
ಪ್ರತಿ ವರ್ಷ ಮೇ 20ರಂದು ವಿಶ್ವದಾದ್ಯಂತ ‘ವಿಶ್ವ ಜೇನುನೊಣ ದಿನ’ವನ್ನು (World Bee Day) ಆಚರಿಸಲಾಗುತ್ತದೆ. ಆಧುನಿಕ ಜೇನುಸಾಕಣೆಯ ಪ್ರವರ್ತಕರಾದ ಸ್ಲೊವೇನಿಯಾದ ಆಂಟನ್ ಜಾನ್ಸಾ (Anton Jansa) ಅವರ ಜನ್ಮ ದಿನದ ನೆನಪಿಗಾಗಿ ಈ ದಿನವನ್ನು ನಿಗದಿಪಡಿಸಲಾಗಿದೆ. ಆದರೆ, ಜೇನುಸಾಕಣೆಯ ಇತಿಹಾಸವನ್ನು ಗಮನಿಸಿದಾಗ ನಾವಿಲ್ಲಿ ಒಂದು ಮಹತ್ವದ ವಿಚಾರವನ್ನು ಮರೆಯಬಾರದು. ಅದೇನೆಂದರೆ, ಪಾಶ್ಚಾತ್ಯ ಜಗತ್ತು ಇದನ್ನು ಗುರುತಿಸುವ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಜೇನುಸಾಕಣೆ ಮತ್ತು ಜೇನುತುಪ್ಪದ ಬಳಕೆ ಅತ್ಯಂತ ಪ್ರಚಲಿತದಲ್ಲಿತ್ತು. ನಮ್ಮ ಋಗ್ವೇದ, ಅಥರ್ವವೇದ, ಪುರಾಣಗಳು ಹಾಗೂ ಆಯುರ್ವೇದ ಗ್ರಂಥಗಳಲ್ಲಿ ಜೇನುನೊಣ ಮತ್ತು ಜೇನುತುಪ್ಪದ ಉಲ್ಲೇಖಗಳು ಯಥೇಚ್ಛವಾಗಿ ಸಿಗುತ್ತವೆ. ಭಾರತೀಯ ಪರಂಪರೆಯಲ್ಲಿ ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡದೆ, ಒಂದು ಪವಿತ್ರ ದ್ರವ್ಯವಾಗಿ ಹಾಗೂ ಆರೋಗ್ಯ ನೀಡುವ ಅಮೃತ ಸದೃಶ ಔಷಧಿಯಾಗಿ ಬಳಸಲಾಗುತ್ತಿತ್ತು.
ನಮ್ಮ ಗ್ರಾಮೀಣ ಜೀವನದಲ್ಲಿ ಮತ್ತು ಕೃಷಿ ಸಂಸ್ಕೃತಿಯಲ್ಲಿ ಜೇನುನೊಣಗಳು ಅನಾದಿ ಕಾಲದಿಂದಲೂ ಪ್ರಕೃತಿಯ ಅವಿಭಾಜ್ಯ ಅಂಗವಾಗಿವೆ. ಭಾರತದ ರೈತರು ಇವುಗಳನ್ನು ಕೇವಲ ಜೇನುತುಪ್ಪ ಕೊಡುವ ಕೀಟಗಳಾಗಿ ನೋಡದೆ, ಕೃಷಿಯ ‘ಮೌನ ಸಹಾಯಕರು’ ಎಂದು ಗೌರವಿಸಿದ್ದಾರೆ. ಏಕೆಂದರೆ, ಜಗತ್ತಿನ ಬಹುತೇಕ ಬೆಳೆಗಳ ಪರಾಗಸ್ಪರ್ಶ ಕ್ರಿಯೆಗೆ (Pollination) ಜೇನುನೊಣಗಳೇ ಪ್ರಮುಖ ಆಧಾರ. ನಾವು ನಿತ್ಯ ಬಳಸುವ ಹಣ್ಣುಗಳು, ತರಕಾರಿಗಳು ಹಾಗೂ ಎಣ್ಣೆಕಾಳುಗಳು ಸೇರಿದಂತೆ ಹತ್ತಾರು ಬೆಳೆಗಳ ಯಶಸ್ವಿ ಉತ್ಪಾದನೆ ಮತ್ತು ವೈವಿಧ್ಯತೆ ಇವುಗಳ ಮೇಲೆಯೇ ಅವಲಂಬಿತವಾಗಿದೆ. ಸರಳವಾಗಿ ಹೇಳಬೇಕೆಂದರೆ, ಜೇನುನೊಣಗಳಿಲ್ಲದ ಜಗತ್ತಿನಲ್ಲಿ ಮಾನವನ ಆಹಾರ ಭದ್ರತೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಆದರೆ, ಇಂದಿನ ಆಧುನಿಕ ಯುಗದಲ್ಲಿ ಜೇನುನೊಣಗಳ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಮಿತಿಮೀರಿದ ಕೀಟನಾಶಕಗಳ ಬಳಕೆ, ನಗರೀಕರಣದಿಂದಾಗುತ್ತಿರುವ ಅರಣ್ಯ ನಾಶ, ಜಾಗತಿಕ ಹವಾಮಾನ ಬದಲಾವಣೆ ಹಾಗೂ ಅತಿಯಾದ ರಾಸಾಯನಿಕ ಕೃಷಿ ಪದ್ಧತಿಗಳ ಕಾರಣದಿಂದಾಗಿ ಜೇನುನೊಣಗಳ ಸಂಖ್ಯೆ ಜಗತ್ತಿನಾದ್ಯಂತ ಗಣನೀಯವಾಗಿ ಕುಸಿಯುತ್ತಿದೆ. ಇದು ಕೇವಲ ಜೇನುತುಪ್ಪದ ಕೊರತೆಯಲ್ಲ, ಬದಲಿಗೆ ಇಡೀ ಜೀವವೈವಿಧ್ಯತೆ, ಪರಿಸರ ಸಮತೋಲನ ಮತ್ತು ಒಟ್ಟಾರೆ ಕೃಷಿ ರಂಗದ ಭವಿಷ್ಯಕ್ಕೆ ಎದುರಾಗಿರುವ ಬೃಹತ್ ಅಪಾಯದ ಮುನ್ಸೂಚನೆಯಾಗಿದೆ.
ಪ್ರಕೃತಿಯ ಈ ಸಂಕಷ್ಟದ ಜೊತೆಗೆ, ಇಂದು ಭಾರತವನ್ನು ಮತ್ತೊಂದು ಗಂಭೀರ ಸಮಸ್ಯೆ ಕಾಡುತ್ತಿದೆ; ಅದೇ “ಜೇನುತುಪ್ಪದ ಕಲಬೆರಿಕೆ”.
ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಜೇನುತುಪ್ಪಗಳಲ್ಲಿ ಸಕ್ಕರೆ ಸಿರಪ್, ಕೃತಕ ದ್ರವ್ಯಗಳು ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತಿದೆ ಎಂಬ ಬಲವಾದ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಈ ನಕಲಿ ಜೇನುತುಪ್ಪದ ಹಾವಳಿಯಿಂದಾಗಿ ಹಗಲಿರುಳು ಶ್ರಮಿಸುವ ನಿಜವಾದ ಜೇನುಸಾಕಾಣಿಕೆದಾರರು ಮತ್ತು ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ, ಕಲಬೆರಿಕೆ ಜೇನುತುಪ್ಪವನ್ನು ಅಮೃತವೆಂದು ಸೇವಿಸುತ್ತಿರುವ ಗ್ರಾಹಕರ ಆರೋಗ್ಯವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದರ ನೇರ ಪರಿಣಾಮವಾಗಿ, ನೈಸರ್ಗಿಕ ಜೇನುತುಪ್ಪದ ಮೇಲಿದ್ದ ಜನರ ನಂಬಿಕೆ ಮತ್ತು ವಿಶ್ವಾಸವೇ ಇಂದು ಕುಸಿಯುವಂತಾಗಿದೆ.
ಇಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆಯೆಂದರೆ— ಭಾರತದಲ್ಲಿ ನೈಸರ್ಗಿಕವಾಗಿ ಕಾಡು ಹಾಗೂ ಕೃಷಿ ಮೂಲಗಳಿಂದ ಸಂಗ್ರಹವಾಗುತ್ತಿರುವ ಒಟ್ಟು ಜೇನುತುಪ್ಪದ ಪ್ರಮಾಣ ಎಷ್ಟು? ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿರುವ ಜೇನುತುಪ್ಪದ ಪ್ರಮಾಣ ಎಷ್ಟು? ಈ ಎರಡರ ಅಂಕಿ-ಅಂಶಗಳ ನಡುವೆ ಭಾರಿ ದೊಡ್ಡ ಅಂತರವಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ ದಟ್ಟವಾಗಿದೆ.
ಇದನ್ನೂ ಓದಿ: ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?
ಆದ್ದರಿಂದ, ಕೇಂದ್ರ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ. ಆಹಾರ ಸುರಕ್ಷತಾ ಇಲಾಖೆ (FSSAI), ಅರಣ್ಯ ಇಲಾಖೆ, ಕೃಷಿ ಇಲಾಖೆ, ಜೇನುಸಾಕಣೆ ತಜ್ಞರು ಹಾಗೂ ಅಗತ್ಯವಿದ್ದರೆ ಸಿಬಿಐ (CBI) ಒಳಗೊಂಡ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಮೂಲಕ ದೇಶವ್ಯಾಪಿ ಸಮಗ್ರ ಮತ್ತು ಪಾರದರ್ಶಕ ಅಧ್ಯಯನ ನಡೆಯಬೇಕು. ಆ ವರದಿಯಲ್ಲಿ ನೈಸರ್ಗಿಕ ಜೇನು ಉತ್ಪಾದನೆಯ ನೈಜ ಅಂಕಿ-ಅಂಶಗಳು, ಆಮದು-ರಫ್ತು ಪ್ರಮಾಣ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಲಬೆರಿಕೆ ತಂತ್ರಗಳು, ಪ್ರಸ್ತುತ ಇರುವ ಲ್ಯಾಬ್ ಪರೀಕ್ಷೆಗಳ ವಿಶ್ವಾಸಾರ್ಹತೆ ಹಾಗೂ ನಕಲಿ ಬ್ರ್ಯಾಂಡ್‌ಗಳ ಜಾಲದ ಕುರಿತು ಸಂಪೂರ್ಣ ವೈಜ್ಞಾನಿಕ ಸತ್ಯ ಹೊರಬರಬೇಕಾಗಿದೆ.
ವಿಶ್ವ ಜೇನುನೊಣ ದಿನ ಎಂಬುದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯದ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ದಿನವಾಗಬಾರದು. ಇದು ಪ್ರಕೃತಿ ಸಂರಕ್ಷಣೆ, ಆಹಾರ ಭದ್ರತೆ ಮತ್ತು ಕೃಷಿಯ ಭವಿಷ್ಯದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಂಭೀರ ಚಿಂತನೆ ಮತ್ತು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ದಿನವಾಗಬೇಕು. ಜೇನುನೊಣಗಳು ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ, ಕೃಷಿ ಉಳಿದರೆ ಮಾತ್ರ ಮಾನವಕುಲ ಉಳಿಯಲು ಸಾಧ್ಯ.
ಲೇಖನ: ಡಾ. ರವಿಕಿರಣ ಪಟವರ್ಧನ, ಶಿರಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ