
ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಈ ಜಾಗತಿಕ ಉಪಕ್ರಮವು ಕ್ಯಾನ್ಸರ್ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಸರ್ಕಾರ ಮತ್ತು ಇತರೆ ಸಂಘ ಸಂಸ್ಥೆಗಳು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ಯಾನ್ಸರ್ ಬಗ್ಗೆ ಮುನ್ನೆಚ್ಚೆರಿಕೆ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಅದಲ್ಲದೆ ಜನರಿಗೆ ಈ ಬಗ್ಗೆ ಸರಿಯಾದ ಶಿಕ್ಷಣ ನೀಡಲು ಮತ್ತು ಕ್ಯಾನ್ಸರ್ ಪೀಡಿತ ರೋಗಿಗಳ ಕುಟುಂಬಗಳನ್ನು ಬೆಂಬಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಹಾಗದರೆ ಕ್ಯಾನ್ಸರ್ ತಡೆಯಲು ಯಾವ ರೀತಿಯ ಜೀವನಶೈಲಿಯನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಯಾನ್ಸರ್ ಅಪಾಯವನ್ನು ತಪ್ಪಿಸುವ ಮೂಲಕ 30 ರಿಂದ 50% ರಷ್ಟು ಕ್ಯಾನ್ಸರ್ ಗಳನ್ನು ತಡೆಗಟ್ಟಬಹುದು. ಹಾಗಾಗಿ ಈ ರೀತಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಬದಲಾವಣೆಗಳು ಇಲ್ಲಿವೆ:
1. ತಂಬಾಕನ್ನು ತ್ಯಜಿಸಿ
ತಂಬಾಕು ಬಳಕೆಯು ಕ್ಯಾನ್ಸರ್ ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅದಲ್ಲದೆ ಧೂಮಪಾನ ತ್ಯಜಿಸಿದರೆ ಮತ್ತು ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿದಲ್ಲಿ ಕ್ಯಾನ್ಸರ್ ನಿಂದ ದೂರವಿರಬಹುದು.
2. ಸರಿಯಾಗಿ ತಿನ್ನಿ
ಹಣ್ಣು, ತರಕಾರಿ, ಧಾನ್ಯ ಮತ್ತು ತೆಳ್ಳಗಿನ ಪ್ರೋಟೀನ್ ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವತ್ತ ಹೆಚ್ಚು ಗಮನ ಹರಿಸಿ. ಸಂಸ್ಕರಿಸಿದ ಆಹಾರಗಳು, ಕೆಂಪು ಮಾಂಸಗಳು ಮತ್ತು ಸಕ್ಕರೆ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನ ಮಾಡಿ. ಈ ರೀತಿಯ ಆಹಾರ ಪದ್ಧತಿಯು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆಯಿಂದಾಗಿ ಮುಂಬರುವ ಅಪಾಯದ ಅಂಶಗಳನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನದ ಇತಿಹಾಸ, ಉದ್ದೇಶದ ಕುರಿತಾದ ಮಹತ್ವದ ಮಾಹಿತಿ ಇಲ್ಲಿದೆ
3. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ
ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಆರಂಭಿಕ ಪತ್ತೆ ಪ್ರಮುಖವಾಗಿದೆ. ನಿಯಮಿತ ತಪಾಸಣೆಯು, ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವುದರ ಜೊತೆಗೆ ಅಗತ್ಯ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
4. ಲಸಿಕೆ ಹಾಕಿಸಿಕೊಳ್ಳಿ
ಗರ್ಭಕಂಠ ಮತ್ತು ಇತರ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುವ ಎಚ್ಪಿವಿ ಲಸಿಕೆ ಮತ್ತು ಯಕೃತ್ತಿನ ಕ್ಯಾನ್ಸರ್ನಿಂದ ರಕ್ಷಿಸುವ ಹೆಪಟೈಟಿಸ್ ಬಿ ಲಸಿಕೆಗಳು ಕೆಲವು ರೀತಿಯ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತವೆ. ಹಾಗಾಗಿ ವೈದ್ಯರ ಸಲಹೆಯಂತೆ ಲಸಿಕೆ ಹಾಕಿಸಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ