
ಏಡ್ಸ್ (AIDS) ಎನ್ನುವ ಮಹಾಮಾರಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಒಂದು ಸಮಯದಲ್ಲಿ ಇದು ಇಡೀ ವಿಶ್ವವನ್ನೇ ನಲುಗಿಸಿತ್ತು ಎಂಬುದನ್ನು ಮರೆಯಬಾರದು. ನೂರಾರು ರೀತಿಯ ತಪ್ಪು ಕಲ್ಪನೆಗಳ ನಡುವೆ ಈ ಕಾಯಿಲೆಯ ಬಗ್ಗೆ ಸರಿಯಾದ ಮಾಹಿತಿ ನೀಡುವುದು ದೊಡ್ಡ ಸವಾಲಾಗಿತ್ತು. ಅದಕ್ಕಾಗಿಯೇ ರಕ್ತ ಹಾಗೂ ದೈಹಿಕ ಸಂಪರ್ಕದಿಂದ ಏಡ್ಸ್ ಹರಡುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಏಡ್ಸ್ ಲಸಿಕೆ ದಿನ (World AIDS Vaccine Day) ಅಥವಾ ಹೆಚ್ಐವಿ ಲಸಿಕೆ ಜಾಗೃತಿ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ.
ವಿಶ್ವ ಏಡ್ಸ್ ಲಸಿಕೆ ದಿನ ಎಂಬ ಪರಿಕಲ್ಪನೆಯನ್ನು 1997 ರ ಮೇ 18 ರಂದು ಮೋರ್ಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿನ ಆಗಿನ ಅಧ್ಯಕ್ಷ ಕ್ಲಿಂಟನ್ ಮಾಡಿದ ಭಾಷಣದಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿದರು. ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಇವರ ಭಾಷಣದಿಂದ ಸ್ಫೂರ್ತಿಗೊಂಡು ಲಸಿಕೆ ಕಂಡು ಹಿಡಿಯುವ ಕೆಲಸಕ್ಕೆ ಕೈ ಹಾಕಿದರು. ಹೆಚ್ಐವಿ ಲಸಿಕೆ ಮಾತ್ರ ಏಡ್ಸ್ನ ಭಯವನ್ನು ಜಗತ್ತಿನಿಂದ ದೂರ ಮಾಡಲು ಸಾಧ್ಯ ಎಂದು ಕ್ಲಿಂಟನ್ ತನ್ನ ಭಾಷಣದ ಮೂಲಕ ಜಗತ್ತಿಗೆ ಹೇಳಿದರು. ಹೀಗಾಗಿ ಕ್ಲಿಂಟನ್ ಅವರ ಈ ಭಾಷಣದ ನೆನಪಿಗಾಗಿ ಮೇ 18, 1998 ರಂದು ಮೊದಲ ಬಾರಿಗೆ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ಆಚರಣೆ ಮುಂದುವರೆದುಕೊಂಡು ಬಂದಿದೆ.
ಎಚ್‌ಐವಿ ಸೋಂಕನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಏಡ್ಸ್ ನಿರ್ಮೂಲನೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಹೆಚ್ ಐವಿ / ಏಡ್ಸ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತದ ಹಲವಾರು ಎನ್ ಜಿ ಒಗಳು ಹಾಗೂ ಸರ್ಕಾರಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚುತ್ತಿದೆ ಅಧಿಕ ರಕ್ತದೊತ್ತಡ ಪ್ರಕರಣ: ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ತಜ್ಞರ ಕರೆ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ