
ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರಗಳ ಸೇವನೆ ಮಾಡಲು ಜನ ಇಷ್ಟಪಡುತ್ತಾರೆ. ಅದರಲ್ಲಿಯೂ ತಂಪಾದ ವಾತಾವರಣದಲ್ಲಿ ಒಂದು ಕಪ್ ಬಿಸಿ ಕಾಫಿ ಅಥವಾ ಟೀ (Tea & Coffee) ಕುಡಿಯುವ ಅನುಭವವನ್ನು ವರ್ಣಿಸಲು ಅಸಾಧ್ಯ. ಈ ರೀತಿ ಚಳಿಯನ್ನು ತಡೆಯಲು ಮತ್ತು ಸೋಮಾರಿತನವನ್ನು ಹೋಗಲಾಡಿಸಲು ಅತಿಯಾಗಿ ಕಾಫಿ ಮತ್ತು ಚಹಾವನ್ನು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಇಂತಹ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾದರೆ ಚಳಿಗಾಲದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸದಿಂದ ಯಾವ ರೀತಿ ಸಮಸ್ಯೆಗಳಾಗುತ್ತದೆ, ಯಾಕೆ ಈ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅನೇಕರು ತಮ್ಮ ದಿನವನ್ನು ಒಂದು ಕಪ್ ಕಾಫಿ ಅಥವಾ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ದಿನವಿಡೀ ಚಹಾ ಅಥವಾ ಕಾಫಿ ಕುಡಿಯುವುದರಿಂದ ಮೂಳೆ ಸಮಸ್ಯೆಗಳು ಉಂಟಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಮೊಣಕಾಲು ನೋವು ಬರುವ ಅಪಾಯ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ, ನೀವು ಇಷ್ಟ ಪಡುವ ಈ ಅಭ್ಯಾಸವು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಹಣ್ಣು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.
ಇದನ್ನೂ ಓದಿ: ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು!
ಸಾಮಾನ್ಯವಾಗಿ ದಿನಕ್ಕೆ ಕನಿಷ್ಠ ಎರಡು ಬಾರಿ ಚಹಾ ಅಥವಾ ಕಾಫಿ ಕುಡಿಯುವುದು ಒಳ್ಳೆಯದು. ಅದಕ್ಕಿಂತ ಹೆಚ್ಚಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲಿಯೂ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು ಚಹಾ ಮತ್ತು ಕಾಫಿ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ