AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 11ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 11ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜೀವನದ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 11ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Dec 11, 2025 | 12:15 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಕುಟುಂಬದಲ್ಲಿ ಆಗುವಂಥ ಕೆಲವು ಬೆಳವಣಿಗೆಗಳಿಂದ ನಿಮಗೆ ನಿರಾಶೆ ಮೂಡಲಿದೆ. ಅದರಲ್ಲೂ ನೀವು ನೀಡಿದ ಸಲಹೆಗಳಿಂದ ಅನುಕೂಲ ಆಗಲಿದೆ ಎಂದು ಗೊತ್ತಾದರೂ ನಿರ್ಲಕ್ಷ್ಯ ಮಾಡುವವರಿಂದ ಬೇಸರ ಆಗಲಿದೆ. ಮಕ್ಕಳಿಗೆ ಏನು ಆಹಾರ ನೀಡುತ್ತೀರಿ ಎಂಬ ಬಗ್ಗೆ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಲಕ್ಷ್ಯವನ್ನು ವಹಿಸಿ. ಉದ್ಯೋಗಸ್ಥರಿಗೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಲಿವೆ. ಕೆಲಸ- ಕಾರ್ಯ ಪೂರ್ಣ ಮಾಡುವುದಕ್ಕೆ ವಿಳಂಬ ಆಗಲಿದೆ. ಇಷ್ಟು ಸಮಯದೊಳಗೆ ಕೆಲಸ ಮಾಡಿಕೊಡುವುದಾಗಿ ಮಾತು ನೀಡುವ ಮುಂಚೆ ಅದು ಸಾಧ್ಯವಾ ಎಂಬ ಬಗ್ಗೆ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ನಿಮ್ಮ ವ್ಯಾಪ್ತಿಯ ಹೊರಗೆ ಇರುವಂಥದ್ದರ ಬಗ್ಗೆ ಖಡಾಖಂಡಿತವಾಗಿ ಅಭಿಪ್ರಾಯಗಳನ್ನು ಹೇಳುವುದಕ್ಕೆ ಹೋಗಬೇಡಿ. ಭಾವುಕ ಕ್ಷಣಗಳಲ್ಲಿ ನೀವಾಡುವ ಕೆಲವು ಮಾತುಗಳು ಹಾಗೂ ನೀಡುವ ಭರವಸೆಗಳು ಭವಿಷ್ಯದಲ್ಲಿ ಸಮಸ್ಯೆಗಳನ್ನು ತಂದೊಡ್ಡಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಹೊಸದಾಗಿ ಕೆಲಸದ ಹುಡುಕಾಟದಲ್ಲಿ ಇರುವವರು ಉದ್ಯೋಗ ಬದಲಾವಣೆಗಾಗಿ ತೀವ್ರವಾದ ಪ್ರಯತ್ನ ಮಾಡಲು ಆರಂಭಿಸುವಿರಿ. ಸಿ.ವಿ. ಸಿದ್ಧತೆ ಮಾಡಿಕೊಳ್ಳುವುದು ಹಾಗೂ ಸೋಷಿಯಲ್ ನೆಟ್ ವರ್ಕ್ ಮೂಲಕ ಏನು ರೆಫರೆನ್ಸ್ ಪಡೆದುಕೊಳ್ಳಲು ಸಾಧ್ಯವೋ ಆ ಎಲ್ಲವನ್ನೂ ಒಂದರ ನಂತರ ಒಂದರಂತೆ ಎಂಬ ರೀತಿಯಲ್ಲಿ ತೆಗೆದುಕೊಳ್ಳುವುದು ಇಂಥವುಗಳನ್ನು ಮಾಡುವುದಕ್ಕೆ ದಿನದ ಹೆಚ್ಚಿನ ಸಮಯ ಹೋಗಲಿದೆ. ಮನೆಗೆ ಬೇಕಾದ ಕೆಲವು ಯಂತ್ರಗಳು, ಗ್ಯಾಜೆಟ್ ಗಳನ್ನು ಖರೀದಿ ಮಾಡುವುದಕ್ಕೆ ಹಣವನ್ನು ವೆಚ್ಚ ಮಾಡಲಿದ್ದೀರಿ. ಸೋದರ ಸಂಬಂಧಿಗಳು ನಿಮ್ಮ ಹಣಕಾಸು ಅಗತ್ಯಗಳನ್ನು ಪೂರೈಸುವುದಕ್ಕೆ ಮುಂದೆ ಬರಲಿದ್ದಾರೆ. ಹೆಚ್ಚಿನ ಬಡ್ಡಿಗೆ ಸಾಲವನ್ನು ಪಡೆದುಕೊಂಡಿದ್ದಲ್ಲಿ ನಿಮ್ಮ ಉಳಿತಾಯ ಅಥವಾ ಹೂಡಿಕೆ ಹಣವನ್ನು ಹಿಂತೆಗೆದುಕೊಂಡು, ಮರುಪಾವತಿ ಮಾಡುವುದಕ್ಕೆ ಪ್ರಯತ್ನಿಸಲಿದ್ದೀರಿ. ಸಾಕುಪ್ರಾಣಿಗಳ ಅನಾರೋಗ್ಯದ ಕಾರಣಕ್ಕೆ ಅವುಗಳಿಗೆ ವೈದ್ಯಕೀಯ ವೆಚ್ಚ ಆಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಡಬಲ್ ಪೇಮೆಂಟ್ ಆಗಿ, ಆ ನಂತರ ಅದನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಈ ಹಿಂದಿನ ಯಾವಾಗಿನದೋ ಪ್ರತೀಕಾರವನ್ನು ಈಗ ತೆಗೆದುಕೊಳ್ಳಲು ಅವಕಾಶ ಸಿಕ್ಕಿಬಿಡುತ್ತದೆ, ಆದರೆ ಆ ಭಾವನೆಯಿಂದ ಹೊರಬಂದು ಬಿಡುವುದರಿಂದ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಲಾರಿ ಅಥವಾ ಭಾರೀ ವಾಹನಗಳ ಚಾಲನೆ ಮಾಡುವಂಥವರಿಗೆ ಒಂದಲ್ಲ ಒಂದು ರೀತಿ ಒತ್ತಡ ಅನುಭವಕ್ಕೆ ಬರಲಿದೆ. ನೀವು ತೋರಿದ ನಿರ್ಲಕ್ಷ್ಯದಿಂದ ನಷ್ಟ ಕಾಣುವಂತಾಯಿತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಇಂಥ ಮಾತುಗಳಿಂದ ನೀವು ಆತ್ಮವಿಶ್ವಾಸ ಕಳೆದುಕೊಳ್ಳದಿರುವುದು ಮುಖ್ಯ ಆಗುತ್ತದೆ. ಕ್ರೆಡಿಟ್ ಕಾರ್ಡ್ ಗಾಗಿ ಅಪ್ಲೈ ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಬಡ್ಡಿಗೆ ಹಣ ನೀಡುವವರು, ಗಿರವಿ ಅಂಗಡಿ ನಡೆಸುತ್ತಾ ಇರುವವರು, ಸಿನಿಮಾ ಫೈನಾನ್ಷಿಯರ್ ಗಳಾಗಿ ಇರುವವರಿಗೆ ಈ ದಿನ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮ್ಮ ಪ್ರಭಾವ ವಿಸ್ತಾರ ಆಗುವಂಥ ಸಾಧ್ಯತೆ ಸಹ ಇದೆ. ಒಂದು ವೇಳೆ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುತ್ತಾ ಬಂದಿದ್ದೀರಿ ಅಂತಾದಲ್ಲಿ ಸ್ವತಂತ್ರವಾಗಿ ವ್ಯವಹಾರ ಆರಂಭಿಸುವ ನಿರ್ಧಾರಕ್ಕೆ ಬರುತ್ತೀರಿ. ನೀವು ನಿರೀಕ್ಷೆ ಕೂಡ ಮಾಡಿರದಂಥ ಹಣ ಕೈ ಸೇರಲಿದೆ. ಪ್ರತಿ ತಿಂಗಳು ಇಂತಿಷ್ಟು ಆದಾಯ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಲೋಚಿಸುತ್ತಾ ಇರುವವರು ಅದಕ್ಕೆ ಬೇಕಾದ ಪ್ರಯತ್ನ ಆರಂಭ ಮಾಡುತ್ತೀರಿ. ಸಂಗಾತಿ ಜೊತೆಗೆ ಸಂಬಂಧಿಕರ ಕಾರಣದಿಂದ ಸಣ್ಣ ಪುಟ್ಟ ಮನಸ್ತಾಪ ಆಗಬಹುದು. ಆದರೆ ಇದನ್ನು ಕೂತು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳುತ್ತೀರಿ. ಇಟ್ಟಿಗೆ- ಸಿಮೆಂಟ್ ಮಾರಾಟ ಮಾಡುವವರಿಗೆ ದೊಡ್ಡ ಪ್ರಮಾಣದ ಆರ್ಡರ್ ದೊರೆಯುವ ಯೋಗ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮಷ್ಟಕ್ಕೆ ನೀವು ಅಂತ ಇದ್ದರೂ ಕೆಲವು ವಾದ- ವಿವಾದಗಳಿಗೆ ಕೆಲವರು ಎಳೆಯುತ್ತಾರೆ. ದೊಡ್ಡ ಗುಂಪಿನಲ್ಲಿ ಜನರು ಇರುವ ಕಡೆಗೆ ನೀವು ಹೋಗದಿರುವುದು ಉತ್ತಮ. ಇದನ್ನು ಮೀರಿಯೂ ಅಂಥ ಸ್ಥಳದಲ್ಲಿ ನೀವು ಇದ್ದೀರಿ ಅಂತಾದಲ್ಲಿ ಮೌನವಾಗಿ ಇರುವುದು ಕ್ಷೇಮ. ಸಹನೆ ಇಟ್ಟುಕೊಂಡು ಬಹಳ ಸಮಯದಿಂದ ಕಾಯುತ್ತಾ ಬಂದಿದ್ದಕ್ಕೂ ಸಾರ್ಥಕ ಎಂಬಂತೆ ಕೆಲವು ಕಾರ್ಯಗಳು ನಿಮ್ಮಂತೆಯೇ- ನಿಮಗೆ ಬೇಕಾದಂತೆಯೇ ಆಗಲಿದೆ. ನಿರ್ಧಾರಿತ ಧ್ವನಿಯಲ್ಲಿ ಹೇಳುವ ಮೂಲಕ ಕೆಲವು ವ್ಯಕ್ತಿಗಳಿಂದ ನೀವಾಗಿಯೇ ಅಂತರವನ್ನು ಕಾಯ್ದುಕೊಳ್ಳಲಿದ್ದೀರಿ. ನಿಮಗೆ ಲಾಭ ತಂದುಕೊಡುವ ಸ್ನೇಹವೇ ಆದರೂ ಬೇಡ ಅಂದುಕೊಳ್ಳಲಿದ್ದೀರಿ. ಜಿಡ್ಡಿನ ಪದಾರ್ಥಗಳ ಸೇವನೆಯಿಂದ ದೂರ ಇರುವುದು ಒಳ್ಳೆಯದು. ದೂರದ ಊರುಗಳಲ್ಲಿ ಇರುವವರು ತಾವು ಮಾಡಬೇಕಾದ ಕೆಲಸವನ್ನು ನೀವು ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳಲಿದ್ದಾರೆ, ಇದಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ಮೇಲೆ ದೈವಾನುಗ್ರಹ ಇರಲಿದೆ. ಬಹಳ ಕಷ್ಟ ಆಗಬಹುದು ಎಂದುಕೊಂಡ ಕೆಲಸ- ಕಾರ್ಯ, ವ್ಯವಹಾರಗಳು ನಿರೀಕ್ಷೆಗಿಂತ ಸಲೀಸಾಗಿ ಪೂರ್ಣಗೊಳ್ಳಲಿದೆ. ಹಳೇ ವಸ್ತುಗಳ ಖರೀದಿ- ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಬ್ರ್ಯಾಂಡೆಡ್ ವಸ್ತುಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುವ ಯೋಗ ಇದೆ. ಈ ದಿನ ಪಾಲ್ಗೊಳ್ಳುವ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವಧು ಅಥವಾ ವರ ದೊರೆಯುವಂಥ ಯೋಗ ಇದೆ. ದೂರದ ಊರಿಂದ ಸಂಬಂಧಿಗಳು ನಿಮ್ಮ ಮನೆಗೆ ಬರಲಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ತರಲಿದ್ದಾರೆ. ಹೊಸ ಚಪ್ಪಲಿ ಅಥವಾ ಶೂ ಬಳಸುತ್ತೀರಿ ಎಂದಾದಲ್ಲಿ ಅದರಿಂದ ಕಾಲಿಗೆ ಗಾಯ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಮುಂಜಾಗ್ರತೆ ವಹಿಸಿ. ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿದ್ದ ವ್ಯಾಜ್ಯ ಇತ್ಯರ್ಥ ಆಗುವ ಸುಳಿವು ದೊರೆಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಬಗ್ಗೆ ಗಾಸಿಪ್ ಹರಿದಾಡಲಿದೆ. ಅದರ ಮೂಲ ಯಾವುದು, ಯಾರು ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಹರಸಾಹಸ ಪಡುವಂತೆ ಆಗಲಿದೆ. ಮನೆಯ ಮಟ್ಟಿಗೆ ಮಾಡೋಣ ಎಂದುಕೊಂಡಿದ್ದ ಕಾರ್ಯಕ್ರಮ ಒಂದನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸಂಗೀತಗಾರರಿಗೆ ದೂರದ ಊರುಗಳಿಂದ ಆಹ್ವಾನ ಬರಲಿದೆ. ನಿಮಗೆ ಆ ಸ್ಥಳಕ್ಕೆ ಪದೇಪದೇ ಹೋಗಬೇಕಾಗುವ ರೀತಿಯಲ್ಲಿ ಬಾಂಧವ್ಯ ಗಟ್ಟಿ ಆಗಲಿದೆ. ಉದ್ಯೋಗಸ್ಥರಿಗೆ ಕೆಲವು ಸಮಯದ ಮಟ್ಟಿಗೆ ಬೇರೆ ವಿಭಾಗದಲ್ಲಿಯೋ ಅಥವಾ ಬೇರೆ ಕ್ಲೈಂಟ್ ಗಾಗಿಯೋ ಕೆಲಸ ಮಾಡುವಂತೆ ಹೇಳಬಹುದು. ಆಮೇಲೆ ಮಾಡಿದರಾಯಿತು ಎಂದುಕೊಂಡು ಬಾಕಿ ಉಳಿಸಿಕೊಂಡು ಬಂದಿದ್ದಂಥ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ಗಮನ ನೀಡಿ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ಹಲವು ಗೊಂದಲಗಳು ನಿವಾರಣೆ ಆಗಲಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಯಾರು ಏನೆಂದುಕೊಂಡರೆ ನನಗೇನು ಅನಿಸಿದ್ದನ್ನು ನೇರಾನೇರಾ ಹೇಳಿಬಿಡುತ್ತೇನೆ ಎಂಬ ಮನಸ್ಥಿತಿಯಲ್ಲಿ ಈ ದಿನ ನೀವು ಇರಲಿದ್ದೀರಿ. ನಿಮ್ಮ ಈ ಸ್ವಭಾವದಿಂದ ಕುಟುಂಬ ಸದಸ್ಯರಲ್ಲಿ ಆತಂಕ ಎದುರಾಗಲಿದೆ. ಕೆಲವರು ನಿಮಗೆ ತಿಳಿಹೇಳುವುದಕ್ಕೆ ಸಹ ಪ್ರಯತ್ನ ಮಾಡಲಿದ್ದಾರೆ. ತಾತ್ಕಾಲಿಕ ಉದ್ಯೋಗದಲ್ಲಿ ಇರುವಂಥವರಿಗೆ ಈಗ ಇರುವಂಥ ಕೆಲಸವೇ ಕಾಯಂ ಆಗುವ ಅಥವಾ ಬೇರೆಡೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ನಿಮಗೆ ಸಂಬಂಧ ಇಲ್ಲದ ವಿಷಯ ಎಂದುಕೊಂಡು ದೂರ ಇದ್ದುಬಿಟ್ಟಿದ್ದ ಕೆಲವು ಸಂಗತಿಗಳನ್ನು ನೀವೇ ಮುಂದೆ ನಿಂತು ತುರ್ತಾಗಿ ಬಗೆಹರಿಸಬೇಕಾದ ಸನ್ನಿವೇಶ ಎದುರಾಗಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಆದಾಯದ ಮೂಲಗಳು ಹೆಚ್ಚಾಗಲಿವೆ. ಈಗ ಮಾಡುತ್ತಿರುವ ಸೇವೆ- ಉತ್ಪನ್ನಗಳ ಮಾರಾಟದ ಜೊತೆಗೆ ಇನ್ನಷ್ಟು ಸೇರ್ಪಡೆ ಮಾಡಿಕೊಳ್ಳಲು ನಿರ್ಧಾರ ಮಾಡಲಿದ್ದೀರಿ. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಪ್ರತಿಸ್ಪಂದನೆ ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಹೊಸ ವಿಚಾರಗಳು, ನೀವು ಈ ತನಕ ಕಂಡಿರದ ಕೆಲವು ಸನ್ನಿವೇಶಗಳನ್ನು ಕಾಣಲಿದ್ದೀರಿ. ಇವು ನಿಮ್ಮ ಬಾಳಿನಲ್ಲಿ ಹೊಸ ಬದಲಾವಣೆಗಳನ್ನು ತರಲಿವೆ. ಒಂದು ಬಗೆಯ ಸುರಕ್ಷತೆ ಭಾವ ನಿಮ್ಮಲ್ಲಿ ಮನೆ ಮಾಡಲಿದೆ. ಸ್ನೇಹಿತರ ಸಲಹೆ ನಿಮಗೆ ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಲಿದೆ. ದಾನ- ಧರ್ಮಕ್ಕಾಗಿ ಸ್ವಲ್ಪ ಮೊತ್ತದ ಹಣವನ್ನಾದರೂ ಖರ್ಚು ಮಾಡಲಿದ್ದೀರಿ. ಏನಾದರೂ ಒಂದು ಕಾರಣಕ್ಕೆ ಮನೆಯ ಹೊರಗಿನ ಊಟ- ತಿಂಡಿಯನ್ನೇ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನೀವು ಬಹಳ ಕಾಲದಿಂದ ತಿಳಿದುಕೊಳ್ಳಬೇಕು ಎಂದು ಬಯಸುತ್ತಿದ್ದ ಮಾಹಿತಿಯ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬರಲಿದೆ. ಗ್ಯಾಜೆಟ್- ಮೊಬೈಲ್ ಫೋನ್ ಅಥವಾ ಲ್ಯಾಪ್ ಟಾಪ್ ಖರೀದಿಗೆ ಹಣ ಖರ್ಚು ಮಾಡುವ ಯೋಗ ಇದೆ. ಅಥವಾ ಈ ದಿನ ಇವುಗಳ ಪೈಕಿ ಕೆಲವನ್ನು ಅಥವಾ ಯಾವುದಾದರೂ ಒಂದನ್ನು ಉಡುಗೊರೆಯಾಗಿ ನೀಡುವಂಥ ಸಾಧ್ಯತೆ ಸಹ ಇದೆ.

ಲೇಖನ- ಎನ್‌.ಕೆ.ಸ್ವಾತಿ