ಮುಖದಲ್ಲಿ ಕಂಡು ಬರುವ ಲಕ್ಷಣಗಳಿಂದಲೇ ವಿಟಮಿನ್ ಡಿ ಕೊರತೆಯನ್ನು ಕಂಡು ಹಿಡಿಯಬಹುದು! ಹೇಗೆ ಗೊತ್ತಾ?
ವಿಟಮಿನ್ ಡಿ ಪ್ರತಿಯೊಬ್ಬರ ದೇಹಕ್ಕೂ ಅಗತ್ಯವಾಗಿ ಬೇಕಾಗುವಂತಹ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಅದು ದೇಹದಲ್ಲಿ ಸರಿಯಾಗಿದ್ದಾಗ ಮಾತ್ರ ಮೂಳೆಗಳು ಆರೋಗ್ಯಕರವಾಗಿರುತ್ತವೆ. ರೋಗನಿರೋಧಕ ಶಕ್ತಿ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಹೆಚ್ಚುವರಿಯಾಗಿ ಕೆಲವೊಮ್ಮೆ ನಮ್ಮ ಮುಖವು ಕೂಡ ವಿಟಮಿನ್ ಡಿ ಕೊರತೆ ಬಗ್ಗೆ ಸೂಚನೆ ನೀಡಬಹುದು. ಈ ಕುರಿತು ಡಾ. ಅಂಕುರ್ ಸರಿನ್ ಎಂಬವರು ಮುಖದಲ್ಲಿ ಕಂಡು ಬರುವ ಕೆಲವು ಲಕ್ಷಣಗಳ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿದ್ದು, ಈ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಮ್ಮ ದೇಹಕ್ಕೆ ವಿಟಮಿನ್ ಡಿ (Vitamin D) ತುಂಬಾ ಅವಶ್ಯಕ. ಇದು ಪ್ರತಿಯೊಬ್ಬರ ದೇಹದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಟಮಿನ್ ಸಾಕಷ್ಟು ಪ್ರಮಾಣದಲ್ಲಿ ಇದ್ದಾಗ ಮಾತ್ರ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ನಮ್ಮ ಮಾನಸಿಕ ಸ್ಥಿತಿ ಕೂಡ ಸರಿಯಾಗಿರುತ್ತದೆ. ಮಾತ್ರವಲ್ಲ ನಮ್ಮ ಚರ್ಮ, ಕೂದಲು ಮತ್ತು ಉಗುರುಗಳಿಗೂ ಈ ವಿಟಮಿನ್ ಬಹಳ ಪ್ರಯೋಜನಕಾರಿಯಾಗಿದೆ. ಆದರೆ ವಿಟಮಿನ್ ಡಿ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಿಗದಿದ್ದಾಗ ಅದರ ಕೊರತೆ ಉಂಟಾಗುತ್ತದೆ. ಇದರ ಪರಿಣಾಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಆಯಾಸ, ಕೀಲು ನೋವು, ಸ್ನಾಯು ದೌರ್ಬಲ್ಯ, ಗಾಯಗಳಾದರೆ ಅದು ಗುಣವಾಗುವುದು ವಿಳಂಬವಾಗುವುದು, ಕೂದಲು ಉದುರುವಿಕೆ ಮತ್ತು ಚರ್ಮಕ್ಕೆ ಸಂಬಂಧಿಸಿ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಕೆಲವೊಮ್ಮೆ ನಮ್ಮ ಮುಖವು ಕೂಡ ವಿಟಮಿನ್ ಡಿ ಕೊರತೆ ಬಗ್ಗೆ ಸೂಚನೆ ನೀಡಬಹುದು. ಈ ಕುರಿತು ಡಾ. ಅಂಕುರ್ ಸರಿನ್ (drankursarin_sarinskin) ಎಂಬವರು ಮುಖದಲ್ಲಿ ಕಂಡು ಬರುವ ಕೆಲವು ಲಕ್ಷಣಗಳ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿದ್ದು, ಈ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವಿಟಮಿನ್ ಡಿ ಕಡಿಮೆಯಾದಾಗ ಚರ್ಮದ ಮೇಲೆ ಕಂಡುಬರುವ ಲಕ್ಷಣಗಳು:
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಇಲ್ಲದಿದ್ದರೆ, ಮುಖದಲ್ಲಿ ಹಠಾತ್ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಚರ್ಮವು ಒಣಗಿ ನಿರ್ಜೀವವಾದಂತೆ ಕಾಣುತ್ತದೆ. ಕೆಲವರಲ್ಲಿ ತುರಿಕೆ ಸಹಿತ ಕೆಂಪು ಗುಳ್ಳೆಗಳು ಕಂಡು ಬರಬಹುದು.
ಈ ರೀತಿಯ ಲಕ್ಷಣಗಳು ಕೂಡ ಕಂಡುಬರುತ್ತೆ:
ವೈದ್ಯರ ಪ್ರಕಾರ, ವಿಟಮಿನ್ ಡಿ ಕೊರತೆಯಾದಾಗ ಮುಖ ಮತ್ತು ಚರ್ಮದ ಕೆಲವು ಭಾಗಗಳಲ್ಲಿ ಕಂಡು ಬರುವುದು ಮಾತ್ರವಲ್ಲದೆ ಕೂದಲು ಮತ್ತು ಮೂಳೆಗಳ ಆರೋಗ್ಯದಲ್ಲಿ ಬದಲಾವಣೆಗಳಾಗುವ ಮೂಲಕ ಸ್ಪಷ್ಟವಾಗಿ ಕಂಡುಬರುತ್ತವೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಾದಾಗ ಚರ್ಮವು ಮಂದವಾಗುತ್ತದೆ, ಕೂದಲು ಸರಿಯಾಗಿ ಬೆಳೆಯುವುದಿಲ್ಲ, ಕೂದಲು ಅತಿಯಾಗಿ ಉದುರುತ್ತದೆ ಮತ್ತು ಮೂಳೆಗಳು ದುರ್ಬಲವಾಗಿ ಬೇಗ ಮುರಿಯಬಹುದು. ವಿಟಮಿನ್ ಡಿ ನಮ್ಮ ದೇಹದಲ್ಲಿ ಕೆರಾಟಿನ್ ಪ್ರೋಟೀನ್ ರಚನೆಗೆ ಸಹಾಯ ಮಾಡುತ್ತದೆ, ಚರ್ಮ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರ ಕೊರತೆ ಉಂಟಾದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ. ಕೂದಲು ಕೂಡ ದುರ್ಬಲವಾಗುತ್ತದೆ. ಹಲ್ಲುಗಳು ಸುಲಭವಾಗಿ ಮುರಿದು ಹೋಗಬಹುದು. ಆರೋಗ್ಯ ಸಮಸ್ಯೆಗಳು ಮಾತ್ರವಲ್ಲ ಸೌಂದರ್ಯದ ಸಮಸ್ಯೆಗಳನ್ನು ಕೂಡ ಉಂಟುಮಾಡುತ್ತದೆ.
ವಿಟಮಿನ್ ಡಿ ಕೊರತೆಗೆ ಕಾರಣಗಳೇನು?
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಿರುವುದು ವಿಟಮಿನ್ ಡಿ ಕೊರತೆಗೆ ಮುಖ್ಯ ಕಾರಣ. ಏಕೆಂದರೆ ಚರ್ಮವು ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಉತ್ಪಾದಿಸುತ್ತದೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸದಿರುವುದು ಈ ಸಮಸ್ಯೆಗೆ ಕಾರಣವಾಗಬಹುದು. ಮಾತ್ರವಲ್ಲ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ವಿಟಮಿನ್ ಡಿ ಯನ್ನು ಸರಿಯಾಗಿ ಹೀರಿಕೊಳ್ಳುವುದನ್ನು ತಡೆಯಬಹುದು. ಹೆಚ್ಚಿನ ಮೆಲನಿನ್ ಹೊಂದಿರುವವರು ಅಂದರೆ ಕಪ್ಪು ಚರ್ಮ ಹೊಂದಿರುವವರು ಸೂರ್ಯನ ಬೆಳಕಿನಿಂದ ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಡಿಯನ್ನು ಪಡೆಯುತ್ತಾರೆ. ಇದೆಲ್ಲದರ ಜೊತೆಗೆ ನೀವು ಸೇವನೆ ಮಾಡುವ ಕೆಲವು ಔಷಧಿಗಳಿಂದಲೂ ವಿಟಮಿನ್ ಡಿ ಕೊರತೆ ಉಂಟಾಗಬಹುದು.
ಇದನ್ನೂ ಓದಿ: ವಿಟಮಿನ್ ಬಿ12 ಪ್ರಯೋಜನಗಳೇನು? ಭಾರತದ 70% ಜನರಲ್ಲಿ ಇದರ ಕೊರತೆಯಾಗುವುದಕ್ಕೆ ಕಾರಣವೇನು?
ಸಮಸ್ಯೆಯನ್ನು ಕಡಿಮೆ ಮಾಡಲು ಏನು ಮಾಡಬಹುದು?
ಇಲ್ಲಿ ಹೇಳಿರುವ ಲಕ್ಷಣಗಳು ನಿಮ್ಮಲ್ಲೂ ಕಂಡುಬಂದರೆ ನಿಮಗೆ ವಿಟಮಿನ್ ಡಿ ಕಡಿಮೆಯಾಗಿದೆಯೇ ಎಂಬುದನ್ನು ಪರೀಕ್ಷಿಸಿ. ನೈಸರ್ಗಿಕವಾಗಿಯೇ ಸಮಸ್ಯೆಗಳನ್ನು ಕಡಿಮೆ ಮಾಡಲು, ಪ್ರತಿದಿನ ಬೆಳಿಗ್ಗೆ 10 ರಿಂದ 20 ನಿಮಿಷವಾದರೂ ಸೂರ್ಯನ ಬೆಳಕಿನಲ್ಲಿ ನಿಂತುಕೊಳ್ಳಿ. ವಿಟಮಿನ್ ಡಿ ಸಮೃದ್ಧವಾಗಿರುವ ಮೀನು, ಮೊಟ್ಟೆಯ ಹಳದಿ ಲೋಳೆ ಮತ್ತು ಅಣಬೆಗಳಂತಹ ಆಹಾರವನ್ನು ಸೇವಿಸಿ. ಇದೆಲ್ಲವನ್ನೂ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








