
ಇತ್ತೀಚಿನ ದಿನಗಳಲ್ಲಿ ಪಾಲಿಶ್ ಮಾಡಿದ ಅಕ್ಕಿ (Polished Rice) ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೀವು ದಿನನಿತ್ಯ ಇಷ್ಟ ಪಟ್ಟು ತಿನ್ನುವ ಅಕ್ಕಿಯನ್ನು ಯಂತ್ರಗಳಲ್ಲಿ ಹಲವಾರು ಬಾರಿ ಪಾಲಿಶ್ ಮಾಡಲಾಗುತ್ತದೆ. ಇದರಿಂದಲೇ ಅಕ್ಕಿ (Rice) ಬಿಳಿಯಾಗಿ ಹೊಳೆಯುವಂತೆ ಕಾಣುತ್ತದೆ. ಆದರೆ ಆರೋಗ್ಯ ತಜ್ಞರು ಇಂತಹ ಪಾಲಿಶ್ ಮಾಡಿದ ಅಕ್ಕಿಯನ್ನು ಪ್ರತಿನಿತ್ಯ ಸೇವನೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ. ಮೊದಲೆಲ್ಲಾ ಅಕ್ಕಿ ಕೆಂಪಾಗಿರುತ್ತಿದ್ದು ಅವುಗಳ ಸೇವನೆ ಮಾಡುವ ವ್ಯಕ್ತಿ ಕೂಡ ಆರೋಗ್ಯವಂತನಾಗಿರುತ್ತಿದ್ದ ಆದರೆ ಈಗ ಹಾಗಲ್ಲ. ಅನಾರೋಗ್ಯ ಇಲ್ಲದ, ಆರೋಗ್ಯವಂತ ವ್ಯಕ್ತಿಯನ್ನು ಹುಡುಕುವುದೇ ಬಲು ಕಷ್ಟ ಎನಿಸಿದೆ. ಹಾಗಾದರೆ ಪಾಲಿಶ್ ಮಾಡಿದ ಅಕ್ಕಿ ಸೇವನೆಯಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪಾಲಿಶ್ ಮಾಡಿದ ಅಕ್ಕಿ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಿರುವಷ್ಟು ವಿಟಮಿನ್ ಬಿ1 (ಥಯಾಮಿನ್) ದೊರೆಯುವುದಿಲ್ಲ. ಇದು ಬೆರಿಬೆರಿ ಕಾಯಿಲೆಗೆ ಕಾರಣವಾಗಬಹುದು, ಮಾತ್ರವಲ್ಲ, ನರಮಂಡಲ ಮತ್ತು ಹೃದಯ ಸಂಬಂಧಿ ಕಾರ್ಯಗಳನ್ನು ಕೂಡ ನಿಧಾನಗೊಳಿಸುತ್ತದೆ. ಅದರಲ್ಲಿಯೂ ಈ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಅಜೀರ್ಣ, ಉಬ್ಬುವುದು ಸೇರಿದಂತೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಪಾಲಿಶ್ ಮಾಡಿದ ಅನ್ನವನ್ನು ಸೇವನೆ ಮಾಡುವುದರಿಂದ ಹಸಿವು ಹೆಚ್ಚಾಗುತ್ತದೆ. ಆದರೆ ಇದರಲ್ಲಿ ನಾರಿನಾಂಶದ ಕೊರತೆ ಇರುವುದರಿಂದ ನೀವು ಎಷ್ಟೇ ತಿಂದರೂ, ಹೊಟ್ಟೆ ತುಂಬುವುದಿಲ್ಲ. ಹಾಗಾಗಿ ಹಸಿವಿಗೆ ಕಾರಣವಾಗುತ್ತದೆ. ಪರಿಣಾಮವಾಗಿ, ಜನರು ಜಂಕ್ ಫುಡ್ ಸೇವನೆ ಮಾಡುವ ಮೂಲಕ ತೂಕ ಹೆಚ್ಚಿಸಿಕೊಳ್ಳುತ್ತಾರೆ ಇದಲ್ಲದೆ, ಪಾಲಿಶ್ ಮಾಡಿದ ಅಕ್ಕಿಯಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತದೆ ಇದರಿಂದ ಮೂತ್ರಪಿಂಡಗಳಿಗೆ ಸರಿಯಾದ ಪೋಷಣೆ ಸಿಗುವುದಿಲ್ಲ. ಅಷ್ಟೇ ಅಲ್ಲ ಇವುಗಳ ನಿಯಮಿತ ಸೇವನೆಯಿಂದ ಕೈ ಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ರೀತಿಯ ಪೋಷಣೆಯ ಕೊರತೆ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಅತಿಯಾಗಿ ಪಾಲಿಶ್ ಮಾಡಿದ ಅಕ್ಕಿ ತಿನ್ನುವುದರಿಂದ ಉಸಿರಾಟದ ತೊಂದರೆಯೂ ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ