Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 7ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣ ಅಥವಾ ಮದುವೆ ವಿಚಾರವಾಗಿ ತುಂಬಾ ಪ್ರಮುಖವಾದ ನಿರ್ಧಾರವನ್ನು ಈ ದಿನ ತೆಗೆದುಕೊಳ್ಳಲಿದ್ದೀರಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಪಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಉಪಯುಕ್ತವಾದ ಮಾಹಿತಿ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಸೈಕಲ್, ಎಲೆಕ್ಟ್ರಿಕ್ ಸ್ಕೂಟರ್ ಇಂಥದ್ದನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ನೀವು ಸವಾಲು ಎಂದು ಭಾವಿಸಿ ಒಪ್ಪಿಕೊಂಡಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ದೂರ ಪ್ರಯಾಣವನ್ನು ಮಾಡಬೇಕು ಎಂದಿರುವವರು ಸರಿಯಾದ ಸಿದ್ಧತೆಯನ್ನು ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಆತ್ಮಗೌರವಕ್ಕೆ ಪೆಟ್ಟು ಬೀಳುವಂತಹ ಮಾತುಗಳನ್ನು ಈ ದಿನ ಕೇಳಿಸಿಕೊಳ್ಳಬೇಕಾಗುತ್ತದೆ. ನಿಮಗೆ ಆಹ್ವಾನ ಇಲ್ಲ ಎಂದ ಕಡೆ ಯಾವುದೇ ಕಾರಣಕ್ಕೂ ಹೋಗಬೇಡಿ. ಸ್ವಂತಕ್ಕಾಗಿ ಖರೀದಿ ಮಾಡಿದ ವಸ್ತುಗಳನ್ನು ಇತರರಿಗೆ ಕೊಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಲಿದೆ. ನೀವು ನೀಡಿದ ಮಾಹಿತಿ ಅಥವಾ ಸಲಹೆಯನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಂಡು ಕೆಲವರು ಲಾಭ ಮಾಡಿಕೊಳ್ಳಲಿದ್ದಾರೆ. ಆದ್ದರಿಂದ ನಿಮ್ಮ ತಲೆಯಲ್ಲಿ ಆಲೋಚನೆಯ ಮಟ್ಟದಲ್ಲಿ ಇರುವಂಥದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನಿಮಗೆ ಸಿಗಬೇಕಾದ ಯಶಸ್ಸಿನ ಪಾಲು ಇತರರಿಗೆ ಸಂದಾಯ ಆಗಲಿದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರು ರಹಸ್ಯಗಳನ್ನು ಕಾಪಾಡಿಕೊಳ್ಳಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ದಿನ ನಿಮ್ಮ ಸಾಮರ್ಥ್ಯ ಮತ್ತು ಮಿತಿ ಎರಡನ್ನೂ ಅರಿತಲ್ಲಿ ಒಳ್ಳೆಯದು. ನಿಮಗೆ ಮಾಡಲು ಆಗದಂತಹ ಕೆಲಸಗಳನ್ನು ಸಹ ಯಾವುದಾದರೂ ಕಾರಣಗಳಿಂದಾಗಿ ಒಪ್ಪಿಕೊಂಡು ಬಿಟ್ಟರೆ ಅವಮಾನದ ಪಾಲಾಗುವ ಸಾಧ್ಯತೆಗಳಿವೆ. ನೀವು ಇಷ್ಟು ಸಮಯ ಕಷ್ಟಪಟ್ಟು ಬೆಳೆಸಿಕೊಂಡ ವರ್ಚಸ್ಸಿಗೆ ಪೆಟ್ಟು ಬೀಳಬಹುದು ಎಚ್ಚರ. ಸ್ತ್ರೀಯರ ವಿಚಾರದಲ್ಲಿ ಯಾವುದೇ ಗಾಸಿಪ್ ಮಾತನಾಡುವುದಕ್ಕೆ ಹೋಗಬೇಡಿ. ತಮಾಷೆಗೆಂದು ಮಾತನಾಡಿದರೂ ಅದು ದೊಡ್ಡ ಮಟ್ಟದಲ್ಲಿ ಸಮಸ್ಯೆ ತಂದಿಡಲಿದೆ. ದೂರದ ಊರುಗಳಲ್ಲಿ ಇರುವಂತಹ ಸಂಬಂಧಿಕರು ನಿಮ್ಮಿಂದ ನೆರವನ್ನು ಅಪೇಕ್ಷಿಸಿ, ಕರೆ ಮಾಡಬಹುದು. ನಿಮ್ಮಿಂದ ಸಾಧ್ಯವಾದಲ್ಲಿ ಅವರಿಗೆ ಸಹಾಯ ಮಾಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಆಪ್ತರು, ಸ್ನೇಹಿತರ ಜೊತೆಗೆ ಬಹಳ ಉತ್ತಮವಾದ ಸಮಯವನ್ನು ಕಳೆಯುವುದಕ್ಕೆ ಅವಕಾಶಗಳಿವೆ. ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದು ಬಯಸಿ ಬ್ಯಾಂಕ್ ಗಳಲ್ಲಿ ಲೋನ್ ಗಾಗಿ ಪ್ರಯತ್ನಪಟ್ಟಿರುವವರಿಗೆ ಪ್ರಭಾವಿಗಳು ನೆರವನ್ನು ನೀಡಲಿದ್ದಾರೆ. ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದಾದ ವ್ಯಕ್ತಿ ಒಬ್ಬರನ್ನು ಭೇಟಿ ಆಗುವ ಯೋಗ ಈ ದಿನ ಇದೆ. ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳದೆ ಮಾಡಿದಂತಹ ಕೆಲಸವೊಂದರಿಂದ ದೊಡ್ಡ ಲಾಭ ದೊರೆಯುವ ಅವಕಾಶಗಳಿವೆ. ಮಕ್ಕಳ ಆರೋಗ್ಯ ವಿಚಾರವಾಗಿ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ. ಈ ದಿನ ಶ್ರೀ ರಾಮನ ಆರಾಧನೆಯನ್ನು ಮಾಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಕೃಷಿಕರಿಗೆ ಆದಾಯವನ್ನು ಹೆಚ್ಚಳ ಮಾಡಿಕೊಳ್ಳುವುದಕ್ಕೆ ನಾನಾ ಮಾರ್ಗಗಳು ಗೋಚರ ಆಗಲಿವೆ. ಡೇರಿ ವ್ಯವಹಾರ, ಪಶು ಸಾಕಣೆ ಇಂಥದ್ದನ್ನು ಮಾಡುತ್ತಿರುವವರು ವ್ಯವಹಾರ ವಿಸ್ತರಣೆಗಾಗಿ ಬ್ಯಾಂಕ್ ನಿಂದ ಸಾಲ ಪಡೆಯುವುದಕ್ಕೆ ಕುಟುಂಬಸ್ಥರ ಜೊತೆಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಹೊಸದಾಗಿ ಉದ್ಯಮ ಅಥವಾ ಹೋಟೆಲ್ ಗಳನ್ನು ಶುರು ಮಾಡಬೇಕು ಅಂದುಕೊಂಡವರಿಗೆ ತುಂಬಾ ಮುಖ್ಯವಾದ ಬೆಳವಣಿಗೆಗಳನ್ನು ಕಾಣುವಂತಹ ಯೋಗ ಇದೆ. ಈ ಹಿಂದೆ ಯಾವಾಗಲೂ ನೀವು ಮಾಡಿಕೊಟ್ಟಿದ್ದ ಕೆಲಸವನ್ನು ಮೆಚ್ಚಿಕೊಂಡು, ಈ ದಿನ ಮತ್ತೆ ನಿಮಗೆ ಹೊಸತೊಂದು ಕೆಲಸವನ್ನು ವಹಿಸಲು ಜನರು ಬರಲಿದ್ದಾರೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂತಹವರಿಗೆ ಪದೋನ್ನತಿ ದೊರೆಯುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹೊಸದಾಗಿ ಪರಿಚಯ ಆದ ವ್ಯಕ್ತಿಯ ಜೊತೆಗೆ ಮಾತನಾಡುವಾಗ ಯಾವ ವಿಚಾರವನ್ನು ಹೇಳಬೇಕು ಹಾಗೂ ಯಾವ ವಿಚಾರವನ್ನು ಮಾತನಾಡಲೇಬಾರದು ಎಂಬ ಬಗ್ಗೆ ಒಂದು ಚೌಕಟ್ಟನ್ನು ಹಾಕಿಕೊಳ್ಳುವುದು ಉತ್ತಮ. ಅದು ಆಹಾರ ಸೇವನೆ ವಿಚಾರವೇ ಆಗಿರಬಹುದು ಅಥವಾ ಮಾತುಕತೆ ಇರಬಹುದು ನಿಮ್ಮ ನಾಲಿಗೆ ಈ ದಿನ ನಿಮಗೆ ಸಮಸ್ಯೆಯನ್ನು ತಂದೊಡ್ಡಲಿದೆ. ದೇಹದ ತೂಕವನ್ನು ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ. ನಿಮ್ಮ ಕೈಯಿಂದ ಹಣ ಹಾಕಿ, ಕೆಲಸ ಮಾಡಿಕೊಟ್ಟು ಅದು ಪೂರ್ತಿಯಾದ ಮೇಲೆ ಬೇರೆಯವರಿಂದ ಹಣ ಪಡೆದುಕೊಳ್ಳಬೇಕು ಅಂತಾದಲ್ಲಿ ಈ ದಿನ ಅಂತಹ ಕೆಲಸಗಳನ್ನು ಮಾಡದಿರುವುದು ಅಥವಾ ಒಪ್ಪಿಕೊಳ್ಳದಿರುವುದು ಉತ್ತಮ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಪುರುಷರಾಗಿದ್ದಲ್ಲಿ ಸ್ತ್ರೀಯರ ವಿಚಾರಕ್ಕೆ ಕೆಲವು ಆರೋಪ, ನಿಂದನೆ ಎದುರಿಸಬೇಕಾಗುತ್ತದೆ. ಇತರರಿಗೆ ಸಹಾಯ ಮಾಡಬೇಕು ಎಂದುಕೊಂಡು ನೀವು ಮಾಡುವ ಪ್ರಯತ್ನವೇ ಸಮಸ್ಯೆಯಾಗಿ ಪರಿಣಮಿಸಲಿದೆ. ಮುಖ್ಯವಾದ ಕೆಲಸಗಳಿಗಾಗಿ ಪ್ರಯಾಣ ಹೊರಡುತ್ತಿರುವಂಥವರು ಈ ದಿನ ಮನಸ್ಸಿನಲ್ಲಿ ಹನುಮಂತನ ಸ್ಮರಣೆ ಮಾಡಿಕೊಂಡು ಆ ನಂತರ ತೆರಳಿ. ಸಂಗೀತಗಾರರು, ಜ್ಯೋತಿಷಿಗಳು, ಪ್ರವಚನಕಾರರಿಗೆ ಈ ದಿನ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಜಮೀನು ಖರೀದಿ ಮಾಡಬೇಕು ಎಂದುಕೊಂಡು ಹುಡುಕುತ್ತಿರುವ ಕೃಷಿಕರಿಗೆ ಉತ್ಸಾಹ ಕಡಿಮೆಯಾಗುವಂತಹ ಕೆಲವು ಬೆಳವಣಿಗೆಗಳು ಆಗಲಿವೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಮದುವೆಗಾಗಿ ಪ್ರಯತ್ನಪಡುತ್ತಿರುವವರಿಗೆ ಈ ದಿನ ಶುಭ ಸುದ್ದಿ ಕೇಳುವ ಯೋಗ ಇದೆ. ಸ್ನೇಹಿತರು ಅಥವಾ ಸಂಬಂಧಿಕರು ನೀಡುವಂತಹ ರೆಫರೆನ್ಸ್ ಗಳನ್ನು ಗಂಭೀರವಾಗಿ ಪರಿಗಣಿಸಿ. ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬೇಕಿರುವವರು ಸೂಕ್ತವಾದ ಅಥವಾ ಅಗತ್ಯವಾದ ದಾಖಲೆಗಳು ಎಲ್ಲವನ್ನೂ ನಿಮ್ಮ ಬಳಿ ಇಟ್ಟುಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಕಾರು ಖರೀದಿ ಮಾಡಬೇಕು ಎಂಬ ಕಾರಣಕ್ಕೆ ಸಾಲಕ್ಕೆ ಪ್ರಯತ್ನಿಸುತ್ತಿರುವವರಿಗೆ ಹಣಕಾಸಿನ ನೆರವು ದೊರೆಯಲಿದೆ. ವಿದೇಶಗಳಿಗೆ ಪ್ರವಾಸಕ್ಕೆ ತೆರಳಬೇಕು ಎಂದಿರುವವರು ಒಂದು ವೇಳೆ ವೀಸಾಗಾಗಿ ಪ್ರಯತ್ನಪಡುತ್ತಿದ್ದಲ್ಲಿ ಈ ಕೆಲಸ ಮುಗಿಯಲು ಅನುಕೂಲ ಒದಗಿ ಬರಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಪ್ರಭಾವವನ್ನು ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಸೂಕ್ತ ವೇದಿಕೆ ದೊರೆಯಲಿದೆ. ನೀವು ಮಾಡುವಂತಹ ಹೊಸ ಪ್ರಯತ್ನಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಲಿವೆ. ನಿಮ್ಮ ಸಾಮಾಜಿಕ ಸ್ಥಾನ, ಮಾನ- ಮನ್ನಣೆ ವೃದ್ಧಿಯಾಗುವ ಸನ್ನಿವೇಶ ಸೃಷ್ಟಿಯಾಗಲಿದೆ. ಈಗಿರುವ ಕೆಲಸದ ಜೊತೆಗೆ ಆದಾಯವನ್ನು ವೃದ್ಧಿ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ನಾನಾ ಮಾರ್ಗಗಳು ಗೋಚರ ಆಗಲಿವೆ. ಈ ಹಿಂದೆ ನೀವಾಗಿಯೇ ಅಷ್ಟಾಗಿ ಆಸಕ್ತಿ ತೋರಿದ ಕಾರಣಕ್ಕೆ ಬಾರದೆ ಹೋಗಿದ್ದ ಪ್ರಾಜೆಕ್ಟ್ ಒಂದು ಈ ದಿನ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಸೈಟು, ಮನೆ ಖರೀದಿ ಅಥವಾ ಮಾರಾಟದ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ.
ಲೇಖನ- ಎನ್.ಕೆ.ಸ್ವಾತಿ