
2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 2ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 5ನೇ ಮನೆ, ಅಂದರೆ ಪೂರ್ವಪುಣ್ಯ- ಸುತ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ರಿಪು ಸ್ಥಾನ, ಅಂದರೆ 6ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು, ಕಳತ್ರ ಸ್ಥಾನ, ಅಂದರೆ 7ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮದೇ ರಾಶಿಯಲ್ಲಿ ಹಾಗೂ ಕೇತು ಗ್ರಹವು 7ನೇ ಮನೆಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ವ್ಯಯ ಸ‌್ಥಾನವಾದ 12ನೇ ಮನೆ ಮಕರ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 6ನೇ ಮನೆ ಕರ್ಕಾಟಕ ರಾಶಿಗೂ ಪ್ರವೇಶಿಸುತ್ತದೆ.
ಧನಿಷ್ಠಾ ನಕ್ಷತ್ರದ ಮೂರು, ನಾಲ್ಕನೇ ಪಾದ, ಶತಭಿಷಾ ನಕ್ಷತ್ರದ ನಾಲ್ಕೂ ಪಾದ, ಪೂರ್ವಾಭಾದ್ರ ನಕ್ಷತ್ರದ ಒಂದು, ಎರಡು, ಮೂರನೇ ಪಾದ ಸೇರಿ ಕುಂಭ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಶನಿ.
ಇಡೀ ವರ್ಷ ನಿಮ್ಮ ರಾಶಿಗೆ ಎರಡನೇ ಮನೆ- ವಾಕ್ ಸ್ಥಾನ, ಧನ ಸ್ಥಾನ, ಕುಟುಂಬ ಸ್ಥಾನವಾದ ಮೀನ ರಾಶಿಯಲ್ಲಿ ಶನಿ ಗ್ರಹದ ಸಂಚಾರ ಇರುತ್ತದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ಅದರಲ್ಲೂ ಪ್ರೇಮಿಗಳ ಮಧ್ಯೆ- ದಂಪತಿ ಮಧ್ಯೆ ಅಥವಾ ಒಂದು ವೇಳೆ ವಿವಾಹ ನಿಶ್ಚಿತಾರ್ಥ ಆಗಿದ್ದಲ್ಲಿ ಅಂಥವರು ಬಳಕೆ ಮಾಡುವ ಪದಗಳ ಮೇಲೆ ಹೆಚ್ಚು ಗಮನವನ್ನು ನೀಡಿ. ಹಣದ ಹರಿವು ಅಡೆತಡೆಗಳಿಂದ ಕೂಡಿರುತ್ತದೆ. ಆದಾಯ ಬರುವುದರಲ್ಲಿ ತೊಂದರೆ ಇಲ್ಲ, ಆದರೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇನ್ನೂ ನಿಮ್ಮ ಕೈ ಸೇರದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ನಾನಾ ರೀತಿಯ ವ್ಯಾಕುಲಗಳು ಕಾಡುತ್ತವೆ. ಸಾಡೇಸಾತ್ ನ ಕೊನೆ ಭಾಗದಲ್ಲಿ ಇರುವುದರಿಂದ ಈ ಹಿಂದಿನ ಐದು ವರ್ಷಗಳಲ್ಲಿ, ಅದರಲ್ಲೂ ಕಳೆದ ಎರಡೂವರೆ ವರ್ಷಗಳಲ್ಲಿ ಪಟ್ಟಷ್ಟು ಹಿಂಸೆ- ಕಿರಿಕಿರಿ ಇರುವುದಿಲ್ಲ. ಆದರೆ ಮೇಲಿಂದ ಮೇಲೆ ಪ್ರಯತ್ನ ಮಾಡಿದ ನಂತರವೂ ಅಂದುಕೊಂಡ ಮಟ್ಟದಲ್ಲಿ ಫಲಿತಾಂಶ ದೊರೆಯದೆ ಬೇಸರಕ್ಕೆ ಕಾರಣ ಆಗಲಿದೆ. ಅನವಶ್ಯಕ ಖರ್ಚುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ನಿಮ್ಮ ಆಲಸ್ಯದಿಂದಾಗಿ ದೊಡ್ಡ ಮೊತ್ತದ ಬೆಲೆ ತೆರುವಂತೆ ಸಹ ಆಗಲಿದೆ. ಸರ್ಕಾರಕ್ಕೆ ಕಟ್ಟ ಬೇಕಾದ ಶುಲ್ಕ, ತೆರಿಗೆ ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದಕ್ಕೆ ಆದ್ಯತೆ ನೀಡಿ. ಒಂದು ಕಡೆ ಉದ್ಯೋಗ ಮಾಡುತ್ತಾ ಮತ್ತೊಂದು ಕಡೆಗೂ ಆದಾಯ ಬರಲಿ ಅಂತ ಕೆಲಸದಲ್ಲಿ ತೊಡಗಿಕೊಂಡು, ಸಮಸ್ಯೆಗೆ ಸಿಲುಕುತ್ತೀರಿ. ಯಾರಿಗೂ ಗೊತ್ತಾಗಲ್ಲ ಎಂಬ ಧೋರಣೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.
ಜನವರಿಯಿಂದ ಜೂನ್ ತಿಂಗಳ ತನಕ ಐದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಈ ಅವಧಿಯಲ್ಲಿ ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮವಾದ ಸಮಯ ಆಗಿರುತ್ತದೆ. ಆದಾಯದ ಹರಿವಿನಲ್ಲಿ ತೀರಾ ಆತಂಕ ಪಡುವಷ್ಟರ ಮಟ್ಟಿಗೆ ಕುಸಿತ ಆಗುವುದಿಲ್ಲ. ಮದುವೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸೂಕ್ತ ಸಂಬಂಧ ದೊರೆಯಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರದ ಪ್ರಸ್ತಾವ ಮಾಡಿ, ಒಪ್ಪಿಗೆಯನ್ನು ಪಡೆದುಕೊಳ್ಳಲಿದ್ದೀರಿ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಏರಿಕೆ ಕಾಣಲಿದೆ. ಪುಸ್ತಕ ಪ್ರಕಾಶಕರು, ಮುದ್ರಕರು, ಚಾರ್ಟರ್ಡ್ ಅಕೌಂಟೆಂಟ್ ಗಳು, ಕನ್ಸಲ್ಟೇಷನ್ ಮಾಡುತ್ತಾ ಆ ಮೂಲಕ ಆದಾಯ ಪಡೆಯುತ್ತಾ ಇರುವವರಿಗೆ ಬಹಳ ಉತ್ತಮವಾದ ಸಮಯ ಇದಾಗಿರುತ್ತದೆ. ಈ ಹಿಂದೆ ನೀವು ಪಟ್ಟ ಶ್ರಮವನ್ನು ಗುರುತಿಸಿ, ಹುದ್ದೆ- ಸ್ಥಾನಮಾನಗಳು ದೊರೆಯುವ ಸಾಧ್ಯತೆ ಇದೆ. ಜೂನ್ ನಿಂದ ಅಕ್ಟೋಬರ್ ತಿಂಗಳ ಕೊನೆ ತನಕ ಆರನೇ ಮನೆಯಲ್ಲಿ ಗುರು ಸಂಚಾರ ಆಗುತ್ತದೆ. ಆರೋಗ್ಯದಲ್ಲಿ ಏರಿಳಿತ ಕಾಣಿಸಿಕೊಳ್ಳುತ್ತದೆ. ದೇಹದ ತೂಕದಲ್ಲಿ ಏಕಾಏಕಿ ಏರಿಕೆ ಆಗುತ್ತದೆ. ಸಾಲದ ಪ್ರಮಾಣ ಜಾಸ್ತಿ ಆಗಲಿದ್ದು, ಈಗಾಗಲೇ ಸಾಲ ಪಡೆದುಕೊಂಡಿದ್ದಲ್ಲಿ ಅದನ್ನು ಹಿಂತಿರುಗಿಸುವಂತೆ ಭಾರೀ ಒತ್ತಡ ಬೀಳಲಿದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಏಳನೇ ಮನೆಯಲ್ಲಿ ಗುರು ಸಂಚಾರ ಕಾಲದಲ್ಲಿ ವಿದೇಶ ಪ್ರಯಾಣದ ಯೋಗ ದೊರೆಯಬಹುದು. ದಂಪತಿ- ಪ್ರೇಮಿಗಳ ಮಧ್ಯೆ ಅಭಿಪ್ರಾಯ ಭೇದ ಇದ್ದಲ್ಲಿ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಆ ಎರಡು ತಿಂಗಳ ಹಲವು ರೀತಿಯ ಶುಭ ಫಲಗಳು ಅನುಭವಕ್ಕೆ ಬರಲಿವೆ.
ಇದನ್ನೂ ಓದಿ: 2026ರ ಹೊಸ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ
ನಿಮ್ಮದೇ ರಾಶಿಯಲ್ಲಿ ರಾಹು ಸಂಚಾರ ಮಾಡುವುದರಿಂದ ಭಾವನಾತ್ನಕವಾಗಿ ಯಾರಿಗೆ ಹತ್ತಿರ ಆಗಿರುತ್ತೀರೋ ಅವರಿಂದ ದೂರ ಆಗುವ ಸನ್ನಿವೇಶಗಳು ಸೃಷ್ಟಿ ಆಗುತ್ತವೆ. ತುಂಬ ಆತುರ ಆತುರವಾಗಿ ನಿರ್ಧಾರಗಳನ್ನು ಮಾಡಿ, ಆರ್ಥಿಕ ನಷ್ಟವನ್ನು ಅನುಭವಿಸುವಂತೆ ಆಗಲಿದೆ. ದುಡ್ಡಿನ ವಿಚಾರಗಳಲ್ಲಿ ಅತ್ಯುತ್ಸಾಹ ತೋರಿಸುವುದಕ್ಕೆ ಹೋಗಬೇಡಿ. ದೊಡ್ಡ ಮಟ್ಟದ ಲಾಭ ಕೊಡಿಸುವುದಾಗಿ ನಿಮಗೆ ಆಮಿಷ ತೋರಿಸಿ, ವಂಚನೆ ಮಾಡುವ ಅಪಾಯ ಇದೆ. ಷೇರು ಮಾರ್ಕೆಟ್- ಸಟ್ಟಾ ವ್ಯವಹಾರ- ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಇಲ್ಲದಿದ್ದಲ್ಲಿ ಹಣವನ್ನು ಕಳೆದುಕೊಳ್ಳುತ್ತೀರಿ. ಏಳನೇ ಮನೆಯಲ್ಲಿ ಕೇತು ಸಂಚಾರ ಇರುವಾಗ ದಂಪತಿ ಮಧ್ಯೆ ಅನುಮಾನಗಳು ಹೆಚ್ಚಾಗುತ್ತವೆ. ಪಾಪ ಕರ್ಮಾಸಕ್ತಿ ಜಾಸ್ತಿ ಆಗುತ್ತದೆ. ಅದರಲ್ಲೂ ಜೂನ್ ನಿಂದ ಅಕ್ಟೋಬರ್ ತನಕ ಈ ಸಮಸ್ಯೆ ವಿಪರೀತಕ್ಕೆ ಹೋಗುತ್ತದೆ. ಹೊಸಬರ ಜೊತೆಗೆ ವ್ಯವಹಾರ- ವ್ಯಾಪಾರ ಮಾಡುವಾಗ ಜಾಗ್ರತೆಯಿಂದ ಇರಬೇಕು. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಾ ಇದ್ದೀರಿ ಅಂತಾದಲ್ಲಿ ಕೋರ್ಟ್- ಕಚೇರಿ, ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವಂಥ ಪರಿಸ್ಥಿತಿ ಉದ್ಭವಿಸುತ್ತದೆ.
ಪರಿಹಾರ: ಶನಿ ಆರಾಧನೆ, ದುರ್ಗಾ ದೇವಿ ಹಾಗೂ ಗಣಪತಿ ಆರಾಧನೆಯನ್ನು ಮಾಡಿಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.
Published On - 4:24 pm, Tue, 16 December 25