ಕಣ್ಣುಗಳು ದೇವರು ನಮಗೆ ಕೊಟ್ಟ ಒಂದು ಸುಂದರ ಅಂಗ. ಆದರೆ ನಾವು ನಮ್ಮ ಕಣ್ಣುಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಈಗ ಮೊಬೈಲ್, ಕಂಪ್ಯೂಟರ್ ಯುಗ. ಬಹುಪಾಲು ಜನರು ದಿನದಲ್ಲಿ ಅರ್ಧ ಭಾಗ ಮೊಬೈಲ್, ಕಂಪ್ಯೂಟರ್ ಮುಂದೆ ಕುಳಿತಿರುತ್ತಾರೆ. ಹೀಗಾಗಿ ಸಹಜವಾಗಿಯೇ ಕಣ್ಣಿನ ಆರೋಗ್ಯ ಹದಗೆಡುತ್ತಿದೆ. ಕಣ್ಣು ಉರಿ, ನೋವು, ದೃಷ್ಟಿ ಮಂದವಾಗುವುದು ಈಗೀಗ ಜಾಸ್ತಿಯಾಗಿದೆ. ಆದರೆ ಈ ಮೊಬೈಲ್ ಮತ್ತು ಕಂಪ್ಯೂಟರ್, ಲ್ಯಾಪ್ಟಾಪ್ ಸ್ಕ್ರೀನ್ ನೋಡುವುದರಿಂದ ಮಾತ್ರವಲ್ಲ, ನಿಮಗೆ ಗೊತ್ತಿಲ್ಲದೆ ನೀವು ಮಾಡುವ ಕೆಲವು ತಪ್ಪುಗಳು ಕೂಡ ನಿಮ್ಮ ಕಣ್ಣಿಗೆ ಹಾನಿಯನ್ನುಂಟು ಮಾಡುತ್ತವೆ. ಅವು ಯಾವವು? ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಏನನ್ನು ಮಾಡಬಾರದು ಎಂಬುದನ್ನು ನಾವಿಲ್ಲಿ ಹೇಳಿದ್ದೇವೆ ನೋಡಿ..
ಡಯಟ್ ಬಗ್ಗೆ ಸರಿಯಾಗಿ ಕಾಳಜಿ ವಹಿಸದೆ ಇರುವುದು
ತೂಕ ಇಳಿಸಿಕೊಳ್ಳಲು ಅಥವಾ ದೈಹಿಕ ಆರೋಗ್ಯದ ದೃಷ್ಟಿಯಿಂದ ನೀವು ಅಳವಡಿಸಿಕೊಳ್ಳುವ ಕೆಲವು ಡಯಟ್ಗಳು ಕಣ್ಣಿನ ಆರೋಗ್ಯ ಕೆಡಿಸುತ್ತವೆ. ನಮ್ಮ ಕಣ್ಣುಗಳ ಆರೋಗ್ಯಕ್ಕೆ ಸೂಕ್ಷ್ಮ ಪೋಷಕಾಂಶಗಳು ಬೇಕಾಗುತ್ತವೆ. ವಿಟಮಿನ್ ಸಿ, ಲ್ಯುಟೆನ್, ಒಮೆಗಾ 3 ಫ್ಯಾಟಿ ಆ್ಯಸಿಡ್, ಜಿನ್ ಅಂಶಗಳ ಆಹಾರಗಳು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತವೆ. ಸಿಟ್ರಸ್ ಹಣ್ಣುಗಳು, ಹಸಿರು ಸೊಪ್ಪು, ತರಕಾರಿಗಳು, ನಟ್ಗಳು ಅಗತ್ಯ. ಹೆಚ್ಚಿನ ನೀರು ಕುಡಿಯಬೇಕಾಗುತ್ತದೆ. ಹಾಗಾಗಿ ಡಯಟ್ ಮಾಡುವಾಗ ಕಣ್ಣಿನ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಕಣ್ಣಿಗೆ ಹಾನಿ ತಪ್ಪಿದ್ದಲ್ಲ
ಕಣ್ಣು ರಕ್ಷಣಾ ಕವಚ ಧರಿಸದೆ ಇರುವುದು
ಪ್ರತಿದಿನ ಕಣ್ಣುಗಳು ಅನೇಕ ಹಾನಿಕಾರಕ ಅಂಶಗಳಿಗೆ ಒಡ್ಡಿಕೊಳ್ಳುತ್ತವೆ. ಅದರಲ್ಲೂ ಈಜುವವರು, ಆಟವಾಡುವವರು, ವೆಲ್ಡಿಂಗ್ ಮಾಡುವವರು ಇನ್ನೂ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಇಂಥದ್ದನ್ನೆಲ್ಲ ಮಾಡುವಾಗ ಕಣ್ಣಿಗೆ ರಕ್ಷಣಾ ಕವಚ ಹಾಕಿಕೊಳ್ಳಬೇಕು. ಸುರಕ್ಷತಾ ಗ್ಲಾಸ್ಗಳು, ಗಾಗಲ್ಗಳ ಬಳಕೆ ಮಾಡಬೇಕು.
ಕಣ್ಣುಗಳನ್ನು ಉಜ್ಜುವುದು
ಇದು ಅನೇಕರು ಮಾಡುವ ತಪ್ಪು. ಕಣ್ಣು ತುರಿಸುತ್ತಿದೆ ಎಂದಾಕ್ಷಣ ಒಂದೇ ಸಮ ಉಜ್ಜುತ್ತಾರೆ. ಆದರೆ ಹೀಗೆ ಕಣ್ಣುಗಳನ್ನು ಉಜ್ಜುವುದು ತುಂಬ ಅಪಾಯಕಾರಿ. ಕಾರ್ನಿಯಾಕ್ಕೆ ಹಾನಿಯಾಗುತ್ತದೆ. ಅಷ್ಟೇ ಅಲ್ಲ, ಕಣ್ಣಿನ ಚರ್ಮದಡಿಯಲ್ಲಿ ಇರುವ ರಕ್ತನಾಳಗಳಿಗೂ ಇದು ಹಾನಿಯುಂಟುಮಾಡುತ್ತದೆ.
ಕಣ್ಣುಗಳಿಗೆ ವಿಶ್ರಾಂತಿ ಕೊಡದೆ ಇರುವುದು
ಸದಾ ಮೊಬೈಲ್, ಕಂಪ್ಯೂಟರ್ ನೋಡುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಾಗ ಕಣ್ಣುಗಳಿಗೆ ವಿಶ್ರಾಂತಿ ಕೊಡಬೇಕು. ಇಲ್ಲದಿದ್ದರೆ ಕಣ್ಣುಗಳಲ್ಲಿ ನೀರಿನ ಅಂಶ ಕಡಿಮೆ ಆಗಿ, ತುರಿಕೆ ಬರುವುದು, ಉರಿಯುವ ಸಮಸ್ಯೆ ಎದುರಾಗುತ್ತದೆ. ದೃಷ್ಟಿಯೂ ಕೂಡ ಬ್ಲರ್ ಆಗಲು ತೊಡಗುತ್ತದೆ.
ಇದನ್ನೂ ಓದಿ: Health Tips: ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ: ಇಲ್ಲಿದೆ ಮಾಹಿತಿ