
ನಿಮಗೂ ಆಗಾಗ ಕಾರಣವಿಲ್ಲದೆ ಬೇಸರ, ಚಡಪಡಿಕೆ ಅಥವಾ ಹತಾಶೆಯ ಭಾವನೆ ಕಾಡುತ್ತಾ, ಇದಕ್ಕೆ ಕಾರಣ ಏನಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ, ಈ ರೀತಿಯಾಗುವುದು ನಿಮಗೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಹಲವರನ್ನು ಕಾಡುತ್ತಿದೆ. ಕೆಲವರು ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಅದು ಸರಿಯಲ್ಲ. ಏಕೆಂದರೆ ಕಾರಣವಿಲ್ಲದೆ ಬೇಸರ, ಕೋಪ ಇವೆಲ್ಲಾ ಬರುವುದಕ್ಕೆ ಕಾರಣವಿದೆ. ಹೌದು. ವಿಟಮಿನ್ ಬಿ 12 (Vitamin B12) ಕೊರತೆ ಈ ರೀತಿಯಾಗುವುದಕ್ಕೆ ಮುಖ್ಯ ಕಾರಣವಾಗಿರಬಹುದು. ಈ ಪ್ರಮುಖ ವಿಟಮಿನ್ ಕೊರತೆಯಿದ್ದರೆ, ಮೆದುಳಿನಲ್ಲಿ ಸಂತೋಷದ ಹಾರ್ಮೋನುಗಳು ಕಡಿಮೆಯಾಗುತ್ತವೆ ಮತ್ತು ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲ, ಆಯಾಸ, ಉಸಿರಾಟದ ತೊಂದರೆ ಮತ್ತು ಸ್ಮರಣಶಕ್ತಿ ನಷ್ಟದಂತಹ ದೈಹಿಕ ಸಮಸ್ಯೆಗಳು ಸಹ ಸಂಭವಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿಯ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು, ಯಾಕೆ ಈ ರೀತಿಯಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ನಮ್ಮ ದೇಹವನ್ನು ಸದೃಢವಾಗಿಡಲು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಅತ್ಯಗತ್ಯ. ಅವು ದೇಹವನ್ನು ಆರೋಗ್ಯವಾಗಿಡುವುದಲ್ಲದೆ, ನಿಮ್ಮ ಮನಸ್ಸು ಮತ್ತು ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದರೆ ಈ ಪ್ರಮುಖ ಜೀವಸತ್ವಗಳಲ್ಲಿ ಒಂದಾದ ವಿಟಮಿನ್ ಬಿ 12 ನ ನಿರಂತರ ಕೊರತೆಯಿದ್ದರೆ, ಮನಸ್ಸು ಚಂಚಲವಾಗುತ್ತದೆ. ಮೆದುಳಿನ ಕಾರ್ಯವು ನಿಧಾನಗೊಳ್ಳುತ್ತದೆ. ನಿರಂತರವಾಗಿ ತಲೆನೋವು, ಅನಗತ್ಯ ಕಿರಿಕಿರಿ, ಚಡಪಡಿಕೆ ಮತ್ತು ಯಾವುದರಲ್ಲೂ ಆಸಕ್ತಿಯ ಕೊರತೆಯಂತಹ ಭಾವನೆಗಳು ಕಂಡುಬರುತ್ತದೆ. ನಿಮಗೂ ಕೂಡ ಈ ರೀತಿಯಾಗುತ್ತಾ ಹಾಗದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಲಹೆಗಳನ್ನು ಅನುಸರಿಸಿ.
ಸಾಮಾನ್ಯವಾಗಿ ವಿಟಮಿನ್ ಬಿ 12 ಕೊರತೆಯು ದೈಹಿಕ ಶಕ್ತಿಯನ್ನು ಕಡಿಮೆ ಮಾಡುವುದಲ್ಲದೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರುವುದಕ್ಕೆ ಕಾರಣವಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಈ ವಿಟಮಿನ್ ಮೆದುಳಿನ ಸಂತೋಷದ ಹಾರ್ಮೋನುಗಳಾದ ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಯಾವಾಗ ಇದರ ಕೊರತೆಯಾಗುತ್ತದೆಯೋ ಅಂತಹ ಸಮಯದಲ್ಲಿ ಮೆದುಳು ಈ ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ. ಪರಿಣಾಮವಾಗಿ, ಒಬ್ಬ ವ್ಯಕ್ತಿ ಕಿರಿಕಿರಿ ಮತ್ತು ಖಿನ್ನತೆಗೆ ಒಳಗಾಗಬಹುದು. ಮಾತ್ರವಲ್ಲ, ನಕಾರಾತ್ಮಕ ಅಥವಾ ಗೊಂದಲದ ಆಲೋಚನೆಗಳಿಂದ ಒತ್ತಡಕ್ಕೆ ಒಳಗಾಗಬಹುದು. ನೀವು ಕೂಡ ಮಾನಸಿಕವಾಗಿ ದಣಿದಂತೆ ಅಥವಾ ಕಿರಿಕಿರಿ ಅನುಭವಕ್ಕೆ ಬರುತ್ತಿದ್ದರೆ ಅದಕ್ಕೆ ವಿಟಮಿನ್ ಬಿ 12 ಕೊರತೆಯೂ ಕಾರಣವಾಗಿರಬಹುದು.
ಇದನ್ನೂ ಓದಿ: ನೀವು ಸಸ್ಯಹಾರಿಗಳಾಗಿದ್ದು ವಿಟಮಿನ್ ಬಿ 12 ಕೊರತೆ ಆದ್ರೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ತಿಳಿದುಕೊಳ್ಳಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ