
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಅಭ್ಯಾಸಗಳು ಮತ್ತು ಕೆಲಸದ ಒತ್ತಡವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಕಾರಣವಾಗುತ್ತಿದೆ. ಇವುಗಳಲ್ಲಿ ವಿಟಮಿನ್ ಡಿ (Vitamin D) ಕೊರತೆಯೂ ಒಂದು. ಇದನ್ನು ಸೂರ್ಯನ ಬೆಳಕಿನಿಂದ ನೈಸರ್ಗಿಕವಾಗಿ ಪಡೆಯಬೇಕಾದರೂ ಕೂಡ ಜನರಿಗೆ ಬಿಸಿಲಿಗೆ ಹೋಗುವುದಕ್ಕೂ ಸಮಯ ಇಲ್ಲದಂತಾಗಿದೆ. ಇನ್ನು ಬೆಂಗಳೂರಿನಂತಹ ನಗರಗಳಲ್ಲಿ ಯಾವಾಗ ಬಿಸಿಲು ಬರುತ್ತದೆ ಎಂಬುದೇ ತಿಳಿಯದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಸಂದರ್ಭದಲ್ಲಿ ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಮತ್ತು ಅದರಿಂದ ಸಿಗುವ ಪ್ರಯೋಜನಗಳನ್ನು ಪಡೆಯಲು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಅನಿವಾರ್ಯವಾಗಿದೆ. ಹಾಗಾದರೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ಪಡೆದುಕೊಳ್ಳಲು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ನಿಮಗೆ ತಿಳಿದಿರಬಹುದು ನಮ್ಮ ಮೂಳೆಗಳು ಮತ್ತು ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ನಮ್ಮ ದೇಹದಲ್ಲಿ ಇದರ ಮಟ್ಟ ಕಡಿಮೆಯಾದರೆ, ನಾವು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ, ಈ ಕೊರತೆಯು ಆಯಾಸ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳು, ಕೂದಲು ಉದುರುವಿಕೆ ಮತ್ತು ಹಸಿವಿನ ನಷ್ಟದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇವುಗಳನ್ನು ನಿವಾರಿಸಲು, ಇರುವ ಒಂದೇ ದಾರಿಯೆಂದರೆ ವಿಟಮಿನ್ ಡಿ ಹೊಂದಿರುವ ಆಹಾರವನ್ನು ಸೇವಿಸಬೇಕಾಗುತ್ತದೆ.
ಸಾಮಾನ್ಯವಾಗಿ ಸಾಲ್ಮನ್, ಮ್ಯಾಕೆರೆಲ್, ಟ್ಯೂನ, ಸಾರ್ಡೀನ್ ಮತ್ತು ಟ್ರೌಟ್ ನಂತಹ ಕೊಬ್ಬಿನ ಮೀನುಗಳಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಅಲ್ಲದೆ, ಮೊಟ್ಟೆಯ ಹಳದಿ ಲೋಳೆಯಲ್ಲಿಯೂ ವಿಟಮಿನ್ ಡಿ ಸಿಗುತ್ತದೆ. ಇದರ ಜೊತೆಗೆ, ಕಿತ್ತಳೆ ರಸದಲ್ಲಿ ವಿಟಮಿನ್ ಡಿ ಯಥೇಚ್ಛವಾಗಿ ಲಭ್ಯವಿರುತ್ತದೆ. ಆದ್ದರಿಂದ, ಇವುಗಳೆಲ್ಲವನ್ನೂ ಪ್ರತಿನಿತ್ಯ ಸೇವನೆ ಮಾಡುವಂತಹ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ವಿಟಮಿನ್ ಡಿ ದೊರೆಯುತ್ತದೆ. ಮಾತ್ರವಲ್ಲ ಇದರ ಕೊರತೆಯಿಂದ ಉಂಟಾಗುವ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಅವು ಸಹಾಯ ಮಾಡುತ್ತವೆ.
ಇದನ್ನೂ ಓದಿ: ಮುಖದಲ್ಲಿ ಕಂಡು ಬರುವ ಲಕ್ಷಣಗಳಿಂದಲೇ ವಿಟಮಿನ್ ಡಿ ಕೊರತೆಯನ್ನು ಕಂಡು ಹಿಡಿಯಬಹುದು! ಹೇಗೆ ಗೊತ್ತಾ?
ವಾರಕ್ಕೊಮ್ಮೆ ಸಾಲ್ಮನ್ ಅಥವಾ ಸಾರ್ಡೀನ್‌ಗಳಂತಹ ಮೀನುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ವಿಟಮಿನ್ ಡಿ ಕೊಬ್ಬಿನಲ್ಲಿ ಕರಗುವ ಗುಣ ಹೊಂದಿರುವುದರಿಂದ, ಅದನ್ನು ಆಲಿವ್ ಎಣ್ಣೆ, ಬೀಜಗಳು ಅಥವಾ ಆವಕಾಡೊ ಜೊತೆ ಸೇವಿಸುವುದು ಒಳ್ಳೆಯದು. ಹೆಚ್ಚುವರಿಯಾಗಿ, ಪ್ರತಿದಿನ ಕನಿಷ್ಠ 10- 20 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ವಿಟಮಿನ್ ಡಿ ಪಡೆಯಲು ಪ್ರಯತ್ನಿಸಿ. ಈ ರೀತಿ ಮಾಡಿದ ನಂತರವೂ, ವಿಟಮಿನ್ ಡಿ ಸರಿಯಾಗಿ ಸಿಗುತ್ತಿಲ್ಲ, ಅದರ ಕೊರತೆ ಉಂಟಾಗುತ್ತಿದೆ ಎಂದು ಅನಿಸಿದರೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ. ಈ ಆಹಾರದ ಜೊತೆಗೆ, ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ