
ಬಾದಾಮಿ ಮತ್ತು ವಾಲ್ನಟ್ ನಂತಹ ಒಣ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಆರೋಗ್ಯಕರ ಒಣ ಹಣ್ಣುಗಳ ಪಟ್ಟಿಯಲ್ಲಿ ಅಂಜೂರವನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ. ಆದರೆ ಈ ಅಂಜೂರ (figs) ನಮ್ಮ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಮಾತ್ರವಲ್ಲ ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇವುಗಳಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಅಂಜೂರವನ್ನು ನೀವು ಯಾವುದೇ ರೀತಿಯಲ್ಲಿಯೂ ಸೇವನೆ ಮಾಡಬಹುದು. ಆದರೆ ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ, ಇವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿರ್ದಿಷ್ಟ ಪ್ರಯೋಜನಗಳು ಸಿಗುತ್ತದೆ. ಒಣದ್ರಾಕ್ಷಿಯಂತೆಯೇ, ಇದರ ಸೇವನೆ ಕೂಡ, ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ನೀವು ಗಮನಿಸುವಂತೆ ಮಾಡುತ್ತದೆ. ಹಾಗಾದರೆ ಇದರಿಂದ ನಮ್ಮ ಆರೋಗ್ಯಕ್ಕಿರುವ ಪ್ರಯೋಜನಗಳೇನು? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಅಂಜೂರವು ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿದ್ದು ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂಜೂರದ ಹಣ್ಣು ಕ್ಲೋರೊಜೆನಿಕ್ ಆಮ್ಲವನ್ನು ಸಹ ಹೊಂದಿರುತ್ತದೆ, ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಹೆಚ್ಚುವರಿಯಾಗಿ, ನೆನೆಸಿದ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಟೈಪ್ -2 ಮಧುಮೇಹ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ.
ಅಂಜೂರವು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮಾತ್ರವಲ್ಲ ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಅಂಜೂರ ಸೇವನೆ ಮಾಡುವುದಕ್ಕೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಮಲಬದ್ಧತೆಯಿಂದ ಬಳಲುತ್ತಿರುವ ರೋಗಿಗಳು ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.
ಇತ್ತೀಚಿನ ದಿನಗಳಲ್ಲಿ, ಅನೇಕರು ತೂಕ ಹೆಚ್ಚಾಗುವುದರ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ. ಅವರ ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುವುದರಿಂದ ಹಿಡಿದು ಆಹಾರ ಕ್ರಮವನ್ನು ಅನುಸರಿಸುವ ವರೆಗೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಇವುಗಳ ಬದಲು ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು.
ಅಂಜೂರವು ಕ್ಯಾಲ್ಸಿಯಂ ಅಂಶಗಳಿಂದ ಸಮೃದ್ಧವಾಗಿದ್ದು, ಅಂಜೂರದ ಹಣ್ಣುಗಳ ಸೇವನೆಯು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಹಾಲು ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಂಜೂರವು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಇದನ್ನೂ ಓದಿ: ಈ ಒಣಹಣ್ಣನ್ನು ನೆನೆಸಿಟ್ಟು ತಿಂದರೆ ತೂಕ ಇಳಿಯೋದು ಗ್ಯಾರಂಟಿ
ಅಂಜೂರ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಕೂಡ ಕಡಿಮೆಯಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ