ಕೊರೊನಾ ಸಮಯದಲ್ಲಂತೂ ನಮ್ಮ ದೇಹಕ್ಕೆ ಹೆಚ್ಚಿನ ರೋಗನಿರೋಧಕ ಶಕ್ತಿ ಬೇಕು. ಹೀಗಿರುವಾಗ ಡ್ರೈ ಫ್ರುಟ್ಸ್ಅನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಅದರಲ್ಲಿಯೂ ಮುಖ್ಯವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಖರ್ಜೂರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಸಿಹಿಯಾದ ಹಾಗೂ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಖರ್ಜೂರದಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಖರ್ಜೂರದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ರಕ್ತಹೀನತೆಯನ್ನು ಹೋಗಲಾಡಿಸಲು ಇದು ಸಹಾಯಕ. ದೇಹಕ್ಕೆ ಸುಸ್ತು, ಅಸ್ವಸ್ಥತೆಯಿಂದ ಬಳಲುತ್ತಿರುವವರು ಖರ್ಜೂರ ಸೇವಿಸುವುದು ಉತ್ತಮ. ದಿನಕ್ಕೆ ಎರಡಾದರೂ ಖರ್ಜೂರವನ್ನು ಸೇವಿಸುವುದು ಆರೋಗ್ಯಕ್ಕೆ ಹಿತಕರ.
ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಖರ್ಜೂರ ಸೇವನೆ ಉತ್ತಮ. ಹದಿಹರೆದವರಂತೂ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಸದಾಕಾಲ ಒಂದಲ್ಲಾ ಒಂದು ಔಷಧವನ್ನು ಹುಡುಕುತ್ತಲೇ ಇರುತ್ತಾರೆ. ಹೀಗಿರುವಾಗ ಪ್ರತಿನಿತ್ಯ ಖರ್ಜೂರ ಸೇವನೆಯನ್ನು ರೂಢಿಯಲ್ಲಿಟ್ಟುಕೊಂಡರೆ ಆರೋಗ್ಯವೂ ಸುಧಾರಿಸುತ್ತದೆ. ಜತೆಗೆ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಖರ್ಜೂರ ಸೇವನೆ ಒಳ್ಳೆಯ ಮಾರ್ಗ. ಒಂದು ಲೋಟ ಹಾಲಿಗೆ ಖರ್ಜೂರದ ಪೇಸ್ಟ್ ಅಥವಾ ಖರ್ಜೂರದ ಚೂರನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು. ದೇಹದಲ್ಲಿ ಶಕ್ತಿ ತುಂಬಲು ಸಹಾಯಕಾರಿಯಾಗಿದೆ. ಮಕ್ಕಳು ಸದೃಢವಾಗಿ ಬೆಳೆಯಲು ಖರ್ಜೂರ ಸೇವನೆ ಉತ್ತಮ. ಹಾಲಿನೊಂದಿಗೆ ಖರ್ಜೂರದ ಪೇಸ್ಟ್ಅನ್ನು ಮಿಶ್ರಣ ಮಾಡಿ ಮಕ್ಕಳಿಗೆ ಕುಡಿಸಿದರೆ ದಷ್ಟಪುಷ್ಟವಾಗಿ ಬೆಳೆಯಲು ಸಹಾಯವಾಗುತ್ತದೆ. ಹಾಗೆಯೇ ಸಿಹಿಯಾಗಿರುವುದರಿಂದ ಮಕ್ಕಳಿಗೂ ಇಷ್ಟವಾಗುತ್ತದೆ.
ಇದನ್ನೂ ಓದಿ: Health Tips: ಪ್ರತಿನಿತ್ಯ ವಾಯುವಿಹಾರ ಅಭ್ಯಾಸ ರೂಢಿಯಲ್ಲಿರಲಿ; ನೆಮ್ಮದಿ ಹಾಳು ಮಾಡುವ ಕಾಯಿಲೆಗಳಿಂದ ದೂರವಿರಿ