
ಚಳಿಗಾಲದಲ್ಲಿ (Winters) ಸಾಮಾನ್ಯವಾಗಿ ಬಾಯಾರಿಕೆ ಕಡಿಮೆ ಇರುತ್ತದೆ, ಆದರೆ ಇದರರ್ಥ ಕಡಿಮೆ ನೀರು (Water) ಕುಡಿಯಬೇಕು ಎಂದಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಗರ್ಭಿಣಿಯರಿಗೆ (Pregnant Women) ಮುಖ್ಯವಾಗಿದೆ. ಏಕೆಂದರೆ ದೇಹದಲ್ಲಿ ನೀರಿನ ಕೊರತೆಯಿದ್ದರೆ, ಅದು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಅನೇಕ ಸಂದರ್ಭಗಳಲ್ಲಿ, ಇದು ಹೆರಿಗೆಯ ಸಮಯದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು ಅಥವಾ ಅಕಾಲಿಕ ಜನನಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಗರ್ಭಿಣಿಯರು ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು, ನೀರಿನ ಅಂಶ ಕಡಿಮೆಯಾದರೆ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ ತಿಳಿದುಕೊಳ್ಳಿ.
ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಪ್ರಸೂತಿ ವಿಭಾಗದ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಗರ್ಭಿಣಿಯರು ಚಳಿಗಾಲದಲ್ಲಿಯೂ ಸಹ ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದಕ್ಕಿಂತ ಕಡಿಮೆ ಕುಡಿಯುವುದರಿಂದ ಮೂತ್ರನಾಳದ ಸೋಂಕು, ದೇಹದಲ್ಲಿ ಊತ ಮತ್ತು ಆಮ್ನಿಯೋಟಿಕ್ ದ್ರವದ ಪ್ರಮಾಣದಲ್ಲಿ ಇಳಿಕೆಯಾಗುವ ಅಪಾಯ ಹೆಚ್ಚಾಗುತ್ತದೆ. ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾದರೆ, ಅದು ಸಿಸೇರಿಯನ್ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ನೀರು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾಗುತ್ತದೆ. ಅದರ ಮಟ್ಟವು ಆರಂಭಿಕ ಹಂತದಲ್ಲಿ ಕಡಿಮೆಯಾದರೆ, ಅದು ಮಗುವಿನ ಕೈಗಳು, ಪಾದಗಳು ಅಥವಾ ಮುಖದ ಮೇಲೆ ಒತ್ತಡವನ್ನು ಉಂಟುಮಾಡಬಹುದು, ಇದು ಆಮ್ನಿಯೋಟಿಕ್ ಬ್ಯಾಂಡ್ ಸಿಂಡ್ರೋಮ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದಲ್ಲೂ ಮಹಿಳೆಯರು ನೀರು ಕುಡಿಯುವುದನ್ನು ಕಡಿಮೆ ಮಾಡಬಾರದು. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರನ್ನು ಕುಡಿಯುವುದು ಒಳ್ಳೆಯದು. ಜೊತೆಗೆ ನೀರಿನ ಕೊರತೆ ನೀಗಿಸಲು ಎಳನೀರು, ಸೂಪ್ ಗಳನ್ನು ಸೇವಿಸಬಹುದು ಆದರೆ ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ, ಏಕೆಂದರೆ ಇವುಗಳಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುತ್ತೀರಾ? ಹಾಗಿದ್ರೆ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ