Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 11ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 11ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 11ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಇನ್ನು ಬಾರದು ಎಂದು ನಿಮಗೆ ನೀವೇ ಅಂದುಕೊಂಡು ಆಸೆಯನ್ನೇ ಬಿಟ್ಟಿದ್ದ ಸಾಲದ ಬಾಕಿ ಮೊತ್ತವೊಂದು ಮತ್ತೆ ನಿಮ್ಮ ಕೈ ಸೇರುವುದಕ್ಕೆ ಬೇಕಾದ ಮಾರ್ಗೋಪಾಯ ಹೊಳೆಯಲಿದೆ. ಪ್ರಭಾವಿಗಳು ಎನಿಸಿಕೊಂಡವರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ. ದುಡ್ಡಿನ ವಿಚಾರಕ್ಕೆ ಈ ಹಿಂದೆ ಏನಾದರೂ ಮನಸ್ತಾಪಗಳು ಆಗಿದ್ದಲ್ಲಿ ಅದು ನಿವಾರಿಸಿಕೊಳ್ಳಲು ಸಾಧ್ಯ ಆಗಲಿದೆ. ಈಗಾಗಲೇ ಯಾವುದಾದರೂ ಆಸ್ತಿ ಖರೀದಿಗೆ ಅಂತ ಹಣ ನೀಡಿ, ಆ ವ್ಯವಹಾರ ಏನಾದರೂ ಅರ್ಧಕ್ಕೆ ನಿಂತು ಹೋಗಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಯಾವುದೇ ಕೆಲಸ ಮಾಡುವಾಗ ಮನಸ್ಸಿನಲ್ಲಿ ಶಂಕೆ- ಸಂದೇಹ ಇರಿಸಿಕೊಳ್ಳಬೇಡಿ. ಯಾರು ನಿಮಗೆ ಸಹಾಯ ಮಾಡಬಲ್ಲರು ಎಂಬುದನ್ನು ಸರಿಯಾಗಿ ಗುರುತಿಸಿದಲ್ಲಿ ಅದರಿಂದ ಯಶಸ್ಸು ನಿಮ್ಮದಾಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸುಮ್ಮನೆ ನೀವೇ ಕೆಲವು ರಂಕಲುಗಳನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ. ಎಲ್ಲ ತಮಾಷೆಗೆ ಎಂದು ಆರಂಭದಲ್ಲಿ ಅನಿಸಿದರೂ ದಿನದ ಕೊನೆಗೆ ನಿಮ್ಮ ಕೈಯಿಂದ ದೊಡ್ಡ ಮೊತ್ತ ಕಳೆಯುವಂತೆ ಆಗುತ್ತದೆ. ಎಲ್ಲ ವಿಷಯಗಳಿಗೂ ನಿಮ್ಮದೊಂದು ಅಭಿಪ್ರಾಯ ಇರಲಿ ಎಂಬಂತೆ ಯೋಚಿಸುವುದಕ್ಕೆ ಹೋಗಬೇಡಿ. ತುಟಿ ಎರಡು ಮಾಡದೆ ಸುಮ್ಮನಿದ್ದರೂ ಕೆಲವು ಸನ್ನಿವೇಶದಲ್ಲಿ ನೆಮ್ಮದಿ ಸಾಧ್ಯ ಇದೆ ಎಂಬುದು ಮನಗಂಡರೆ ಒಳ್ಳೆಯದು. ದೊಡ್ಡ ಮೊತ್ತದ, ಮಟ್ಟದ ಪ್ರಾಜೆಕ್ಟ್ ಗಳ ಬಗ್ಗೆ ಅನಿವಾರ್ಯ ಅಲ್ಲ ಎಂದಾದರೆ ಈ ದಿನ ಯಾವುದೇ ಅಂತಿಮ ತೀರ್ಮಾನಕ್ಕೆ ಬಾರದಿದ್ದರೆ ಒಳ್ಳೆಯದು. ನಿಮ್ಮ ಗೆಳೆಯ/ಗೆಳತಿಯರು ಯಾರೋ ಏನೋ ಮಾಡಿದರು ಅಂದಾಕ್ಷಣ ಅದನ್ನು ನೀವೂ ಮಾಡಬೇಕು ಅಂತೇನಿಲ್ಲ. ಆದ್ದರಿಂದ ಈ ದಿನ ಮೌನವಾಗಿರಿ, ಧ್ಯಾನ ಮಾಡಿ ಹಾಗೂ ನಿಧಾನ ಮಾಡಿರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಎಲ್ಲ ಆಗಿದೆ, ಇನ್ನೊಂದು ವಿಚಾರದಲ್ಲಿ ತಡ ಆಗುತ್ತಿದೆ ಎಂಬಂಥ ಪರಿಸ್ಥಿತಿ ನಿಮ್ಮದಾಗಲಿದೆ. ಅಂದರೆ ಹಣಕಾಸಿನ ವಿಚಾರ ಇರಬಹುದು, ಉದ್ಯೋಗಕ್ಕೆ ಸಂಬಂಧಿಸಿದ್ದು ಆಗಿರಬಹುದು. ಎಲ್ಲ ಆಯಿತು ಎಂದುಕೊಳ್ಳುವ ಮಟ್ಟಿಗೆ ಕೆಲಸ ಆಗಿ, ಕೊನೆ ಕ್ಷಣದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ನಿಮ್ಮಿಂದ ಎಲ್ಲಾದರೂ ಶಿಫಾರಸು ಮಾಡಿಸುವುದಕ್ಕೆ ಸಾಧ್ಯ ಎಂದಾದಲ್ಲಿ ಮಾಡಿಸುವುದು ಉತ್ತಮ. ಮನೆಯ ಮಟ್ಟಿಗೆ ಒಂದು ಸಣ್ಣ ಕಾರ್ಯಕ್ರಮ ಮಾಡೋಣ ಎಂದುಕೊಂಡು ಕಡಿಮೆ ಬಜೆಟ್ ನಲ್ಲಿ ಶುರು ಮಾಡಿದ್ದು ನಿಮ್ಮ ಕೈ ಮೀರಿ ಖರ್ಚು ಆಗುವಂಥ ಸಾಧ್ಯತೆ ಇದೆ. ಭರವಸೆ ಇಟ್ಟುಕೊಂಡು ಇತರರ ಬಳಿ ಹೇಳಿದಂಥ ಸಂಗತಿ ನಿಮಗೆ ಮುಳ್ಳಾಗಿ ಪರಿಣಮಿಸಲಿದೆ. ಪ್ರೀತಿ- ಪ್ರೇಮ ಅಥವಾ ರಹಸ್ಯವಾದ ಯಾವುದೇ ವಿಚಾರವನ್ನು ಇತರರ ಜತೆ ಹಂಚಿಕೊಳ್ಳಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಇಡೀ ದಿನ ಒಂದು ಬಗೆಯಲ್ಲಿ ಸಕಾರಾತ್ಮಕವಾಗಿ ಕಳೆಯಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸದಾಗಿ ಅವಕಾಶಗಳು ತೆರೆದುಕೊಳ್ಳಲಿವೆ. ಇತರರ ಆಲೋಚನೆಗಳು, ಲೆಕ್ಕಾಚಾರಗಳು ನಿಮಗೆ ಬಹಳ ಚೆನ್ನಾಗಿ ಗೊತ್ತಾಗಲಿವೆ. ಈ ದಿನ ನಿಮಗೆ ಪಾರ್ಟಿಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬರಲಿದೆ. ಅದರಲ್ಲಿ ಪಾಲ್ಗೊಳ್ಳುವುದರಿಂದ ಸೋಷಿಯಲ್ ಕಾಂಟ್ಯಾಕ್ಟ್ ವಿಸ್ತರಣೆ ಆಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸ್ವಂತ ಕ್ಲಿನಿಕ್ ಆರಂಭಿಸುವ ಅಥವಾ ಹೊಸ ಆಸ್ಪತ್ರೆಯನ್ನು ಆರಂಭಿಸುವ ಆಲೋಚನೆ ಬರಬಹುದು. ನಿಮ್ಮ ಜತೆಗೆ ಕೆಲಸ ಮಾಡುವವರು ಅಥವಾ ಆಪ್ತ ಸ್ನೇಹಿತರು ತೆಗೆದುಕೊಂಡು ಬರುವಂಥ ಆಫರ್ ಗಳ ಬಗ್ಗೆ ಮುಕ್ತವಾಗಿ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ನಿಮ್ಮ ಪ್ರತಿಕ್ರಿಯೆ ಕ್ಷಿಪ್ರವಾಗಿ ಇರಲಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನನಗೆ ಹೀಗೆ ಮಾಡಿದರಾ ಅಥವಾ ನನ್ನ ಜತೆಗೆ ಹೀಗೆ ನಡೆದುಕೊಂಡರಾ ಎಂದು ಕೆಲವು ವ್ಯಕ್ತಿಗಳ ಬಗ್ಗೆ ಬಹಳ ಬೇಸರ ಕಾಡಲಿದೆ. ನಿಮ್ಮ ನಿರೀಕ್ಷೆಯೇ ಭಾರವಾಗಿ ಪರಿಣಮಿಸಲಿದೆ. ಅದೇ ಕಾರಣಕ್ಕೆ ಕೆಲವರ ಜತೆಗೆ ಜಗಳ ಸಹ ಆಗಬಹುದು. ಭಾವನಾತ್ಮಕವಾಗಿ ಬಹಳ ಕಠಿಣವಾದ ದಿನ ಇದಾಗಿರುತ್ತದೆ. ಏನು ಹೇಳಬೇಕು, ಹೇಗೆ ಮಾತನಾಡಬೇಕು ಎಂಬುದು ಒಂದು ಗೊಂದಲ ಎಂಬಂತೆ ಕಾಡುತ್ತದೆ. ಯಾರು ಹಸಿರಿನ ಮಧ್ಯೆ ದಿನ ಕಳೆಯಬೇಕು ಎಂದು ಮನೆಯಿಂದ ದೂರ ಪ್ರಯಾಣ ಮಾಡಿರುತ್ತೀರೋ ಅಂಥವರಿಗೆ ಅದರಿಂದ ಕೂಡ ನೆಮ್ಮದಿ ಸಿಗುವುದಿಲ್ಲ. ಈ ದಿನ ಸಾಧ್ಯವಾದಷ್ಟೂ ಒಂದಿಲ್ಲೊಂದು ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಪ್ರಯತ್ನಿಸಿ. ನಿಮಗೇ ಖಾತ್ರಿ ಆಗುವಂತೆ ಅನಗತ್ಯ ಎಂದೆನಿಸುವ ಸಂಗತಿಗಳಿಗೆ ಹಾಗೂ ವ್ಯಕ್ತಿಗಳಿಗೆ ಪ್ರಾಶಸ್ತ್ಯ ನೀಡಲು ಹೋಗಬೇಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನೀವು ಒಪ್ಪಿಕೊಳ್ಳಲಿ, ಬಿಡಲಿ ಕೆಲವು ತಪ್ಪು ನಿರ್ಧಾರಗಳು ಆಗಿವೆ ಎಂಬುದನ್ನು ಇತರರು ಹೇಳುವುದಕ್ಕೆ ಶುರು ಮಾಡುತ್ತಾರೆ. ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ನಿಮ್ಮ ಆಪ್ತರ ಸಲುವಾಗಿ ಯಾವುದನ್ನು ನೀವು ಬಹಳ ಆಲೋಚಿಸಿ, ನಿರ್ಧಾರ ಮಾಡಿರುತ್ತೀರಿ ಆ ವಿಚಾರಗಳು ಅಂದುಕೊಂಡಂತೆ ಆಗುವುದಿಲ್ಲ. ದೈಹಿಕವಾಗಿ ಬಹಳ ದಣಿದವರಂತೆ ಆಗುತ್ತೀರಿ. ತುಂಬ ಉತ್ಸಾಹದಿಂದ ಏನನ್ನೂ ಮಾಡುವುದಕ್ಕೆ ತೋಚುವುದಿಲ್ಲ. ಹಳೇ ಸಂಬಂಧ, ಸ್ನೇಹದಲ್ಲಿ ಆದ ಸಮಸ್ಯೆಗಳು ನೆನಪಿಗೆ ಬರುತ್ತವೆ. ಆಗ ಏನಾಯಿತು ಮತ್ತು ಹಾಗೆ ಏಕಾಯಿತು ಎಂದು ಪರಾಮರ್ಶೆ ಮಾಡುವುದಕ್ಕೆ ಅಂತಲೇ ಹೆಚ್ಚಿನ ಸಮಯ ಹೋಗುತ್ತದೆ. ಒಂದು ವೇಳೆ ದೇವತಾ ಕಾರ್ಯಗಳು ಬಾಕಿ ಉಳಿಸಿಕೊಂಡಿದ್ದಲ್ಲಿ ಅದನ್ನು ಶೀಘ್ರವಾಗಿ ಮಾಡುವುದಕ್ಕೆ ಹಣಕಾಸು ಇತರೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳ ಖರೀದಿಗಾಗಿ ಹಣ ಖರ್ಚು ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಮದುವೆ ಸೇರಿ ಇತರ ಶುಭ ಸಮಾರಂಭಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ಇನ್ನೂ ಹೆಚ್ಚು ಖರ್ಚು ಮಾಡಲಿದ್ದೀರಿ. ಆಪ್ತರ ಜತೆಗೆ ಬಹಳ ಉತ್ತಮ ಸಮಯ ಕಳೆಯುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರು ವಾಹನಗಳನ್ನು ಖರೀದಿ ಮಾಡುವುದಕ್ಕೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕು ಅಂದರೆ, ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಿಯೇ ಬಿಡುವ ಸಾಧ್ಯತೆ ತಳ್ಳಿ ಹಾಕುವುದಕ್ಕೆ ಸಾಧ್ಯವಿಲ್ಲ. ಯೂರಿಕ್ ಆಸಿಡ್ ಹೆಚ್ಚಾಗಿ ಅನಾರೋಗ್ಯ ಸಮಸ್ಯೆ, ಗಂಟಲಿನ ಸಮಸ್ಯೆ ಹೀಗೆ ನಿಮ್ಮಲ್ಲಿ ಕೆಲವರಿಗೆ ಅನಾರೋಗ್ಯ ಸಮಸ್ಯೆ ಕಾರಣಕ್ಕೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಅನಿವಾರ್ಯವಾಗಿ ಮಾಡಿಸಬೇಕಾಗುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಬಾಯಿ ಬಿಟ್ಟು ಹೇಳುವುದಕ್ಕೆ ದಾಕ್ಷಿಣ್ಯ ಮಾಡಿಕೊಂಡ ಪರಿಣಾಮವಾಗಿ ಕೆಲವು ಕೆಲಸಗಳು ನಿಮಗೆ ಬಾರದೆ ಹೋಗಬಹುದು. ಇನ್ನು ಇದೇ ಕಾರಣಕ್ಕೆ ನಿಮಗೆ ನ್ಯಾಯಯುತವಾಗಿ ದೊರಕಬೇಕಾದ ಮೊತ್ತ ಸಿಗದೆ ಅತ್ಯಂತ ಕಡಿಮೆ ಹಣಕ್ಕೆ ಕೆಲಸ ಮಾಡಿ ಕೊಡಬೇಕಾದ ಸನ್ನಿವೇಶ ಎದುರಾಗಬಹುದು. ನೀವೇನಾದರೂ ಕಾರ್ಪೆಂಟರ್, ಪ್ಲಂಬರ್, ಪೇಂಟರ್, ಅಥವಾ ಮನೆಗಳಲ್ಲಿನ ಉಕ್ಕಿನ ಕೆಲಸಗಳನ್ನು ಮಾಡುವವರಾದಲ್ಲಿ ಈ ದಿನ ಯಾವುದೇ ಸಂಕೋಚ ಮಾಡದೆ ಹಣಕಾಸಿನ ವಿಚಾರವನ್ನು ಮಾತನಾಡಬೇಕು. ನವ ವಿವಾಹಿತರಿಗೆ ಸಂಗಾತಿಯ ವರ್ತನೆ ಬಗ್ಗೆ ಸ್ವಲ್ಪ ಮಟ್ಟಿಗೆ ಬೇಸರ ಆಗಬಹುದು. ಒಂದು ವೇಳೆ ಈ ವಿಚಾರವನ್ನು ಅವರ ಎದುರಿಗೆ ಹೇಳಿದರೂ ಏನೂ ಪ್ರಯೋಜನ ಆಗುವುದಿಲ್ಲ. ನೆನಪಿನಲ್ಲಿಡಿ, ಯಾವ ಸಂಗತಿಯನ್ನೂ ತೀರಾ ಮನಸ್ಸಿಗೆ ಹಚ್ಚಿಕೊಳ್ಳಬೇಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಎಲ್ಲ ಸಮಸ್ಯೆಗಳು ಒಂದೊಂದಾಗಿ ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ಮಾರ್ಗೋಪಾಯಗಳು ಗೋಚರ ಆಗಲಿವೆ. ಮೊದಮೊದಲಿಗೆ ಬಹಳ ಕಷ್ಟ ಎಂದೆನಿಸಿದ್ದ ಸಂಗತಿಗಳು ಸಲೀಸಾಗಿ ಮುಗಿಯುವ ಹಾಗೆ ಅನಿಸುತ್ತವೆ. ತಂದೆ- ತಾಯಿ ಈ ಹಿಂದೆ ನಿಮಗೆ ನೀಡಿದ್ದ ಸಲಹೆಯನ್ನು ಒಂದು ವೇಳೆ ನೀವೇನಾದರೂ ಪಾಲಿಸಿದ್ದಲ್ಲಿ ಅದರಿಂದ ಆಗಿರುವ ಅನುಕೂಲ ಈ ದಿನ ನಿಮ್ಮ ಅನುಭವಕ್ಕೆ ಬರಲಿದೆ. ಹೊಸದಾಗಿ ಔಷಧೋಪಚಾರ ಆರಂಭ ಮಾಡಿದ್ದೀರಿ ಎಂದಾದಲ್ಲಿ ಆ ಔಷಧಿ ನಿಮ್ಮ ದೇಹಕ್ಕೆ ಸರಿ ಹೊಂದುತ್ತದೆಯೇ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿಕೊಳ್ಳಿ. ಮನೆ ಬದಲಾವಣೆ ಮಾಡಬೇಕು ಎಂದಿರುವವರು, ಹೊಸದಾಗಿ ಫ್ಲ್ಯಾಟ್ ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಈ ದಿನ ಹೆಚ್ಚಾಗಿದೆ.
ಲೇಖನ- ಎನ್.ಕೆ.ಸ್ವಾತಿ