ವೈನ್ ಬಗ್ಗೆ ನಿಮಗೆಷ್ಟು ಗೊತ್ತು? ವೈನ್ ಹಳೆಯದಾದಂತೆ ಬೇಡಿಕೆ ಹೆಚ್ಚುವುದೇಕೆ? ಕ್ರಿಶ್ಚಿಯನ್ನರು ವೈನ್​ ಅನ್ನು ಪ್ರಸಾದವೆನ್ನುವುದೇಕೆ?

| Updated By: ಸಾಧು ಶ್ರೀನಾಥ್​

Updated on: Apr 30, 2024 | 8:55 PM

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೈನ್​ಗೆ ಎಕ್ಸ್ ಪರಿ ಡೇಟ್ ಇಲ್ಲ. ವೈನ್ ಹಳೆಯದಾದಂತೆಲ್ಲ ಅದಕ್ಕೆ ಬೇಡಿಕೆ ಹೆಚ್ಚು. ನೂರಾರು ವರ್ಷ ಹಳೆಯ ವೈನ್​ನ ಒಂದೇ ಒಂದು ಸಿಪ್ ಕುಡಿಯಬೇಕು ಎಂದು ವೈನ್ ಪ್ರಿಯರು ಹಾತೊರೆಯುತ್ತಿರುತ್ತಾರೆ. ಇನ್ನು ಮತ್ತೊಂದೆಡೆ ವೈನ್​ ಅನ್ನು ಕ್ರಿಶ್ಚಿಯನ್ನರು ಪ್ರಸಾದವಾಗಿ ಸ್ವೀಕರಿಸುತ್ತಾರೆ. ವೈನ್​ನಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ. ವಿಶೇಷವೆಂದರೆ ವೈನ್ ಟೂರ್ ಮಾಡಿಸಲೆಂದೇ ನೂರಾರು ವೈನ್ ಯಾರ್ಡ್​ಗಳು ದೇಶದಲ್ಲಿ ತಲೆ ಎತ್ತಿವೆ. ಈ ಲೇಖನದಲ್ಲಿ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.

ವೈನ್ ಬಗ್ಗೆ ನಿಮಗೆಷ್ಟು ಗೊತ್ತು? ವೈನ್ ಹಳೆಯದಾದಂತೆ ಬೇಡಿಕೆ ಹೆಚ್ಚುವುದೇಕೆ? ಕ್ರಿಶ್ಚಿಯನ್ನರು ವೈನ್​ ಅನ್ನು ಪ್ರಸಾದವೆನ್ನುವುದೇಕೆ?
ವೈನ್
Follow us on

ಏಳುವರೆಗೆ ತುಟಿ ಒಣಗುತ್ತೆ ಏನು ಮಾಡೋಣ? ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ ಎಂಬ ಹಾಡನ್ನ ನೀವು ಕೇಳಿಯೇ ಇರುತ್ತೀರಿ. ನಟಸಾರ್ವಭೌಮ ಚಿತ್ರದಲ್ಲಿ ದಿ.ಪುನೀತ್ ರಾಜ್​ಕುಮಾರ್ ಅವರು ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು. ನಾವೇಕೆ ಈ ಹಾಡನ್ನು ಇಲ್ಲಿ ಪ್ರಸ್ತಾಪ ಮಾಡಿದ್ದೀವಿ ಅಂದ್ರೆ ಮದ್ಯದ ಬಗ್ಗೆ ನೂರಾರು ಹಾಡುಗಳು ನಮ್ಮಲ್ಲಿ ಇವೆ. ಆದ್ರೆ ಮದ್ಯಕ್ಕಿಂತ ಒಂದು ಕೈ ಮೇಲೆ ಎನ್ನುವ ವೈನ್ ಬಗ್ಗೆ ಹಾಡುಗಳು ಎಲ್ಲೋ ಒಂದು. ಆರೋಗ್ಯ ವಿಚಾರದಿಂದ ಹಿಡಿದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೂ ವೈನ್​ಗೆ ತನ್ನದೇ ಆದ ಬೆಲೆ ಇದೆ. ಮದ್ಯಕ್ಕಿಂತ ಸಾವಿರಾರು ವರ್ಷಗಳ ಹಳೆಯ ಇತಿಹಾಸವನ್ನು ವೈನ್ ಹೊಂದಿದೆ. ಬ್ರಾಂಡಿ, ವಿಸ್ಕಿ, ಸ್ಕಾಚ್, ವೋಡ್ಕಾ, ರಮ್, ವೈಟ್ ರಮ್, ಬಿಯರ್ ಇವೆಲ್ಲಕ್ಕಿಂತ ವೈನ್ ಸ್ವಲ್ಪ ಭಿನ್ನ. ಇನ್ನು ಹಳೆಯ ವೈನ್​ಗೆ ವಿಶ್ವದಲ್ಲಿ ಬೇಡಿಕೆ ಹೆಚ್ಚು. ನೂರಾರು ವರ್ಷ ಹಳೆಯ ವೈನ್ ಸಿಕ್ಕರೆ ಕೋಟಿ ಬೆಲೆ ಇದ್ದರೂ ಖರೀದಿಸುವವರಿದ್ದಾರೆ. ಇನ್ನೂ ವಿಶೇಷವೆಂದರೆ ವೈನ್​ ಇತಿಹಾಸ ಸೇರಿದಂತೆ ವೈನ್​ನ ಪರಿಚಯ ಮಾಡಲೆಂದೇ​ ನೂರಾರು ವೈನ್ ಯಾರ್ಡ್​ಗಳು ವೈನ್ ಟೂರ್​ಗಳನ್ನು ಕೈಗೊಳ್ಳುತ್ತಿವೆ. ಬನ್ನಿ ವೈನ್​ ಹಳೆಯದಾದಂತೆಲ್ಲ ಅದರ ಬೇಡಿಕೆ ಏರುವುದೇಕೆ ಎಂಬ ಬಗ್ಗೆ ತಿಳಿಯೋಣ.

ಅಲ್ಕೋಹಾಲ್​ಗಳಿಗೆ ಹೋಲಿಸಿದರೆ ವೈನ್‌ನಲ್ಲಿ ಆರೋಗ್ಯ ಪ್ರಯೋಜನಗಳು ನೂರಾರು. ಇದಕ್ಕೆ ಕಾರಣ ಅವುಗಳಲ್ಲಿರುವ ಫಾಲಿಫಿನಾಲ್, ಆಂಟಿ ಆಕ್ಸಿಡೆಂಟ್ ಮೊದಲಾದ ಅಂಶಗಳು. ಸಾವಿರಾರು ವರ್ಷಗಳಿಂದ ವೈನ್‌ ಬಳಕೆಯಲ್ಲಿದೆ. ವೈನ್ ನೈಸರ್ಗಿಕವಾದ ಅದ್ಭುತವಾದ ರುಚಿಯಿಂದಾಗಿ ಮಾತ್ರವಲ್ಲದೆ ಅದರ ಪೌಷ್ಟಿಕಾಂಶದ ಮೌಲ್ಯ ಮತ್ತು ಸೈಕೋಟ್ರೋಪಿಕ್ ಪರಿಣಾಮಗಳಿಂದ ಹೆಸರುವಾಸಿಯಾಗಿದೆ. ವೈನ್​ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲೆಂದೇ ಮೇ 25ರಂದು ರಾಷ್ಟ್ರೀಯ ವೈನ್ ದಿನವನ್ನು ಆಚರಿಸಲಾಗುತ್ತೆ. ರೆಡ್ ವೈನ್, ವೈಟ್ ವೈನ್, ರೋಸ್ ವೈನ್, ಸ್ಪಾರ್ಕ್ಲಿಂಗ್ ವೈನ್‌, ಡೆಸರ್ಟ್ ವೈನ್ಸ್ ಸೇರಿದಂತೆ ನೂರಾರು ಬಗೆಯ ವೈನ್​ಗಳನ್ನು ನಾವು ನೋಡಬಹುದು. ಇದರಲ್ಲಿ ರೆಡ್ ವೈನ್ ಬಹಳ ಜನಪ್ರಿಯ. ಇನ್ನೂ ವಿಶೇಷವೆಂದರೆ ವೈನ್​ ಅನ್ನು ಹೆಚ್ಚಾಗಿ ಹಣ್ಣುಗಳಿಂದ, ಧಾನ್ಯಗಳಿಂದ ಮಾಡಲಾಗುತ್ತೆ. ವೈನ್ ಅನ್ನು ಶೇಖರಿಸಿಟ್ಟು ಕುಡಿಯುವುದರಿಂದ ಅದರ ರುಚಿ ಮತ್ತು ಕಿಕ್ ಪರಿಣಾಮಕಾರಿಯಾಗಿರುತ್ತೆ ಎನ್ನಲಾಗುತ್ತೆ.

ಸಾವಿರಾರು ವರ್ಷಗಳ ಇತಿಹಾಸ ಇದೆ ವೈನ್​ಗೆ

Older The Wine Is Better The Taste ಎಂಬಂತೆ ವೈನ್ ಹಳೆಯದಾದಷ್ಟೂ ಅದರ ರುಚಿ ಹೆಚ್ಚು. ವೈನ್​ ಹಳೆಯದಾದಂತೆ ಅದರ ರುಚಿ, ಪರಿಮಳ ಎಲ್ಲವೂ ಬದಲಾಗುತ್ತೆ. ವೈನ್​ ಅನ್ನು ಶೇಖರಿಸಿಡುವ ವಿಧಾನವೂ ಇದೆ. ಪ್ಲಾಸ್ಟಿಕ್ ಬಳಸದೆ, ಮಡಿಕೆ ಅಥವಾ ಗಾಜಿನ ಬಾಟಲಿಗಳಲ್ಲಿ ವೈನ್ ಶೇಖರಿಸಲಾಗುತ್ತೆ. ಗಾಳಿಯಾಡದ ಹಾಗೂ ಯಾರೂ ಓಡಾಡದ ಸ್ಥಳದಲ್ಲಿ ವೈನ್ ಅನ್ನು ಶೇಖರಿಸಬೇಕು. ಆಗ ವೈನ್​ ಕೊಳೆಯುತ್ತಿದ್ದಂತೆ ಅದರಲ್ಲಿನ ಅಂಶಗಳು ಉತ್ತೇಜಿಸಲ್ಪಡುತ್ತವೆ. ಹಣ್ಣಿನ ಗುಣವು ಹೆಚ್ಚುತ್ತದೆ. ವೈನ್​ನ ಸುವಾಸನೆ, ಬಣ್ಣ ಎಲ್ಲವೂ ಬದಲಾಗುತ್ತೆ. ಹಳೆಯ ವೈನ್ ಉತ್ತಮ ರುಚಿಯನ್ನು ಕೊಡುತ್ತೆ. ನೂರಾರು ವರ್ಷ ಹಳೆಯ ವೈನ್ ಕುಡಿದರೆ ಸ್ವರ್ಗವೇ ಕಣ್ಮಂದೆ ಬರುತ್ತೆ ಎಂದು ಕೆಲವರು ವರ್ಣಿಸುವುದುಂಟು.

ಮುಚ್ಚಿಟ್ಟ ವೈನ್ ಬಾಟಲಿಯೊಳಗಿನ ವೈನ್​ ಹಳೆಯದಾಗಲು ಟ್ಯಾನಿನ್ಸ್ ಎಂಬ ಅಂಶ ಬಹುಮುಖ್ಯ ಕಾರಣ. ದ್ರಾಕ್ಷಿ ಬೀಜ, ದ್ರಾಕ್ಷಿ ಸಿಪ್ಪೆ ಮತ್ತು ದ್ರಾಕ್ಷಿಯ ಹಣ್ಣುಗಳು ವರ್ಷಗಟ್ಟಲೆ ಕೊಳೆತ ಅಂಶದಿಂದ ಈ ಅಣು ಹುಟ್ಟಿಕೊಳ್ಳುತ್ತದೆ. ಮತ್ತು ಆ್ಯಂಟಿ ಫಂಗಲ್​ನಿಂದಾಗಿ ವೈನ್​ನ ರುಚಿ ಮತ್ತು ಪರಿಮಳ ಬದಲಾಗುತ್ತೆ. ಸಮಯ ಕಳೆದಂತೆ, ಸಣ್ಣ ಪ್ರಮಾಣದ ಆಮ್ಲಜನಕವು ಬಾಟಲಿಯೊಳಗೆ ನುಗ್ಗಿ ಟ್ಯಾನಿನ್ಸ್​ಗಳೊಂದಿಗೆ ಪ್ರತಿಕ್ರಿಯಿಸಿ ರಾಸಾಯನಿಕ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರಕ್ರಿಯೆಯು ನಿಧಾನವಾಗಿ ಆಗುತ್ತೆ. ಟ್ಯಾನಿನ್ಸ್ ಆಮ್ಲಜನಕದೊಂದಿಗೆ ಸೇರಿದಾಗಲೇ ವೈನ್​ನ ರುಚಿ ಬದಲಾಗುತ್ತೆ. ಪ್ರತಿ ಗುಟುಕು ಕೂಡ ವಿಭಿನ್ನ ರುಚಿ ಕೊಡುತ್ತೆ.

100 ವರ್ಷ ಹಳೆಯ ವೈನ್ ವಿಡಿಯೋ

ಈ ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರವರದೇ ಆದ ವಿಧಾನಗಳನ್ನು ಬಳಸಿ ವೈನ್ ಮಾಡುತ್ತಿದ್ದರು. ಆದರೆ ಈಗ ನೂರಾರು ವರ್ಷಗಳಷ್ಟು ಹಳೆಯ ವೈನ್ ಸಿಗುವುದು ಕಷ್ಟ. ಹೀಗಾಗಿ ಅದಕ್ಕೆ ಬೇಡಿಕೆ ಹೆಚ್ಚು. ಸಾಮಾನ್ಯವಾಗಿ ಗ್ರೀಕ್ ಮತ್ತು ರೋಮ್​ನಲ್ಲಿ ವೈನ್ ಶೇಖರಿಸಿಡುವ ಅಭ್ಯಾಸವನ್ನು ನೋಡಬಹುದು. ಹತ್ತಾರು ವರ್ಷಗಳ ವೈನ್​ಗಳು ಮಡಿಕೇರಿ, ಕೊಡಗು, ಮೈಸೂರುಗಳಲ್ಲಿ ಸಿಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ವೈನ್ ಇಲ್ಲದೆ ಯಾವ ಪಾರ್ಟಿ, ಸಭೆಗಳು ಪೂರ್ಣಗೊಳ್ಳುವುದಿಲ್ಲ. ವಿದೇಶಿಗರು ಊಟದ ಜೊತೆ ವೈನ್ ಕುಡಿಯುವುದನ್ನು ರೂಢಿಸಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಎಂಟು ತಲೆಮಾರಿನಷ್ಟು ಹಳೆಯದಾದ ಮೂರು ವೈನ್ ಬಾಟಲ್​ಗಳನ್ನು ಹರಾಜಿಗೆ ಇಡಲಾಗಿತ್ತು. 1774ರಲ್ಲಿ ಫ್ರಾನ್ಸ್​ನ ನೆಲಮಾಳಿಗೆಯಲ್ಲಿದ್ದ ವಿನ್ ಜಾನ್ (ಹಳದಿ ವೈನ್) ವೈನ್​ ಅನ್ನು ಭಾರಿ ಮೊತ್ತದ ಹಣ ನೀಡಿ ಖರೀದಿಸಲಾಗಿತ್ತು. ಸ್ವಿಟ್ಜರ್ಲೆಂಡ್​ನ ಝೂರ ಪ್ರದೇಶದ ಅರ್ಬೊಯಿಸ್ ವಂಶಸ್ಥರು ಈ ಹಳೆಯ ವೈನನ್ನು ಕಾಪಾಡಿಕೊಂಡು ಬಂದಿದ್ದರು ಎನ್ನಲಾಗಿದೆ. ಈ ವೈನ್ ಪ್ರಪಂಚದ ಅತ್ಯಂತ ಹಳೆಯ ವೈನ್​ಗಳಾಗಿವೆ ಎಂದು ಜುರಾ ಎನ್ಚೆರೆಸ್ ಹಾರಾಜು ಸಂಸ್ಥೆ ತಿಳಿಸಿತ್ತು.

ಈ ಹಿಂದೆ 1774ರ ಅಪರೂಪದ ವೈನನ್ನು ಹರಾಜಿಗಿಡಲಾಗಿತ್ತು. 2001ರಲ್ಲಿ ಒಂದು ಬಾಟಲ್ 57,000 ಯೂರೋಗಳಿಗೆ (45,79,785ರೂ.) ಮಾರಾಟವಾದರೆ, 2012 ರಲ್ಲಿ 46,000 ಡಾಲರ್ (31,44,330ರೂ.)​ ಗೆ ಮಾರಾಟವಾಗಿತ್ತು. ‘1994 ರಲ್ಲಿ ಈ ವೈನನ್ನು ಪರೀಕ್ಷಿಸಿದ್ದು, ಮೂರು ವೈನ್ ಪಾನೀಯದ ಗುಣಮಟ್ಟವು ಅಸಾಧಾರಣವಾಗಿದೆ. ಅಲ್ಲದೆ ವಿಶ್ವ ಅತ್ತುತ್ಯಮ ವೈನ್ ಪಟ್ಟಿಯಲ್ಲಿ 10 ರಲ್ಲಿ 9.4 ರೇಟಿಂಗ್ ಪಡೆದಿದೆ’ ಎಂದು ಜುರಾ ಎನ್ಚೆರೆಸ್​ನ ಫಿಲಿಪ್ ಎಟಿವಂಟ್ ತಿಳಿಸಿತ್ತು.

2021ರಲ್ಲಿ ಪುರಾತತ್ವಶಾಸ್ತ್ರಜ್ಞರು ಇರಾಕ್‌ನಲ್ಲಿ 2,700 ವರ್ಷಗಳಷ್ಟು ಹಳೆಯ ವೈನ್ ತಯಾರಿಸುವ ಕಾರ್ಖಾನೆಯನ್ನು ಪತ್ತೆ ಮಾಡಿದ್ದರು. ಅದನ್ನು ಅಸ್ಸೀರಿಯನ್ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ವೈನ್ ಕಾರ್ಖಾನೆ ಎಂದು ಹೇಳಲಾಗಿತ್ತು. ದ್ರಾಕ್ಷಿ ಹಣ್ಣುಗಳಿಂದ ರಸ ಹೊರತಗೆದು ಸಂಗ್ರಹಿಸಿ ನಂತರ ಅದನ್ನು ವೈನ್ ಆಗಿ ಪರಿವರ್ತಿಸುವ ಪುರಾತನ ಘಟಕ ಇರಾಕ್‌ನಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಇಟಲಿಯ ಯುಡಿನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮೊರಾಂಡಿ ಬೊನಾಕೊಸ್ಸಿ ತಿಳಿಸಿದ್ದ ಅಂಶವನ್ನು ನಾವು ಇಲ್ಲಿ ಗಮನಿಸಬಹುದು.

ಇನ್ನು ಮತ್ತೊಂದೆಡೆ 1963 ರಲ್ಲಿ ವೆಸ್ಟ್ ಬ್ಯಾಂಕ್​ನಲ್ಲಿ ವೈನರಿ ಪತ್ತೆಯಾಗಿತ್ತು. ಅದು ವಿಶ್ವದ 2ನೇ ಅತ್ಯಂತ ಹಳೆಯ ವೈನರಿ ಎಂದೆನಿಸಿಕೊಂಡಿದೆ. ಕೆಲವು ವರ್ಷದ ಹಿಂದೆ ಮತ್ತೊಂದು ಹಳೆಯ ವೈನರಿ ಅರ್ಮೇನಿಯಾದ ಗುಹೆಯೊಳಗೆ ದೊರೆತಿದೆ. ಅದು ಕ್ರಿಸ್ತ ಪೂರ್ವ 4100 ಕಾಲದ್ದು ಎನ್ನಲಾಗುತ್ತಿದೆ.

ರೆಡ್ ವೈನ್ ಮಾಡುವ ವಿಧಾನ

ವೈನ್​ನಲ್ಲಿ ಬಹಳಷ್ಟು ವಿಧಗಳಿವೆ. ಅದರಲ್ಲಿ ಜನಪ್ರಿಯ ಹಾಗೂ ಹೆಚ್ಚು ಆರೋಗ್ಯ ಗುಣಗಳನ್ನು ಹೊಂದಿರುವ ರೆಡ್ ವೈನ್‌ ಮಾಡುವ ವಿಧಾನವನ್ನು ನಾವು ಇಲ್ಲಿ ನೋಡೋಣ. ರೆಡ್ ವೈನ್ ಅನ್ನು ಕಪ್ಪು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಮೊದಲಿಗೆ ದ್ರಾಕ್ಷಿಯನ್ನು ನೀರಿನಿಂದ ತೊಳೆಯಬೇಕು. ನಂತರ ಅದನ್ನು ಒರೆಸಿ ರಸ ತೆಗೆಯಬೇಕು. ಸ್ಮಾಶ್ ಮಾಡಿದ ದ್ರಾಕ್ಷಿಗೆ ಗೋದಿ, ಸಕ್ಕರೆ, ಮೊಟ್ಟೆ, ಚಕ್ಕೆ ಹಾಕಿ ಮಿಶ್ರಣ ಮಾಡಬೇಕು. ನಂತರ ಅದಕ್ಕೆ ನೀರನ್ನು ಬೆರೆಸಿ ಸಂಸ್ಕರಿಸಿಡಬೇಕು. ರೆಡ್ ವೈನ್ ಬಹಳಷ್ಟು ಟ್ಯಾನಿನ್‌ಗಳನ್ನು ಹೊಂದಿರುತ್ತದೆ, ಅದನ್ನು ಕುಡಿದ ನಂತರ ನಿಮ್ಮ ಬಾಯಿಯಲ್ಲಿ ಕಹಿ, ಒಣ ರುಚಿ ಮೂಡಿಸುತ್ತದೆ. ವೈನ್​ ಅನ್ನು ಸಾಮಾನ್ಯವಾಗಿ ಮಾಂಸದೂಟ, ಸಂಜೆ ವೇಳೆ ಪಾರ್ಟಿಗಳಲ್ಲಿ ಸವಿಯಲಾಗುತ್ತೆ.

ಕೊಡಗಿನಲ್ಲಿ ವೈನ್​ಗೆ ಗುಲಾಬಿ ಹೂವು, ಗಾಂಧಾರಿ ಮೆಣಸು, ವಿವಿಧ ಬಗೆಯ ಹಣ್ಣುಗಳು, ವೀಳ್ಯದೆಲೆ, ಶುಂಠಿ, ಭತ್ತ ಹೀಗೆ ಕೊಡಗಿನಲ್ಲೇ ಬೆಳೆದ ಉತ್ಪನ್ನಗಳಿಂದ ವೈನ್ ತಯಾರಿಸಲಾಗುತ್ತೆ. ಸುಮಾರು 200 ರಿಂದ 600 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತೆ.

ವೈನ್​ನ ಆರೋಗ್ಯ ಪ್ರಯೋಜನಗಳು

ವೈನ್ ಮಿತವಾಗಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳಿದ್ದಾರೆ. ವೈನ್ ಸೇವಿಸುವುದರಿಂದ ಆಯುಷ್ಯ ಹಚ್ಚಳವಾಗುತ್ತೆ ಮತ್ತು ಹೃದಯದ ಆರೋಗ್ಯ ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನೂ ವೃದ್ಧಿಸುತ್ತದೆ. ದೀರ್ಘಕಾಲದ ಕಾಯಿಲೆ, ಕಾಲೋಚಿತ ಕಾಯಿಲೆಗಳಿಂದ ರಕ್ಷಿಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಮಿತಿ ಮೀರಿದರೆ ಆರೋಗ್ಯ ಹಾನಿ ಕೂಡ ಆಗುತ್ತೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ರೆಡ್ ವೈನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಅಂದರೆ ದಿನಕ್ಕೆ 200-250 ಮಿಲಿಲೀಟರ್‌ಗಳಷ್ಟು ಸೇವಿಸುವ ಜನರು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಸಂಶೋಧನೆಗಳ ಪ್ರಕಾರ ಪ್ರತಿದಿನ ಒಂದು ಪೆಗ್ ವೈನ್ ಕುಡಿಯುವುದರಿಂದ ದೇಹ ಸಂಪೂರ್ಣ ಸ್ವಚ್ಛವಾಗುತ್ತದೆ. ವಿವಿಧ ರೀತಿಯ ಅಲರ್ಜಿ, ಕಾರ್ಸಿನೋಜೆನಿಕ್ ಮತ್ತು ವೈರಲ್ ಫೀವರ್​ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಮತ್ತು ಹೃದಯ-ನಾಳದ ಕಾಯಿಲೆಗಳನ್ನು ತಡೆಯುವ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ.

ಒತ್ತಡ ಕಡಿಮೆ ಮಾಡಿ ಒಳ್ಳೆ ನಿದ್ರೆಗೆ ಸಹಾಯ ಮಾಡುತ್ತದೆ. ಚರ್ಮದ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಹೀಗಾಗಿ ವೈನ್ ಚಾಕಲೇಟ್ಸ್, ಕೇಕ್​ಗಳನ್ನು ಸೇವಿಸುವವರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಒಂದು ಸಂಶೋಧನೆಯಲ್ಲಿ ವೈನ್​ನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಕೂಡ ಹೆಚ್ಚುತ್ತದೆ ಎಂಬ ಅಂಶ ಬಯಲಾಗಿದೆ.

 

ಮನೆಯಲ್ಲಿ ತಯಾರು ಮಾಡುವಂತಹ ವೈನ್​ ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ದ್ರಾಕ್ಷಿ ವೈನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಕಪ್ಪು ದ್ರಾಕ್ಷಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಕಂಟೆಂಟ್ ತುಂಬಾ ಜಾಸ್ತಿ ಇರುತ್ತೆ. ಇದು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಷ್ಟೇ ಆರೋಗ್ಯ ಪ್ರಯೋಜಗಳಿವೆ ಎಂದಾರೂ ಅದನ್ನು ಅತಿಯಾಗಿ ಸೇವಿಸಬಾರದು. ಮನೆಯಲ್ಲಿ ಮಾಡುವ ವೈನ್​ನಲ್ಲಿ ಆಕ್ಸಿಡಿಕ್, ಈಸ್ಟ್ ಕಂಟೆಂಟ್ ಜಾಸ್ತಿ ಇರಲ್ಲ. ಹೀಗಾಗಿ ಹೋಮ್ ಮೇಡ್ ವೈನ್ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಸೇಫ್ ಎನ್ನುತ್ತಾರೆ ಮೈಸೂರಿನ ಡಯಟ್ ಎಕ್ಸ್‌ಪರ್ಟ್ ದೀಪಾ ಬಿ.ಆರ್.

ಹೃದಯಕ್ಕೆ, ಚರ್ಮದ ಆರೋಗ್ಯಕ್ಕೆ ವೈನ್ ಒಳ್ಳೆಯದು. ಅದರಲ್ಲೂ ಹೆಣ್ಣುಮಕ್ಕಳಿಗೆ 30-40 ವರ್ಷ ವಯಸ್ಸಾಯ್ತು ಅಂದ್ರೆ ಚರ್ಮದ ಸೊಕ್ಕು, ನೆರಿಗೆ ಬರುತ್ತೆ. ಇನ್ನು ಬ್ಯೂಟಿ ಇಂಡಸ್ಟ್ರಿಯಲ್ಲೂ ಗ್ರೇಪ್ಸ್ ವೈನ್ ಫೇಶಿಯಲ್, ರೆಡ್ ವೈನ್ ಫೇಶಿಯಲ್ ಅಂತನೇ ಬಂದಿದೆ. ಹೀಗಾಗಿ ವೈನ್ ಕುಡಿಯುವುದರಿಂದ ತಕ್ಕಮಟ್ಟಿಗೆ ಈ ಸಮಸ್ಯೆಯಿಂದ ದೂರ ಉಳಿಯಬಹುದು. ಸಾಮಾನ್ಯವಾಗಿ ಪುರುಷರು 150ml ನ 2 ಗ್ಲಾಸ್‌ ವೈನ್ ಹಾಗೂ ಮಹಿಳೆಯರು 1 ಗ್ಲಾಸ್​ನಷ್ಟು ವೈನ್ ಸೇವಿಸಬಹುದು. ಇದಕ್ಕಿಂತ ಅತಿಯಾದರೆ ಅಡಿಕ್ಟ್ ಆಗುವ ಅಪಾಯವಿದೆ.

ರೆಡ್ ವೈನ್ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತೆ. ಜೊತೆಗೆ ವೈನ್​ನಲ್ಲಿ ಪಾಲಿಫಿನಾಲ್ ಸಂಯುಕ್ತಗಳ ಉಪಸ್ಥಿತಿಯಿಂದಾಗಿ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಯಾವುದೇ ರೀತಿಯ ಆಲ್ಕೋಹಾಲ್ ತೆಗೆದುಕೊಳ್ಳಬಾರದು ಎಂಬುವುದು ವೈದ್ಯರ ಖಡಕ್ ಎಚ್ಚರಿಕೆ. ಆದರೆ ವೈನ್ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತೆ ಎಂಬುವುದು ಕೆಲವರ ಅನಿಸಿಕೆ. ಹೋಮ್ ಮೇಡ್ ವೈನ್ ಬಿಟ್ಟು ಕಮರ್ಷಿಯಲ್ ಪರ್ಪಸ್​ಗೆ ಮಾಡುವ ವೈನ್ ಕುಡಿಯುವವರು ಮೊದಲು ಅದರಲ್ಲಿ ಏನೇನಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ವೈನ್ ಹೃದಯಕ್ಕೆ ಒಳ್ಳೆಯದು ಎಂದ ಮಾತ್ರಕ್ಕೆ ಅತಿಯಾದ ಸೇವನೆ ಒಳ್ಳೇದಲ್ಲ. ವೈದ್ಯರ ಸಲಹೆ ಮೇರೆಗೆ ಎಷ್ಟು ವೈನ್ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ, ತಮ್ಮ ಹೆಲ್ತ್ ಕಂಡೀಷನ್ ಹೇಗಿದೆ ಎಂದು ತಿಳಿದುಕೊಳ್ಳುವುದೂ ಉತ್ತಮ ಎಂದು ದೀಪಾ ಸಲಹೆ ನೀಡಿದ್ದಾರೆ.

ಹೋಮ್ ಮೇಡ್ ಮೈನ್ ಅನ್ನು ಪ್ರತಿ ದಿನ ಇಂತಿಷ್ಟು ಪ್ರಮಾಣದಲ್ಲಿ ಎಂದು ಸೇವಿಸಿದರೆ ಯಾವುದೇ ಸಮಸ್ಯೆ ಆಗಲ್ಲ. ಊಟ ಅಥವಾ ಇತರೆ ತಿನಿಸುಗಳ ಜೊತೆ ವೈನ್ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವೈನ್ ನಮ್ಮ ಹೊಟ್ಟೆ ಸೇರಲ್ಲ. ಅದು ಔಷಧಿಯ ಮಾದರಿಯಲ್ಲಿ ಕೆಲಸ ಮಾಡುತ್ತೆ. ಆದರೆ ವಯಸ್ಸಾದಂತೆ ಕೆಪಾಸಿಟಿ ಕಡಿಮೆಯಾಗುತ್ತೆ. ಹೀಗಾಗಿ ಇದರ ಮೇಲೂ ಗಮನ ಕೊಡಬೇಕು. ಕ್ಯಾಲರಿ ಕೌಂಟ್ಸ್ ಎಲ್ಲ ನೋಡಿಕೊಂಡು ಒಂದು ಮಿತಿಯಲ್ಲಿ ವೈನ್ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಮೈಸೂರಿನ ಡಯಟ್ ಎಕ್ಸ್‌ಪರ್ಟ್ ದೀಪಾ ಬಿ.ಆರ್. ಅವರು ಮಾಹಿತಿ ನೀಡಿದ್ದಾರೆ.

ಕ್ರಿಶ್ಚಿಯನ್ನರು ವೈನ್​ ಅನ್ನು ಸಾಂಪ್ರದಾಯಿಕ ಪಾನಿಯವಾಗಿ ಬಳಸುತ್ತಾರೆ

ಚರ್ಚ್​ಗಳಲ್ಲಿ ಪ್ರಾರ್ಥನೆ, ಹಬ್ಬ, ಮದುವೆಯಂತಹ ಕಾರ್ಯಕ್ರಮಗಳಿದ್ದಾಗ ವೈನ್ ಸೇವಿಸುವುದು ಸಹಜ. ಆರಂಭಿಕ ಹಂತದಲ್ಲಿ ಬೈಬಲ್ ಮತ್ತು ಕ್ರಿಶ್ಚಿಯನ್ ಸಂಪ್ರದಾಯವನ್ನು ನಂಬಿದ್ದ ಕ್ರಿಶ್ಚಿಯನ್ನರು ವೈನ್ ದೇವರ ಕೊಡುಗೆ ಎಂದು ನಂಬಿದ್ದರು. ದೇವರ ಈ ಉಡುಗೊರೆಯು ಜೀವನವನ್ನು ಸಂತೋಷವಾಗಿಡುತ್ತದೆ. ಆದರೆ ಹೆಚ್ಚು ಕುಡಿಯುವುದು ಪಾಪ ಎಂದು ನಂಬುತ್ತಿದ್ದರು.

ಇನ್ನು ಕೆಲವೊಂದು ನಂಬಿಕೆಗಳ ಪ್ರಚಾರ, ಏಸು ಕ್ರಿಸ್ತ ಶಿಲುಬೆ ಏರುವ ಮುನ್ನ ತನ್ನ ಅನುಯಾಯಿಗಳೊಂದಿಗೆ ರೊಟ್ಟಿ ಮತ್ತು ವೈನ್​ ಅನ್ನು ಹಂಚಿ ತಿಂದಿದ್ದರು. ಹೀಗಾಗಿ ವೈನ್​ನನ್ನು ಪ್ರಸಾದವೆಂದು ಭಾವಿಸಲಾಗುತ್ತೆ ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜೋಸೆಫ್ ಎಂಬುವವರು ಹೇಳಿದ್ದಾರೆ.

ವೈನ್ ಎಂಬುದರ ಮತ್ತೊಂದು ಅರ್ಥ ದ್ರಾಕ್ಷಿ ರಸ. ವೈನ್ ತಯಾರಿಸುವಾಗ ಆಲ್ಕೋಹಾಲ್ ಬಳಸಲ್ಲ. ಆಲ್ಕೋಹಾಲ್ ಕಂಟೆಂಟ್ ಇರುವ ವೈನ್​ ಅನ್ನು ಕ್ರಿಶ್ಚಿಯನ್ ಸಭೆಗಳಲ್ಲಿ ಬಳಸಲ್ಲ. ಬೈಬಲ್ ಹೇಳುವಂತೆ ಯೇಸು ಕ್ರಿಸ್ತನ ಕಾಲದಲ್ಲಿ ದ್ರಾಕ್ಷಿ ರಸ ಎನ್ನಲಾಗುವ ವೈನ್​ಗಳನ್ನು ಬಳಸಲಾಗುತ್ತಿತ್ತು ಎಂದು ರಾಯಚೂರು ಜಿಲ್ಲೆ ಲಿಂಗಸುಗೂರಿನ ರೆಹಬೋತ್ ಪ್ರೇಯರ್ ಹಾಲ್​ನ ಪಾಸ್ಟರ್ ವೀರೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಬೈಬಲ್​ನಲ್ಲಿ ವೈನ್ ಉಲ್ಲೇಖ

ಯೇಸು ಕ್ರಿಸ್ತನನ್ನು ಸಂಪೂರ್ಣವಾಗಿ ನಂಬಿ, ಆತನ ಬೋಧನೆಗಳನ್ನು ಮನಃಪೂರ್ವಕವಾಗಿ ಪಾಲಿಸುತ್ತೇನೆಂದು ಯಾರು ದೀಕ್ಷೆ ಸ್ನಾನ ಮಾಡುತ್ತಾರೋ ಅವರಿಗೆ ವೈನ್ ಕುಡಿಸಲಾಗುತ್ತೆ. ಯೇಸು ಕ್ರಿಸ್ತನನ್ನು ಸರಿಯಾಗಿ ಅರ್ಥ ಮಾಡಿಕೊಂಡ ಹಾಗೂ ಯಾವುದೇ ಒತ್ತಡಗಳಿಲ್ಲದೆ ಯೇಸುನನ್ನು ಹಿಂಬಾಲಿಸುವವರಿಗೆ, ಸ್ವಂತ ರಕ್ಷಕನಾಗಿ ಸ್ವೀಕರಿಸುತ್ತೇನೆ ಎಂದು ಹೇಳುವವರಿಗೆ ಮಾತ್ರ ಈ ದೀಕ್ಷೆ ಸ್ನಾನ ಮಾಡಿಸಲಾಗುತ್ತೆ ಎಂದರು.

ಏಕೆ ದ್ರಾಕ್ಷಿ ರಸವನ್ನು ಉಪಯೋಗಿಸಬೇಕು?

ಯೇಸುಸ್ವಾಮಿ ನಮಗಾಗಿ ಶಿಲುಬೆ ಏರಿದ. ನಮ್ಮ ಪಾಪಗಳನ್ನು ಹೊತ್ತು ಶಿಲುಬೆ ಏರಿ ರಕ್ತ ಸುರಿಸಿದ. ಅದರ ಶೋಕ ಸೂಚನೆಗಾಗಿ ಕ್ರಿಶ್ಚಿಯನ್ನರು ಸಭೆಗಳಲ್ಲಿ ಸೇರಿದಾಗ ವೈನ್ ಸೇವಿಸುತ್ತಾರೆ. ಕೆಲವೊಂದು ಸಭೆಗಳಲ್ಲಿ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ, ಹೀಗೆ ಮನಸಿಗೆ ಬಂದಾಗ ಎಲ್ಲರೂ ಒಟ್ಟಾಗಿ ಸೇರಿದಾಗ ವೈನ್ ಸೇವಿಸಿ ಯೇಸುಸ್ವಾಮಿಯನ್ನು ಸ್ಮರಿಸುವುದುಂಟು.

ಮದ್ಯಪಾನ ಒಳ್ಳೆಯದಲ್ಲ ಎಂದು ಯೇಸುಸ್ವಾಮಿಯೇ ಹೇಳಿದ್ದಾರೆ. ಆದರೆ ಇತ್ತೀಚೆಗೆ ಕುಡಿತ ಸಾಮಾನ್ಯವಾಗಿದೆ. ಆದರೆ ನಮ್ಮ ಚರ್ಚ್​​ಗಳಲ್ಲಿ, ಸಭೆಗಳಲ್ಲಿ ಬಳಸುವುದು ಕಪ್ಪು ದ್ರಾಕ್ಷಿ ರಸ. ಯೇಸುಕ್ರಿಸ್ತ ನಮಗಾಗಿ ರಕ್ತವನ್ನು ಸುರಿಸಿದರು ಎಂಬುವುದರ ಸೂಚನವಾಗಿ ವೈನ್ ಬಳಸುತ್ತೇವೆ. ಚರ್ಚಿಗೆ ಬರುವ ಎಲ್ಲರಿಗೂ ವೈನ್ ಕೊಡಲ್ಲ. ಏಸುವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವನ ಪಾಲನೆಯಲ್ಲಿ ತೊಡಗಿದ ಒತ್ತಾಯವಿಲ್ಲದೆ, ಮನಪರಿವರ್ತನೆಯಾಗಿ ದೀಕ್ಷೆ ಪಡೆದವರಿಗೆ ವೈನ್ ನೀಡಲಾಗುತ್ತೆ. ವೈನ್ ಜೊತೆ ರೊಟ್ಟಿ, ಚಪಾತಿ, ಬ್ರೆಡ್ ಅನ್ನು ಪ್ರಸಾದವಾಗಿ ನೀಡಲಾಗುತ್ತೆ.

ವೈನ್ ನನ್ನ ರಕ್ತವನ್ನು ಸೂಚಿಸುತ್ತೆ, ಬ್ರೆಡ್​ ನನ್ನ ದೇಹವನ್ನು ಸೂಚಿಸುತ್ತೆ ಎಂದು ಏಸುಸ್ವಾಮಿ ಶಿಲುಬೆಗೆ ಏರುವ ಮೊದಲು ತಮ್ಮ ಹಿಂಬಾಲಕರ ಜೊತೆ ಮಾತುಕತೆ ನಡೆಸಿದರು ಎಂದು ಬೈಬಲ್​ನಲ್ಲಿ ಉಲ್ಲೇಖವಿದೆ. ತಮ್ಮ ಸ್ವಂತ ರಕ್ತವನ್ನು ಜಗತ್ತಿಗಾಗಿ ಸುರಿಸಿದರು. ಯಾವ ಧರ್ಮ, ಜಾತಿ, ಮತ, ಕುಲ ಭೇದವಿಲ್ಲದೆ ಏಸುವನ್ನು ಸ್ವೀಕರಿಸಿದವರಿಗೆ ಈ ಫಲ ಸಿಗುತ್ತೆ ಎಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ರೆಹಬೋತ್ ಪ್ರೇಯರ್ ಹಾಲ್​ನ ಪಾಸ್ಟರ್ ವೀರೇಶ್ ಅವರು ವಿವರಿಸಿದರು.

Published On - 6:08 pm, Tue, 23 April 24