World Brain Day 2024: ಆರೋಗ್ಯಕರ ಮೆದುಳಿಗೆ ಈ ಆಹಾರಗಳ ಸೇವನೆ ಹೆಚ್ಚಿರಲಿ
ನಮ್ಮ ದೇಹಕ್ಕೆ ಹೇಗೆ ವಯಸ್ಸು ಆಗುತ್ತದೆಯೋ ಅದೇ ರೀತಿ ವಯಸ್ಸಾದಂತೆ ಮೆದುಳಿನ ಗಾತ್ರವು ಕುಗ್ಗುತ್ತದೆ. ಹೀಗಾಗಿ ದೇಹದ ಪ್ರಮುಖ ಅಂಗವಾದ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳದೇ ಹೋದರೆ ಅನೇಕ ರೀತಿಯ ರೋಗಗಳು ಬಾಧಿಸಬಹುದು. ಮೆದುಳಿನ ಆರೋಗ್ಯ ಹಾಗೂ ನರ ವೈಜ್ಞಾನಿಕ ಅಸ್ವಸ್ಥತೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 22 ರಂದು ವಿಶ್ವ ಮೆದುಳು ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇನ್ನಷ್ಟು ಮಾಹಿತಿಯು ಇಲ್ಲಿದೆ.
ನಮ್ಮ ದೇಹದ ಪ್ರಮುಖ ಅಂಗವೇ ಮೆದುಳು. ದೇಹದ ಸಂಪೂರ್ಣ ಅಂಗಾಂಗಗಳಿಗೆ ಸಂದೇಶಗಳನ್ನು ಈ ಮೆದುಳೇ ಕಳುಹಿಸುತ್ತದೆ. ಒಂದು ವೇಳೆ ಈ ಅಂಗವು ಸರಿಯಾಗಿ ಕೆಲಸವು ನಡೆಸಿದ್ದರೆ ದೇಹದ ಉಳಿದ ಅಂಗಗಳ ಕಾರ್ಯಕ್ಕೂ ಅಡ್ಡಿಯಾಗುತ್ತದೆ. ಹೀಗಾಗಿ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದ ಕಾರಣ ಈ ಮೆದುಳಿನ ಆರೋಗ್ಯ ಹಾಗೂ ನರ ವೈಜ್ಞಾನಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಮೆದುಳಿನ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ವಿಶ್ವ ಮೆದುಳಿನ ದಿನದ ಇತಿಹಾಸ
ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ 1957, ಜುಲೈ 22 ರಂದು ಸ್ಥಾಪನೆಯಾಯಿತು. ಸಾರ್ವಜನಿಕ ಜಾಗೃತಿ ಹಾಗೂ ವಕಾಲತ್ತು ಸಮಿತಿಯು ಜುಲೈ 22 ರಂದು ವಿಶ್ವ ಮೆದುಳಿನ ದಿನ ದಿನವನ್ನು ಆಚರಿಸಲು ನಿರ್ಧರಿಸಿತು. 2013ರ ಸೆಪ್ಟೆಂಬರ್ 22 ರಂದು ನಡೆದ ವರ್ಲ್ಡ್ ಕಾಂಗ್ರೆಸ್ ಆಫ್ ನ್ಯೂರಾಲಜಿ ಸಭೆಯ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತುತಪಡಿಸಲಾಯಿತು. ಆದಾದ ಬಳಿಕ 2014ರಲ್ಲಿ ಈ ಆಚರಣೆಗೆ ಒಪ್ಪಿಗೆ ಸಿಕ್ಕ ಕಾರಣ ಅಂದಿನಿಂದ ಪ್ರತಿವರ್ಷ ವಿಶ್ವ ಮೆದುಳಿನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಮೆದುಳಿನ ದಿನದ ಮಹತ್ವ ಹಾಗೂ ಆಚರಣೆ
ವಿಶ್ವ ಮೆದುಳಿನ ದಿನದ ಮುಖ್ಯ ಉದ್ದೇಶವೇ, ಮೆದುಳಿನ ಆರೋಗ್ಯವನ್ನು ಉತ್ತೇಜಿಸುವುದಾಗಿದೆ. ಮೆದುಳಿನ ಅಸ್ವಸ್ಥತೆಗಳಿಂದ ಬಳಲುತ್ತಿರುವ ಜನರಿಗೆ ಶಿಕ್ಷಣ ನೀಡುವುದು. ಈ ದಿನದಂದು ಪ್ರಪಂಚದಾದ್ಯಂತದ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಅಭಿಯಾನಗಳು, ಕಾರ್ಯಾಗಾರಗಳು ಅಥವಾ ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನಿಗೂ ರಾಷ್ಟ್ರ ಧ್ವಜದ ಈ ವಿಷಯ ತಿಳಿದಿರಲೇಬೇಕು
ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ
ಇಡೀ ದೇಹದ ಚಲನೆಯನ್ನು ನಿಯಂತ್ರಿಸುವ ಅಂಗವಾದ ಮೆದುಳನ್ನು ಆರೋಗ್ಯಯುತವಾಗಿರುವುದು ಬಹುಮುಖ್ಯ. ಹೀಗಾಗಿ ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇದು ಸಾಧ್ಯ.
* ಕೇಸುಗಡ್ಡೆಯು ವಿಟಮಿನ್ ಕೆ ಪೋಷಕಾಂಶಗಳು ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಇದು ಮೆದುಳಿನ ಕೋಶಗಳನ್ನು ಆರೋಗ್ಯವಾಗಿರಿಸುತ್ತದೆ. ಮೆದುಳಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
* ಆಹಾರ ಪದ್ಧತಿಯಲ್ಲಿ ಮೀನುಗಳ ಸೇವನೆಯನ್ನು ಮಾಡುವುದು ಉತ್ತಮ. ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ನಿಮ್ಮ ಮೆದುಳನ್ನು ಆರೋಗ್ಯರಕವಾಗಿರುವಂತೆ ಮಾಡುತ್ತದೆ.
* ಅರಶಿನವು ಕರ್ಕ್ಯುಮಿನ್ ಎಂಬ ಅಂಶವನ್ನು ಹೊಂದಿದ್ದು, ಮೆದುಳಿನ ಜೀವಕೋಶಗಳಿಗೆ ಅತ್ಯಂತ ಉಪಯೋಗಕಾರಿಯಾಗಿದೆ. ಈ ಅರಶಿನ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುವ ಕಾರಣ ನೆನಪಿನ ಶಕ್ತಿ ಕಡಿಮೆಯಾಗುವುದು ಸೇರಿದಂತೆ ಇನ್ನಿತ್ತರ ಮೆದುಳಿಗೆ ಸಂಬಂಧಪಟ್ಟ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ