Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 10ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 10ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 10ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವು ಏನು ಹೇಳುವುದಕ್ಕೆ ಪ್ರಯತ್ನಿಸುತ್ತೀರೋ ಅದನ್ನು ಯಥಾರ್ಥವಾಗಿ ಅರ್ಥ ಮಾಡಿಸುವುದಕ್ಕೆ ಬಹಳ ಕಷ್ಟವಾಗುತ್ತದೆ. ಒಂದೋ ನೀವು ಕೆಲವು ವಿಚಾರಗಳಲ್ಲಿ ಸಂಕೋಚ ಪಡುವಂತಾಗುತ್ತದೆ ಅಥವಾ ಎದುರಿಗಿರುವ ವ್ಯಕ್ತಿಗೆ ಆ ನಿರ್ದಿಷ್ಟ ವಿಚಾರದ ಬಗ್ಗೆ ಅಗತ್ಯ ಪ್ರಮಾಣದ ಜ್ಞಾನ- ತಿಳಿವಳಿಕೆ ಇಲ್ಲದಿರಬಹುದು. ಆದ್ದರಿಂದ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡುತ್ತಿದ್ದೀರಿ ಎಂದಾದಲ್ಲಿ ಮನಸ್ಸಲ್ಲಿ ಮಹಾ ವಿಷ್ಣುವನ್ನು ನೆನಪಿಸಿಕೊಳ್ಳಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ದಿನವಾಗಿರುತ್ತದೆ. ನೀವು ಬಹಳ ನಂಬಿದ ವ್ಯಕ್ತಿಯೊಬ್ಬರು ನೆರವಿಗೆ ಬರಲಾರದಂಥ ಪರಿಸ್ಥಿತಿಯಲ್ಲಿ ಇರುತ್ತಾರೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಬೇರೆಯವರಿಗೆ ಸಹಾಯ ಮಾಡಬೇಕು ಎಂಬ ಪ್ರಯತ್ನದಲ್ಲಿ ನಿಮ್ಮದೇ ಕೆಲಸಗಳು ಕೆಲವು ಪೂರ್ಣಗೊಳ್ಳಲಿವೆ. ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಹೊಸ ಉದ್ಯಮ, ವ್ಯವಹಾರದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಒಂದು ವೇಳೆ ಈಗಾಗಲೇ ಅಂಥದ್ದೊಂದು ಯೋಜನೆ ಇದೆ ಎಂದಾದಲ್ಲಿ ಹಣ ಹಾಕುವುದಕ್ಕೆ ಸಿದ್ಧರಿರುವ ವ್ಯಕ್ತಿಗಳ ಜತೆಗೆ ಮಾತುಕತೆ ಆಗಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯುವಂಥ ಅವಕಾಶ ಇದೆ. ಈ ದಿನ ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಸಕಾರಾತ್ಮಕ ಫಲಿತಾಂಶವನ್ನು ಕಾಣುವಂಥ ಯೋಗ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ತಮ್ಮ ಪಾಲಿನ ಜವಾಬ್ದಾರಿಯನ್ನು ನಿಮಗೆ ವಹಿಸುವುದಕ್ಕೆ ನಿಮ್ಮ ಆಪ್ತರೇ ಈ ದಿನ ಮಾತುಕತೆ ಆಡಲಿದ್ದಾರೆ. ಅವರಿಗೆ ಒಪ್ಪಿಗೆ ಸೂಚಿಸುವುದಕ್ಕೆ ಮುಂಚೆ ಅದು ಸಾಧ್ಯವಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಆಲೋಚಿಸಿ. ಮೇಲ್ನೋಟಕ್ಕೆ ಕಾಣಿಸುವಷ್ಟು ಸಲೀಸಾಗಿ ಕೆಲಸ ಇರುವುದಿಲ್ಲ. ಒಪ್ಪಿಕೊಂಡ ನಂತರ ಪರಿತಪಿಸುವಂತೆ ಆಗಲಿದೆ. ಸುಮಾರಾಗಿ ಗೊತ್ತಿರುವಂಥ ವಿಷಯವನ್ನೇ ಸಿಕ್ಕಾಪಟ್ಟೆ ಮಾಹಿತಿ ಇದೆ ಎನ್ನುವ ಹಾಗೆ ಮಾತನಾಡಿದರೋ ಅವಮಾನದ ಪಾಲಾಗುತ್ತೀರಿ. ಪಾರ್ಟಿಗಳು ಅಥವಾ ಗೆಟ್ ಟು ಗೆದರ್ ಗೆ ತೆರಳುತ್ತಿದ್ದೀರಿ ಎಂದಾದಲ್ಲಿ ಸಮಯದ ಗಡುವು ಹಾಕಿಕೊಂಡು ಹೋಗಿ, ಬನ್ನಿ. ಮದ್ಯಪಾನದ ಅಭ್ಯಾಸ ಇದ್ದಲ್ಲಿ ಇನ್ನೂ ಹೆಚ್ಚು ಜಾಗ್ರತೆಯಿಂದ ಇರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮಗೆ ಸಿಗುತ್ತಿರುವ ಗೌರವ- ಆದರಗಳ ಬಗ್ಗೆ ಬಹಳ ಖುಷಿ ಪಡಲಿದ್ದೀರಿ. ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರು ಪಿಎಫ್ ಅಥವಾ ಇತರೆ ಉಳಿತಾಯದ ಮೊತ್ತವನ್ನು ವಿಥ್ ಡ್ರಾ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ಸೋದರ ಸಂಬಂಧಿಗಳ ಜತೆಗೆ ಕಿರು ಪ್ರವಾಸವಾದರೂ ತೆರಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದರ ಆಯೋಜನೆ, ಖರ್ಚು- ವೆಚ್ಚವನ್ನು ಸರಿಯಾಗಿ ಲೆಕ್ಕ ಹಾಕಿ, ಹಂಚಿಕೆ ಮಾಡಬೇಕಾದ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು. ಶೀತ ಪದಾರ್ಥಗಳ ಸೇವನೆಯಿಂದ ದೂರ ಇದ್ದರೆ ಒಳಿತು. ಇಲ್ಲದಿದ್ದರೆ ಕಫ, ಕೆಮ್ಮಿನಂಥ ಅನಾರೋಗ್ಯ ಸಮಸ್ಯೆಗಳು ಗಂಭೀರವಾಗಿ ಕಾಣಿಸಿಕೊಳ್ಳಲಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಮನೆಗೆ ಸಂಗಾತಿ ಕಡೆಯ ಸಂಬಂಧಿಕರು ಬರುವಂಥ ಯೋಗ ಇದೆ. ಮಹಿಳೆಯರು ಅಡುಗೆ ಮನೆಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳನ್ನು ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಅಥವಾ ಸ್ವಚ್ಛತಾ ಅಭಿಯಾನ ಎಂದು ಸಣ್ಣ ಮಟ್ಟದಲ್ಲಿ ಶುರು ಮಾಡಿದ ಕೆಲಸ ದಿನದ ಬಹುತೇಕ ಸಮಯವನ್ನು ತೆಗೆದುಕೊಳ್ಳಲಿದೆ. ಮಕ್ಕಳನ್ನು ಮನೆಯಿಂದ ಹೊರಗೆ, ಸುತ್ತಾಟಕ್ಕೆ ಕರೆದುಕೊಂಡು ಹೋಗುವುದಾಗಿ ಮಾತು ನೀಡಿದಲ್ಲಿ ಅದರಂತೆ ನಡೆದುಕೊಳ್ಳುವುದು ಕಷ್ಟವಾಗಲಿದೆ. ನಿಮ್ಮಲ್ಲಿ ಕೆಲವರು ಆರೋಗ್ಯದ ಮೇಲಿನ ಕಾಳಜಿಯಿಂದ ಸೈಕಲ್ ಅಥವಾ ಜಿಮ್ ನಲ್ಲಿ ಬಳಸುವಂಥ ಸಲಕರಣೆಗಳನ್ನು ಖರೀದಿಸಿ, ಮನೆಗೆ ತರುವಂಥ ಯೋಗ ಇದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮನೆಗೆ ಸಿಸಿಟಿವಿ ಕ್ಯಾಮೆರಾ ಖರೀದಿಸುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ ಅಥವಾ ಮನೆಯ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಬೇರೆ ಏನಾದರೂ ಮಾಡುವಂಥ ಸಾಧ್ಯತೆ ಇದೆ. ಹೀಗೆ ಮಾಡುತ್ತೀರಿ ಎಂದಾದಲ್ಲಿ ಖರ್ಚು ನೀವಂದುಕೊಂಡಿದ್ದಕ್ಕಿಂತ ಕೈ ಮೀರಿ ಹೋಗಲಿದೆ. ಆದ್ದರಿಂದ ಬಜೆಟ್ ಲೆಕ್ಕಾಚಾರ ಸರಿಯಾಗಿ ಹಾಕಿಕೊಳ್ಳಿ. ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಕರೋ ನಿಮ್ಮ ಹೆಸರಲ್ಲಿ ಸಾಲ ಕೊಡಿಸುವಂತೆ ಕೇಳಬಹುದು ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ, ಸಾಲ ತೆಗೆದುಕೊಂಡು, ಅದನ್ನು ಇಎಂಐ ಆಗಿ ಪರಿವರ್ತಿಸುವುದಾಗಿ ಹೇಳಬಹುದು. ಒಪ್ಪಿಗೆ ಕೊಡುವ ಮುಂಚೆ ಒಂದಕ್ಕೆ ನಾಲ್ಕು ಸಲ ಆಲೋಚಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಕುಟುಂಬದ ಸಲುವಾಗಿ ಹೆಚ್ಚಿನ ಸಮಯವನ್ನು ಇಡಬೇಕು ಎಂದು ಆಲೋಚನೆ ಮಾಡಲಿದ್ದೀರಿ. ಇನ್ನು ಮನೆಯಲ್ಲಿನ ಸದಸ್ಯರಿಗಾಗಿ ಬಟ್ಟೆ ಖರೀದಿಸುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ಸಿಗಲಿದೆ. ಬೆಳ್ಳಿ ಒಡವೆ ಅಥವಾ ದೀಪ, ತಟ್ಟೆ ಇಂಥದ್ದನ್ನು ಖರೀದಿಸುವಂಥ ಯೋಗ ಸಹ ಇದೆ. ಅಚ್ಚರಿ ಎಂಬಂತೆ ನಿಮ್ಮ ಹಳೇ ಸ್ನೇಹಿತ ಅಥವಾ ಸ್ನೇಹಿತೆಯರನ್ನು ಭೇಟಿ ಆಗಲಿದ್ದೀರಿ. ಕಲಾವಿದರು, ಸಂಗೀತಗಾರರು, ಧಾರ್ಮಿಕ ಪ್ರವಚನಕಾರರಿಗೆ ದೂರದ ಪ್ರದೇಶಗಳಿಂದ ಆಹ್ವಾನ ಬರಲಿದೆ. ಈ ದಿನ ಕನಿಷ್ಠ ಹತ್ತು ನಿಮಿಷ ಸಮಯವನ್ನು ಮಾಡಿಕೊಂಡು, ಧ್ಯಾನವನ್ನು ಮಾಡುವುದಕ್ಕೆ ಪ್ರಯತ್ನಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಫ್ರಿಜ್, ವಾಷಿಂಗ್ ಮಶೀನ್ ನಂಥ ಗೃಹ ಬಳಕೆ ವಸ್ತುಗಳನ್ನು ಖರೀದಿಸುವಂಥ ಯೋಗ ಇದೆ. ಏನೇ ಖರೀದಿ ಮಾಡಬೇಕು ಅಂದರೂ ಆತುರ ಮಾಡಿಕೊಳ್ಳಬೇಡಿ. ಏಕೆಂದರೆ ಒಳ್ಳೆ ಆಫರ್, ಡಿಸ್ಕೌಂಟ್ ಕೂಡ ದೊರೆಯುವ ಸಾಧ್ಯತೆ ಇದ್ದು, ನಿಮಗೆ ಪರಿಚಿತರಾದಂಥ ವ್ಯಕ್ತಿಯೊಬ್ಬರ ನೆರವಿನಿಂದ ಕಡಿಮೆ ಬೆಲೆಗೆ ದೊರೆಯಲಿದೆ. ಅಡುಗೆ ವೃತ್ತಿಯಲ್ಲಿ ಇರುವವರು, ವಕೀಲಿಕೆ ಮಾಡುತ್ತಿರುವವರು, ದಿನಸಿ ಪದಾರ್ಥಗಳ ಹೋಲ್ ಸೇಲ್ ಮಾರಾಟಗಾರರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಈ ದಿನ ಮನೆಯಲ್ಲಿಯೇ ದುರ್ಗಾದೇವಿ ಚಿತ್ರಕ್ಕೋ ಅಥವಾ ವಿಗ್ರಹಕ್ಕೋ ಅರಿಶಿಣ, ಕುಂಕುಮ ಹಾಗೂ ಹೂವಿನಿಂದ ಪೂಜೆ ಮಾಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಇತರರನ್ನು ನಂಬಿ ಕೆಲಸ ವಹಿಸಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಮನಸ್ಸಿಲ್ಲದ ಮನಸ್ಸಲ್ಲಿ ವಹಿಸಿದ ಜವಾಬ್ದಾರಿ ಅಥವಾ ಕೆಲಸಗಳಿಗೆ ಒಂದಕ್ಕೆ ಎರಡರಷ್ಟು ಖರ್ಚು, ಜತೆಗೆ ಸಮಯ ಸಹ ವ್ಯರ್ಥ ಆಗಿ, ಬೇಸರ ಆಗಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಕೂಡಿಸಿಟ್ಟಿದ್ದ ಹಣವನ್ನು ತೆಗೆದು, ಬೇರೆಯದ್ದಕ್ಕೆ ಬಳಸಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ನೀವು ಕೊಟ್ಟಿರುವ ಸಾಲವನ್ನು ವಾಪಸ್ ಕೇಳಲೇಬೇಕಾದ ಸನ್ನಿವೇಶ ಎದುರಾಗಲಿದ್ದು, ಹೇಗೆ ಕೇಳಬೇಕು ಎಂದು ಗೊಂದಲಕ್ಕೆ ಬೀಳುತ್ತೀರಿ. ಸಂಗಾತಿಯ ಆರೋಗ್ಯದ ಬಗ್ಗೆ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಗ್ಯಾಸ್ಟ್ರಿಕ್, ಹೊಟ್ಟೆ ನೋವು ಕಾಡುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರ ಕಡ್ಡಾಯವಾಗಿ ಕೊಡಿಸಿ.
ಲೇಖನ- ಎನ್.ಕೆ.ಸ್ವಾತಿ