಔಷಧದಲ್ಲಿ ಶತಮಾನಗಳಿಂದ ಇದನ್ನು ಬಳಸಲಾಗುತ್ತತ್ತಿದೆ. ‘ಗಿಡಮೂಲಿಕೆಗಳ ರಾಣಿ’ ಎಂದು ಕರೆಯಲ್ಪಡುವ ತುಳಸಿ, ನಿಮ್ಮ ಮನಸ್ಸು ಮತ್ತು ದೇಹಕ್ಕೆ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ತುಳಸಿ ನೀರನ್ನು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಸವಿಸ್ತಾರವಾಗಿ ತಿಳಿಸಲು ಹೆಲ್ತ್ ಶಾಟ್ಸ್ ಮುಂಬೈನ ರೆಜುವಾ ಎನರ್ಜಿ ಸೆಂಟರ್ನ ಪೌಷ್ಟಿಕ ತಜ್ಞ ಡಾ. ನಿರುಪಮಾ ರಾವ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಪ್ರತಿದಿನ ತುಳಸಿ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಕೆಲವು ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ತುಳಸಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ:

ತುಳಸಿಯಲ್ಲಿ ಫ್ಲೇವನಾಯ್ಡ್​​ಗಳು, ಪಾಲಿಫಿನಾಲ್​​ಗಳು ಮತ್ತು ಸಾರಭೂತ ತೈಲಗಳಂತಹ ಸಂಯುಕ್ತಗಳಿವೆ, ಅವು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಹಾನಿಕಾರಕ ಫ್ರೀ ರಾಡಿಕಲ್​​ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ, ಆ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶ ಹಾನಿಗೊಳ್ಳದಂತೆ ರಕ್ಷಿಸುತ್ತದೆ” ಎಂದು ಡಾ. ನಿರುಪಮಾ ರಾವ್ ತಿಳಿಸಿದ್ದಾರೆ.

2. ತುಳಸಿ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ತುಳಸಿ ಇಮ್ಯುನೊಮೋಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ, ಅಂದರೆ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತುಳಸಿ ನೀರಿನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಸೋಂಕುಗಳಿಂದ ದೂರವಿರಿಸುತ್ತದೆ.

3. ತುಳಸಿ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ತುಳಸಿ ನೀರಿನಲ್ಲಿರುವ ಕಾರ್ಮಿನೇಟಿವ್ ಗುಣಲಕ್ಷಣಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಗ್ಯಾಸ್ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಜೊತೆಗೆ ತುಳಸಿ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಂಡು ಬರುವ ಸಮಸ್ಯೆಗಳನ್ನು ಶಮನಗೊಳಿಸಲು ಮತ್ತು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ತುಳಸಿ ನೀರನ್ನು ಬೆಳಿಗ್ಗೆ ಮತ್ತು ದಿನವಿಡೀ ನಿಮ್ಮ ನೀರಿನ ಬಾಟಲಿಯಲ್ಲಿ ಹಾಕಿಕೊಂಡು ಕುಡಿಯುವುದರಿಂದ ನಿಮ್ಮ ದೇಹದಿಂದ ವಿಷ ಮತ್ತು ಕೀಟಾಣುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ

4. ಒತ್ತಡ ನಿವಾರಣೆ:

ತಜ್ಞರ ಪ್ರಕಾರ, ತುಳಸಿಯನ್ನು ಅಡಾಪ್ಟೋಜೆನಿಕ್ ಗಿಡಮೂಲಿಕೆ ಎಂದು ಪರಿಗಣಿಸಲಾಗುತ್ತದೆ, ಅಂದರೆ ಇದು ದೇಹದ ಸ್ಥಿತಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ನೀಡಲು ಸಹಕಾರಿಯಾಗಿದೆ. ತುಳಸಿ ನೀರನ್ನು ಕುಡಿಯುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ತುಳಸಿ ಗಿಡ ಒಣಗದಿರಲು ಈ ಸಿಂಪಲ್​​ ಟಿಪ್ಸ್​​ ಫಾಲೋ ಮಾಡಿ

5. ಉಸಿರಾಟದ ಸಮಸ್ಯೆಯನ್ನು ಪರಿಹರಿಸುತ್ತದೆ:

ಕೆಮ್ಮು, ಶೀತ ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ತುಳಸಿಯನ್ನು ಬಳಸಲಾಗುತ್ತದೆ. ತುಳಸಿ ನೀರನ್ನು ಕುಡಿಯುವುದರಿಂದ ಉಸಿರಾಟದ ಸಮಸ್ಯೆ ಮೇಲೆ ಹಿತವಾದ ಪರಿಣಾಮ ಬೀರಬಹುದು ಮತ್ತು ಉಸಿರಾಟದ ಅಸ್ವಸ್ಥತೆಯಿಂದ ಪರಿಹಾರವನ್ನು ನೀಡುತ್ತದೆ. ತುಳಸಿಯು ಶಕ್ತಿಯುತ ಪ್ರತಿರೋಧಕ ಗುಣಲಕ್ಷಣಗಳನ್ನು ಹೊಂದಿದೆ, ಇದು ಕಫ, ಕಿರಿಕಿರಿ ಮತ್ತು ಶೀತದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಪ್ರವಾಸ ಮಾಡುವಾಗ ವಾಂತಿ ಬರುವ ಅನುಭವವಾದರೆ ತುಳಸಿ ಎಲೆಯನ್ನು ಮೂಗಿನ ಬಳಿ ಹಿಡಿದು ಪರಿಮಳ ತೆಗೆದುಕೊಳ್ಳುವುದರಿಂದ ವಾಂತಿ ಬರುವುದಿಲ್ಲ.

6. ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ:

ತುಳಸಿಯಲ್ಲಿ ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳಿವೆ, ಇದು ಬಾಯಿಯ ಸೋಂಕುಗಳನ್ನು ತಡೆಯಲು ಮತ್ತು ಒಟ್ಟಾರೆ ಬಾಯಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತುಳಸಿ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕರ ಒಸಡುಗಳನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ಇದು ಬಾಯಿಯ ದುರ್ವಾಸನೆಯನ್ನೂ ಕಡಿಮೆ ಮಾಡುತ್ತದೆ.

7. ನಿರ್ವಿಷೀಕರಣ

“ತುಳಸಿ ಅಸಂಖ್ಯಾತ ನಿರ್ವಿಷಗೊಳಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅದು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಒಟ್ಟಾರೆ ನಿರ್ವಿಷೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ” ಎಂದು ತಜ್ಞರು ಹೇಳುತ್ತಾರೆ. ಆದರೆ ನಿಮ್ಮ ದೈನಂದಿನ ಆಹಾರದಲ್ಲಿ ತುಳಸಿಯನ್ನು ಸೇರಿಸುವ ಮೊದಲು ನಿಮ್ಮ ವೈದ್ಯರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ನಿಮ್ಮ ದೇಹಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಎಲ್ಲರ ದೇಹಪ್ರಕೃತಿ ಒಂದೇ ರೀತಿಯಾಗಿ ಇರುವುದಿಲ್ಲ. ಹಾಗಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇನ್ನಷ್ಟು ಆರೋಗ್ಯ ಸಂಬಂಧಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ