
ಆಲೂಗಡ್ಡೆ ಅಡುಗೆ ಮನೆಯಲ್ಲಿ ಹೆಚ್ಚು ಬಳಸುವ ತರಕಾರಿಗಳಲ್ಲಿ ಒಂದಾಗಿದೆ. ಪಲ್ಯ, ಸಾಂಬಾರ್, ಪರೋಟಾ, ಸ್ನ್ಯಾಕ್ಸ್ ಸೇರಿದಂತೆ ಅನೇಕ ಖಾದ್ಯಗಳಲ್ಲಿ ಆಲೂಗಡ್ಡೆ ಪ್ರಮುಖ ಸ್ಥಾನ ಪಡೆದಿದೆ. ಆದರೆ ಕೆಲವೊಮ್ಮೆ ಮನೆಯಲ್ಲೇ ಕೆಲವು ದಿನ ಇಟ್ಟಿರುವ ಆಲೂಗಡ್ಡೆಗಳು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಬಹುದು. ಇದನ್ನು ಹಲವರು ಸಾಮಾನ್ಯ ಬಣ್ಣ ಬದಲಾವಣೆ ಎಂದು ಭಾವಿಸಿ ಬಳಸಿಬಿಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು. ಇದು ಕೇವಲ ಬಣ್ಣ ಬದಲಾವಣೆ ಮಾತ್ರವಲ್ಲ, ಅದರೊಳಗೆ ವಿಷಕಾರಿ ರಾಸಾಯನಿಕ ಪ್ರಮಾಣ ಹೆಚ್ಚಾಗುತ್ತಿರುವ ಸೂಚನೆಯೂ ಆಗಿರಬಹುದು. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ಅದನ್ನು ತಿಂದರೆ ಏನಾಗಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಆಲೂಗಡ್ಡೆ ಹೆಚ್ಚು ಸಮಯ ಸೂರ್ಯನ ಬೆಳಕು ಅಥವಾ ಕೃತಕ ಬೆಳಕಿಗೆ ಒಡ್ಡಿಕೊಂಡಾಗ ಅದರ ಮೇಲ್ಮೈಯಲ್ಲಿ ಕ್ಲೋರೋಫಿಲ್ (Chlorophyll) ಉತ್ಪತ್ತಿಯಾಗುತ್ತದೆ. ಇದೇ ಕಾರಣಕ್ಕೆ ಅದು ಹಸಿರು ಬಣ್ಣದಲ್ಲಿ ಕಾಣಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ಇದರ ಜೊತೆಗೆ ಸೋಲನೈನ್ (Solanine) ಎಂಬ ನೈಸರ್ಗಿಕ ವಿಷಕಾರಿ ಸಂಯುಕ್ತದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸೋಲನೈನ್ ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಸೇರಿದರೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಸೋಲನೈನ್ ಅಧಿಕವಾಗಿರುವ ಆಲೂಗಡ್ಡೆ ಸೇವಿಸಿದರೆ ಕೆಲವರಲ್ಲಿ ಈ ಲಕ್ಷಣಗಳು ಕಾಣಿಸಬಹುದು.
ಆಲೂಗಡ್ಡೆಯ ಒಂದು ಸಣ್ಣ ಭಾಗ ಮಾತ್ರ ಹಸಿರಾಗಿದ್ದರೆ, ಆ ಭಾಗವನ್ನು ಹಾಗೂ ದಪ್ಪ ಸಿಪ್ಪೆಯನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಉಳಿದ ಭಾಗವನ್ನು ಬಳಸಬಹುದು. ಆದರೆ ಹೆಚ್ಚಿನ ಭಾಗ ಹಸಿರಾಗಿದ್ದರೆ, ಮೊಳಕೆಗಳು ಹೆಚ್ಚಾಗಿ ಬಂದಿದ್ದರೆ, ಕಹಿ ರುಚಿ ಕಂಡುಬಂದರೆ ಅಥವಾ ವಾಸನೆ ಇದ್ದರೆ ಮೃದುವಾಗಿ ಕೊಳೆತಿದ್ದರೆ ಅದನ್ನು ಬಳಸುವುದು ಒಳ್ಳೆಯದಲ್ಲ.
ಸಾಮಾನ್ಯವಾಗಿ ಮೊಳಕೆ ಬಂದ ಆಲೂಗಡ್ಡೆಯಲ್ಲೂ ಸೋಲನೈನ್ ಪ್ರಮಾಣ ಹೆಚ್ಚಾಗಿರಬಹುದು. ಸಣ್ಣ ಮೊಳಕೆ ಇದ್ದರೆ ಅದನ್ನು ಹಾಗೂ ಸುತ್ತಲಿನ ಭಾಗವನ್ನು ತೆಗೆದು ಬಳಸಬಹುದು. ಆದರೆ ಹೆಚ್ಚು ಮೊಳಕೆ ಬಂದಿದ್ದರೆ ಅಥವಾ ಸಂಪೂರ್ಣ ಆಲೂಗಡ್ಡೆ ಸುಕ್ಕುಗಟ್ಟಿದ್ದರೆ ಬಳಸದೇ ಇರುವುದು ಉತ್ತಮ.
ಇದನ್ನೂ ಓದಿ: ಪ್ರತಿದಿನ ಒಂದು ಸಣ್ಣ ತುಂಡು ಶುಂಠಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು!
ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಆಹಾರ ವಿಷಬಾಧೆ, ತೀವ್ರ ಹೊಟ್ಟೆನೋವು, ವಾಂತಿ ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ